Saturday, 23rd November 2024

ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಅಂಪೈರ್‌, ಮ್ಯಾಚ್‌ ರೆಫ‌ರಿ ಪಟ್ಟಿ ಪ್ರಕಟ

Women’s T20 World Cup

ದುಬೈ: ಅಕ್ಟೋಬರ್‌ 3 ರಿಂದ ದುಬೈಯಲ್ಲಿ ಆರಂಭಗೊಳ್ಳಲಿರುವ ಮಹಿಳಾ ಟಿ20 ವಿಶ್ವಕಪ್‌(Women’s T20 world Cup) ಕ್ರಿಕೆಟ್‌ ಕೂಟದ ಲೀಗ್‌ ಹಂತದ ಪಂದ್ಯಗಳಿಗೆ ಅಂಪೈರ್‌(women’s t20 world cup umpires) ಮತ್ತು ಮ್ಯಾಚ್‌ ರೆಫ‌ರಿಗಳನ್ನು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಪ್ರಕಟಿಸಿದೆ. ಲೀಗ್‌ ಹಂತದಲ್ಲಿ 23 ಪಂದ್ಯಗಳು ನಡೆಯಲಿದ್ದು ಮೂವರು ಮ್ಯಾಚ್‌ ರೆಫ‌ರಿ ಮತ್ತು 10 ಅಂಪೈರ್‌ಗಳು ಕರ್ತವ್ಯ ನಿರ್ವ ಹಿಸಲಿದ್ದಾರೆ. ಭಾರತದ ಜಿಎಸ್‌ ಲಕ್ಷ್ಮೀ(GS Lakshmi) ಅವರು ಮ್ಯಾಚ್‌ ರೆಫ‌ರಿಯಾಗಿ ಕರ್ತವ್ಯ ನಿಭಾಯಿಸಿದರೆ, ವೃಂದಾ ರಾತಿ(Vrinda Rathi) ಮುಖ್ಯ ಅಂಪೈರ್‌ ಆಗಿದ್ದಾರೆ. ಲೀಗ್‌ ಹಂತದ ಅಂತ್ಯದಲ್ಲಿ ಸೆಮಿಫೈನಲ್ಸ್‌ಗೆ ಅಂಪೈರ್‌ಗಳ ನೇಮಕ ಮಾಡಲಾಗುತ್ತದೆ. ಸೆಮಿ ಫೈನಲ್ಸ್‌ ಮುಗಿದ ಬಳಿಕ ಫೈನಲ್‌ ಪಂದ್ಯದ ಅಂಪೈರ್‌ಗಳಗಳನ್ನು ಅಂತಿಮಗೊಳಿಸಲಾಗುತ್ತದೆ.

ಕ್ಲೇರ್ ಪೊಲೊಸಾಕ್ ಅವರು ನಾಲ್ಕು ಹಿಂದಿನ ಮಹಿಳಾ T20 ವಿಶ್ವಕಪ್ ಪಂದ್ಯಾವಳಿಗಳಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕಿಮ್ ಕಾಟನ್ ಮತ್ತು ಜಾಕ್ವೆಲಿನ್ ವಿಲಿಯಮ್ಸ್‌ಗೆ ಇದು ನಾಲ್ಕನೇ ಟಿ20 ವಿಶ್ವಕಪ್‌ ಟೂರ್ನಿಯಾಗಿದೆ. ಇಬ್ಬರೂ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಹಿಂದಿನ ಆವೃತ್ತಿಯ ಫೈನಲ್‌ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು. ಜಿಂಬಾಬ್ವೆಯ ಸಾರಾ ದಂಬನೆವಾನಾ ಮಹಿಳಾ ಟಿ 20 ವಿಶ್ವಕಪ್‌ಗೆ ಅಂಪೈರ್ ಆಗಿ ಪಾದರ್ಪಣೆ ಮಾಡಲಿದ್ದಾರೆ.

ಅಂಪೈರ್‌ಗಳ ಪಟ್ಟಿ

ಲಾರೆನ್ ಅಜೆನ್‌ಬಾಗ್, ಕಿಮ್ ಕಾಟನ್, ಸಾರಾ ದಂಬನೆವಾನಾ, ಅನ್ನಾ ಹ್ಯಾರಿಸ್, ನಿಮಾಲಿ ಪೆರೆರಾ, ಕ್ಲೇರ್ ಪೊಲೊಸಾಕ್, ವೃಂದಾ ರಾತಿ, ಸ್ಯೂ ರೆಡ್‌ಫರ್ನ್, ಎಲೋಯಿಸ್ ಶೆರಿಡನ್, ಜಾಕ್ವಿಲಿನ್ ವಿಲಿಯಮ್ಸ್. ಪಂದ್ಯದ ರೆಫ್ರಿಗಳು: ಶಾಂಡ್ರೆ ಫ್ರಿಟ್ಜ್, ಜಿಎಸ್ ಲಕ್ಷ್ಮಿ, ಮಿಚೆಲ್ ಪೆರೇರಾ.

ವಿಶ್ವಕಪ್‌ ಪಂದ್ಯಾವಳಿ ಅಕ್ಟೋಬರ್ 3 ರಿಂದ 20 ರವರೆಗೆ ನಡೆಯಲಿದೆ. ದುಬಾೖ ಮತ್ತು ಶಾರ್ಜಾದಲ್ಲಿ ಒಟ್ಟಾರೆ 23 ಪಂದ್ಯಗಳು ನಡೆಯಲಿವೆ. ಒಟ್ಟು 19 ದಿನ ಪಂದ್ಯಾವಳಿ ಸಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್‌ನಲ್ಲಿ ಮುಖಾಮುಖಿಯಾಗಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಕಣಕ್ಕಿಳಿಯಲಿದೆ.

ಭಾರತ ತಂಡ ಅಕ್ಟೋಬರ್ 4 ರಂದು ನ್ಯೂಜಿಲ್ಯಾಂಡ್​ ವಿರುದ್ಧ ಆಡುವ ಮೂಲಕ ತಮ್ಮ ಅಭಿಯಾನ ಆರಂಭಿಸಲಿದೆ. ಸಾಂಪ್ರದಾಯಿ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಅಕ್ಟೋಬರ್ 6 ರಂದು ಪಂದ್ಯವನ್ನಾಡಲಿದೆ. ಅಕ್ಟೋಬರ್ 13 ರಂದು ಆರು ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ಆಡಲಿದೆ. ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇದನ್ನೂ ಓದಿ NZ vs AFG: ವಿಕ್ರಮ್ ರಾಥೋರ್ ನ್ಯೂಜಿಲ್ಯಾಂಡ್‌ ತಂಡಕ್ಕೆ ಸಹಾಯಕ ಬ್ಯಾಟಿಂಗ್‌ ಕೋಚ್‌

ಪ್ರತಿಯೊಂದು ತಂಡವು ಬಣ ಹಂತದಲ್ಲಿ ನಾಲ್ಕು ಪಂದ್ಯಗಳನ್ನಾಡಲಿದ್ದು ಅಗ್ರ ಎರಡು ತಂಡಗಳು ಸೆಮಿಫೈನಲಿಗೇರಲಿವೆ. ಸೆಮಿಫೈನಲ್ಸ್‌ ಅ. 17 ಮತ್ತು 18ರಂದು ನಡೆಯಲಿದ್ದರೆ ದುಬಾೖಯಲ್ಲಿ ಅ. 20ರಂದು ಫೈನಲ್‌ ಜರಗಲಿದೆ. ಲೀಗ್​ ಹಂತದ ಯಾವುದೇ ಪಂದ್ಯಗಳಿಗೆ ಮೀಸಲು ದಿನವಿಲ್ಲ. ಕೇಲವ ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮಾತ್ರ ಮೀಸಲು ದಿನ ನಿಗದಿಯಾಗಿದೆ. ಪಂದ್ಯ ಟೈ ಆದರೆ ಸೂಪರ್‌ ಓವರ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈ ಆದರೆ ಇನ್ನೊಂದು ಸೂಪರ್‌ ಓವರ್‌ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್‌ ಓವರ್‌ ಜಾರಿಯಲ್ಲಿರುತ್ತದೆ.