Friday, 22nd November 2024

SME: ಸಣ್ಣ, ಮಧ್ಯಮ ಕೈಗಾರಿಕಾ ವಲಯವನ್ನು ಭವಿಷ್ಯಕ್ಕೆ ಸಿದ್ಧಗೊಳಿಸುವ ಒಳನೋಟ ನೀಡಿದ ಕಾರ್ಯಾಗಾರ

ʼಎಸ್‌ಎಂಇ ಸಹಯೋಗ-25ʼ ಉಪಕ್ರಮಕ್ಕೆ ಚಾಲನೆ

• ಆಧುನಿಕ ತಂತ್ರಜ್ಞಾನಕ್ಕೆ ಎಸ್‌ಎಂಇ ಸಜ್ಜುಗೊಳಿಸುವ ಗುರಿ
• ಸ್ಪರ್ಧಾತ್ಮಕತೆ ಹೆಚ್ಚಿಸಿ ವಹಿವಾಟು ವೃದ್ಧಿಸುವುದರ ಒಳನೋಟ ನೀಡಿದ ಕಾರ್ಯಾಗಾರ
• ರಾಜ್ಯದಾದ್ಯಂತದ ಕೈಗಾರಿಕಾ ಸಮೂಹಗಳಲ್ಲಿ ಕಾರ್ಯಾಗಾರಗಳು ನಡೆಯಲಿವೆ

ಬೆಂಗಳೂರು: ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಸ್ಎಂಇ) ಭವಿಷ್ಯಕ್ಕೆ ಸಿದ್ಧಪಡಿಸುವ ಮಹತ್ವಾಕಾಂಕ್ಷಿ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರವು ́ʼಎಸ್‌ಎಂಇ ಸಹಯೋಗ-25ʼ ಉಪಕ್ರಮಕ್ಕೆ ಚಾಲನೆ ನೀಡಿದೆ.
ಮುಂದಿನ ವರ್ಷ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪೂರಕವಾಗಿ, ʼಎಸ್‌ಎಂಇ ಸಹಯೋಗ-25ʼವನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸುವುದಕ್ಕೆ ಪೂರ್ವಭಾವಿಯಾಗಿ ಶುಕ್ರವಾರ ನಗರದಲ್ಲಿ ʼಉದ್ಯಮ 4.0ʼ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಎಸ್‌ಎಂಇಗಳ ಕಾರ್ಯನಿರ್ವಹಣೆ ಹಾಗೂ ವಹಿವಾಟನ್ನು ಗಣನೀಯವಾಗಿ ಸುಧಾರಿಸಲು, ತಯಾರಿಕಾ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಲು ಮತ್ತು ಮಾರುಕಟ್ಟೆ ಅವಕಾಶಗಳನ್ನು ವಿಸ್ತರಿಸುವ ʼಉದ್ಯಮ 4.0ʼ ರ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ನೆರವಾಗಲು ಈ ಕಾರ್ಯಕ್ರಮ ರೂಪಿಸಲಾಗಿದೆ.

ಈ ಉಪಕ್ರಮದ ಮೂಲಕ, ರಾಜ್ಯದಾದ್ಯಂತದ ʼಎಸ್‌ಎಂಇʼಗಳನ್ನು ಕೃತಕ ಬುದ್ಧಿಮತ್ತೆಯಂತಹ (ಎಐ) ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಎಐ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ದತ್ತಾಂಶ ವಿಶ್ಲೇಷಣೆಯಂತಹ ಹೊಸ ತಂತ್ರಜ್ಞಾನಗಳ ನೆರವಿನಿಂದ ಉದ್ಯಮಗಳ ಕಾರ್ಯಾಚರಣೆಯ ದಕ್ಷತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಸುಧಾರಿಸುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.

ತಯಾರಿಕೆ ಸಾಮರ್ಥ್ಯ ಹೆಚ್ಚಿಸಿ ಎಸ್‌ಎಂಇಗಳನ್ನು ಮುನ್ನಡೆಸಲು ಅಗತ್ಯವಾದ ಜ್ಞಾನ ಮತ್ತು ಸಾಧನಗಳ ಬಳಕೆ, ಕಾರ್ಯನಿರ್ವಹಣೆಯ ಸವಾಲುಗಳ ನಿರ್ವಹಣೆ, ಡಿಜಿಟಲ್‌ ಪರಿವರ್ತನೆ, ಕಡಿಮೆ ವೆಚ್ಚದ ಹಾಗೂ ಹೆಚ್ಚು ಉಪಯುಕ್ತಕರವಾದ ತಯಾರಿಕಾ ಪರಿಹಾರಗಳ ಅಳವಡಿಕೆ ಬಗ್ಗೆ ಕಾರ್ಯಾಗಾರದಲ್ಲಿ ವಿವರವಾದ ಮಾಹಿತಿ ನೀಡಲಾಯಿತು.

ಕೃತಕ ಬುದ್ಧಿಮತ್ತೆ (ಎಐ), ಎಲ್‌ಒಟಿ ಮತ್ತು ದತ್ತಾಂಶ ವಿಶ್ಲೇಷಣೆಯಂತಹ ಸುಧಾರಿತ ತಂತ್ರಜ್ಞಾನಗಳ ನೆರವಿನಿಂದ ತ್ವರಿತವಾಗಿ ಬದಲಾಗುತ್ತಿರುವ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಿ ವಹಿವಾಟು ವೃದ್ಧಿಸುವುದರ ಬಗ್ಗೆ ಒಳನೋಟ ನೀಡಿತು.

ಎಸ್‌ಎಂಇಗಳ ಕಾರ್ಯನಿರ್ವಹಣೆಯ ದಕ್ಷತೆ ಮತ್ತು ಉತ್ಪನ್ನದ ಗುಣಮಟ್ಟ ಹೆಚ್ಚಿಸಲು ನೆರವಾಗುವ ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ ಮತ್ತು ದತ್ತಾಂಶ ವಿಶ್ಲೇಷಣೆ ಕುರಿತು ಪ್ರತಿ ತಿಂಗಳೂ ರಾಜ್ಯದಾದ್ಯಂತದ ಕೈಗಾರಿಕಾ ಸಮೂಹಗಳಲ್ಲಿ ಕಾರ್ಯಾಗಾರಗಳನ್ನು ಸರಣಿಯೋಪಾದಿ ನಡೆಸಲು ನಿರ್ಧರಿಸಲಾಗಿದೆ.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಅವರ ನೇತೃತ್ವದಲ್ಲಿ ಈ ಕಾರ್ಯಾಗಾರವು ನಡೆಯಿತು. ಕಾರ್ಯಕ್ರಮವನ್ನು ಕೆ-ಟೆಕ್‌ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಇನ್‌ ಐಒಟಿ (ಸಿಒಇ), ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಸಹಯೋಗದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.