ತಾಯಿಹಾಲು ವಂಚಿತ ಶಿಶುಗಳಿಗೆ ಬಿ.ಎಲ್.ಡಿ.ಇ ಯಿಂದ “ಅಮೃತಧಾರೆ”
ಬಸವರಾಜ್ ಎಸ್. ಉಳ್ಳಾಗಡ್ಡಿ, ವಿಜಯಪುರ
ವಿಜಯಪುರ: ಜಿಲ್ಲೆಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೇವೆ ಜೊತೆಗೆ ಕಳೆದ ಸುಮಾರು ಒಂದೂವರೇ ವರ್ಷದಿಂದ ಅಮೃತಧಾರೆ ತಾಯಿಹಾಲು ಕೇಂದ್ರ ಸ್ಥಾಪನೆಯಾಗಿದ್ದು, ಹುಟ್ಟಿದ ಮಗುವಿಗೆ ಜೀವಾ ಮೃತವಾಗಿರುವ ತಾಯಿ ಎದೆ ಹಾಲು ವಂಚಿತ ಸಾವಿರಾರು ನವಜಾತ ಶಿಶುಗಳಿಗೆ ಬಿ.ಎಲ್.ಡಿ.ಇ ಉಚಿತವಾಗಿ ತಾಯಿ ಹಾಲು ಒದಗಿಸುವ ಮೂಲಕ ಕಾಮಧೇನುವಿನಂತೆ ಸಮಾಜಮುಖಿ ಸೇವೆಗೈಯುತ್ತಿದೆ.
1800 ಕ್ಕೂ ಅಧಿಕ ಶಿಶುಗಳಿಗೆ ತಾಯಿ ಹಾಲು
ಕಳೆದ ಒಂದೂವರೇ ವರ್ಷಗಳ ಹಿಂದೆ ಆರಂಭಿಸಲಾದ ಸುಸಜ್ಜಿತ ಅಮೃತಧಾರೆ ತಾಯಿ ಹಾಲಿನ ಭಂಡಾರದಿಂದ ಇಲ್ಲಿಯವರೆಗೂ 1800 ಕ್ಕೂ ಅಧಿಕ ನವಜಾತ ಶಿಶುಗಳಿಗೆ ತಾಯಿ ಹಾಲು ಒದಗಿಸಿರುವುದು ವಿಶೇಷ. ಆಸ್ಪತ್ರೆಯಲ್ಲಿ 24/7 ತಾಯಿಹಾಲು ಕೇಂದ್ರಕ್ಕೆ ಪ್ರತ್ಯೇಕ ಘಟಕ ಮಾಡಿ ತಜ್ಞ ವೈದ್ಯರನ್ನು ಹೊರತುಪಡಿಸಿ 7-8 ಜನ ನುರಿತ ವೈದ್ಯ ಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಎದೆಹಾಲು ಹೊಂದಿರುವ ತಾಯಂದಿರಿಗೆ ಆಪ್ತ ಸಮಾಲೋಚನೆ ಮಾಡಿ, ಅವರ ಒಪ್ಪಿಗೆ ಪಡೆದು ಕಡ್ಡಾಯವಾಗಿ ಹೆಚ್ಐವಿ, ಹೆಪಟೈಟಿಸ್ ಬಿ ಅ್ಯಂಡ್ ಸಿ ಮತ್ತು ವಿಡಿಆರ್ಎಲ್ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ನೆಗೆಟಿವ್ ವರದಿ ಬಂದ ಮೇಲೆ ಎದೆಹಾಲನ್ನು ಪಡೆಯಲಾಗುತ್ತದೆ ಎನ್ನುತ್ತಾರೆ ತಾಯಿಹಾಲು ಭಂಡಾರದ ಮನಃಶಾಸ್ತ್ರಜ್ಞರಾದ ಉಮಾ ಪಾಟೀಲ ಅವರು.
ಎರಡೆರಡು ಬಾರಿ ಪರೀಕ್ಷೆ, ಸುರಕ್ಷತೆಗೆ ಹೆಚ್ಚು ಒತ್ತು
ಬಿಎಲ್ಡಿಇ ತಾಯಿ ಹಾಲಿನ ಕೇಂದ್ರದ ಉಸ್ತುವಾರಿಗಳಾದ ಡಾ.ದೀಪಾ ಕುಂದರಗಿ, ಡಾ.ಪೂಜಾ ನಿಡೋಣಿ ವಿವರಿಸು ವಂತೆ, ತಾಯಿ ಎದೆಹಾಲಿಗೆ ನಾನಾ ಪರೀಕ್ಷೆಗಳನ್ನು ನಡೆಸಿ ಪಾಶ್ಚಿರೀಕರಿಸಲಾಗುತ್ತದೆ, ಆಮೇಲೆ ನಿಗದಿತ ಡಿಗ್ರಿ ಸೆಲ್ಸಿಯಸ್ ನಲ್ಲಿ ಕಾಯಿಸಿ ಶೇಖರಿಸಿಡಲಾಗುತ್ತದೆ. ಒಮ್ಮೆ ಪಡೆದ ಹಾಲನ್ನು 6 ತಿಂಗಳವರೆಗೂ ಶೇಖರಿಸಿಟ್ಟು ಬಳಸಬಹುದು. ಪ್ರತಿದಿನ ನವಜಾತು ಶಿಶುವಿಗೆ ಅವಶ್ಯಕತೆಗೆ ಅನುಗುಣವಾಗಿ ಹಾಲು ತೆಗೆದು ಕಾಯಿಸಿ ಸಾಮಾನ್ಯ ತಾಪಮಾನಕ್ಕೆ ತಂದು ಮತ್ತೆ ಪರೀಕ್ಷಿಸಿ ಮಗುವಿಗೆ ನೀಡಲಾಗುತ್ತದೆ. ದಿನಕ್ಕೆ 8-10 ತಾಯಂದಿರು ಎದೆಹಾಲು ದಾನ ಮಾಡುತ್ತಾರೆ. ಹಾಗೇ ಶಿಶುವಿಗೆ ದಿನಕ್ಕೆ (ಪ್ರತಿ 2-3 ತಾಸಿಗೊಮ್ಮೆ) 200-300 ಎಂ.ಎಲ್ ತಾಯಿಹಾಲು ನೀಡಲಾಗುತ್ತದೆ.
ನಮ್ಮ ಆಸ್ಪತ್ರೆಯಲ್ಲೇ ದಿನಕ್ಕೆ ಕನಿಷ್ಠ 20 ಮಕ್ಕಳಿಗೆ ತಾಯಿಹಾಲು ಅವಶ್ಯಕತೆ ಬರುತ್ತದೆ. ಪರೀಕ್ಷಾ ವೆಚ್ಚ ದುಬಾರಿ ಯಾದರೂ ಸುರಕ್ಷತೆಗೆ ಹೆಚ್ಚು ಒತ್ತು ನೀಡಿ ಪ್ರತ್ಯೇಕವಾಗಿಯೇ ಶೇಖರಿಸಿ, ಎರಡೆರಡು ಬಾರಿ ಪರೀಕ್ಷಿಸಲಾಗುತ್ತದೆ. ಅನಾಥ ಶಿಶುಗಳಿಗೆ, ನವಜಾತ ಶಿಶುವಿನ ತಾಯಿಯಲ್ಲಿ ಹಾಲಿನ ಕೊರತೆಯುಂಟಾದರೆ, ಅನಾರೋಗ್ಯದಿಂದ ಬಳಲು ತ್ತಿದ್ದರೆ, ಅವಧಿ ಪೂರ್ವ ಜನಿಸಿದ ಶಿಶುಗಳಿಗೆ ಹೀಗೆ ನಾನಾ ರೀತಿಯಿಂದ ತಾಯಿ ಹಾಲು ವಂಚಿತ ಶಿಶುಗಳಿಗೆ ಮತ್ತು ದಾನ ಮಾಡುವ ತಾಯಿಗೂ ಹಾಲು ಭಂಡಾರ ಜೀವರಕ್ಷಕವಾಗಿದೆ.
ನಮ್ಮಲ್ಲಿ ಗುಣಮಟ್ಟದ ಚಿಕಿತ್ಸಾ ಸೌಲಭ್ಯದಿಂದಾಗಿ ಅಕ್ಕಪಕ್ಕದ ಜಿಲ್ಲೆಗಳು, ಮಹಾರಾಷ್ಟ್ರ ಗಡಿ ಭಾಗದಿಂದಲೂ ಬರುವ ಹೊರರೋಗಿಗಳ ಸಂಖ್ಯೆ ಹೆಚ್ಚು. ನಮ್ಮ ಭಂಡಾರದಲ್ಲಿ ಸಂಗ್ರಹಿಸುವ ತಾಯಿ ಹಾಲನ್ನು ಬೇಡಿಕೆ ಬರುವ ಬೇರೆ ಆಸ್ಪತ್ರೆಗಳಿಗೂ ಉಚಿತವಾಗಿ ಪೂರೈಸುತ್ತಿದ್ದೇವೆ. ತಾಯಿಹಾಲು ದಾನ ಮಾಡಲಿಚ್ಚಿಸುವ ತಾಯಂದಿರು ನೇರವಾಗಿ ಆಸ್ಪತ್ರೆಗೆ ಭೇಟಿ ನೀಡಬಹುದು. ಅಥವಾ ಓಪಿಡಿ ದೂರವಾಣಿ ಸಂಖ್ಯೆ : 08352-262770 ಹಾಗೂ ಮೊಬೈಲ್ ನಂ. 6366786002 ಗೆ ಸಂಪರ್ಕಿಸಬಹುದು ಎಂದು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಂ. ಪಾಟೀಲ್ ಮಾಹಿತಿ ನೀಡಿದರು.
ಬಿಎಲ್ಡಿಇ ಸಂಸ್ಥೆಯ ಅಧ್ಯಕ್ಷರಾದ ಸಚಿವ ಡಾ.ಎಂ.ಬಿ.ಪಾಟೀಲರ ನಿರ್ದೇಶನದಂತೆ, ಉತ್ತರ ಕರ್ನಾಟಕ ಭಾಗದಲ್ಲಿ ತಾಯಿಶಿಶು ಮರಣ ಪ್ರಮಾಣ ತಗ್ಗಿಸಿ ಬಡ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಜೊತೆಗೆ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ ಸೇವೆ ಹಾಗೂ ತಾಯಿಹಾಲು ಭಂಡಾರ ಸ್ಥಾಪಿಸಲಾಗಿದೆ. ಇದರ ನಿರ್ವಹಣೆಗೆ ತಗಲುವ ವರ್ಷಕ್ಕೆ ಅಂದಾಜು 8-10 ಲಕ್ಷವನ್ನು ಆಸ್ಪತ್ರೆಯಿಂದಲೇ ಭರಿಸಲಾಗುತ್ತದೆ. ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಮುಂದಿನ ದಿನಗಳಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಉದ್ದೇಶವಿದೆ ಎಂದು ಬಿಎಲ್ಡಿಇ ಸಂಸ್ಥೆಯ ಕುಲಪತಿ ಡಾ.ಆರ್.ಎಸ್. ಮುಧೋಳ, ಪ್ರಾಚಾರ್ಯ ಡಾ.ಅರವಿಂದ ಪಾಟೀಲ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ ಹೊನ್ನುಟಗಿ ವಿವರಿಸಿದರು.
ಇದನ್ನೂ ಓದಿ: Vijayapura News : ಶಾಸಕ ಯಶವಂತರಾಯಗೌಡ ಪಾಟೀಲ ಸಂಸದ ರಮೇಶ ಜಿಗಜಿಣಗಿಯವರ ಬಗ್ಗೆ ಹಗುರುವಾಗಿ ಮಾತನಾಡಿರುವುದು ಶೋಭೆಯಲ್ಲ