Friday, 22nd November 2024

MLA Munirathna: ಅತ್ಯಾಚಾರ ಪ್ರಕರಣ; ಶಾಸಕ ಮುನಿರತ್ನ 12 ದಿನ ಎಸ್‌ಐಟಿ ಕಸ್ಟಡಿಗೆ

MLA Munirathna

ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಮುನಿರತ್ನ (MLA Munirathna) ಅವರನ್ನು ಅಕ್ಟೋಬರ್ 5ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ನಗರದ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಎಸ್‌ಐಟಿ ಅಧಿಕಾರಿಗಳು ಕೋರ್ಟ್‌ನಿಂದ ಬಾಡಿ ವಾರಂಟ್ ಮೇಲೆ ಎಸ್‌ಐಟಿ ಕಸ್ಟಡಿಗೆ ನೀಡಲು ಕೋರಿದ್ದರು. ಹೀಗಾಗಿ 12 ದಿನ ಶಾಸಕ ಮುನಿರತ್ನರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ.

ಶಾಸಕ ಮುನಿರತ್ನ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಕಸ್ಟಡಿಗೆ ನೀಡಿದ ಹಿನ್ನೆಲೆಯಲ್ಲಿ ಆದೇಶದ ಪ್ರತಿ ಪಡೆದು ಎಸ್‌ಐಟಿ ತಂಡ ಪರಪ್ಪನ ಅಗ್ರಹಾರ ಜೈಲಿನತ್ತ ಹೊರಟಿದ್ದಾರೆ. ಶಾಸಕನನ್ನು ಸಿಐಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.

ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣ ಅವರಿಗೆ ಸುತ್ತಿಕೊಂಡಿತ್ತು. ಹೀಗಾಗಿ ಪೊಲೀಸರು ಸೆ.21ರಂದು ಕೋರ್ಟ್​ಗೆ ಹಾಜರುಪಡಿಸಿದ್ದರು. ಈ ವೇಳೆ ಅವರಿಗೆ ಅ. 5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ, ಹೆಚ್ಚಿನ ವಿಚಾರಣೆಗಾಗಿ ಇದೀಗ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ.

ಕೊಲೆ ಬೆದರಿಕೆ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಒಕ್ಕಲಿಗ ಸಮುದಾಯದ ನಿಯೋಗ ಸಿಎಂಗೆ ಮನವಿ ಸಲ್ಲಿಸಿತ್ತು. ಬಳಿಕ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು.

ಏನಿದು ಪ್ರಕರಣ?

2020 ರಿಂದ 2022ರವರೆಗೆ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್​ಮೇಲ್​ ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ 40 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಸಂತ್ರಸ್ತೆ ದೂರಿನ ಆಧಾರದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆ ಪೊಲೀಸರು ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್​ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ | Muda Case: ಸರ್ಕಾರ ಅಭದ್ರಗೊಳಿಸುವ ಬಿಜೆಪಿ-ಜೆಡಿಎಸ್ ಪ್ರಯತ್ನಕ್ಕೆ ಸೋಲು ಖಚಿತ: ಸಿದ್ದರಾಮಯ್ಯ

ಘಟನೆ ಸಂಬಂಧ ಶಾಸಕ ಮುನಿರತ್ನ ಸೇರಿ 7 ಜನರ ವಿರುದ್ಧ FIR ದಾಖಲಾಗಿತ್ತು. ಆರ್​.ಆರ್​.ನಗರ ಬಿಜೆಪಿ ಶಾಸಕ ಮುನಿರತ್ನ, ವಿಜಯ್​ ಕುಮಾರ್​, ಕಿರಣ್​​, ಲೋಹಿತ್​​, ಮಂಜುನಾಥ್​, ಲೋಕಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಖಾಸಗಿ ರೆಸಾರ್ಟ್​ನಲ್ಲಿ ಅತ್ಯಾಚಾರ ಮಾಡಿರುವುದಾಗಿ ಡಿವೈಎಸ್‌ಪಿ ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಮಹಿಳೆ ಆರೋಪ ಮಾಡಿ ಹೇಳಿಕೆ ನೀಡಿದ್ದರು.