ಮುಖದ ಮೇಲೆ ಮೊಡವೆಗಳು ಮೂಡುವುದು ಸಹಜ. ಹದಿಹರೆಯದವರಲ್ಲಿ ಈ ಮೊಡವೆಗಳ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಆದರೆ ಕೆಲವರಿಗೆ ದೇಹದ ಮೇಲೆ ಕೂಡ ಮೊಡವೆಗಳು ಮೂಡುತ್ತವೆ. ಬೆನ್ನಿನ ಮೇಲೆ, ತೋಳುಗಳ ಮೇಲೆ ಮೊಡವೆಗಳಿರುವುದನ್ನು ನಾವು ಹಲವರಲ್ಲಿ ನೋಡಿರುತ್ತೇವೆ. ಈ ಮೊಡವೆಗಳು ಸಣ್ಣದಾಗಿದ್ದರೂ ಕೂಡ ಅವು ಸುಲಭವಾಗಿ ಹೋಗುವುದಿಲ್ಲ.
ಸಾಮಾನ್ಯವಾಗಿ, ಮಹಿಳೆಯರು ಹೆಚ್ಚು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ, ಹಾರ್ಮೋನುಗಳ ಬದಲಾವಣೆಯಿಂದಾಗಿ, ದೇಹ ಮತ್ತು ಕೈಗಳ ಮೇಲೆ ಸಾಕಷ್ಟು ಮೊಡವೆಗಳು ಮೂಡುತ್ತವೆ. ದೇಹದ ಮೊಡವೆಗಳು ಮೂಡಲು ಮುಖ್ಯ ಕಾರಣ ನಮ್ಮ ಕೆಟ್ಟ ಜೀವನಶೈಲಿ. ಹಾಗೇ ಕೆಲವೊಮ್ಮೆ ಖಿನ್ನತೆ, ಆತಂಕ, ಒತ್ತಡದಿಂದಾಗಿ ಇದು ಗೋಚರಿಸುತ್ತದೆ. ಹಾಗಾಗಿ ಈ ಮೊಡವೆಗಳ (Acne on body)ಸಮಸ್ಯೆಗೆ ಸರಿಯಾದ ಕಾರಣ ತಿಳಿದು ಅದನ್ನು ನಿವಾರಿಸಿಕೊಳ್ಳಿ.
ದೇಹದ ಮೊಡವೆಗಳಿಗೆ ಕಾರಣಗಳು
ಚರ್ಮವು ತುಂಬಾ ಎಣ್ಣೆಯುಕ್ತವಾಗಿದ್ದರೆ, ದೇಹದ ಮೇಲೆ ಮೊಡವೆಗಳಂತಹ ದದ್ದುಗಳು ಮೂಡುತ್ತವೆ. ಹಾಗೇ ಕ್ರೀಡಾಪಟುಗಳು ಹೆಚ್ಚು ಈ ಸಮಸ್ಯೆಗೆ ಒಳಗಾಗುತ್ತಾರೆ. ಯಾಕೆಂದರೆ ಅವರು ಹೆಚ್ಚು ಬೆವರುತ್ತಿರುತ್ತಾರೆ, ಆಗ ನೈರ್ಮಲ್ಯದ ಬಗ್ಗೆ ಗಮನ ಹರಿಸದಿದ್ದರೆ, ರಂಧ್ರಗಳು ಮುಚ್ಚಲ್ಪಡಬಹುದು, ಇದು ಮೊಡವೆಗಳಿಗೆ ಕಾರಣವಾಗಬಹುದು.
ಇದಲ್ಲದೆ, ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಚರ್ಮವು ಉಸಿರಾಡಲು ಕಷ್ಟವಾಗುತ್ತದೆ, ಇದು ಬ್ಯಾಕ್ಟೀರಿಯಾ ಮತ್ತು ತೈಲವನ್ನು ಸಂಗ್ರಹಿಸಲು ಕಾರಣವಾಗುತ್ತದೆ. ಹಾಗೇ ಹಾರ್ಮೋನ್ ಬದಲಾವಣೆಗಳು, ವಿಶೇಷವಾಗಿ ಹದಿಹರೆಯ ಮತ್ತು ಗರ್ಭಾವಸ್ಥೆಯಲ್ಲಿ, ಚರ್ಮದಲ್ಲಿ ತೈಲ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇದರಿಂದಾಗಿ ದೇಹದಲ್ಲಿ ಮೊಡವೆಗಳು ಮೂಡುತ್ತವೆ.
ನೀವು ತುಂಬಾ ಎಣ್ಣೆಯುಕ್ತ ಅಥವಾ ಕಾಮೆಡೋಜೆನಿಕ್ ಉತ್ಪನ್ನಗಳನ್ನು ಬಳಸಿದರೆ, ಅದು ಮೊಡವೆಗೆ ಕಾರಣವಾಗಬಹುದು. ಇದಲ್ಲದೆ, ಚರ್ಮದ ಮೇಲೆ ಸಂಗ್ರಹವಾಗುವ ಸತ್ತ ಜೀವಕೋಶಗಳು ರಂಧ್ರಗಳನ್ನು ಮುಚ್ಚುತ್ತದೆ, ಇದು ಮೊಡವೆಗಳಿಗೆ ಕಾರಣವಾಗಬಹುದು.
ಇದಲ್ಲದೆ, ತೂಕ ಹೆಚ್ಚಳ, ಔಷಧಿಗಳು ಅಥವಾ ಪಾನೀಯಗಳ ಸೇವನೆ, ನಿದ್ರೆಯ ಕೊರತೆ, ಒತ್ತಡದಿಂದ ಬಳಲುವುದು, ಋತುಚಕ್ರದ ಸಮಸ್ಯೆ, ಕಳಪೆ ಆಹಾರ ಪದ್ಧತಿ ಸಹ ದೇಹದ ಮೊಡವೆಗಳಿಗೆ ಕಾರಣವಾಗಬಹುದು.
ದೇಹದ ಮೊಡವೆಗಳನ್ನು ನಿವಾರಿಸಲು ಪರಿಹಾರಗಳು:
ಪ್ರತಿದಿನ ಸ್ನಾನ ಮಾಡಿ ಮತ್ತು ಸ್ನಾನಕ್ಕೆ ಮೃದುವಾದ ಬಾಡಿ ವಾಶ್ ಅಥವಾ ಆ್ಯಂಟಿ ಬ್ಯಾಕ್ಟೀರಿಯಲ್ ಸಾಬೂನುಗಳನ್ನು ಬಳಸಿ.
ವಾರಕ್ಕೆ 2-3 ಬಾರಿ ದೇಹಕ್ಕೆ ಸ್ಕ್ರಬ್ ಮಾಡಿ. ಇದು ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡಿ, ಸತ್ತ ಚರ್ಮವನ್ನು ತೆಗೆದುಹಾಕುತ್ತದೆ.
ಚರ್ಮಕ್ಕೆ ಉಸಿರಾಡಲು ಸುಲಭವಾಗುವಂತಹ ಹತ್ತಿಯ ಬಟ್ಟೆ ಹಾಗೂ ಸಡಿಲವಾದ ಬಟ್ಟೆಗಳನ್ನು ಧರಿಸಿ. ಇದರಿಂದ ಚರ್ಮಕ್ಕೆ ಉಸಿರಾಡಲು ಗಾಳಿ ಸಿಗುತ್ತದೆ.
ಚರ್ಮಕ್ಕೆ ಲಘು ಮಾಯಿಶ್ಚರೈಸರ್ ಬಳಸಿ, ಇದು ಚರ್ಮದ ರಂಧ್ರಗಳನ್ನು ಮುಚ್ಚುವುದಿಲ್ಲ.
ಜಿಮ್ ಅಥವಾ ವ್ಯಾಯಾಮದ ನಂತರ ಸ್ನಾನ ಮಾಡಿ ಬೆವರನ್ನು ನಿವಾರಿಸಿಕೊಳ್ಳಿ.
ಬೆಡ್ ಶೀಟ್ಗಳು, ದಿಂಬು ಕವರ್ ಗಳು ಮತ್ತು ಟವೆಲ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
ಇದನ್ನೂ ಓದಿ:ಮಲಬದ್ಧತೆ ನಿವಾರಿಸಲು ಈ ಗಿಡಮೂಲಿಕೆಗಳ ಚಹಾ ಸೇವಿಸಿ ನೋಡಿ!
ಈ ಕ್ರಮಗಳನ್ನು ತಪ್ಪದೇ ಪಾಲಿಸಿದರೆ ಮೊಡವೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದರೆ ಮೊಡವೆಗಳು ಹೆಚ್ಚುತ್ತಿದ್ದರೆ, ಚರ್ಮರೋಗ ತಜ್ಞರನ್ನು ಸಂಪರ್ಕಿಸಿ ಮತ್ತು ಔಷಧಿಗಳು ಅಥವಾ ಚಿಕಿತ್ಸೆಯನ್ನು ತೆಗೆದುಕೊಳ್ಳಿ.