Tuesday, 24th September 2024

BJP Karnataka: ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ: ಬಿಜೆಪಿ ಆಗ್ರಹ

BJP Karnataka

ಬೆಂಗಳೂರು: ದಲಿತರ ನಿವೇಶನವನ್ನು ಅಕ್ರಮವಾಗಿ ಕಬಳಿಸಿ, ಬಡವರ ಪಾಲಿಗೆ ಸೇರಬೇಕಾಗಿದ್ದ ಜಾಗವನ್ನು ತಮ್ಮ ಕುಟುಂಬಸ್ಥರ ಹೆಸರಿಗೆ ಮಾಡಿಕೊಂಡಿದ್ದ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹೈಕೋರ್ಟ್‌ ಕ್ರಮವು ಸತ್ಯಕ್ಕೆ ಸಂದ ಜಯ. ಸಿಎಂ ಸಿದ್ದರಾಮಯ್ಯ ಅವರು ಇನ್ನೂ ತಮ್ಮ ಭಂಡತನವನ್ನು ಮುಂದುವರಿಸುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ರಾಜ್ಯ ಬಿಜೆಪಿ (BJP Karnataka) ಆಗ್ರಹಿಸಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ, ಮುಡಾ ಹಗರಣದಲ್ಲಿ ಸ್ವತಃ ಸಿಎಂ ಕುಟುಂಬವೇ ಭಾಗಿಯಾಗಿರುವುದರ ಕುರಿತು ಬಿಜೆಪಿ ಮತ್ತು ಜೆಡಿಎಸ್‌ ಬೆಂಗಳೂರಿನಿಂದ ಮೈಸೂರಿನವರೆಗೆ ಮೈಸೂರು ಚಲೋ ಪಾದಯಾತ್ರೆಯನ್ನು ಮಾಡಿತ್ತು. ಇಂದು ಆ ಹೋರಾಟಕ್ಕೆ ಫಲ ಸಿಕ್ಕಿದೆ. ಶೋಷಿತರಿಗೆ ಅನ್ಯಾಯವೆಸಗಿ ರಾಜಕೀಯ ಮಾಡುತ್ತಿರುವ ಭ್ರಷ್ಟ ಸಿಎಂ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ ಸಂಘಟಿತವಾಗಿ ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸಿದ ಮೈಸೂರು ಚಲೋ ಪಾದಯಾತ್ರೆಗೆ, ಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲಾ ಕಾರ್ಯಕರ್ತರ ಶ್ರಮಕ್ಕೆ ಮತ್ತು ನಿವೇಶನ ಕಳೆದುಕೊಂಡವರಿಗೆ ಇಂದು ಜಯ ಸಿಕ್ಕಿದೆ ಎಂದು ತಿಳಿಸಿದೆ.

ಇನ್ನು ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ನಿರ್ಧಾರವನ್ನು ಎತ್ತಿ ಹಿಡಿದಿರುವ ಘನ ಉಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ತಮ್ಮ ಭಂಡತನವನ್ನು ಮುಂದುವರಿಸುವ ಬದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ವಿರುದ್ಧದ ತನಿಖೆಗೆ ಸಹಕಾರ ನೀಡಲಿ, ಆ ಮೂಲಕ ಮುಖ್ಯಮಂತ್ರಿ ಸ್ಥಾನದ ಘನತೆ ಗೌರವವನ್ನು ಉಳಿಸಲಿ ಎಂದು ಆಗ್ರಹಿಸಿದ್ದಾರೆ.

ಕುರ್ಚಿಗೆ ಅಂಟಿಕೊಳ್ಳುವ ಭಂಡತನ ಪ್ರದರ್ಶಿಸಿದರೆ ನ್ಯಾಯದಂಡ ಮುಂದಿನ ದಿನಗಳಲ್ಲಿ ನಿಮಗೆ ಇದಕ್ಕಿಂತಲೂ ತಕ್ಕ ಉತ್ತರ ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದಿರುವ ಹಾಗೂ ನಡೆಯುತ್ತಿರುವ ಸರಣೀ ಭ್ರಷ್ಟಚಾರ ಹಗರಣಗಳ ಕುರಿತಾಗಿ ಇಂದಿನ ತೀರ್ಪು ಉತ್ತಮ ಮುನ್ನುಡಿಯನ್ನು ಬರೆದಿದೆ.

ಈ ಸುದ್ದಿಯನ್ನೂ ಓದಿ | DK Shivakumar: ಸಿಎಂ ಯಾವುದೇ ತಪ್ಪು ಮಾಡಿಲ್ಲ, ನಾವೆಲ್ಲಾ ಅವರ ಜತೆ ನಿಲ್ಲುತ್ತೇವೆ: ಡಿಕೆಶಿ

ಮುಂದಿನ ದಿನಗಳಲ್ಲಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಹಗರಣಗಳಿಗೆ ನ್ಯಾಯಾಲಯದಿಂದಲೇ ಸೂಕ್ತ ಉತ್ತರ ಹಾಗೂ ಶಿಕ್ಷೆ ಪ್ರಕಟಗೊಳ್ಳಲಿದೆ. ಅಷ್ಟರೊಳಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿದರೆ ಸ್ಥಗಿತಗೊಂಡಿರುವ ಕರ್ನಾಟಕ ರಾಜ್ಯದ ಅಭಿವೃದ್ಧಿ ಚಾಲನೆ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ.

ರಾಜೀನಾಮೆ ಕೊಟ್ಟು ನುಡಿದಂತೆ ನಡೆಯಿರಿ ಎಂದ ಜೆಡಿಎಸ್‌

ನೈತಿಕತೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಭ್ರಷ್ಟ ಸಿಎಂ ಅವರೇ, ಮುಡಾ ಅಕ್ರಮದ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಆದೇಶ ನೀಡಿದ ಮೇಲೆಯೂ ಅಧಿಕಾರದಲ್ಲಿ ಹೇಗೆ ಮುಂದುವರಿಯುತ್ತೀರಿ? ಭಂಡತನ ಬಿಟ್ಟು ಮೊದಲು ರಾಜೀನಾಮೆ ಕೊಡಿ, ನುಡಿದಂತೆ ನಡೆಯಿರಿ. “ಕರ್ನಾಟಕದ ಭಂಡ ಮುಖ್ಯಮಂತ್ರಿ ಸಿದ್ದರಾಮಯ್ಯ” ಎಂದು ರಾಜ್ಯ ಜೆಡಿಎಸ್‌ ಕಿಡಿಕಾರಿದೆ.