Tuesday, 24th September 2024

Vishweshwar Bhat Column: ಮಾಲ್ಡೀವ್ಸ್‌ ಎಂಬ ದ್ವೀಪರಾಷ್ಟ್ರ

ಭಾರತದ ಪಕ್ಕದಲ್ಲಿರುವ ಪುಟ್ಟ ದ್ವೀಪರಾಷ್ಟ್ರ ಮಾಲ್ಡೀವ್ಸ್‌ ಗೆ ಮೊನ್ನೆ ಹೋಗಿದ್ದೆ. ನಾನು ಅಲ್ಲಿಗೆ ಸುಮಾರು 24 ವರ್ಷಗಳ ಹಿಂದೆ ಹೋಗಿದ್ದೆ. ಸಮುದ್ರವೇ ಹೆಚ್ಚಿರುವ, ಸಮುದ್ರವನ್ನೇ ನೆಚ್ಚಿರುವ, ಭೂಭಾಗ ಕಮ್ಮಿಯಿರುವ, ಬರೀ ಐದೂವರೆ ಲಕ್ಷ ಜನಸಂಖ್ಯೆ ಇರುವ ದೇಶ ಮಾಲ್ಡೀವ್ಸ್. ಭಾರತ ಮತ್ತು ಮಾಲ್ಡೀವ್ಸ್‌ ಮಧ್ಯೆ ಈಗ ರಾಜತಾಂತ್ರಿಕ‌ ಸಂಬಂಧ ಸರಿಯಿಲ್ಲ. ಆದರೂ ಭಾರತೀಯರನ್ನು ಕಂಡರೆ ಇಲ್ಲಿನ ಜನರಿಗೆ ಆದರ, ಗೌರವ ಇದ್ದೇ ಇದೆ. ‘ಅದು ಮೇಲಿನವರ ಸಮಸ್ಯೆ, ನಮಗೆ ಅದು ಸಂಬಂಧಿಸಿದ್ದಲ್ಲ’ ಎಂದು ನಾನು ಉಳಿದುಕೊಂಡ ಹೋಟೆಲ್ ಸಿಬ್ಬಂದಿ ಶಹೀನ್ ಎರಡೂ ದೇಶಗಳ ಸಂಬಂಧಕ್ಕೆ ಷರಾ ಬರೆದಿದ್ದ.

ಮಾಲ್ಡೀವ್ಸ್ ಸೌಂದರ್ಯ ಅದ್ಭುತ ಅಂತ ಹೇಳಿದರೆ ಏನನ್ನೂ ಹೇಳಿದಂತಾಗಲಿಲ್ಲ. ಅಲ್ಲಿನ ನೀಲಿ‌ ನೀರು ಸ್ಫಟಿಕ ಸ್ಪಷ್ಟ. ಆ ದೇಶಕ್ಕೆ ಎಲ್ಲವೂ ಹೊರಗಿನಿಂದಲೇ ಹೋಗಬೇಕು. ಹೀಗಾಗಿ ತುಸು ದುಬಾರಿ. ಅಲ್ಲಲ್ಲಿ ಪುಟ್ಟ ಪುಟ್ಟ ದ್ವೀಪಗಳು. ಇಡೀ ದೇಶವೇ ಪುಟ್ಟ ಪುಟ್ಟ ದ್ವೀಪಗಳ ಸಮೂಹ. ವಿಮಾನದಿಂದ ಈ ದ್ವೀಪಗಳು ಅತ್ಯಂತ ಸುಂದರ ವಾಗಿ ಕಾಣುತ್ತವೆ. ದ್ವೀಪಕ್ಕೆ ಸರಿಹೊಂದುವ ರೆಸಾರ್ಟುಗಳು. ಒಂದೇ ದ್ವೀಪವನ್ನು ಆವರಿಸಿಕೊಂಡಿರುವ ರೆಸಾರ್ಟುಗಳೂ ಉಂಟು. ಸಮುದ್ರದಲ್ಲಿ ಅಟ್ಟಣಿಗೆ ಕಟ್ಟಿ ಅದರ ಮೇಲೆ ರೆಸಾರ್ಟುಗಳು, ಅ ಈಜುಗೊಳಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ಅಲ್ಲಿ ಭೂಮಿಗಿಂತ ನೀರು, ಸಮುದ್ರವೇ ಹೆಚ್ಚು ಆಕರ್ಷಣೆ. ಹತ್ತಾರು ಜಲಕ್ರೀಡೆಗಳು ಮತ್ತೊಂದು ಆಕರ್ಷಣೆ. ಒಂದೆರಡು ದಿನಗಳಿಗೆ ಬರಲೇಬಾರದು. ಕನಿಷ್ಠ ಒಂದು ವಾರವಾದರೂ ಇರಬೇಕು. ಸ್ಪೀಡ್ ಬೋಟಿನಲ್ಲಿ ಒಂದೆಡೆಯಿಂದ ಮತ್ತೊಂದು ಕಡೆಗೆ ಹೋಗಬೇಕು. ವಿಮಾನ ನಿಲ್ದಾಣದ ಪಕ್ಕದಲ್ಲಿಯೇ ferry station (ದೋಣಿ ನಿಲ್ದಾಣ) ಇದೆ. ಅಲ್ಲಿಂದಲೇ ಎಲ್ಲ ದ್ವೀಪಗಳಿಗೆ ಸಂಪರ್ಕ. ಮಾಲ್ಡೀವ್ಸ್ ಮುಸ್ಲಿಂ ದೇಶ. ಇಲ್ಲಿ ಮುಸ್ಲಿಮರ ಹೊರತಾಗಿ ಬೇರೆ ಯಾರೂ ನಾಗರಿಕರಾಗುವಂತಿಲ್ಲ. ಬೇರೆಯವರಿಗೆ ಪೌರತ್ವವನ್ನು ಕೊಡುವುದಿಲ್ಲ. ಜಗತ್ತಿನಲ್ಲಿಯೇ‌ ಮಾಲ್ಡೀವ್ಸ್ ಅತ್ಯಂತ ಸಮತಟ್ಟಾದ (flat) ದೇಶ. ಸಮುದ್ರ ಮಟ್ಟದಿಂದ‌ ಅತಿ ಹೆಚ್ಚೆಂದರೆ ಸರಾಸರಿ ಎರಡು ಮೀಟರ್ ಎತ್ತರ (altitude) ಇರಬಹುದು.

ಅತಿ ಎತ್ತರದ ಪ್ರದೇಶ ಅಂದರೆ ಸಮುದ್ರ ಮಟ್ಟದಿಂದ ಮೂರು ಮೀಟರುಗಳು. ವರ್ಷದಿಂದ ವರ್ಷಕ್ಕೆ ಸಮುದ್ರದ ಮಟ್ಟ ಏರುತ್ತಿರುವುದು ಮತ್ತು ಕಡಲ ಕೊರೆತ ಹೆಚ್ಚುತ್ತಿರುವುದು ಇಲ್ಲಿನವರಿಗೆ ತಲೆನೋವಾಗಿ ಪರಿಣಮಿಸಿದೆ. ಸಮುದ್ರಮಟ್ಟ ಏರುವಿಕೆ ಇದೇ ಗತಿಯಲ್ಲಿ ಮುಂದುವರಿದರೆ, ಮುಂದಿನ ಹತ್ತು ವರ್ಷಗಳಲ್ಲಿ ಮಾಲ್ಡೀವ್ಸ್ ಮುಳುಗ ಬಹುದು ಎಂದು‌ ಭಯಪಡಲಾಗಿದೆ. ಸಮುದ್ರವೇ ಈ ದೇಶದ ಜೀವಾಳ. ಸಮುದ್ರಕ್ಕೆ ಸಂಬಂಧಿಸಿದ ಸಣ್ಣ ವಿಷಯವೂ ಇಲ್ಲಿ ದೊಡ್ಡ ಹೆಡ್‌ಲೈನ್.

ನೆನಪಿದೆಯಾ, ಸಮುದ್ರಕ್ಕೆ ಅಪಾಯವಿದೆ ಎಂಬ ಬಗ್ಗೆ ಜಾಗತಿಕ ಜಾಗೃತಿ ಮೂಡಿಸಲು ಮಾಲ್ಡೀವ್ಸ್ ಅಧ್ಯಕ್ಷರಾಗಿದ್ದ ಮಹಮ್ಮದ್ ನಶೀದ್ 2009ರಲ್ಲಿ ಸಮುದ್ರದಲ್ಲಿ‌ ಕ್ಯಾಬಿನೆಟ್ ಮೀಟಿಂಗ್ ಮಾಡಿದ್ದರು! ಮಾಲ್ಡೀವ್ಸ್‌ ಪ್ರವಾಸೋದ್ಯ ಮವನ್ನು ನೆಚ್ಚಿಕೊಂಡಿರುವ ದೇಶ. ಪ್ರತಿ ವರ್ಷ ಇಲ್ಲಿಗೆ ಸುಮಾರು 25 ಲಕ್ಷ ಜನ (ಆ ದೇಶದ ಜನಸಂಖ್ಯೆಗಿಂತ 5 ಪಟ್ಟು ಜಾಸ್ತಿ) ಆಗಮಿಸುತ್ತಾರೆ. ಭಾರತದೊಂದಿಗೆ ಸಂಬಂಧ ಹಳಸಿದ್ದರಿಂದ ಪ್ರವಾಸೋದ್ಯಮಕ್ಕೆ ಈಗ ದೊಡ್ಡ ಏಟು ಬಿದ್ದಿದೆ. ಮಾಲ್ಡೀನಲ್ಲಿ ಚಿಕ್ಕದು-ದೊಡ್ಡದು ಸೇರಿದಂತೆ ಸುಮಾರು

1000ಕ್ಕೂ ಹೆಚ್ಚು ದ್ವೀಪಗಳಿವೆ. ಮೋಟಾರು ಬೋಟುಗಳೇ ಅವುಗಳಿಗೆ ಸಂಪರ್ಕ ಸಾಧನ. ಭೂಮಧ್ಯ ರೇಖೆಗೆ ಹತ್ತಿರ ದಲ್ಲಿರುವುದರಿಂದ, ಸೂರ್ಯನ ಕಿರಣ ಸದಾ ನೆತ್ತಿಯ ಮೇಲಿಯೇ (90 ಡಿಗ್ರಿ) ಇರುತ್ತದೆ. ಇಡೀ ದೇಶ ಸುಮಾರು
300 ಚದರ ಕಿ.ಮೀ. ವಿಸ್ತೀರ್ಣದ್ದಿರಬಹುದು. ಮಾಲ್ಡೀ ಜೀವವೈವಿಧ್ಯ ಜಗತ್ತಿನಲ್ಲಿಯೇ ಗಮನ ಸೆಳೆಯುವಂಥದ್ದು. ಅಲ್ಲಿನ ಕಡಲುಗಳಲ್ಲಿ ಸುಮಾರು 600 ವಿವಿಧ ರೀತಿಯ ಮೀನುಗಳಿರಬಹುದೆಂದು ನಂಬಲಾಗಿದೆ. 7 ರೀತಿಯ ಕಡಲಾಮೆಗಳ ಪೈಕಿ 5 ಜಾತಿಯವು ಮಾಲ್ಡೀವ್ಸ್‌ ನಲ್ಲಿವೆ. ಆ ದೇಶ ಮುಸ್ಲಿಂ ಪ್ರಧಾನ ದೇಶವಾಗಿರಬಹುದು, ಆದರೆ ಅದನ್ನು ಸ್ಥಾಪಿಸಿದವರು ಮಾತ್ರ ಹಿಂದೂಗಳು ಎಂಬುದು ಗಮನಾರ್ಹ.

ಇದನ್ನೂ ಓದಿ: Vishweshwar Bhat Column: ಕೇಳುವ ಕಲೆ