Monday, 23rd September 2024

Kalaburagi Rain: ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ಥ

ಕಲಬುರಗಿ: ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ವಿಪರೀತ ಶಕೆಯಿಂದ ಕೂಡಿದ ಕಲಬುರಗಿಯ ವಾತಾವರಣ ಸಾಯಂಕಾಲದ ಹೊತ್ತಿಗೆ ಧಾರಾಕಾರ ಮಳೆ ಸುರಿದು ಹಿನ್ನಲೆ ಸಂಪೂರ್ಣ ಜನಜೀವನ ಅಸ್ತವ್ಯಸ್ಥ ಗೊಂಡಿತು.

ನಗರ ಹಾಗೂ ಗ್ರಾಮೀಣ ಭಾಗದ ಕೆಲವಡೆ ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಎಡಬಿಡದೇ ಸುರಿದ ಮಳೆಗೆ ಕಲಬುರಗಿಯ ಮಂದಿ ಹೈರಾಣಾದರು. ಬಾರಿ ಮಳೆಯಿಂದಾಗಿ ವಿವಿಧ ಬಡಾವಣೆ ಹಾಗೂ ತಗ್ಗು ಪ್ರದೇಶ ಗಳಿಗೆ ನೀರು ನುಗ್ಗಿದರೆ, ಕೇವಲ ಒಂದು ಗಂಟೆ ಮಳೆಗೆ ಗ್ರಾಮೀಣ ಭಾಗದ ಹಳ್ಳಕೊಳ್ಳಗಳು ತುಂಬಿ ಹರಿದವು.

ಮಳೆ ಜೋರಾಗಿದ್ದರಿಂದ ಶಾಲೆ- ಕಾಲೇಜಿಗೆ ತೆರಳಿ ಮನೆಗೆ ವಾಪಸಗಲು ವಿದ್ಯಾರ್ಥಿಗಳು ಪರದಾಡಿದರೆ, ನಿತ್ಯದ ಕೆಲಸಗಳಿಂದ ಮರಳಿ ಗೂಡು ಸೇರುವ ಸಾರ್ವಜನಿಕರಿಗೆ ಮಳೆಯ ಅಡ್ಡಿಯಾಯಿತು. ಮಳೆಯಿಂದ ಆಸರೆ ಪಡೆಯಲು ಹೋಟೆಲ್, ಅಂಗಡಿ-ಮುಂಗಟು ಆಶ್ರಯ ಪಡೆದರೆ, ಇನ್ನೂ ಕೆಲವರು ಛತ್ರಿ, ರೈನ್ ಕೋಟ್, ಪ್ಲಾಸ್ಟಿಕ್ ಚೀಲಗಳ ಮೊರೆ ಹೋದ ದೃಶ್ಯ ಕಂಡು ಬಂದವು.

ಕಲಬುರಗಿ ನಗರದ ಜಗತ್ ವೃತ್ತ, ತಿಮ್ಮಾಪುರ ವೃತ್ತ, ರಾಷ್ಟ್ರಪತಿ ವೃತ್ತ, ರಾಮ ಮಂದಿರ್, ಆಳಂದ ಚೆಕ್ ಪೋಸ್ಟ್, ಖರ್ಗೆ ಪೆಟ್ರೋಲ್ ಬಂಕ್, ಹುಮನಾಬಾದ ರಿಂಗ್ ರೋಡ್ ಹಾಗೂ ಸುತ್ತಮುತ್ತಲಿನ ನಂದೂರು ಕೆ, ತಾಜ್ ಸುಲ್ತಾನ ಪುರ, ಸಾವಳಗಿ ಬಿ, ಶ್ರೀನಿವಾಸ್ ಸರಡಗಿ, ಹರಸೂರು, ಫರಥಾಬಾದ್, ಶಹಾಬಾದ್, ಕಡಗಂಚಿ, ಬುಸುನೂರು, ನೀಲೂರು, ಕಡ್ನಿ ಸೇರಿ ಇತರೆ ಸ್ಥಳಗಳಲ್ಲಿ ಬಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ.

ಇನ್ನೂ, ಕಲ್ಯಾಣ ಕರ್ನಾಟಕ ಕಲಬುರಗಿ, ಬೀದ‌ರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅತಿ ಬಾರಿ (115.5mm – 204.5mm) ಮಳೆಯಾಗುವ ಸಾಧ್ಯತೆಯಿದೆ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.

ಇದನ್ನೂ ಓದಿ: Heavy Rain: ಭಾರೀ ಮಳೆಗೆ ಆಂಧ್ರ, ತೆಲಂಗಾಣ ತತ್ತರ; 10 ಬಲಿ- 100ಕ್ಕೂಅಧಿಕ ರೈಲುಗಳು ರದ್ದು