Sunday, 17th November 2024

Research And Analysis Wing Recruits: ಭಾರತೀಯ ಗುಪ್ತಚರ ಸಂಸ್ಥೆ ʼರಾʼ ಏಜೆಂಟ್‌ಗಳ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ!

Research And Analysis Wing Recruits

ನಿಮಗೆ ಭಾರತೀಯ ಗುಪ್ತಚರ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಅಧಿಕಾರಿ ಅಥವಾ ಏಜೆಂಟ್‌ಗಳಾಗಬೇಕು ಎಂಬ ಆಸೆ ಇದೆಯೆ? ಹಾಗಿದ್ದರೆ ಇದರ ಆಯ್ಕೆ ಪ್ರಕ್ರಿಯೆಯ (Research And Analysis Wing Recruits) ಬಗ್ಗೆ ಮೊದಲು ನೀವು ತಿಳಿದುಕೊಳ್ಳಲೇಬೇಕು. ರಾ ಅಧಿಕಾರಿಗಳು ಮತ್ತು ಏಜೆಂಟ್‌ಗಳನ್ನು ವಿವಿಧ ರೀತಿಯಲ್ಲಿ ನೇಮಕ ಪರೀಕ್ಷೆಗಳ (Recruitment Test) ಮೂಲಕ ಆಯ್ಕೆ ಮಾಡಲಾಗುತ್ತದೆ. ಇದರ ಆಯ್ಕೆ ಪ್ರಕ್ರಿಯೆಯಲ್ಲಿ ಪರೀಕ್ಷೆ, ಸಂದರ್ಶನ ಪ್ರಕ್ರಿಯೆಯೂ ಇರುತ್ತದೆ.

ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್‌ಗೆ ಸೇರಲು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆ ಬರೆಯಬೇಕು. ಇದರಲ್ಲಿ ಐಎಎಸ್, ಐಪಿಎಸ್, ಐಆರ್‌ಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ರಾ ಸೇರಲು ಅರ್ಹತೆ ಪಡೆಯುತ್ತಾರೆ. ರಾ ಎನ್ನುವುದು ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾಗಿದೆ. ಇದನ್ನು 1968ರ ಸೆಪ್ಟೆಂಬರ್ 21ರಂದು ಸ್ಥಾಪಿಸಲಾಗಿದೆ. ಇದರ ಮುಖ್ಯ ಉದ್ದೇಶ ವಿದೇಶಿ ಗುಪ್ತಚರ, ಭಯೋತ್ಪಾದನೆ ನಿಗ್ರಹ, ಭಾರತೀಯ ನೀತಿ ನಿರೂಪಕರಿಗೆ ಸಲಹೆ ನೀಡುವುದು ಮತ್ತು ಭಾರತದ ವಿದೇಶಿ ಕಾರ್ಯತಂತ್ರದ ಹಿತಾಸಕ್ತಿಗಳನ್ನು ಮುನ್ನಡೆಸುವುದಾಗಿದೆ. ಈ ಏಜೆನ್ಸಿಯು ಭಾರತದ ಪರಮಾಣು ಕಾರ್ಯಕ್ರಮದ ಭದ್ರತೆಯಲ್ಲೂ ತೊಡಗಿಸಿಕೊಂಡಿದೆ.

ರಾ ಅಧಿಕಾರಿಗಳ ನೇಮಕ ಹೇಗೆ?

ಇಂಟೆಲಿಜೆನ್ಸ್ ಬ್ಯೂರೋದ ಬಾಹ್ಯ ವಿಭಾಗಕ್ಕೆ ಸೇರಿದ ತರಬೇತಿ ಪಡೆದ ಗುಪ್ತಚರ ಅಧಿಕಾರಿಗಳನ್ನು ರಾ ನೇರವಾಗಿ ನೇಮಕ ಮಾಡಿಕೊಳ್ಳುತ್ತದೆ. ಅಲ್ಲದೇ ವಿಶ್ವವಿದ್ಯಾನಿಲಯಗಳಿಂದ ಪದವೀಧರರು, ಸಿವಿಲ್ ಸೇವೆಗಳನ್ನು ಬರೆದಿರುವ ಪ್ರತಿಭಾವಂತರನ್ನೂ ರಾ ಆಯ್ಕೆ ಮಾಡಿಕೊಳ್ಳುತ್ತದೆ. ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಭಾರತದಲ್ಲಿನ ಸರ್ಕಾರಿ ಇಲಾಖೆಗಳು, ಸಶಸ್ತ್ರ ಪಡೆಗಳು, ಗುಪ್ತಚರ ಸಂಸ್ಥೆಗಳು, ಪೊಲೀಸ್ ಸೇವೆಗಳು, ಆಡಳಿತಾತ್ಮಕ ಸೇವೆಗಳು ಮೊದಲಾದವುಗಳಿಂದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತದೆ. ಆದರೆ ರಾ ಆಯ್ಕೆಯು ಈ ಸೇವೆಗಳಿಂದ ಮಾತ್ರ ನಡೆಯುತ್ತದೆ ಎಂದರ್ಥವಲ್ಲ.

ಅರ್ಹತೆಗಳು ಏನು?

ರಾ ಏಜೆಂಟ್ ಆಗಲು ಉತ್ತಮ ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವ ಎರಡೂ ಅಗತ್ಯವಿದೆ. ಭಾರತದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (RAW) ಭಾಗವಾಗುವುದು ತುಂಬಾ ಕಷ್ಟ. ಈ ಪ್ರತಿಷ್ಠಿತ ಸಂಸ್ಥೆಗೆ ಆಯ್ಕೆಯಾಗಲು ಅಭ್ಯರ್ಥಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು.

ಪದವಿಯೊಂದಿಗೆ ವಿದೇಶಿ ಭಾಷೆಯೂ ಗೊತ್ತಿರಬೇಕು. ತೀಕ್ಷ್ಣವಾದ ಜ್ಞಾಪಕ ಶಕ್ತಿ, ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು. ಯಾವುದೇ ನಿರ್ದಿಷ್ಟ ವಯಸ್ಸಿನ ಮಿತಿಯಿಲ್ಲದಿದ್ದರೂ ಅಭ್ಯರ್ಥಿಗಳ ವಯಸ್ಸು 56 ವರ್ಷಕ್ಕಿಂತ ಕಡಿಮೆಯಿರಬೇಕು. 20 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ
ಅಲ್ಲದೇ ಭಾರತೀಯ ಪ್ರಜೆಯಾಗಿರಬೇಕು. ಅಭ್ಯರ್ಥಿಯು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರಬಾರದು ಅಥವಾ ನ್ಯಾಯಾಲಯದಲ್ಲಿ ಯಾವುದೇ ಬಾಕಿ ಪ್ರಕರಣಗಳನ್ನು ಹೊಂದಿರಬಾರದು.

Research And Analysis Wing Recruits

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಮತ್ತು ಐಪಿಎಸ್, ಇಎಫ್‌ಎಸ್ ಅಧಿಕಾರಿಗಳಾಗಲು ಆಯ್ಕೆ ಮಾಡಿಕೊಂಡಿರುವ ಪ್ರತಿಭಾವಂತ ಅಭ್ಯರ್ಥಿಗಳಲ್ಲಿ ರಾ ಅಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಿಂದ ಸಿವಿಲ್ ಸರ್ವೆಂಟ್ ಫೌಂಡೇಶನ್ ಕೋರ್ಸ್ ಅನ್ನು ಪೂರ್ಣಗೊಳಿಸಿದ ಅನಂತರವೇ ʼರಾʼಗೆ ಅಧಿಕಾರಿಗಳ ಆಯ್ಕೆ ನಡೆಯುತ್ತದೆ. ಕೋರ್ಸ್‌ನ ಕೊನೆಯಲ್ಲಿ ʼರಾʼ ಸಂದರ್ಶನ ಮತ್ತು ಮಾನಸಿಕ ಪರೀಕ್ಷೆಗಳನ್ನು ನಡೆಸುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಒಂದು ವರ್ಷದ ಅವಧಿಗೆ ʼರಾʼನಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ.

ರಾ ಹುದ್ದೆ ಹಂಚಿಕೆ ಯಾರು ಮಾಡುತ್ತಾರೆ?

ʼರಾʼನ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ. ಕೇಂದ್ರ ಸಂಪುಟ ಸಚಿವಾಲಯದ ಕಾರ್ಯದರ್ಶಿ ಇದರ ಮುಖ್ಯಸ್ಥರಾಗಿರುತ್ತಾರೆ. ರಾ ಅಧಿಕಾರಿ, ಏಜೆಂಟ್‌ಗಳು ಭಾರತದ ಪ್ರಧಾನಮಂತ್ರಿಯ ಅಧಿಕಾರದ ಅಡಿಯಲ್ಲಿರುತ್ತಾರೆ. ಆಡಳಿತಾತ್ಮಕ ಆಧಾರದ ಮೇಲೆ ನಿರ್ದೇಶಕರು ಕ್ಯಾಬಿನೆಟ್ ಕಾರ್ಯದರ್ಶಿಗೆ ವರದಿ ಮಾಡುತ್ತಾರೆ. ಅವರು ಪ್ರಧಾನ ಮಂತ್ರಿಗೆ ವರದಿ ಮಾಡುತ್ತಾರೆ.

Beauty Parlor Training: ನಿರುದ್ಯೋಗಿ ಯುವತಿಯರಿಗೆ ಗುಡ್‌ ನ್ಯೂಸ್‌; ಬ್ಯೂಟಿ ಪಾರ್ಲರ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಇವರಿಗೆ ಏನು ಕೆಲಸ?

ʼರಾʼ ಏಜೆಂಟ್‌ಗಳು ಭಾರತದ ಸುತ್ತಮುತ್ತಲಿನ ದೇಶಗಳಲ್ಲಿನ ರಾಜಕೀಯ ಮತ್ತು ಮಿಲಿಟರಿ ಬೆಳವಣಿಗೆಗಳ ಮೇಲ್ವಿಚಾರಣೆ ನಡೆಸುತ್ತಿರುತ್ತಾರೆ. ಮುಖ್ಯವಾಗಿ ವಿದೇಶಿ ಗುಪ್ತ ಮಾಹಿತಿ ಸಂಗ್ರಹಿಸುವುದು, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸುವುದು, ದೇಶದಲ್ಲಿ ನೀತಿ ನಿರೂಪಕರಿಗೆ ಸಲಹೆ ನೀಡುವುದು, ದೇಶದ ಪರಮಾಣು ಕಾರ್ಯಕ್ರಮವನ್ನು ಭದ್ರಪಡಿಸುವುದು ಇತ್ಯಾದಿ. ದೇಶದ ಹಿತಾಸಕ್ತಿ ಕಾಯುವುದರಲ್ಲಿ ಇವರ ಶ್ರಮ ಮತ್ತು ತ್ಯಾಗ ಅಪಾರ.