Tuesday, 24th September 2024

Samarjit Lankesh: ಬಾಲಿವುಡ್‌ಗೆ ಹಾರಿದ ಸಮರ್ಜಿತ್‌ ಲಂಕೇಶ್‌; ʼಗೌರಿʼ ಚಿತ್ರದ ನಾಯಕನಿಗೆ ಈಗ ಪರಭಾಷೆಯಿಂದಲೂ ಆಫರ್‌

Samarjit Lankesh

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ (Indrajit Lankesh) ಅವರ ಪುತ್ರ ಸಮರ್ಜಿತ್‌ ಲಂಕೇಶ್‌ (Samarjit Lankesh) ಅಭಿನಯದ ʼಗೌರಿʼ (Gowri) ಚಿತ್ರ ಇತ್ತೀಚೆಗೆ ತೆರೆಕಂಡಿತ್ತು. ತಂದೆಯ ನಿರ್ದೇಶನದ ಚಿತ್ರದಲ್ಲಿ ಪುತ್ರ ಗಮನ ಸೆಳೆದಿದ್ದಾರೆ. ʼಗೌರಿʼ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಸಮರ್ಜಿತ್‌ ಲಂಕೇಶ್‌ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಡ್ಯಾನ್ಸ್‌, ಫೈಟ್‌ ಮೂಲಕ ಮೋಡಿ ಮಾಡಿದ್ದಾರೆ. ಅವರ ಅಭಿನಯಕ್ಕೆ ಬಹುತೇಕರು ಫಿದಾ ಆಗಿದ್ದಾರೆ. ಮೊದಲ ಸಿನಿಮಾದಲ್ಲೇ ಭರವಸೆಯ ನಟನಾಗಿ ಹೊರ ಹೊಮ್ಮಿದ್ದಾರೆ. ಕನ್ನಡದ ಹೃತಿಕ್‌ ರೋಷನ್‌ ಎಂದೂ ಗುರುತಿಸ್ಪಡುವ ಸಮರ್ಜಿತ್‌ಗೆ ಇದೀಗ ಜಾಕ್‌ಪಾಟ್‌ ಹೊಡೆದಿದೆ. ಬಾಲಿವುಡ್‌ನಿಂದ ಬಹುದೊಡ್ಡ ಅವಕಾಶ ಅರಸಿಕೊಂಡು ಬಂದಿದೆ.

ಬಾಲಿವುಡ್‌ನ ಜನಪ್ರಿಯ ನಿರ್ಮಾಪಕ, ನಿರ್ದೇಶಕ ಕರಣ್‌ ಜೋಹರ್‌ ಕಡೆಯಿಂದ ಸಮರ್ಜಿತ್‌ಗೆ ಬುಲಾವ್‌ ಬಂದಿದೆ ಎನ್ನಲಾಗಿದೆ. ಕರಣ್‌ ಜೋಹರ್‌ ಅವರ ಧರ್ಮ ಪ್ರೊಡಕ್ಷನ್ ಹೌಸ್‌ನ ಮುಂದಿನ ಸಿನಿಮಾದಲ್ಲಿ ಸಮರ್ಜಿತ್‌ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೆ ಮಾತುಕತೆ ನಡೆಸಲಾಗಿದ್ದು, ಅಧಿಕೃತ ಪ್ರಕಟಣೆ ಇನ್ನೇನು ಕೆಲವೇ ದಿನಗಳಲ್ಲಿ ಹೊರ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಲೈಕಾ ಪ್ರೊಡಕ್ಷನ್ಸ್‌ ಜತೆಯೂ ಮಾತುಕತೆ

ಇದೇ ವೇಳೆ ʼಪೊನ್ನಿಯಿನ್‌ ಸೆಲ್ವನ್‌ Iʼ, ʼಪೊನ್ನಿಯಿನ್‌ ಸೆಲ್ವನ್‌ IIʼ, ʼಇಂಡಿಯನ್‌ 2ʼ ಮೊದಲಾದ ಬಿಗ್‌ ಬಜೆಟ್‌ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ಸ್‌ ಕೂಡ ಸಮರ್ಜಿತ್‌ ಜತೆ ಮಾತುಕತೆ ನಡೆಸಿದೆ ಎನ್ನುವ ಮಾತೂ ಕೇಳಿ ಬಂದಿದೆ. ಹಾಗಾದರೆ ಮೊದಲು ಅವರು ಯಾವ ಚಿತ್ರವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ. ಒಟ್ಟಿನಲ್ಲಿ ಒಂದು ಚಿತ್ರ ಬಿಡುಗಡೆಗೊಂಡ ಬೆನ್ನಲ್ಲೇ ಯುವ ನಟನನ್ನು ಹುಡುಕಿಕೊಂಡು ದೊಡ್ಡ ದೊಡ್ಡ ಅವಕಾಶ ಬರುತ್ತಿದ್ದು, ಸ್ಯಾಂಡಲ್‌ವುಡ್‌ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳಗಲಿದೆ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

ನಿಜವಾಯ್ತು ಕಿಚ್ಚನ ಭವಿಷ್ಯವಾಣಿ

ʼಗೌರಿʼ ಸಿನಿಮಾದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಬಾಗವಹಿಸಿದ್ದ ಕಿಚ್ಚ ಸುದೀಪ್‌ ಮಾತನಾಡಿ ಸಮರ್ಜಿತ್‌ ಕನ್ನಡದ ಜತೆಗೆ ಇತರ ಭಾಷೆಗಳಲ್ಲಿಯೂ ಮಿಂಚುತ್ತಾರೆ ಎನ್ನುವ ಭವಿಷ್ಯ ನುಡಿದಿದ್ದರು. ಸದ್ಯ ಈ ಮಾತು ನಿಜವಾಗುವ ಎಲ್ಲ ಲಕ್ಷಗಳಿವೆ.

ಬಹು ವರ್ಷಗಳ ಬಳಿಕ ಆ್ಯಕ್ಷನ್‌ ಕಟ್‌ ಹೇಳಿದ ಇಂದ್ರಜಿತ್‌

ದೀಪಿಕಾ ಪಡುಕೋಣೆಯಂತಹ ಸೂಪರ್‌ ಸ್ಟಾರ್‌ ಅನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇಂದ್ರಜಿತ್‌ ಲಂಕೇಶ್‌ ಅವರಿಗೆ ಸಲ್ಲುತ್ತಿದೆ. ಇಂದ್ರಜಿತ್‌ ಲಂಕೇಶ್‌ ನಿರ್ದೇಶನದಲ್ಲಿ 2006ರಲ್ಲಿ ತೆರೆಕಂಡ ʼಐಶ್ವರ್ಯಾʼ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ನಾಯಕಿಯಾಗುವ ಮೂಲಕ ದೀಪಿಕಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಬಳಿಕ ಬಾಲಿವುಡ್‌ಗೆ ಹಾರಿ ಟಾಪ್‌ ನಾಯಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಕನ್ನಡದ ಹಲವು ಚಿತ್ರಗಳ ಜತೆಗೆ ಇಂದ್ರಜಿತ್‌ ಹಿಂದಿ ಸಿನಿಮಾಕ್ಕೂ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹಲವು ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ್ದ ಇಂದ್ರಜಿತ್‌ ನಿರ್ದೇಶನದ ʼಗೌರಿʼ ಚಿತ್ರ ಕಳೆದ ತಿಂಗಳು ತೆರೆಕಂಡಿತ್ತು. ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯಾ ಅಯ್ಯರ್‌ ಕಾಣಿಸಿಕೊಂಡಿದ್ದರು. ಇಬ್ಬರಿಗೂ ಇದು ಮೊದಲ ಸಿನಿಮಾವಾಗಿತ್ತು. ಸಮರ್ಜಿತ್‌ಗೆ ʼಗೌರಿʼ ಚಿತ್ರದ ನಟನೆಗಾಗಿ ‘ಲುಮಿಯರ್ ನ್ಯಾಷನಲ್ ಅವಾರ್ಡ್’ ಕೂಡಾ ದೊರೆತಿದೆ.

ಈ ಸುದ್ದಿಯನ್ನೂ ಓದಿ: Aishwarya Rai: ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲೂ ಭಾರತೀಯ ಸಂಸ್ಕೃತಿ ಮೆರೆದ ಐಶ್‌; ವಿಶ್ವ ಸುಂದರಿಯ ನಮಸ್ತೆಗೆ ಮನಸೋತ ನೆಟ್ಟಿಗರು