ತಿರುವನಂತಪುರಂ: ಸಹನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಕೊಲ್ಲಂ ಶಾಸಕ ಮತ್ತು ನಟ ಮುಖೇಶ್ ಅವರನ್ನು ಇಂದು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಮುಖೇಶ್(Actor Mukesh) ಜಾಮೀನು ಪಡೆದು ಹೊರಬಂದಿದ್ದಾರೆ. ತಮ್ಮ ವಕೀಲರ ಜತೆಗೆ ಮುಖೇಶ್ ಎರ್ನಾಕುಲಂನಲ್ಲಿ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.
ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್‌ಐಟಿ ತಂಡ ಬಳಿಕ ಅವರನ್ನು ಅವರದ್ದೇ ವಾಹನದ್ಲಿ ವೈದ್ಯಕೀಯ ತಪಾಸಣೆಗೆ ಕರೆದೊಯ್ದರು. ಇದಕ್ಕೂ ಮುನ್ನ ಸೆ.5 ರಂದು ಸೆಶನ್ಸ್ ಕೋರ್ಟ್ ಮುಖೇಶ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಆದರೆ ಯಾವುದೇ ಸಂದರ್ಭದಲ್ಲೂ ಎಷ್ಟೇ ಸಮಯವಾದರೂ ಅಧಿಕಾರಿಗಳ ಬಯಸಿದ್ದಲ್ಲಿ ಮುಖೇಶ್ ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್ ಷರತ್ತು ವಿಧಿಸಿತ್ತು.
ಮುಖೇಶ್ ವಿರುದ್ಧದ ಪ್ರಕರಣ ಏನು?
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ವ್ಯವಸ್ಥಿತ ಲೈಂಗಿಕ ದೌರ್ಜನ್ಯದ ಬಗ್ಗೆ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ ಹೇಮಾ ಸಮಿತಿಯ ವರದಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನಟ ಮುಕೇಶ್ ವಿರುದ್ಧ ಆರೋಪಗಳು ಹೊರಬಿದ್ದಿವೆ. ಮುಕೇಶ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ನಟಿ, ಸಿನಿಮಾದಲ್ಲಿ ಪಾತ್ರ ಕೊಡಿಸುವುದಾಗಿ ಭರವಸೆ ನೀಡಿ ಕೊಚ್ಚಿಯ ಹೋಟೆಲ್‌ವೊಂದರಲ್ಲಿ ತನ್ನ ಮೇಲೆ ಲೈಂಗಿಕ ಕಿರುಕುಳ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಲೈಂಗಿಕ ಕಿರುಕುಳದ ಆರೋಪ ಮಾಡಿದ ಕೆಲವೇ ದಿನಗಳಲ್ಲಿ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮರಾದ್ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
ನಟ ಹಾಗೂ ರಾಜಕಾರಣಿ ಮುಖೇಶ್ ವಿರುದ್ಧ ಅತ್ಯಾಚಾರ ಮತ್ತು ‘ಮಹಿಳೆಯರ ವಿನಮ್ರತೆಯನ್ನು ದುರುಪಯೋಗಪಡಿಸುವ ಉದ್ದೇಶದಿಂದ ಕ್ರಿಮಿನಲ್ ಬಲವನ್ನು ಬಳಸುವುದು ಸೇರಿದಂತೆ ಜಾಮೀನು ರಹಿತ ಅಪರಾಧಗಳ ಆರೋಪ ಹೊರಿಸಲಾಗಿದೆ. ಹೊಸ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬರುವ ಮೊದಲು ಅಪರಾಧ ಸಂಭವಿಸಿದ್ದರಿಂದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಕುರಿತು ಅಧ್ಯಯನ ನಡೆಸಲು ಕೇರಳ ಸರ್ಕಾರ ರಚನೆ ಮಾಡಿದ್ದ ನ್ಯಾ. ಹೇಮಾ ನೇತೃತ್ವದ ಸಮಿತಿ ಸ್ಫೋಟಕ ವರದಿಯೊಂದನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಮಲಯಾಳ ಚಿತ್ರರಂಗವು ನಿರ್ದೇಶಕರು, ನಿರ್ಮಾಪಕರು ಹಾಗೂ ಪ್ರಮುಖ ನಟರನ್ನು ಒಳಗೊಂಡ 15 ಪ್ರಭಾವಿಗಳ ಕಪಿಮುಷ್ಟಿಯಲ್ಲಿದೆ. ಯಾವ ಚಿತ್ರದಲ್ಲಿ ಯಾರಿಗೆ ಅವಕಾಶ ನೀಡಬೇಕೆಂಬುದನ್ನು ಈ ಪ್ರಭಾವಿಗಳ ತಂಡ ನಿರ್ಧರಿಸುತ್ತದೆ. ಅಲ್ಲದೇ ಜೂನಿಯರ್ ನಟ-ನಟಿಯರು ಅಡ್ಜಸ್ಟ್‌ಮೆಂಟ್‌ಗೆ ಒಪ್ಪಿದರೆ ಮಾತ್ರ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಲಾಗುತ್ತಿದೆ ಎಂಬುದು ವರದಿಯಲ್ಲಿ ಬಯಲಾಗಿದೆ.
ಇನ್ನು ಈ ಬಗ್ಗೆ ಕಿರಿಯ ನಟಿಯೊಬ್ಬರು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದ್ದು, ಇದೇ ಅನೇಕ ಮಾಹಿತಿ ಕಳೆ ಹಾಕಿರುವ ಸಮಿತಿ 233 ಪುಟಗಳ ವರದಿ ತಯಾರು ಮಾಡಿದೆ. ಇದೀಗ ಮಾಹಿತಿ ಹಕ್ಕು(RTI) ಅಡಿಯಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ ಸಂಗತಿಗಳು ಒಂದೊಂದೆ ಬಯಲಾಗಿದೆ. ಮಲಯಾಳ ಚಿತ್ರರಂಗದಲ್ಲಿ ‘ಕಾಸ್ಟಿಂಗ್ ಕೌಚ್’ (ಸಿನಿಮಾದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸುವುದು) ಇದೆ. ತಮಗೆ ಯಾರು ಸಹಕರಿಸುತ್ತಾರೋ ಅವರನ್ನು ಒಂದು ಗುಂಪು ಮಾಡಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Actor Siddique: ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಮಲಯಾಳಂ ನಟ ಅರೆಸ್ಟ್ ಆಗೋದು ಗ್ಯಾರಂಟಿನಾ?