ಸೆಪ್ಟೆಂಬರ್ 17ರಂದು ಲೆಬನಾನ್‌ನ ಎಲ್ಲೆಡೆ ಪೇಜರ್‌ಗಳು (Lebanon pager Explosions, Pager Blasts) ಸರಪಟಾಕಿ ಹಚ್ಚಿದಂತೆ ಸಿಡಿದವು. ಕನಿಷ್ಠ ಒಂಬತ್ತು ಮಂದಿ ಸತ್ತರು. ಸಾವಿರಾರು ಜನ ಗಾಯಗೊಂಡರು. ಲೆಬನಾನ್‌ಗೆ ಇರಾನ್‌ನ ರಾಯಭಾರಿಯಾಗಿದ್ದ ಮೊಜ್ತಾಬಾ ಅಮಾನಿ ತೀವ್ರ ಗಾಯಗೊಂಡರು. ಲೆಬನಾನ್‌ನ ಸಶಸ್ತ್ರ ಬಂಡುಕೋರ ಗುಂಪು ಹೆಜ್ಬೊಲ್ಲಾ ಈ ಪೇಜರ್ ದಾಳಿಯಿಂದ ಬೆಚ್ಚಿ ಬೆವರಿತು. ಹೆಜ್ಬೊಲ್ಲಾದ (Hezbollah) ಎಂಪಿಗಳ ಇಬ್ಬರು ಮಕ್ಕಳು ಸತ್ತಿದ್ದರು. ಹೆಜ್ಬೊಲ್ಲಾವನ್ನು ಗುರಿಯಾಗಿಸಿಕೊಂಡೇ ಈ ದಾಳಿ ನಡೆಸಲಾಗಿದೆ ಎಂಬುದು ಯಾರೂ ಹೇಳದೆಯೇ ಅದಕ್ಕೆ ಅರ್ಥವಾಗಿತ್ತು. ಲೆಬನಾನ್‌ನಾದ್ಯಂತ ಏಕಕಾಲದಲ್ಲಿ ನಡೆದ ಈ ದಾಳಿಯನ್ನು ಅಲ್ಲಿನ ಆಳುವವರೆಲ್ಲ ಖಂಡಿಸಿದರು. ಇದು “ಇಸ್ರೇಲಿ ಆಕ್ರಮಣ” (Israel attack) ಎಂಬುದರಲ್ಲಿ ಅವರಿಗೆ ಸಂಶಯ ಇರಲಿಲ್ಲ.
ಇದಾಗಿ ಮರುದಿನವೇ ದೇಶದಾದ್ಯಂತ ವಾಕಿಟಾಕಿಗಳು ಮತ್ತೆ ಸಾಲಾಗಿ ಬೆಂಕಿ ಕೊಟ್ಟ ಮಾಲೆಪಟಾಕಿಯಂತೆ ಸ್ಫೋಟಿಸಿದವು. ಇದರಲ್ಲಿ ಸತ್ತವರ ಸಂಖ್ಯೆ ಸುಮಾರು ಎರಡು ಡಜನ್. 450ಕ್ಕೂ ಹೆಚ್ಚು ಜನ ಗಾಯಗೊಂಡರು. ಸತ್ತವರೆಲ್ಲಾ ಹೆಜ್ಬೊಲ್ಲಾದ ಸದಸ್ಯರು ಎಂದೇನೂ ಅಲ್ಲ. ಆದರೆ ಟ್ರ್ಯಾಕ್ ಮಾಡಲು ಕಷ್ಟವಾದ ಪೇಜರ್‌ಗಳನ್ನು ಹೆಜ್ಬೊಲ್ಲಾ ಉಗ್ರ ಸಂಘಟನೆಯೇ ಹೆಚ್ಚಾಗಿ ಬಳಸುತ್ತಿದ್ದುದು. ಹೀಗಾಗಿ ಸತ್ತವರು, ಗಾಯಗೊಂಡವರಲ್ಲಿ ಹೆಚ್ಚಿನವರು ಹೆಜ್ಬೊಲ್ಲಾ ಸದಸ್ಯರು ಎಂಬ ಊಹೆ.
ಈ ಪ್ರದೇಶದಲ್ಲಿ ಏನಾಗುತ್ತಿದೆ?
ಹಳೆಯ ತಂತ್ರಜ್ಞಾನದ ಗ್ಯಾಜೆಟ್ ಪೇಜರ್ ಮತ್ತು ವಾಕಿ ಟಾಕಿ. ಏಕಕಾಲದಲ್ಲಿ ಇವುಗಳ ಸ್ಫೋಟ ಆಗಿರುವುದು ದಕ್ಷಿಣ ಲೆಬನಾನ್‌ನಲ್ಲಿ. ಅದು ಹೆಜ್ಬೊಲ್ಲಾದ ಭದ್ರಕೋಟೆ. ಎಂದ ಮೇಲೆ ಬಲಿಷ್ಠ ಶತ್ರುವೊಬ್ಬ ಇದನ್ನು ಸಂಘಟಿಸಿರಲೇಬೇಕು. ಲೆಬನಾನ್‌ನ ಸಾಂಪ್ರದಾಯಿಕ ಶತ್ರುಗಳಲ್ಲಿ ಒಂದು ಇಸ್ರೇಲ್. ಇದೀಗ ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ನೆಲೆಸಿದೆ. ಲೆಬನಾನ್, ಇರಾನ್ ಅನ್ನು ಬೆಂಬಲಿಸಿದೆ. ಹೆಜ್ಬೊಲ್ಲಾ ಉಗ್ರರು ಇರಾನ್ ಪರವಾಗಿ ಇಸ್ರೇಲ್‌ಗೆ ಸದಾ ಕಿರುಕುಳ ನೀಡುತ್ತಿರುತ್ತಾರೆ. ಕಳೆದ ಅಕ್ಟೋಬರ್‌ನಲ್ಲಿ ಶುರುವಾದ ಗಾಜಾ ಯುದ್ಧದ ಆರಂಭದಿಂದಲೂ ಲೆಬನಾನ್ ಇಲ್ಲಿ ಪಾತ್ರ ವಹಿಸಿದೆ. ಇದೀಗ ಹೆಜ್ಬೊಲ್ಲಾ, ಈ ಸ್ಫೋಟಗಳಿಗೆ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದೆ. ಅದಕ್ಕೂ ಮುನ್ನವೇ ಲೆಬನಾನ್ ಮೇಲೆ ಇಸ್ರೇಲ್ ಪೂರ್ಣ ಪ್ರಮಾಣದ ದಾಳಿಯನ್ನೇ ಮಾಡಿದೆ. ಅಲ್ಲಿಗೆ ಇಸ್ರೇಲ್ ಉದ್ದೇಶ ಏನೆಂಬುದು ಸ್ಟಷ್ಟ.
ದೊಡ್ಡ ಆಶ್ಚರ್ಯವೆಂದರೆ ದಾಳಿಗೆ ಇಸ್ರೇಲ್ ಬಳಸಿದ ಸಾಧನ. ಹಳೆಗಾಲದ ತಂತ್ರಜ್ಞಾನದ ಗ್ಯಾಜೆಟ್‌ಗಳಾದ ಪೇಜರ್‌ಗಳನ್ನೇ ಇಸ್ರೇಲ್ ದಾಳಿಗೆ ಬಳಸಿದ್ದಕ್ಕೆ ಕಾರಣವೆಂದರೆ ಹೆಜ್ಬೊಲ್ಲಾ ಉಗ್ರರು ವ್ಯಾಪಕವಾಗಿ ಅವುಗಳನ್ನು ಬಳಸುತ್ತಿರುವುದು. ಸುರಕ್ಷಿತತೆಯ ದೃಷ್ಟಿಯಿಂದ ಉಗ್ರರು ಬಳಸಿದ ಟೆಕ್ನಾಲಜಿಯೇ ಅವರಿಗೆ ಮೃತ್ಯುಜಾಲವಾಗಿದೆ.
ಪೇಜರ್‌ಗಳು ಹೇಗೆ ಕೆಲಸ ಮಾಡುತ್ತವೆ?
ಪೇಜರ್‌ಗಳು, ಸಾಮಾನ್ಯವಾಗಿ ಬೀಪರ್‌ಗಳು ಎಂದೂ ಕರೆಯಲ್ಪಡುವ ಜನಪ್ರಿಯ ಸಂವಹನ ಸಾಧನಗಳು ಮೂರು ದಶಕಗಳ ಹಿಂದಿನವು. 20ನೇ ಶತಮಾನದ ಮಧ್ಯದಲ್ಲಿ ಹೊರಹೊಮ್ಮಿದ ಸಾಧನಗಳು. 1990 ಮತ್ತು 2000ರ ದಶಕದಲ್ಲಿ ಸೆಲ್ಯುಲಾರ್ ಫೋನ್‌ಗಳು ಜನಪ್ರಿಯತೆ ಗಳಿಸತೊಡಗಿದ ಬಳಿಕ ಪೇಜರ್‌ಗಳು ನಿಧಾನವಾಗಿ ಮರೆಗೆ ಸರಿದವು. ನಂತರ ಸ್ಮಾರ್ಟ್‌ಫೋನ್‌ಗಳ ಜಗತ್ತು ತೆರೆದುಕೊಂಡಿತು.
ಆದರೆ ಅಂಗೈ ಗಾತ್ರದ ಈ ಸಾಧನಕ್ಕೆ ಅದರದೇ ಆದ ಸಾಮರ್ಥ್ಯವಿದೆ. ಪೇಜರ್‌ಗಳು ರೇಡಿಯೋ ಸಿಗ್ನಲ್‌ಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತವೆ. ರೇಡಿಯೋ ಸಿಗ್ನಲ್ ಗೋಪುರಗಳ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ಇದರಲ್ಲಿ ಏಕಮುಖ ಹಾಗೂ ದ್ವಿಮುಖ ಎರಡೂ ಬಗೆಯ ಸಂವಹನದ ಸಾಧನಗಳಿವೆ. ಏಕಮುಖ ಪೇಜರ್‌ಗಳು ಕೇಂದ್ರ ಟ್ರಾನ್ಸ್‌ಮಿಟರ್‌ನಿಂದ ಬಂದ ಸಂದೇಶ ಸ್ವೀಕರಿಸುತ್ತವೆ ಮಾತ್ರ. ಪ್ರತ್ಯುತ್ತರಗಳನ್ನು ಕಳುಹಿಸಲು ಸಾಧ್ಯವಿಲ್ಲ. ಬಳಕೆದಾರರು ಇದರಲ್ಲಿ ನ್ಯೂಮರಿಕ್ ಅಥವಾ ಆಲ್ಫಾನ್ಯೂಮರಿಕ್ ಸಂದೇಶಗಳನ್ನು ಸ್ವೀಕರಿಸುತ್ತಾರೆ. ಇದು ಬೀಪ್ ಅಥವಾ ಕಂಪನದ ಮೂಲಕ ಅವರನ್ನು ಎಚ್ಚರಿಸುತ್ತದೆ.
ದ್ವಿಮುಖ ಸಂವಹನದ ಪೇಜರ್‌ಗಳು ಎರಡೂ ದಿಕ್ಕುಗಳಲ್ಲಿ ಸಂದೇಶ ಪಡೆಯಲು ಹಾಗೂ ಕಳುಹಿಸಲು ಸಮರ್ಥ. ಬಳಕೆದಾರರು ಸಂದೇಶಗಳನ್ನು ಸ್ವೀಕರಿಸಬಹುದು ಮತ್ತು ಪ್ರತಿಕ್ರಿಯಿಸಬಹುದು. ಇದು ಸ್ವಲ್ಪ ಹೆಚ್ಚು ಮುಂದುವರಿದಂತೆ ಕಾಣುತ್ತದೆ. ಆದರೆ ಸ್ಮಾರ್ಟ್‌ಪೋನ್‌ಗಳಿಗೆ ಹೋಲಿಸಿದರೆ ಇವು ಬಹಳ ಸೀಮಿತ.
ಪೇಜರ್‌ಗಳು ವಿಶಾಲ ಪ್ರದೇಶದಲ್ಲಿ ಸಂಕೇತಗಳನ್ನು ಪ್ರಸಾರ ಮಾಡುವ ರೇಡಿಯೊ ಟವರ್‌ಗಳ ನೆಟ್‌ವರ್ಕ್ ಅನ್ನು ಅವಲಂಬಿಸಿವೆ. ಹಲವೊಮ್ಮೆ ಅವು ಮೊಬೈಲ್‌ಗಿಂತ ಹೆಚ್ಚು ವಿಶ್ವಾಸಾರ್ಹವಾಗಿರುತ್ತವೆ. ಏಕೆಂದರೆ ಇವುಗಳ ಸಂವಹನ ವ್ಯವಸ್ಥೆ ಸರಳವಾಗಿ ಕಾರ್ಯನಿರ್ವಹಿಸುತ್ತದೆ. ದೃಢವಾದ ರೇಡಿಯೋ ತರಂಗಗಳು, ಮೊಬೈಲ್ ತರಂಗಗಳು ಸಿಗದ ತಾಣದಲ್ಲಿಯೂ ಕಾರ್ಯ ನಿರ್ವಹಿಸಬಹುದು.
ಇದೆಲ್ಲದರ ಹೊರತಾಗಿಯೂ ಮುಖ್ಯವಾಹಿನಿಯಲ್ಲಿ ಇವು ಬಳಕೆಯಲ್ಲಿಲ್ಲ. ಆದರೆ ಪೇಜರ್‌ಗಳು ಆರೋಗ್ಯ ರಕ್ಷಣೆಯಲ್ಲಿ ಇನ್ನೂ ಮುಖ್ಯವಾಗಿವೆ. ದೂರದ ಸ್ಥಳಗಳಿಗೆ ತುರ್ತು ಸೇವೆ ಒದಗಿಸಲು ಇವು ಬಳಕೆಯಾಗುತ್ತವೆ. ಯಾಕೆಂದರೆ ಅಲ್ಲಿ ಸೆಲ್ಯುಲಾರ್ ನೆಟ್‌ವರ್ಕ್‌ಗಳು ವಿಶ್ವಾಸಾರ್ಹವಲ್ಲ. ಇವುಗಳ ಸರಳತೆಯೇ ಇವುಗಳ ಶಕ್ತಿ-ಸಮರ್ಥತೆಯನ್ನು ಖಚಿತಪಡಿಸುತ್ತದೆ. ಇವುಗಳ ನೆಟ್‌ವರ್ಕ್ ಸ್ಥಗಿತವಾಗುವುದು ಅಪರೂಪ.
ರಹಸ್ಯ ಕಾರ್ಯಾಚರಣೆಗಳಲ್ಲಿ ಹೇಗೆ ಉಪಯುಕ್ತ?
ಸ್ಮಾರ್ಟ್‌ಫೋನ್‌ಗಳು ಪೇಜರ್‌ಗಳು ಹೋಲಿಸಿದರೆ ಅತ್ಯಾಧುನಿಕ. ಆದರೆ ಗ್ಯಾಜೆಟ್‌ಗಳು ಹೈಟೆಕ್ ಆದಂತೆ ಅವುಗಳ ಟ್ರ್ಯಾಕಬಿಲಿಟಿ ಹೆಚ್ಚು. ಅಂದರೆ ಅವುಗಳು ಕನ್ಗಾವಲಿಗೆ ಒಳಗಾಗದಂತೆ ನೋಡಿಕೊಳ್ಳುವುದು ಬಹು ಕಷ್ಟ. ಪೇಜರ್ ಹಾಗಲ್ಲ. ಇವು GPS ಹೊಂದಿಲ್ಲ ಅಥವಾ ಇಂಟರ್ನೆಟ್ ಸಂಪರ್ಕ ಹೊಂದಿಲ್ಲ. ಇದು ಟ್ರ್ಯಾಕಿಂಗ್ ಅಪಾಯವನ್ನು ಕಡಿಮೆ ಮಾಡುತ್ತದೆ. ಗುಪ್ತಚರ ಏಜೆನ್ಸಿಗಳು ಡಿಜಿಟಲ್ ಹೆಜ್ಜೆಗುರುತುಗಳನ್ನು ಹೆಚ್ಚು ಅವಲಂಬಿಸಿವೆ. ಆದರೆ
ಪೇಜರ್‌ಗಳ ಮೇಲೆ ದೂರದಿಂದಲೇ ಹೀಗೆ ನಿಗಾ ಇಡುವುದು ಕಷ್ಟ.
ಎರಡನೆಯದಾಗಿ, ಪೇಜರ್‌ಗಳು ರೇಡಿಯೋ ತರಂಗಾಂತರಗಳನ್ನು ಬಳಸುತ್ತವೆ. ಇದನ್ನು ನಿರ್ಬಂಧಿಸಲು ಕಷ್ಟ. ಸೆಲ್ಯುಲಾರ್ ಅಥವಾ ಇಂಟರ್ನೆಟ್ ಆಧಾರಿತ ಸಂವಹನಗಳನ್ನು ದೂರದಿಂದಲೇ ನಿರ್ಬಂಧಿಸಬಹುದು. ಸೂಕ್ಷ್ಮ, ಎನ್‌ಕ್ರಿಪ್ಟ್ ಮಾಡಿದ ಅಥವಾ ಕೋಡೆಡ್ ಸಂದೇಶಗಳನ್ನು ಟ್ರ್ಯಾಕ್ ಆಗದಂತೆ ಕಳುಹಿಸುವುದು ಏಕಮುಖ ಪೇಜರ್‌ನಲ್ಲಿ ಸಾಧ್ಯ. ಇದು ಪತ್ತೆಯಾಗುವ ಅಪಾಯ ಕಡಿಮೆ. ಗುಪ್ತಚರ ಸಂಸ್ಥೆಗಳು ಅಥವಾ ವಿರೋಧಿಗಳಿಗೆ ಈ ಸಂದೇಶದ ಮೂಲ ಹುಡುಕುವುದು ಕಷ್ಟ.
ಹೆಜ್ಬೊಲ್ಲಾ ಗುಂಪುಗಳಲ್ಲಿ ಸಾಮೂಹಿಕವಾಗಿ ಇದನ್ನು ಬಳಸಲು ಮೂರನೆಯ ಕಾರಣ ಅದರ ಸರಳತೆ. ಈ ಪೇಜರ್‌ಗಳನ್ನು ನಿರ್ದಿಷ್ಟವಾದ ಸಿಗ್ನಲ್ ಅನ್ನು ಪ್ರಚೋದಿಸುವ ಸರ್ಕ್ಯೂಟ್‌ಗಳನ್ನು ಅಳವಡಿಸಿ ಸಾಮೂಹಿಕ ಸಂದೇಶವನ್ನು ಸ್ವೀಕರಿಸುವಂತೆ ಮಾರ್ಪಡಿಸಬಹುದು. ಇದನ್ನು ಸಾಮೂಹಿಕ ಸ್ಫೋಟಕಗಳನ್ನು ಸಕ್ರಿಯಗೊಳಿಸಲು ರಹಸ್ಯ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಅಂದರೆ ಸಾಮೂಹಿಕ ಬಾಂಬ್ ಸ್ಫೋಟಕ್ಕೆ ಸಿಗ್ನಲ್ ಕಳುಹಿಸಲು, ಅಥವಾ ಇದರ ಬಗ್ಗೆ ಎಲ್ಲರಿಗೂ ಅಲರ್ಟ್ ಕಳಿಸಲು ಬಳಸಲಾಗುತ್ತದೆ.
ಲೆಬನಾನ್‌ನ ಉಗ್ರರ ಮೊಬೈಲ್ ಜಾಲದ ಮೇಲೆ ಇಸ್ರೇಲ್ ನಿಗಾ ಇಟ್ಟಿದೆ ಎಂಬುದು ಹೆಜ್ಬೊಲ್ಲಾದ ನಂಬಿಕೆ. ಹೀಗಾಗಿ ತಮ್ಮ ಭದ್ರತೆಯನ್ನು ಕಾಪಾಡಿಕೊಳ್ಳಲು ಹೆಜ್ಬೊಲ್ಲಾ ಉಗ್ರರು ಪೇಜರ್‌ಗಳಂತಹ ಹಳೆಯ ತಂತ್ರಜ್ಞಾನ ಬಳಸತೊಡಗಿದರು. ಇಸ್ರೇಲಿಗಳು ಆ ನಂಬಿಕೆಯನ್ನೇ ಬೇಟೆಯಾಡಿದರು.
ಉಗ್ರರು ಸ್ಮಾರ್ಟ್‌ಫೋನ್ ಹೊಂದಿದ್ದರೆ ಇಸ್ರೇಲಿಗಳು ಕೇವಲ ಅವರನ್ನು ಟ್ರ್ಯಾಕ್ ಮಾಡಬಹುದಾಗಿತ್ತು. ಆದರೆ ಪೇಜರ್‌ಗಳನ್ನು ಉಗ್ರರ ವಿನಾಶಕ್ಕೇ ಇಸ್ರೇಲಿಗರು ಕುಶಲತೆಯಿಂದ ಬಳಸಿಕೊಂಡರು. ಪೇಜರ್ ಸರ್ಕ್ಯುಟ್ ಅನ್ನು ಟ್ಯಾಂಪರಿಂಗ್ ಮಾಡಲಾಗದು ಎಂಬುದು ಸುಳ್ಳು. ಲೆಬನಾನ್‌ಗೆ ಅವು ಪೂರೈಕೆಯಾಗುವ ಮುನ್ನವೇ ದಾರಿಯಲ್ಲಿ ಅಳವಡಿಸಲಾದ ಸಣ್ಣದೊಂದು ಟೆಕ್ಬಾಲಜಿಯಿಂದ ಇದು ಸಾಧ್ಯವಾಯಿತು.
ಪೇಜರ್‌ಗಳು ಇನ್ನು ದಾಳಿಗೆ ಹೊಸ ಸಾಧನವೇ?
ಪೇಜರ್‌ನ ಸಣ್ಣ ಗಾತ್ರ ಮತ್ತು ಹಳೆಯ ನೋಟ ಈ ಪೇಜರ್‌ಗಳನ್ನು ಎನ್‌ಕ್ರಿಪ್ಟ್ ಮಾಡಿದ ಪಠ್ಯಗಳನ್ನು ಕಳುಹಿಸಲು ಸೂಕ್ತವಾದ ಸಾಧನವಾಗಿಸಿದೆ. ಅದನ್ನು ಗುಪ್ತಚರ ಸಂಸ್ಥೆಗಳು ಕಂಡು ಹಿಡಿಯಲು ಸಾಧ್ಯವಿಲ್ಲ. ಇಸ್ರೇಲ್ ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಸ್ಫೋಟ ಸಂಭವಿಸಿದ ಪೇಜರ್‌ಗಳು ಗೋಲ್ಡ್ ಅಪೊಲೊ ಕಂಪನಿಯವು. ಇದು ತೈವಾನ್ ಮೂಲದ ಕಂಪನಿ. ಆದರೆ ಇದನ್ನು ತಯಾರಿಸಿದ್ದು ತಾನಲ್ಲ, ಯುರೋಪಿಯನ್ ಸಂಸ್ಥೆಯೊಂದಕ್ಕೆ ತಯಾರಿಸಲು ನೀಡಲಾಗಿದೆ ಎಂದಿದೆ. ಸಾವಿರಾರು ಪೇಜರ್‌ಗಳನ್ನು ಹೆಜ್ಬೊಲ್ಲಾ ಆರ್ಡರ್ ಮಾಡಿತ್ತು. ಈ ದಾಳಿಯನ್ನು ಹೇಗೆ ಎಸಗಲಾಗಿದೆ ಎಂಬುದನ್ನು ತಜ್ಞರು ಇನ್ನೂ ಊಹಿಸುತ್ತಲೇ ಇದ್ದಾರೆ.
ದಾಳಿಯನ್ನು ಹೇಗೆ ನಡೆಸಲಾಯಿತು?
ಈ ಪೇಜರ್‌ಗಳು ಸ್ಪೋಟಿಸಿರಬಹುದು? ಹೆಜ್ಬೊಲ್ಲಾಗೆ ಸಪ್ಲೈ ಆಗುತ್ತಿದ್ದ ಪೇಜರ್‌ಗಳನ್ನು ಇಸ್ರೇಲಿಗರು ತಡೆಹಿಡಿದು ಮಾರ್ಪಡಿಸಿದ್ದಾರೆ. ಸ್ಫೋಟಕಗಳನ್ನು ಸೇರಿಸಿರಬಹುದು. 3 ಗ್ರಾಂನಷ್ಟು ಕಡಿಮೆ ಪ್ರಮಣದಲ್ಲಿ ನಿರ್ದಿಷ್ಟವಾಗಿ PETN (ಒಂದು ರಾಸಾಯನಿಕ ಸ್ಫೋಟಕ) ಸೇರಿಸಿರುವ ಸಾಧ್ಯತೆ ಇದೆ. ಇಸ್ರೇಲಿಗಳು ದಾರಿಯಲ್ಲಿ ಇಡೀ ಮಾರಾಟದ ಚೈನ್ ಅನ್ನು ನಿಯಂತ್ರಿಸಿದ್ದರು. ಹೀಗಾಗಿ ಲ್ಯಾಬ್‌ನಲ್ಲಿ ಈ ಸಾಧನಗಳನ್ನು ಟ್ಯಾಂಪರ್ ಮಾಡಲು ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿದೆ. ವಾಕಿ ಟಾಕಿಯ ವಿಷಯದಲ್ಲೂ ಇಸ್ರೇಲ್ ಇದೇ ರೀತಿ ಮಾಡಿದೆ ಎಂದು ನಂಬಲಾಗಿದೆ. ಇಡೀ ಕಾರ್ಯಾಚರಣೆ ಅತ್ಯಂತ ರಹಸ್ಯವಾಗಿ ನಡೆದಿದೆ.
ಇದನ್ನೂ ಓದಿ: Pager Blasts : ಲೆಬನಾನ್‌ನ ಪೇಜರ್ ಸ್ಫೋಟಕ್ಕೂ ಕೇರಳದ ಲಿಂಕ್…