Monday, 23rd September 2024

Modi visit to USA : ಮಾನವೀಯತೆಯ ಯಶಸ್ಸು ಸಮೂಹ ಶಕ್ತಿಯಲ್ಲಿ ಅಡಗಿದೆ; ವಿಶ್ವ ಸಂಸ್ಥೆಯಲ್ಲಿ ಮೋದಿ ಭರವಸೆ

Modi visit to USA

ಬೆಂಗಳೂರು: ಮಾನವೀಯತೆಯ ಯಶಸ್ಸು ನಮ್ಮ ಸಮೂಹ ಶಕ್ತಿಯಲ್ಲಿದೆ. ಯುದ್ಧಭೂಮಿಯಲ್ಲಿ ಅಲ್ಲ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ, ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಮುಖ್ಯ. ಸುಧಾರಣೆಯೇ ಶಾಂತಿಯ ಸ್ಥಾಪನೆಯ ಕೀಲಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ತಮ್ಮ ಮೂರು ದಿನಗಳ ಅಮೆರಿಕ ಭೇಟಿಯ ಕೊನೇ ದಿನವಾದ ಮಂಗಳವಾರ ವಿಶ್ವ ಸಂಸ್ಥೆಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು (Modi visit to USA) ಉದ್ದೇಶಿ ಅವರು ಮಾತನಾಡಿದರು.

ಮಾನವ ಕೇಂದ್ರಿತ ವಿಧಾನಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಸುಸ್ಥಿರ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುವಂತೆ ಅವರು ಇದೇ ವೇಳೆ ಕೊಟ್ಟರು. “ಇಂದು ಮನುಕುಲದ ಆರನೇ ಒಂದು ಭಾಗದಷ್ಟು ಜನರ ಧ್ವನಿಯನ್ನು ನಾನು ಇಲ್ಲಿಗೆ ತಂದಿದ್ದೇನೆ. ನಾವು ಭಾರತದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದೇವೆ. ಸುಸ್ಥಿರ ಅಭಿವೃದ್ಧಿ ಯಶಸ್ವಿಯಾಗಬಹುದು ಎಂದು ನಾವು ತೋರಿಸಿದ್ದೇವೆ. ಯಶಸ್ಸಿನ ಈ ಅನುಭವವನ್ನು ಜಾಗತಿಕವಾಗಿ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ” ಎಂದು ಅವರು ಹೇಳಿದ್ದಾರೆ.

ತಂತ್ರಜ್ಞಾನದ ಸುರಕ್ಷಿತ ಮತ್ತು ಜವಾಬ್ದಾರಿಯುತ ಬಳಕೆಗಾಗಿ, ಸಮತೋಲಿತ ನಿಯಂತ್ರಣದ ಅಗತ್ಯವಿದೆ. ಸಾರ್ವಭೌಮತ್ವ ಮತ್ತು ಸಮಗ್ರತೆ ಉಳಿಯುವ ಡಿಜಿಟಲ್ ಆಡಳಿತವನ್ನು ನಾವು ಬಯಸುತ್ತೇವೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಸೇತುವಾಗಬೇಕು. ಅದು ತಡೆಗೋಡೆಯಾಗಬಾರದು. ಜಾಗತಿಕ ಒಳಿತಿಗಾಗಿ, ಭಾರತವು ತನ್ನ ಡಿಪಿಐ ಅನ್ನು ಹಂಚಿಕೊಳ್ಳಲು ಸಿದ್ಧವಾಗಿದೆ. ಭಾರತವು ಒಂದು ಭೂಮಿ ಒಂದು ಕುಟುಂಬ ಒಂದು ಭವಿಷ್ಯವು ಬದ್ಧತೆಯಾಗಿದೆ” ಎಂದು ಮೋದಿ ಹೇಳಿದರು.

ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನ್ಯೂಯಾರ್ಕ್ನ ನಸ್ಸಾವು ಕೊಲಿಸಿಯಂನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯ ವಲಸಿಗರನ್ನು ಶ್ಲಾಘಿಸಿದ ಅವರು “ನಾನು ಯಾವಾಗಲೂ ಭಾರತೀಯ ವಲಸಿಗರ ಸಾಮರ್ಥ್ಯಗಳನ್ನು ಅರ್ಥಮಾಡಿಕೊಂಡಿದ್ದೇನೆ. ನಾನು ಯಾವುದೇ ಅಧಿಕೃತ ಸ್ಥಾನ ಹೊಂದಿಲ್ಲದಿದ್ದರೂ ಸಹ ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ. ನನಗೆ, ನೀವೆಲ್ಲರೂ ಭಾರತದ ಬಲವಾದ ಬ್ರಾಂಡ್ ಅಂಬಾಸಿಡರ್‌ಗಳಾಗಿದ್ದೀರಿ. ಅದಕ್ಕಾಗಿಯೇ ನಾನು ನಿಮ್ಮನ್ನು ‘ರಾಷ್ಟ್ರದೂತ’ ಎಂದು ಕರೆಯುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Sundar Pichai: ದೂರದೃಷ್ಟಿಯ ನಾಯಕ ನರೇಂದ್ರ ಮೋದಿ: ಗೂಗಲ್‌ ಸಿಇಒ ಸುಂದರ್‌ ಪಿಚೈ ಶ್ಲಾಘನೆ

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಅಮೆರಿಕದ ಟೆಕ್ ಸಿಇಒಗಳೊಂದಿಗೆ ಮಾತನಾಡಿದರು. ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರವಾಗಿ ಭಾರತದ ಬೆಳೆಯುತ್ತಿರುವ ಸ್ಥಾನಮಾನ ಪ್ರದರ್ಶಿಸಿದರು. ನಾವು ‘ಡಿಸೈನ್ ಇನ್ ಇಂಡಿಯಾ’ಕ್ಕೆ ಗಮನಾರ್ಹ ಒತ್ತು ನೀಡುತ್ತಿದ್ದೇವೆ, ಇದರಿಂದ ನಾವು ಜಗತ್ತಿಗೆ ಹೊಸದನ್ನು ನೀಡಬಹುದು. ಸೆಮಿಕಂಡಕ್ಟರ್ ವಲಯದಲ್ಲಿ, ನಾವು 15 ಮಿಲಿಯನ್ ಡಾಲರ್ ಹೆಚ್ಚುವರಿ ಹೂಡಿಕೆಯೊಂದಿಗೆ ಮುಂದುವರಿಯುತ್ತಿದ್ದೇವೆ” ಎಂದು ಅವರು ಹೇಳಿದರು.