Tuesday, 24th September 2024

HC Verdict on CM Siddaramaiah: ಸಿಎಂಗೆ ಶಾಕ್‌, ಮುಡಾ ತನಿಖೆಗೆ ಅವಕಾಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

CM Siddaramaiah

ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (HC Verdict on CM Siddaramaiah) ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ತನಿಖೆಗೆ ಅವಕಾಶ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಪ್ರಶ್ನಿಸಿ ಸಿಎಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾ ಮಾಡಿದ್ದಾರೆ.

ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡುವ ರಾಜ್ಯಪಾಲರ ಅಧಿಕಾರವನ್ನು ಪ್ರಶ್ನಿಸುವಂತಿಲ್ಲ. ಈ ಕುರಿತು ಸಚಿವ ಸಂಪುಟದ ತೀರ್ಮಾನ ಅಥವಾ ಸಲಹೆಯನ್ನು ರಾಜ್ಯಪಾಲರು ಅಂಗೀಕರಿಸಬೇಕಿಲ್ಲ. ಇದು ಸಂಪೂರ್ಣವಾಗಿ ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಪಟ್ಟಿದೆ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಒತ್ತಿ ಹೇಳಿದರು.

ಮುಖ್ಯಮಂತ್ರಿಗಳ ಅರ್ಜಿ ಕುರಿತು ಘಟಾನುಘಟಿ ಹಿರಿಯ ವಕೀಲರ ಸುದೀರ್ಘ ವಾದ-ಪ್ರತಿವಾದ ಆಲಿಸಿ ಕಾಯ್ದಿರಿಸಿರುವ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ನ್ಯಾಯಪೀಠ ಮಂಗಳವಾರ ಮಧ್ಯಾಹ್ನ ಪ್ರಕಟಿಸಿತು. ಈ ತೀರ್ಪಿನ ವಿರುದ್ಧ ಮೇಲ್ಮನವಿಗೆ ನ್ಯಾಯಾಧೀಶರು ಅವಕಾಶ ನೀಡಿದ್ದು, ಸಿಎಂ ಪರ ವಕೀಲರಾದ ಅಭಿಜಿತ್‌ ಸಿಂಘ್ವಿ ಅವರು, ಮೇಲ್ಮನವಿ ಸಲ್ಲಿಸುವುದಾಗಿ ನುಡಿದರು.

ಯಾವುದು ಪ್ರಕರಣ?

ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿಗಳು ಆ.19ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅಂದೇ ಅರ್ಜಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲರು ರಾಜ್ಯಪಾಲರ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಹೈಕೋರ್ಟ್, ಪ್ರಾಸಿಕ್ಯೂಷನ್ ಆಧರಿಸಿ ಸಿಎಂ ವಿರುದ್ಧ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮತ್ತು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಮಾಡಿತ್ತು.

ರಾಜ್ಯಪಾಲರ ಕಚೇರಿ ಪರ ಸುಪ್ರೀಂ ಕೋರ್ಟ್ ಸಾಲಿಸಿಟರ್‌ ಜನರಲ್ ತುಷಾರ್ ಮೆಹ್ತಾ, ಖಾಸಗಿ ದೂರುದಾರ ಟಿ.ಜೆ.ಅಬ್ರಾಹಾಂ, ಎಸ್.ಪಿ. ಪ್ರದೀಪ್ ಕುಮಾರ್ ಮತ್ತು ಸ್ನೇಹಮಯಿ ಕೃಷ್ಣ ಪರ ವಕೀಲರು ಪ್ರತಿವಾದ ಮಂಡಿಸಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ವಾದಿಸಿದ್ದರು. ಸೆ. 12ರಂದು ವಾದ ಪೂರ್ಣಗೊಂಡ ನಂತರ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.

ಇದನ್ನೂ ಓದಿ: MUDA Scam: ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ಬಿಗ್‌ ಡೇ, ಮುಡಾ ಹಗರಣ ತನಿಖೆ ಕುರಿತು ಹೈಕೋರ್ಟ್‌ ತೀರ್ಪಿಗೆ ಕ್ಷಣಗಣನೆ