ನಿಜಕೌಶಲ
ಪ್ರೊ.ಆರ್.ಜಿ.ಹೆಗಡೆ
ಸಂವಹನ ಕಲೆಯ ಮೂಲವಿರುವುದು ಒಂದು ಪ್ರೌಢವಾದ, ಪರಿಪಕ್ವವಾದ ವ್ಯಕ್ತಿತ್ವದಲ್ಲಿ. ಅಂಥ ವ್ಯಕ್ತಿತ್ವವೇ ಶ್ರೇಷ್ಠ ಸಂವಹನದ ಮಾಧ್ಯಮ. ಏಕೆಂದರೆ ಸಂವಹನ ಬರೀ ಮಾತಲ್ಲ, ಬರೀ ದೇಹಭಾಷೆ ಅಥವಾ ಕೃತಿಯೂ ಅಲ್ಲ. ಇವೆಲ್ಲವೂ ಒಂದು ಹದದಲ್ಲಿ ಮಿಳಿತವಾದ ಶಕ್ತಿ ಅದು. ಇಂಥ ಮಾತು, ದೇಹಭಾಷೆ ಮತ್ತು ಕೃತಿ ಒಂದಾಗಿ ಹೊರಬೀಳುವುದು ಒಂದು ವ್ಯಕ್ತಿತ್ವದೊಳಗಿಂದ. ಹಾಗಾಗಿ ಸಂವಹನ ಒಂದು ಜೀವನಶೈಲಿ ಮತ್ತು ಬದುಕಿನ ವಿಧಾನದ ಮಾತು ಕೂಡ ಆಗಿರುತ್ತದೆ. ಇದಕ್ಕಾಗಿಯೇ ಸಂವಹನದಲ್ಲಿ ವ್ಯಕ್ತಿತ್ವ ಮುಖ್ಯವಾಗುವುದು. ವ್ಯಕ್ತಿತ್ವ
ವಿಕಸನ ತರಬೇತಿಯ ಅವಶ್ಯಕತೆ ಇರುವುದು ಈ ಕಾರಣಕ್ಕೇ.
ಗಾಂಧೀಜಿಗೆ ಇದು ಗೊತ್ತಿತ್ತು. ಹಾಗಾಗಿ ಅವರು ತಮ್ಮ ವ್ಯಕ್ತಿತ್ವವನ್ನು ಪರಿಶುದ್ಧವಾಗಿ, ಕಲೆಯಿಲ್ಲದಂತೆ ಇಟ್ಟು ಕೊಳ್ಳಲು ಯತ್ನಿಸುತ್ತಿದ್ದರು. ತಮ್ಮ ವ್ಯಕ್ತಿತ್ವದಲ್ಲಿ ಇಬ್ಬಂದಿತನ ಅಥವಾ ವೈರುದ್ಧ್ಯಗಳು ನುಸುಳದಂತೆ ಎಚ್ಚರ ದಿಂದ ಕಾಯ್ದುಕೊಳ್ಳುತ್ತಿದ್ದರು. ತಮ್ಮ ವ್ಯಕ್ತಿತ್ವವನ್ನು ಒಂದು ಸಂಸ್ಕೃತಿಯ ಹಿನ್ನೆಲೆಯಲ್ಲಿ, ಅದರ ಪ್ರತಿನಿಧಿ ಯಾಗುವಂತೆ ರೂಪಿಸಿಕೊಂಡಿದ್ದರು. ಸುತ್ತಮುತ್ತಲ ಜನರಂತೆ ಬದುಕಿದ್ದರು, ಅಂಥವರ ಗುಡಿಸಲುಗಳಲ್ಲಿ ಮಲಗು ತ್ತಿದ್ದರು, ಸರಳ ಬಟ್ಟೆಯನ್ನು ತೊಡುತ್ತಿದ್ದರು.
ಸತ್ಯವಂತರಾಗಿ, ನಂಬಿಕಸ್ಥರಾಗಿ ಬದುಕಿದ್ದರು. ಕಠೋರ ಪ್ರಾಮಾಣಿಕತೆಯನ್ನು ಆಯ್ದುಕೊಂಡಿದ್ದರು. ಜನರ ನೋವು, ಸಂಕಷ್ಟಗಳನ್ನು ಕೇಳಿದ್ದರು, ಅರಿತಿದ್ದರು, ಅನುಭವಿಸಿದ್ದರು. ಸಂತನಂತೆ ಕಾಣಿಸಿಕೊಂಡಿದ್ದರ ಜತೆಗೆ ಸಂತನೇ ಆಗಿಹೋಗಿದ್ದರು! ಅವರ ಉದ್ದೇಶ ಸ್ಪಷ್ಟವಾಗಿತ್ತು. ಅದು ಸ್ವಾತಂತ್ರ್ಯ ಪಡೆಯುವುದಷ್ಟೇ ಆಗಿರಲಿಲ್ಲ,
ದೇಶದ ಜನರನ್ನು ದಾಸ್ಯದ ಮನೋಭಾವದಿಂದ ಬಿಡಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವುದೂ ಅದರಲ್ಲಿ ಸೇರಿತ್ತು. ಈ ಹಿನ್ನೆಲೆಯಲ್ಲಿ ಅವರು ರೂಪಿಸಿಕೊಂಡ ವ್ಯಕ್ತಿತ್ವದ ಗುಣಗಳೇ ಅವರ ಸಂವಹನ ವಿಧಾನವನ್ನು ಸೃಷ್ಟಿಸಿದ್ದು ಮತ್ತು ಅದಕ್ಕೆ ಆಯಸ್ಕಾಂತೀಯ ಶಕ್ತಿ ನೀಡಿದ್ದು.
ಗಾಂಧೀಜಿಗೆ ಅಪ್ಪಟ ಪ್ರಾಮಾಣಿಕತೆ, ಧಾರ್ಮಿಕತೆ ಎಂಬುದು ವೈಯಕ್ತಿಕ ಮಟ್ಟದಲ್ಲಿ ಯಾವಾಗಲೂ ಇತ್ತು.
ಅದನ್ನು ಅವರು ಬಹಿರಂಗಕ್ಕೂ ವಿಸ್ತರಿಸಿಕೊಂಡಿದ್ದು ಉದ್ದೇಶದ ಸಾಧನೆಗಾಗಿ. ಆಗಿನ ಭಾರತೀಯ ಸಮಾಜ ‘ರಾಜಕೀಯ-ಕೇಂದ್ರಿತ’ವಾಗಿರಲಿಲ್ಲ, ‘ಧರ್ಮಕೇಂದ್ರಿತ’ವಾಗಿತ್ತು. ಇದನ್ನು ಅರಿತಿದ್ದ ಗಾಂಧೀಜಿ ತಮ್ಮ ರಾಜಕೀಯ ವನ್ನೂ ಧಾರ್ಮಿಕವಾಗಿಸಿಕೊಂಡಿದ್ದು ಮತ್ತು ಅದಕ್ಕೆ ಉಪವಾಸ, ಪ್ರಾರ್ಥನೆ ಇತ್ಯಾದಿ ಧಾರ್ಮಿಕ ಸಂಕೇತಗಳನ್ನು ನೀಡಿದ್ದು ತಮ್ಮ ಗುರಿಯ ಸಾಧನೆಗಾಗಿ. ಹೀಗೆ ದೇಶವನ್ನು, ಕಾಲವನ್ನು, ಜನರನ್ನು ಅರ್ಥಮಾಡಿಕೊಂಡಿದ್ದ ಗಾಂಧೀಜಿ ತಮ್ಮನ್ನು ಅಪ್ಪಟ ಭಾರತೀಯನನ್ನಾಗಿ ಬಿಂಬಿಸಿಕೊಂಡಿದ್ದರು.
ತಮ್ಮ ಅಂತರಂಗ-ಬಹಿರಂಗಗಳನ್ನು ಒಂದುಗೂಡಿಸಿಕೊಂಡು ಬಿಟ್ಟಿದ್ದರು. ತಮ್ಮದೇ ಆದ ಜೀವನ ಮತ್ತು ಸಂವಹನ ಶೈಲಿಯನ್ನು ರೂಢಿಸಿಕೊಂಡಿದ್ದರು. ಸಂವಹನವನ್ನು ತಣ್ಣನೆಯ, ಆವೇಗರಹಿತ, ಉದ್ವೇಗರಹಿತ, ಹೃದಯಕ್ಕೆ ಮುಟ್ಟುವ ಮಾತಾಗಿ ಅವರು ಇಟ್ಟುಕೊಂಡಿದ್ದು ಶಾಂತಿಯುತ ಉದ್ದೇಶದ ಹಿನ್ನೆಲೆಯಲ್ಲಿಯೇ. ಅವರ ಉದ್ದೇಶವು ವ್ಯಕ್ತಿತ್ವವನ್ನು ನಿರೂಪಿಸಿದರೆ, ವ್ಯಕ್ತಿತ್ವವು ಸಂವಹನವನ್ನು ನಿರೂಪಿಸಿತು. ಎಲ್ಲವೂ ಸಹಜವಾಗಿ ಮೂಡಿಬಂದವು. ಈ ಸಹಜತೆಯೇ ಅವರನ್ನು ಮಹಾನಾಯಕನನ್ನಾಗಿಸಿದ್ದು. ತಮ್ಮ ವ್ಯಕ್ತಿತ್ವ ನಿರೂಪಣೆಯ ಕುರಿತು ಗಾಂಧೀಜಿ ‘ಏಪಿಂಗ್ ಆಫ್ ದಿ ವೆಸ್ಟ್’ ಎಂಬ ತಮ್ಮ ಬರಹದಲ್ಲಿ ಹೇಳಿಕೊಂಡಿದ್ದಾರೆ.
ಇವೆಲ್ಲವನ್ನೂ ಗಾಂಧೀಜಿ ಆಳವಾದ ಪ್ರಾಮಾಣಿಕತೆ ಮತ್ತು ಆತ್ಮಪ್ರೇರಣೆಯಿಂದಲೇ ಮಾಡಿದ್ದು; ಏಕೆಂದರೆ, ತಮ್ಮ ವ್ಯಕ್ತಿತ್ವದಲ್ಲಿ ಚೂರೇ ಚೂರು ಬಿರುಕು ಕಂಡರೂ ಜನರಿಗೆ ತಾವು ಸುಳ್ಳುಗಾರ, ಮೋಸಗಾರ ಅನಿಸಿಬಿಡುತ್ತದೆ ಮತ್ತು ಹಾಗೆ ಕಂಡ ಕ್ಷಣವೇ ತಾವು ಹಮ್ಮಿಕೊಂಡ ಚಳವಳಿ ಮುರಿದು ಬೀಳುತ್ತದೆ ಎಂಬುದು ಅವರಿಗೆ ಗೊತ್ತಿತ್ತು. ಗಾಂಧೀಜಿಗೆ ಅಂಥ ಶಕ್ತಿ ಪ್ರಾಪ್ತವಾಗಿದ್ದರಿಂದಲೇ ಅವರು ತಮ್ಮ ಮಾನವ ವ್ಯಕ್ತಿತ್ವದ ಮಿತಿಯನ್ನು ಮೀರಿ ಒಂದು ವಿಚಾರದ ಸಂಕೇತವಾಗಿಬಿಟ್ಟರು (ಕಾರ್ಲ್ ಮಾರ್ಕ್ಸ್ ಹೇಳುವಂತೆ, ವಿಚಾರಗಳು ಈ ಜಗತ್ತಿನಲ್ಲಿ ಪ್ರಬಲ ಅಸ್ತ್ರಗಳು; ಅವು ಕೊಲ್ಲಬಲ್ಲವು ಅಥವಾ ಕಾಯಬಲ್ಲವು).
ಗಾಂಧೀಜಿ ತಮ್ಮ ವಿಚಾರವನ್ನು ಅದ್ಭುತವಾಗಿ ಹೇಳಿದ್ದರಿಂದಲೇ ಸುದ್ದಿ ವಾಹಿನಿಗಳು ಇಲ್ಲದ ಕಾಲದಲ್ಲೂ ಅವರು ದೇಶದ ಮೂಲೆಮೂಲೆಯ ಕೋಟ್ಯಂತರ ಜನರನ್ನು ಮುಟ್ಟಿದ್ದು, ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧವಿದ್ದ ‘ಪ್ರಾದೇ ಶಿಕ ಗಾಂಧಿಗಳ’ ಪಡೆಯನ್ನೇ ಸೃಷ್ಟಿಸಿದ್ದು. ಗಾಂಧೀಜಿ ಬರುವುದಕ್ಕಿಂತ ಮೊದಲು ಸ್ವಾತಂತ್ರ್ಯ ಚಳವಳಿಯು ಕೇವಲ ‘ಉನ್ನತ ವರ್ಗದ’ ಕಸರತ್ತಾಗಿತ್ತು. ಇತಿಹಾಸಕಾರ್ತಿ ರೋಮಿಲಾ ಥಾಪರ್ ಹೇಳುವಂತೆ, ಅಂಥ ಚಳವಳಿಯನ್ನು ‘ಜನಾಂದೋಲನವಾಗಿ’ ಪರಿವರ್ತಿಸಿದ್ದು ಗಾಂಧೀಜಿ. ಇದಕ್ಕೆ ಕಾರಣವಾಗಿದ್ದು ಅವರ ವ್ಯಕ್ತಿತ್ವ ಮತ್ತು ಅದರೊಳ ಗಿಂದ ಹುಟ್ಟಿದ ಉಜ್ವಲ ಸಂವಹನಾ ಕೌಶಲ.
ಈ ಹಂತದ ಸಂವಹನಕಾರ ಆಗುವುದು ಸುಲಭವಲ್ಲ, ಅದಕ್ಕಾಗಿ ಕಠಿಣ ನಿರ್ಧಾರಗಳನ್ನು ತಳೆಯಬೇಕಾಗುತ್ತದೆ.
ಚೌರಿಚೌರಾದಲ್ಲಿ ನಡೆದ ಹಿಂಸಾತ್ಮಕ ಘಟನೆಯಲ್ಲಿ ಕೆಲವು ಬ್ರಿಟಿಷ್ ಪೊಲೀಸರು ಮೃತಪಟ್ಟಾಗ, ಗಾಂಧೀಜಿ ಆ
ಚಳವಳಿಯನ್ನೇ ಹಿಂತೆಗೆದುಕೊಂಡು ಬ್ರಿಟಿಷ್ ಸರಕಾರದ ಕ್ಷಮೆ ಯಾಚಿಸಿದರು. ಇದರಿಂದಾಗಿ ಭಾರತೀಯರಿಂದಲೇ
ವ್ಯಾಪಕ ಟೀಕೆಗೊಳಗಾಗಬೇಕಾಗಿ ಬಂದರೂ ಗಾಂಧೀಜಿ ಜಗ್ಗದೆ ಅಹಿಂಸಾ ತತ್ವಕ್ಕೇ ಅಂಟಿಕೊಂಡರು. ಒಂದೊಮ್ಮೆ
ಅವರು ಒತ್ತಡಕ್ಕೆ ಬಗ್ಗಿ ರಾಜಿ ಮಾಡಿಕೊಂಡಿದ್ದರೆ ಚಳವಳಿಯೇ ವಿಫಲವಾಗುತ್ತಿತ್ತು, ಅವರ ಸಂವಹನ ಅರ್ಥ
ಹೀನವಾಗುತ್ತಿತ್ತು.
ತಮ್ಮ ಪ್ರಾಮಾಣಿಕತೆಯನ್ನು ಜನರ ಮುಂದೆ ಸಾಬೀತುಮಾಡುವ ಬಗೆ ಗಾಂಧೀಜಿಗೆ ತಿಳಿದಿತ್ತು; ಅದಕ್ಕೆ ಅವರು
ಕಂಡುಕೊಂಡ ವಿಧಾನ- ತ್ಯಾಗ ಮತ್ತು ಆತ್ಮದಂಡನೆ. ಉಪ್ಪಿನ ಸತ್ಯಾಗ್ರಹದ ಭಾಗವಾಗಿ ಅವರು ಹತ್ತಿರದ ಸಮುದ್ರ ತೀರಕ್ಕೆ ಹೋಗಿ ಉಪ್ಪು ತಯಾರಿಸಿ ಹೊರಬರಬಹುದಿತ್ತು; ಆದರೆ ಅವರು ನೂರಾರು ಕಿ.ಮೀ. ದೂರದ ‘ದಂಡಿ’ ಎಂಬಲ್ಲಿಗೆ ನಡೆದರು. ಗಾಂಧೀಜಿ ಒಂದೊಮ್ಮೆ ಸುಲಭದ ದಾರಿ ಆಯ್ದುಕೊಂಡಿದ್ದರೆ ಬಹುಶಃ ಉಪ್ಪಿನ ಸತ್ಯಾಗ್ರಹ ತನ್ನ ಅರ್ಥವನ್ನೇ ಕಳೆದುಕೊಳ್ಳುತ್ತಿತ್ತು. ಅಂದರೆ, ‘ನಾಯಕನೇ ಮೈ-ಕೈ ನೋವಿಲ್ಲದೆ 5 ನಿಮಿಷದಲ್ಲಿ ಹೋರಾಟ ಮುಗಿಸಿದಾಗ, ನಮ್ಮದೇನು?’ ಎಂದು ಜನರು ಚಳವಳಿಯನ್ನೇ ನಿರ್ಲಕ್ಷಿಸುತ್ತಿದ್ದರು. ಇಂದಿನ ಹಲವು ಚಳವಳಿಗಳು, ಮೈ-ಕೈ ನೋವಿಲ್ಲದ, ತ್ಯಾಗವಿಲ್ಲದ, ಕೂಲಿಂಗ್ ಗ್ಲಾಸ್ ಧರಿಸಿ ಗಾಂಧಿ ಪ್ರತಿಮೆಯೆದುರು ಹತ್ತು ನಿಮಿಷ ಕುಳಿತು ಕೊಳ್ಳುವ ಚಳವಳಿಗಳು. ಹೀಗಾಗಿ ಅವು ಜನರನ್ನು ಮುಟ್ಟುವುದಿಲ್ಲ.
ವಾಹನ-ಊಟದ ವ್ಯವಸ್ಥೆ ಮಾಡಿ, ಮೇಲೊಂದಿಷ್ಟು ದುಡ್ಡು ಕೊಟ್ಟು ಲಕ್ಷಾಂತರ ಜನರನ್ನು ಸೇರಿಸುವ ರ್ಯಾಲಿಗಳು ಕೂಡ ತಮ್ಮ ಸಂದೇಶವನ್ನು ತಲುಪಿಸಲು ವಿಫಲವಾಗುತ್ತವೆ, ಏಕೆಂದರೆ ಇವು ‘ಜನಪರ’ ಎಂದು ಜನರಿಗೆ ಅನಿಸು ವುದೇ ಇಲ್ಲ. ಇವೆಲ್ಲ ಅಧಿಕಾರದ ಕುರ್ಚಿ ಹಿಡಿಯುವ ನಾಟಕವೆಂಬುದನ್ನು ಜನರು ಗ್ರಹಿಸಿಬಿಡುತ್ತಾರೆ. ಏಕೆಂದರೆ, ನಾಯಕನ ಮಾತು, ದೇಹಭಾಷೆ ಮತ್ತು ಕೃತಿಗಳು ಹೃದಯಾಂತರಾಳದಿಂದ ಬಂದಂತೆ ಜನರಿಗೆ ತೋರುವುದಿಲ್ಲ.
ಇಲ್ಲಿ ಗಾಂಧೀಜಿ ಒಂದು ಉದಾಹರಣೆಯಷ್ಟೇ. ಜಯಪ್ರಕಾಶ್ ನಾರಾಯಣ್, ಅಣ್ಣಾ ಹಜಾರೆಯವರಂಥ ಸಾಮಾಜಿಕ ನಾಯಕರು, ರತನ್ ಟಾಟಾ, ಮುಕೇಶ್ ಅಂಬಾನಿಯವರಂಥ ಉದ್ಯಮಿಗಳಿಗೂ ಅನ್ವಯವಾಗುವ ಗ್ರಹಿಕೆಯಿದು.
ಅಷ್ಟೇಕೆ, ‘ಕೌನ್ ಬನೇಗ ಕರೋಡ್ಪತಿ’ ಕಾರ್ಯಕ್ರಮದ ಯಶಸ್ಸಿನಲ್ಲಿ ಅಮಿತಾಬ್ ಬಚ್ಚನ್ರ ವ್ಯಕ್ತಿತ್ವ ಮತ್ತು ಸಂವಹನ ಕಲೆಯ ಸಿಂಹಪಾಲಿದೆ. ವಿಶ್ವಾದ್ಯಂತದ ಎಲ್ಲ ಕ್ಷೇತ್ರಗಳ ಶ್ರೇಷ್ಠ ನಾಯಕರ ಗುಟ್ಟು ಇದೇ.
ಹಾಗಂತ, ‘ಗಾಂಧೀಜಿಯಂತೆ ಬದುಕಿದರೆ ಮಾತ್ರವೇ ಸಂವಹನ ಕಲೆ ಸಿದ್ಧಿಸುತ್ತದೆ’ ಎಂದು ಅರ್ಥೈಸಬಾರದು. ಗಾಂಧೀಜಿಯಂತೆ ಎಲ್ಲರೂ ಇರಬೇಕೆಂದೇನಿಲ್ಲ, ನಾವು ನಾವಾಗಿದ್ದರೆ ಸಾಕು. ನಮ್ಮ ಜೀವನಶೈಲಿಯೇ ಮಾತ ನಾಡತೊಡಗಿದರೆ, ನಮ್ಮಂಥವರಿಗೂ ನಮ್ಮ ನಮ್ಮ ಹಂತದಲ್ಲಿ ಸಂವಹನ ಕಲೆ ಪ್ರಾಪ್ತವಾಗುತ್ತದೆ. ಇಂಥ ವ್ಯಕ್ತಿತ್ವ ಬೆಳೆಸಿಕೊಂಡ ವ್ಯಕ್ತಿ ಯಾವುದೇ ಕ್ಷೇತ್ರದಲ್ಲಿದ್ದರೂ ನಾಯಕನಾಗುತ್ತಾನೆ, ಆದರೆ ಆತ ಜೀವನೋತ್ಸಾಹ, ಹಾಸ್ಯಪ್ರಜ್ಞೆ ಮತ್ತು ಸಹನೆಯಂಥ ಗುಣಗಳನ್ನೂ ಮೈಗೂಡಿಸಿಕೊಂಡಿರಬೇಕು.
ಜೀವನೋತ್ಸಾಹಿಯು ಸುತ್ತಮುತ್ತಲಿನವರಲ್ಲೂ ಉತ್ಸಾಹ ತುಂಬುತ್ತಾನೆ. ಇದನ್ನೇ ‘ಸಕಾರಾತ್ಮಕ ಚಿಂತನೆ’ ಎನ್ನು ವುದು. ಅಂಥ ಚಿಂತನೆಯಿರುವ ವ್ಯಕ್ತಿಯು ಜೀವನವನ್ನು ಪುಟ್ಟ ಮಕ್ಕಳ ರೀತಿಯಲ್ಲಿ ‘ಥ್ರಿಲ್’ ಆಗಿ ಭಾವಿಸುತ್ತಾನೆ. ಬಾಲಿಶ ಯೋಜನೆ/ಯೋಚನೆಗಳು, ನಕಾರಾತ್ಮಕತೆಗಳನ್ನು ಆತ ಹತ್ತಿರಕ್ಕೆ ಸುಳಿಯಗೊಡುವುದಿಲ್ಲ. ಕೀಳುಮಾತು, ಬಾಲಿಶ ಕಮೆಂಟ್, ಸಣ್ಣಪುಟ್ಟ ಜಗಳಗಳು ಆತನನ್ನು ಅಲುಗಾಡಿಸುವುದಿಲ್ಲ. ಆತ ತನ್ನ ಲೋಪದೋಷಗಳನ್ನು ಒಪ್ಪಿಕೊಳ್ಳಬಲ್ಲ, ಬೇರೆಯವರ ಸದ್ಗುಣಗಳನ್ನು ಗೌರವಿಸಬಲ್ಲ. ಕ್ಷುಲ್ಲಕ ಬುದ್ಧಿಯವರು ಎಂದೂ ಶ್ರೇಷ್ಠ ಸಂವಹನ ಕಾರರಾಗಲಾರರು.
ಕೆಲವೊಮ್ಮೆ ಬಾಲ್ಯದ ಕಹಿ ಅನುಭವಗಳಿಂದಾಗಿ ವ್ಯಕ್ತಿಗಳಲ್ಲಿ ನಕಾರಾತ್ಮಕತೆ ರೂಢಿಯಾಗಿ, ಒಳಗಿನ ವ್ಯಕ್ತಿತ್ವ ಅರಳಿ ಕೊಂಡಿರುವುದೇ ಇಲ್ಲ. ‘ಕೈಕಟ್ಟಿ ಮೌನವಾಗಿ ಕೂತಿರಬೇಕು, ಏನೂ ಪ್ರಶ್ನೆ ಕೇಳಬಾರದು’ ಎಂದು ವಿದ್ಯಾರ್ಥಿಗಳನ್ನು ಬಾಲ್ಯದಿಂದಲೇ ತರಗತಿಗಳಲ್ಲಿ ನಿರ್ಬಂಧಿಸಿಬಿಟ್ಟರೆ ಅವರ ವ್ಯಕ್ತಿತ್ವವೇ ನಾಶವಾಗಿ ಬಿಡುತ್ತದೆ. ಅವರ ದೇಹಭಾಷೆಯೂ ನಕಾರಾತ್ಮಕವಾಗಿ ಮಾರ್ಪಟ್ಟು, ಆ ಜಗತ್ತಿನಲ್ಲಿಯೇ ಅವರು ಸುಖಿಸುತ್ತಾರೆ. ಇಂಥ ಸಮಸ್ಯೆ ಇರುವಲ್ಲಿ ಅವರು ಸಂವಹನ ಕೌಶಲ, ವ್ಯಕ್ತಿತ್ವ ವಿಕಸನದ ತರಬೇತಿ ಪಡೆಯಬೇಕಾಗುತ್ತದೆ.
(ಲೇಖಕರು ನಿವೃತ್ತ ಪ್ರಾಂಶುಪಾಲರು ಮತ್ತು ಸಂವಹನಾ
ಸಮಾಲೋಚಕರು)
ಇದನ್ನೂ ಓದಿ: Shivanand G Hegde Column: ತಾಳಮದ್ದಳೆಯ ಹೆಸರಾಂತ ಅರ್ಥಧಾರಿ