Tuesday, 24th September 2024

Mysuru Dasara 2024: ಮೈಸೂರು ದಸರಾ ನೋಡಲು ಹೋದಾಗ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ!

Mysuru Dasara 2024

ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara 2024) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದು ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು (tourists) ಆಕರ್ಷಿಸುತ್ತದೆ. ಅನೇಕರು ಈಗಾಗಲೇ ಮೈಸೂರು ಪ್ರವಾಸದ (mysuru tour) ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮೈಸೂರು ಅರಮನೆ (mysuru Palace) ಮಾತ್ರವಲ್ಲ ಸುತ್ತಮುತ್ತಲಿನ ಅನೇಕ ಸುಪ್ರಸಿದ್ಧ ತಾಣಗಳನ್ನು ಕಣ್ತುಂಬಿಕೊಳ್ಳಬಹುದು.

ಮೈಸೂರು ಅರಮನೆ

ಮೈಸೂರಿನ ಅರಮನೆಯ ಬಗ್ಗೆ ಬಹುತೇಕ ಹೆಚ್ಚಿನವರು ಕೇಳಿರುತ್ತಾರೆ, ನೋಡಿರುತ್ತಾರೆ. ಆದರೆ ದಸರಾ ವೇಳೆ ಇಲ್ಲಿನ ಮೆಜೆಸ್ಟಿಕ್ ದರ್ಬಾರ್ ಹಾಲ್ ಅನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಅದರ ಅಲಂಕೃತ ಸೀಲಿಂಗ್, ಕೆತ್ತನೆಯ ಕಂಬಗಳು, ನವಿಲು ವಿನ್ಯಾಸದಲ್ಲಿ ಜೋಡಿಸಲಾದ ಬೆಲ್ಜಿಯನ್ ಬಣ್ಣದ ಗಾಜು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ದಸರಾ ಉತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲಾಗುವ ಭವ್ಯವಾದ ರತ್ನಖಚಿತ ಚಿನ್ನದ ಸಿಂಹಾಸನ ಒಡೆಯರ್‌ಗಳ ಹೆಮ್ಮೆ ಮತ್ತು ಅವರ ಸಾರ್ವಭೌಮತ್ವದ ಸಂಕೇತವನ್ನು ಪ್ರತಿಬಿಂಬಿಸುತ್ತದೆ. ಇದನ್ನು ಈ ಬಾರಿ ಕಣ್ತುಂಬಿಕೊಳ್ಳಬಹುದು.

Mysuru Dasara 2024

ಬೃಂದಾವನ ಗಾರ್ಡನ್ಸ್

ಕೃಷ್ಣರಾಜ ಸಾಗರ ಅಣೆಕಟ್ಟಿನ ಬಳಿ ಇರುವ ಶಾಂತವಾದ ಅಲಂಕೃತ ಉದ್ಯಾನವಿದು. ಸಂಜೆಯ ವೇಳೆಗೆ ವಿದ್ಯುತ್ ದೀಪಗಳಿಂದ ಕಂಗೊಳಿಸುವ ಈ ತಾಣದಲ್ಲಿ ಸಂಗೀತ ಕಾರಂಜಿಗಳನ್ನು ನೋಡಿ ಆನಂದಿಸಬಹುದು. ವರ್ಣರಂಜಿತ ದೀಪಗಳು ಎಲ್ಲರನ್ನೂ ಮೋಡಿ ಮಾಡುವಂತಿರುತ್ತದೆ.

Mysuru Dasara 2024

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ಕೊಡಗು ಮತ್ತು ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವು ಅನೇಕ ಪ್ರಾಣಿ, ಪಕ್ಷಿಗಳ ಆವಾಸಸ್ಥಾನವಾಗಿದೆ. ನಾಗರಹೊಳೆ ಒಂದು ಅದ್ಭುತ ತಾಣವಾಗಿದ್ದು, ಇಲ್ಲಿ ಅಪರೂಪದ ಭಾರಿ ಗಾತ್ರದ ಮರಗಳು ಮತ್ತು ಅಪರೂಪದ ಪ್ರಾಣಿಗಳನ್ನು ಕಾಣಬಹುದು.

Mysuru Dasara 2024

ಶಿವನ ಸಮುದ್ರ

ಮೈಸೂರಿನಿಂದ 85 ಕಿ.ಮೀ ದೂರದಲ್ಲಿ ಕಾವೇರಿ ನದಿಯು ಎರಡು ಸುಂದರವಾದ ಜಲಪಾತವಾಗಿ ಹರಿಯುತ್ತದೆ. ಇದನ್ನು ಶಿವನ ಸಮುದ್ರ ಎಂದು ಕರೆಯಲಾಗುತ್ತದೆ. ಇದರ ಸೌಂದರ್ಯವು ವರ್ಷವಿಡೀ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಇದು ಭಾರತದ ಮೊದಲ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ಅನ್ನು ಹೊಂದಿದೆ.ಇದನ್ನು 1902 ರಲ್ಲಿ ಅಂದಿನ ಮೈಸೂರು ಮಹಾರಾಜರು ನಿರ್ಮಿಸಿದ್ದರು.

Mysuru Dasara 2024

ಶ್ರೀರಂಗಪಟ್ಟಣ

ಮೈಸೂರಿನಿಂದ 14 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣ ದ್ವೀಪದ ಕೋಟೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ರಾಜಧಾನಿ. ಟಿಪ್ಪುವಿನ ಬೇಸಿಗೆ ಅರಮನೆಯಾದ ದರಿಯಾ ದೌಲತ್ ಈಗ ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ತೇಗದಿಂದ ಮಾಡಲ್ಪಟ್ಟ ಇಂಡೋ ಸಾರ್ಸೆನಿಕ್ ರಚನೆಯು ಅಲಂಕೃತ ಮತ್ತು ಸುಂದರವಾದ ಚಿತ್ರಗಳನ್ನು ಹೊಂದಿದೆ. ಕೋಟೆಯೊಳಗೆ ಮಸೀದಿ ಮತ್ತು ರಂಗನಾಥ ಸ್ವಾಮಿ ದೇವಾಲಯವನ್ನು ಕಾಣಬಹುದು.

Mysuru Dasara 2024

ಸೋಮನಾಥಪುರ

ಮೈಸೂರಿನಿಂದ ಮೂವತ್ತೈದು ಕಿಲೋ ಮೀಟರ್ ಪೂರ್ವಕ್ಕೆ ಸೋಮನಾಥಪುರವಿದೆ. ಇದು ಹೊಯ್ಸಳ ರಾಜರು ನಿರ್ಮಿಸಿದ ದೇವಾಲಯಕ್ಕೆ ಹೆಸರುವಾಸಿಯಾಗಿದೆ. 1268ರಲ್ಲಿ ನಿರ್ಮಿಸಲಾದ ಕೇಶವ ದೇವಾಲಯದ ಸುಂದರವಾದ ಕಟ್ಟಡವು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ನಕ್ಷತ್ರಾಕಾರದ ದೇವಾಲಯದ ಗೋಡೆಗಳಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ, ಹೊಯ್ಸಳ ರಾಜರ ಜೀವನ ಮತ್ತು ಕಾಲದ ವಿವಿಧ ದೃಶ್ಯಗಳನ್ನು ಚಿತ್ರಿಸಲ್ಪಟ್ಟಿದೆ.

Mysuru Dasara 2024

ಬೇಲೂರು

ಮೂರು ಪ್ರಮುಖ ಹೊಯ್ಸಳ ದೇವಾಲಯಗಳಲ್ಲಿ ಒಂದಾಗಿರುವ ಬೇಲೂರಿನ ಚನ್ನಕೇಶವ ದೇವಾಲಯವು 1116 ರಲ್ಲಿ ಚೋಳರ ಮೇಲೆ ಹೊಯ್ಸಳರ ವಿಜಯದ ಸ್ಮರಣಾರ್ಥವಾಗಿ ಸ್ಥಾಪಿಸಲಾಯಿತು. ಸುಸಜ್ಜಿತ ಕಾಂಪೌಂಡ್‌ನಲ್ಲಿ ಸುತ್ತುವರಿದಿರುವ ದೇವಾಲಯದ ಸಂಕೀರ್ಣವು ಬಾವಿ ಮತ್ತು ಸ್ನಾನದ ತೊಟ್ಟಿಯನ್ನು ಒಳಗೊಂಡಿದೆ.

Mysuru Dasara 2024

ಹಳೇಬೀಡು

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ಸುಮಾರು 1121ರ ಹಿಂದಿನ ಇತಿಹಾಸವನ್ನು ಹೊಂದಿದೆ. ಇದರ ನಿರ್ಮಾಣ ಕಾರ್ಯವು 80 ವರ್ಷಗಳ ಕಾಲ ನಡೆದರೂ ಅದು ಪೂರ್ಣವಾಗಲಿಲ್ಲ. ದೇವಸ್ಥಾನದಲ್ಲಿ ಅತ್ಯಂತ ಸುಂದರವಾದ ಉದ್ಯಾನವನ್ನು ಸ್ಥಾಪಿಸಲಾಗಿದೆ. ಅದರ ಪಕ್ಕದಲ್ಲಿರುವ ಒಂದು ಸಣ್ಣ ವಸ್ತುಸಂಗ್ರಹಾಲಯವು ಶಿಲ್ಪಗಳ ಸಂಗ್ರಹವನ್ನು ಹೊಂದಿದೆ. ಕೇದಾರೇಶ್ವರ ದೇವಸ್ಥಾನ ಮತ್ತು ಮೂರು ಸಣ್ಣ ಜೈನ ದೇವಾಲಯಗಳು ಇಲ್ಲಿವೆ.

Mysuru Dasara 2024

ಬಂಡೀಪುರ

ಊಟಿಗೆ ಹೋಗುವ ದಾರಿಯಲ್ಲಿ ಮೈಸೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಪ್ರಸಿದ್ಧ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಹುಲಿಯನ್ನು ಹೊರತುಪಡಿಸಿ ಇಲ್ಲಿ ಜಿಂಕೆ, ಆನೆಗಳು ಮತ್ತು ಕಾಡೆಮ್ಮೆಗಳನ್ನು ನೋಡಬಹುದು. ಇದು ಸುಮಾರು 875 ಕಿ.ಮೀ. ಪ್ರದೇಶವನ್ನು ವ್ಯಾಪಿಸಿದೆ.

Mysuru Dasara 2024

ರಂಗನತಿಟ್ಟು

ಪಕ್ಷಿ ಪ್ರಿಯರಿಗೆ ರಂಗನತಿಟ್ಟು ಭೇಟಿ ನೀಡಲು ಯೋಗ್ಯವಾಗಿದೆ. ಈ ಪಕ್ಷಿಧಾಮವು ಮೈಸೂರಿನಿಂದ ಸುಮಾರು 18 ಕಿ.ಮೀ. ದೂರದಲ್ಲಿದೆ. ಅಪರೂಪದ ಮತ್ತು ಸಾಮಾನ್ಯ ಪಕ್ಷಿಗಳನ್ನು ಇಲ್ಲಿ ಹತ್ತಿರದಿಂದ ಕಾಣಬಹುದು.

Mysuru Dasara 2024

ಶ್ರವಣಬೆಳಗೊಳ

ಶ್ರವಣಬೆಳಗೊಳ ಅಂದರೆ ಬಿಳಿ ಕೊಳದ ಸನ್ಯಾಸಿ ಎಂದರ್ಥ. ಇದು ದೇಶದ ಅತ್ಯಂತ ಹಳೆಯ ಮತ್ತು ಜೈನರ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಈ ಪಟ್ಟಣವು ವಿಶ್ವದ ಅತಿ ಎತ್ತರದ ಏಕಶಿಲೆಯ ಬಾಹುಬಲಿಯ ಪ್ರತಿಮೆಯನ್ನು ಹೊಂದಿದೆ. ಇದು ಸುಮಾರು 17 ಮೀಟರ್ ಎತ್ತರವಿದೆ. ಪ್ರತಿಮೆಯ ಜೊತೆಗೆ ಪಟ್ಟಣವು ಹಲವಾರು ಆಸಕ್ತಿದಾಯಕ ಜೈನ ದೇವಾಲಯ ಮತ್ತು ಮಠಗಳನ್ನು ಹೊಂದಿದೆ.

Mysuru Dasara 2024

Longest Bus Route: 1957ರಲ್ಲೇ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಸ್‌ ಸರ್ವಿಸ್‌ ಇತ್ತು! ಇಲ್ಲಿದೆ ಆ ಬಸ್‌ನ ಐತಿಹ್ಯ..

ನಂಜನಗೂಡು

ಕಪಿಲಾ ನದಿಯ ದಡದಲ್ಲಿರುವ ನಂಜನಗೂಡು ಒಂದು ಪ್ರಮುಖ ಯಾತ್ರಾ ಸ್ಥಳವಾಗಿದೆ. ಬೃಹತ್ ನಂಜುಂಡೇಶ್ವರ ದೇವಾಲಯಕ್ಕೆ ಇದು ಹೆಸರುವಾಸಿಯಾಗಿದೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಕರ್ನಾಟಕದ ಅತ್ಯಂತ ದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ.

Mysuru Dasara 2024