Saturday, 23rd November 2024

Anura Kumara Dissanayake: ಖಡಕ್‌ ವಿದೇಶಾಂಗ ನೀತಿಗೆ ಶ್ರೀಲಂಕಾ ಒತ್ತು; ಭಾರತ, ಚೀನಾ ಜತೆಗಿನ ಸಂಬಂಧದ ಬಗ್ಗೆ ದಿಸ್ಸಾನಾಯಕೆ ನಿಲುವೇನು?

Anura Dissanayake

ಕೊಲೊಂಬೋ: ಚೀನಾ ಮತ್ತು ಭಾರತ ನಡುವೆ ಶ್ರೀಲಂಕಾ ಸ್ಯಾಂಡ್‌ವಿಚ್‌ ಆಗುವುದು ನನಗೆ ಇಷ್ಟವಿಲ್ಲ. ಅದು ಆಗಲೂ ನಾನು ಬಿಡುವುದಿಲ್ಲ ಎಂದು ಶ್ರೀಲಂಕಾದ ನೂತನ ಅಧ್ಯಕ್ಷ(Srilanka President) ಅನುರಾ ಕುಮಾರಾ ದಿಸ್ಸಾನಾಯಕೆ(Anura Kumara Dissanayake) ಹೇಳಿದ್ದಾರೆ. ಆ ಮೂಲಕ ಅವರು ಖಡಕ್‌ ವಿದೇಶಾಂಗ ನೀತಿ ಅನುಸರಿಸುವ ಬಗ್ಗೆ ಪರೋಕ್ಷವಾಗಿ ಹೇಳಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ನಾಯಕತ್ವದಲ್ಲಿ, ಭೌಗೋಳಿಕ ರಾಜಕೀಯ ಪೈಪೋಟಿಯಲ್ಲಿ ಶ್ರೀಲಂಕಾವನ್ನು ಮಧ್ಯೆ ಎಳೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ಶ್ರೀಲಂಕಾದ ಎರಡು ನೆರೆಯ ರಾಷ್ಟ್ರಗಳಾದ ಚೀನಾ ಮತ್ತು ಭಾರತದೊಂದಿಗೆ ಸಮತೋಲಿತ ಸಂಬಂಧಗಳನ್ನು ಬೆಳೆಸಲು ಉದ್ದೇಶಿಸಿದೆ ಎಂದು ಹೇಳಿದ್ದಾರೆ.

ನಾವು ಯಾವುದೇ ಭೌಗೋಳಿಕ ರಾಜಕೀಯ ಹೋರಾಟದಲ್ಲಿ ಪ್ರತಿಸ್ಪರ್ಧಿಯಾಗುವುದಿಲ್ಲ ಅಥವಾ ನಾವು ಯಾವುದೇ ಬಣದ ಪರ ನಿಲ್ಲುವುದಿಲ್ಲ. ನಾವು ವಿಶೇಷವಾಗಿ ಚೀನಾ ಮತ್ತು ಭಾರತದ ನಡುವೆ ಸ್ಯಾಂಡ್‌ವಿಚ್ ಆಗಲು ಬಯಸುವುದಿಲ್ಲ. ಎರಡೂ ದೇಶಗಳು ಮೌಲ್ಯಯುತ ಸ್ನೇಹಿತರಾಗಿವೆ. ನಾವು EU, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದೊಂದಿಗೆ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತೇವೆ ಎಂದು ಡಿಸಾನಾಯಕೆ ವಿದೇಶಾಂಗ ನೀತಿಯ ಬಗ್ಗೆ ಹೇಳಿದರು.

ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಗಳ ನಡುವೆ ಶ್ರೀಲಂಕಾ ತನ್ನ ಸಾರ್ವಭೌಮತ್ವವನ್ನು ಕಾಪಾಡಲು ಈ ತಟಸ್ಥ ವಿದೇಶಾಂಗ ನೀತಿ ವಿಧಾನವು ನಿರ್ಣಾಯಕವಾಗಿದೆ. ಜಾಗತಿಕ ಮಹಾಶಕ್ತಿಗಳ ನಡುವಿನ ಅಧಿಕಾರದ ಹೋರಾಟದಲ್ಲಿ ಶ್ರೀಲಂಕಾ ಒಂದು ದಾಳವಾಗಿರಲು ಬಯಸುವುದಿಲ್ಲ. ಬದಲಿಗೆ ಪರಸ್ಪರ ಲಾಭದಾಯಕ ರಾಜತಾಂತ್ರಿಕ ಪಾಲುದಾರಿಕೆಗಳನ್ನು ನಿರ್ಮಿಸುವತ್ತ ಗಮನಹರಿಸಿದ್ದಾರೆ ಎಂದು ಡಿಸಾನಾಯಕೆ ಸ್ಪಷ್ಟಪಡಿಸಿದ್ದಾರೆ.

ಮಾರ್ಕ್ಸ್‌ವಾದಿ ನಿಲುವು ಹೊಂದಿರುವ (ಪೀಪಲ್ಸ್ ಲಿಬರೇಶನ್ಸ್‌ ಫ್ರಂಟ್‌ ಪಕ್ಷದ ) ಅನುರಾ ಕುಮಾರ ದಿಸ್ಸಾನಾಯಕೆ ಭಾನುವಾರ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮತ್ತು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸುವ ಅನುರಾ ಕುಮಾರ ದಿಸ್ಸಾನಾಯಕೆ ಅವರ ಭರವಸೆಯನ್ನು ನಂಬಿದ ಅಲ್ಲಿನ ಮತದಾರರು ಮತಗಳನ್ನು ಹಾಕಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಕೆಲವು ಪ್ರತಿಸ್ಪರ್ಧಿಗಳಂತೆ ಯಾವುದೇ ರಾಜಕೀಯ ವಂಶಾವಳಿ ಹೊಂದಿರದ ದಿಸ್ಸಾನಾಯಕೆ ಕೊನೆವರೆಗೂ ಮುನ್ನಡೆ ಸಾಧಿಸಿ ಗೆದ್ದಿದ್ದಾರೆ. ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Vikramasinghe) ಮತ್ತು ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದ ಅನುವಾರ ಶ್ರೀಲಂಕಾದ 10ನೇ ಅಧ್ಯಕ್ಷರಾಗಿ ಆಯ್ಕೆಯಾದರು.

ಈ ಸುದ್ದಿಯನ್ನೂ ಓದಿ: Anura Kumara Dissanayake: ಭಾರತದ ಬಗ್ಗೆ ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ನಿಲುವು ಏನಿರಬಹುದು?