Wednesday, 25th September 2024

Badlapur Assault Case: ಬದ್ಲಾಪುರ ಪ್ರಕರಣದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದೇಕೆ? ವಕೀಲರು ನೀಡಿದ ಸ್ಪಷ್ಟನೆ ಇಲ್ಲಿದೆ

Badlapur Assault Case

ಮುಂಬೈ: ಮಹಾರಾಷ್ಟ್ರದ ಬದ್ಲಾಪುರ ಶಾಲೆಯೊಂದರಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಸೇರಿದ್ದ ಅಕ್ಷಯ್ ಶಿಂಧೆಯನ್ನು ಪೊಲೀಸರು ಸೋಮವಾರ ಗುಂಡಿಕ್ಕಿ ಕೊಂದಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದೆ. ಘಟನೆ ಬಗ್ಗೆ ಮಾತನಾಡಿದ ಮಹಾರಾಷ್ಟ್ರದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಕೀಲ ಉಜ್ವಲ್ ನಿಕಮ್ ಅವರು, ಅನುಮಾನಗಳನ್ನು ಬಗೆ ಹರಿಸಿದ್ದಾರೆ. ಆರೋಪಿ ಅಕ್ಷಯ್ ಶಿಂಧೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿದ ನಂತರ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಕ್ಷಣೆಗಾಗಿ ಆರೋಪಿಯತ್ತ ಗುಂಡು ಹಾರಿದ್ದಾರೆ ಎಂದು ತಿಳಿಸಿದ್ದಾರೆ (Badlapur Assault Case).

ʼʼಅಕ್ಷಯ್ ಶಿಂಧೆ ವಿರುದ್ಧ ಪೊಲೀಸರ ಬಳಿ ಸಾಕಷ್ಟು ಪುರಾವೆಗಳಿವೆ ಮತ್ತು ಈ ಪ್ರಕರಣದಲ್ಲಿ ಆತನ ವಿರುದ್ಧ ಇದುವರೆಗೆ ಎರಡು ಚಾರ್ಚ್‌ಶೀಟ್‌ಗಳನ್ನು ಸಲ್ಲಿಸಲಾಗಿದೆ. ಸಂತ್ರಸ್ತರು ಆರೋಪಿಗಳನ್ನು ಸ್ಪಷ್ಟವಾಗಿ ಗುರುತಿಸಿದ್ದಾರೆʼʼ ಎಂದು ಉಜ್ವಲ್ ನಿಕಮ್ ಹೇಳಿದ್ದಾರೆ.

“ಈ ಪ್ರಕರಣ ನ್ಯಾಯಾಲಯದ ತನಕ ಹೋಗಿದ್ದರೆ ಆತನಿಗೆ ಮರಣ ದಂಡನೆಯಾಗುತ್ತಿತ್ತು. ತನ್ನ ವಿರುದ್ಧ ಪ್ರಬಲ ಸಾಕ್ಷ್ಯಗಳಿದ್ದು, ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ತಿಳಿದಾಗ ಆರೋಪಿ ಅಕ್ಷಯ್‌ ಶಿಂಧೆ ಹಿಂಸಾಚಾರಕ್ಕೆ ಇಳಿದಿದ್ದ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಆತ್ಮಹತ್ಯೆಗೆ ಯತ್ನಿಸಿರುವ ಸಾಧ್ಯತೆಯೂ ಇದೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ.

ಆರೋಪಿಯ ವಿರುದ್ಧದ ಪೊಲೀಸ್ ಕ್ರಮವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ʼʼಪೊಲೀಸರು ತಮ್ಮ ಜೀವವನ್ನು ಉಳಿಸಲು ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಸಂಘರ್ಷದಲ್ಲಿಇಬ್ಬರು ಪೊಲೀಸ್‌ ಸಿಬ್ಬಂದಿಗೆ ಗಾಯಗಳಾಗಿವೆʼʼ ಎಂದು ಉಜ್ವಲ್ ನಿಕಮ್ ಹೇಳಿದ್ದಾರೆ.

ವಿರೋಧ ಪಕ್ಷಗಳಿಂದ ಟೀಕೆ

ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮಹಾರಾಷ್ಟ್ರದ ವಿರೋಧ ಪಕ್ಷಗಳು ಮಹಾಯುತಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು. ಎನ್‌ಕೌಂಟರ್‌ಗೆ ಕಾರಣವಾದ ಸಂದರ್ಭಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದವು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಉಜ್ವಲ್ ನಿಕಮ್, ವಿರೋಧ ಪಕ್ಷಗಳು ಇದನ್ನು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ʼʼದುರದೃಷ್ಟವಶಾತ್‌ ಹಲವು ನಾಯಕರು ಘಟನೆಗೆ ರಾಜಕೀಯ ಬೆರೆಸುತ್ತಿದ್ದಾರೆ. ನ್ಯಾಯಾಂಗ ತನಿಖೆಯ ಬಳಿಕ ಸತ್ಯ ಹೊರ ಬರಲಿದೆ. ಬದ್ಲಾಪುರ ಘಟನೆಯ ಇತರ ಆರೋಪಿಗಳ ವಿರುದ್ಧ ತನಿಖೆ ನಡೆಸಲಾಗುವುದುʼʼ ಎಂದು ತಿಳಿಸಿದ್ದಾರೆ.

ಅಕ್ಷಯ್‌ ಶಿಂಧೆ ಕುಟುಂಬಸ್ಥರಿಂದ ಅನುಮಾನ

ರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿದ್ದೇವೆ ಎಂಬ ಪೊಲೀಸರ ಹೇಳಿಕೆಗೆ ಅಕ್ಷಯ್ ಶಿಂಧೆಯ ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದರು. ಅಪರಾಧವನ್ನು ಒಪ್ಪಿಕೊಳ್ಳಲು ಮತ್ತು ಹೇಳಿಕೆ ನೀಡುವಂತೆ ಪೊಲೀಸರು ಶಿಂಧೆ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದರು. “ಶಿಂಧೆ ಮೊದಲು ಪೊಲೀಸರ ಬಂದೂಕನ್ನು ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಿದ್ದಾನೆ ಎನ್ನುವುದು ಸುಳ್ಳು. ಒತ್ತಡ ಹೇರಿ ಪೊಲೀಸರು ಆತನಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ” ಎಂದು ಶಿಂಧೆಯ ತಾಯಿ ಮತ್ತು ಚಿಕ್ಕಪ್ಪ ಸೋಮವಾರ ಟೀಕಿಸಿದ್ದರು.

ಈ ಸುದ್ದಿಯನ್ನೂ ಓದಿ: Rape accused shot Dead : ಬಾಲಕಿಯರಿಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಪೊಲೀಸ್ ಗುಂಡಿಗೆ ಬಲಿ