Saturday, 23rd November 2024

Israel Airstrike: ಹೆಜ್ಬುಲ್ಲಾಗಳನ್ನು ಪುಡಿಗಟ್ಟಿದ ಇಸ್ರೇಲ್‌ ಸೇನೆ; 500ಕ್ಕೂ ಅಧಿಕ ಬಂಡುಕೋರರ ಹತ್ಯೆ

Israel airstrikes

ಬೈರುತ್‌: ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್‌ ಸೇನೆ ನಡೆಸುತ್ತಿರುವ ವೈಮಾನಿಕ ದಾಳಿ(Israel Airstrike)ಗೆ ಲೆಬನಾನ್‌ ಅಕ್ಷರಶಃ ನಲುಗಿ ಹೋಗಿದೆ. ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 500ಕ್ಕೆ ಏರಿಕೆಯಾಗಿದ್ದು, ಲೆಕ್ಕವಿಲ್ಲದಷ್ಟು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಲೆಬನಾನ್‌(Lebanon) ಜನರಿಗೆ ಕರೆ ನೀಡಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು(Benjamin Netanyahu) ಹೆಜ್ಬೊಲ್ಲಾ ಉಗ್ರರಿಗೆ ರಕ್ಷಕರಾಗಬೇಡಿ ಎಂದಿದ್ದಾರೆ.

ಸೋಮವಾರ ಲೆಬನಾನ್‌ನ ದಕ್ಷಿಣ ಹಾಗೂ ಪೂರ್ವ ಪ್ರಾಂತ್ಯದ ಮೇಲೆ ಇಸ್ರೇಲ್‌ ವಾಯುದಾಳಿಗೆ ಪ್ರತೀಕಾರವಾಗಿ ಉತ್ತರ ಇಸ್ರೇಲಿ ಸೇನಾ ನೆಲೆಗಳ ಮೇಲೆ ಲೆಬನಾನ್‌ ಪ್ರತಿ ದಾಳಿ ನಡೆಸಿದೆ. ಇತ್ತೀಚಿಗೆ ದೇಶದಲ್ಲಿ ನಡೆದ ಪೇಜರ್‌, ವಾಕಿಟಾಕಿ ಸ್ಫೋಟಕ್ಕೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಇರಾನ್‌ ಬೆಂಬಲಿತ ಲೆಬನಾನ್‌ ಬಂಡುಕೋರ ಪಡೆಯ ಮೇಲೆ ಸೋಮವಾರ ಮಾರಣಾಂತಿಕ ವಾಯುದಾಳಿ ನಡೆಸಿರುವ ಇಸ್ರೇಲ್‌ ರಕ್ಷಣಾ ಪಡೆ, ಹೆಜ್ಬೊಲ್ಲಾ ಉಗ್ರರ ಹೆಡೆಮುರಿ ಕಟ್ಟಿದೆ. ಇದೀಗ ಈ ದಾಳಿಯಲ್ಲಿ ಸುಮಾರು 500 ಹೆಜ್ಬುಲ್ಲಾ ಬಂಡುಕೋರ ಉಗ್ರರು ಹತರಾಗಿದ್ದಾರೆ.

ಲೆಬನಾನ್‌ ಜನರಿಗೆ ನೆತನ್ಯಾಹು ಸಂದೇಶ

ಇನ್ನು ಈ ಮಧ್ಯೆ ನೆತನ್ಯಾಹು ನಾಗರಿಕರಿಗೆ ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ಕರೆಯೊಂದನ್ನು ನೀಡಿದ್ದು, ಇಸ್ರೇಲ್‌ನ ಯುದ್ಧವು ಲೆಬನಾನ್ ಜನರೊಂದಿಗೆ ಅಲ್ಲ, ಆದರೆ ಅವರ ಮನೆಗಳಲ್ಲಿ ಕ್ಷಿಪಣಿಗಳನ್ನು ಇರಿಸುತ್ತಿರುವ ಹೆಜ್ಬೊಲ್ಲಾ ಜೊತೆ ಎಂದಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ನೆತನ್ಯಾಹು, ಇಸ್ರೇಲಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆ ಶಸ್ತ್ರಾಸ್ತ್ರಗಳನ್ನು ಹೊರತೆಗೆಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಲೆಬನಾನ್‌ನ ಜನರಿಗೆ ನನ್ನ ಬಳಿ ಒಂದು ಸಂದೇಶವಿದೆ: ಹಲವು ವರ್ಷಗಳಿಂದ ಹೆಜ್ಬುಲ್ಲಾಗಳು ನಿಮ್ಮನ್ನು ಮಾನವ ಗುರಾಣಿಯಾಗಿ ಬಳಸುತ್ತಿವೆ. ಅದು ನಿಮ್ಮ ವಾಸದ ಕೋಣೆಗಳಲ್ಲಿ ರಾಕೆಟ್‌ಗಳನ್ನು ಮತ್ತು ನಿಮ್ಮ ಗ್ಯಾರೇಜ್‌ನಲ್ಲಿ ಕ್ಷಿಪಣಿಗಳನ್ನು ಇರಿಸಿದೆ. ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಲೆಬನಾನಿನ ಜನರಿಗೆ ಅಪಾಯದ ಮಾರ್ಗದಿಂದ ಹೊರಬರಲು ಎಚ್ಚರಿಕೆ ನೀಡಿದೆ ಮತ್ತು ಅವರು ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನೆತನ್ಯಾಹು ಹೇಳಿದರು. ಲೆಬನಾನಿನವರು ಹೆಜ್ಬೊಲ್ಲಾ ಉದ್ದೇಶಕ್ಕಾಗಿ ತಮ್ಮ ಪ್ರಾಣವನ್ನು ಅಪಾಯಕ್ಕೆ ತೆಗೆದುಕೊಳ್ಳಬಾರದು ಎಂದು ಅವರು ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ: Israel Strikes:‌ ಇಸ್ರೇಲ್‌ ಏರ್‌ಸ್ಟ್ರೈಕ್‌ಗೆ ನಲುಗಿದ ಲೆಬನಾನ್‌; ಹೆಜ್ಬುಲ್ಲಾಗಳ ನೆಲೆ ಧ್ವಂಸ; 50ಕ್ಕೂ ಹೆಚ್ಚು ಜನ ಬಲಿ