Tuesday, 24th September 2024

Bigg Boss Kannada 11: ಬಿಗ್‌ ಬಾಸ್‌ನಲ್ಲಿ ರಮ್ಮಿ ಯಾಕೆ? ಸೋಷಿಯಲ್‌ ಮೀಡಿಯಾದಲ್ಲಿ ಕಾವೇರಿದ ಚರ್ಚೆ

Bigg Boss Kannada 11

ಬೆಂಗಳೂರು: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್‌ ಕನ್ನಡ ಸೀಸನ್‌ 11 (Bigg Boss Kannada 11) ಸೆಪ್ಟೆಂಬರ್‌ 29ರಂದು ಆರಂಭವಾಗಲಿದೆ. ಈ ಬಾರಿ ಬಿಗ್‌ ಬಾಸ್ ಹೊಸತನದಿಂದ ಕೂಡಿರಲಿದ್ದು, ಇದಕ್ಕಾಗಿ ಹೊಸ ಅಧ್ಯಾಯ ಎಂದೇ ಹೆಸರಿಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸೋಮವಾರ (ಸೆಪ್ಟೆಂಬರ್‌ 23) ಬಿಗ್‌ ಬಾಸ್‌ ತಂಡ ಸುದ್ದಿಗೋಷ್ಠಿಯೊಂದನ್ನು ಆಯೋಜಿಸಿತ್ತು. ಕಿಚ್ಚ ಸುದೀಪ್‌ (Kiccha Sudeep) ಮತ್ತು ಕಲರ್ಸ್‌ ಕನ್ನಡ ವಾಹಿನಿಯ ಮುಖ್ಯಸ್ಥರು ಶೋ ಬಗ್ಗೆ ಮಾಹಿತಿ ನೀಡಿದರು. ಬಿಗ್‌ ಬಾಸ್‌ ಸ್ಪಾನ್ಸರ್ ಮಾಡಿರುವ ಕಂಪನಿಗಳಲ್ಲಿ ಎ23 ರಮ್ಮಿ (A23 Rummy) ಕೂಡ ಇದೆ. ಇದೀಗ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, ”ಬಿಗ್‌ ಬಾಸ್‌ನ ಸ್ಪೆಶಲ್‌ ಪಾರ್ಟನರ್‌ನಲ್ಲಿ A23 ರಮ್ಮಿ ಎಂಬ ಜಾಹೀರಾತು ಇದೆ. ಇಲ್ಲಿ ಆಡದವರನ್ನೂ ನೀವು ಆಡಿಸ್ತೀರಾ. ಆಮೇಲೆ ಅವರು ಮನೆ ಮಠ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸುದೀಪ್‌ ಅವರ ಪ್ರೋಗ್ರಾಂಗೆ ಇಂತಹ ಒಂದು ಜಾಹೀರಾತು ಬೇಕಾ? ವಾಹಿನಿಗೂ ಸಾಮಾಜಿಕ ಜವಾಬ್ದಾರಿಯೂ ಬೇಕಲ್ಲವೇ?” ಎಂಬ ಪ್ರಶ್ನಿಸಿದರು.

ಇದಕ್ಕೆ ಸ್ವಲ್ಪಂ ಗರಂ ಆದ ಸುದೀಪ್‌, “ತಿಳುವಳಿಕೆ ಇರುವಂತಹ ಸಮಾಜ ನಮ್ಮದು. ಇಲ್ಲಿ ಸಿಗರೇಟ್ ಇದೆ, ಕುಡಿತವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯಲ್ಲಿ ತಂದೆ-ತಾಯಿ ಇದ್ದಾರೆ. ನಮಗೆ ಏನು ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಕೋವಿಡ್ ಇದೆ. ಆರೋಗ್ಯವೂ ಇದೆ” ಎಂದರು.

ಮುಂದುವರಿದು, “ನೀವು ಅಲ್ಲಿರುವ A23 ರಮ್ಮಿ ಅನ್ನೋದನ್ನು ಮಾತ್ರ ನೋಡುತ್ತೀರಿ. ಆದರೆ ನನಗೆ ದೊಡ್ಡದೇನೋ ಕಾಣಿಸುತ್ತದೆ. ನಾನು ಈ ಬಿಗ್‌ ಬಾಸ್‌ನಿಂದ ಎಷ್ಟು ಮನೆಗಳು ಉದ್ಧಾರ ಆಗುತ್ತಿವೆ? ಎಷ್ಟು ವ್ಯಕ್ತಿತ್ವಗಳ ಉದ್ಧಾರ ಆಯ್ತು? ಎಷ್ಟು ಜನಕ್ಕೆ ಕೆರಿಯರ್‌ ಸರಿಯಾಯ್ತು? ಎನ್ನವುದನ್ನು ಗಮನಿಸುತ್ತೇನೆ. ಶೋ ನೋಡಿದವರು ಎಲ್ಲರೂ A23 ಸಬ್‌ಸ್ಕೈಬ್‌ ಮಾಡಿಕೊಳ್ಳುತ್ತಾರ?ʼʼ ಎಂದು ಪ್ರಶ್ನಿಸಿದರು. ʼʼಎಲ್ಲವೂ ಇಲ್ಲಿ ಮ್ಯಾಟರ್‌ ಆಗುತ್ತೆ. ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಅರಿವು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ” ಎಂದು ತಿಳಿಸಿದರು.

ʼʼಅಲ್ಲದೆ ಇದನ್ನು ಭಾರತದಲ್ಲಿ ಬ್ಯಾನ್‌ ಮಾಡಿಲ್ಲ. ನಾವು ನಿಯಮ ಬಾಹಿರವಾಗಿ ಏನನ್ನೂ ಮಾಡುತ್ತಿಲ್ಲ. ಈ ಬಗ್ಗೆ ಆಕ್ಷೇಪ ಇದ್ದರೆ ನೀವು ಮೋದಿ ಮನೆ ಮುಂದೆ ಹೋಗಿ, ಇಲ್ಲ ಸಿದ್ಧರಾಮಯ್ಯ ಮನೆ ಮುಂದೆ ಹೋಗಿ ಪ್ರತಿಭಟನೆ ಮಾಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವಷ್ಟು ಪವರ್ ನಮಗೆ ಇಲ್ಲ. ನಾನು ಮೋದಿ, ಸಿದ್ಧರಾಮಯ್ಯ ಅವರನ್ನು ಹ್ಯಾಂಡಲ್‌ ಮಾಡುವ ಹಾಗಿದ್ದರೆ ಪರಿಸ್ಥಿತಿ ಬೇರೆ ರೀತಿ ಇರುತ್ತಿತ್ತು” ಎಂದು ಆಕ್ರೋಶ ಹೊರ ಹಾಕಿದರು.

ಸದ್ಯ ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ. ಇಂತಹ ಜನಪ್ರಿಯ ಕಾರ್ಯಕ್ರಮಕ್ಕೆ ರಮ್ಮಿಯಂತಹ ಸ್ಪಾನ್ಸರ್ಸ್‌ ಅಗತ್ಯವಿರಲಿಲ್ಲ ಎಂದು ಹಲವರು ವಾದಿಸಿದ್ದಾರೆ. ಇನ್ನು ಕೆಲವರು ಸುದೀಪ್‌ ನೆರವಿಗೆ ಧಾವಿಸಿದ್ದಾರೆ. ಒಟ್ಟಿನಲ್ಲಿ ಶೋ ಆರಂಭಕ್ಕೂ ಮುನ್ನವೇ ವಾದ ವಿವಾದ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Bigg Boss Kannada 11 : ಈ ಬಾರಿಯ ಬಿಗ್‌ಬಾಸ್‌‌ನಲ್ಲಿ ಸ್ವರ್ಗ- ನರಕ ಎರಡೂ ಇದೆ! ಕಾಮನ್‌‌ಮ್ಯಾನ್‌‌ಗಳಿಗೆ ಎಂಟ್ರಿ!