Saturday, 23rd November 2024

ಡೊನಾಲ್ಡ್ ಟ್ರಂಪ್ ಸೋಲಿಸಿದ ಈ ಜೋ ಬೈಡನ್ ಯಾರು..?

ಅಮೆರಿಕದ ನಿಯೋಜಿತ ಅಧ್ಯಕ್ಷ “ಈತ ಯುದ್ಧ ಪ್ರಿಯ ಅಲ್ಲ, ಶಾಂತಿ ಪ್ರಿಯ” ಎಂದೇ ಪ್ರಸಿದ್ಧಿ ಪಡೆದ ಬೈಡನ್ ಬಗ್ಗೆ ಒಂದಿಷ್ಟು ಕಿರು ಮಾಹಿತಿ…

ವಿಶ್ವದ ಮಹಾಶಕ್ತಿ ಶಾಲಿ ರಾಷ್ಟ್ರ ಅಮೆರಿಕದ ನೂತನ ಅಧ್ಯಕ್ಷರಾಗಲಿರುವ ಮಾಜಿ ಉಪಾಧ್ಯಕ್ಷ ಮತ್ತು ಡೆಮೊಕ್ರೆಟಿಕ್ ಪಕ್ಷದ ನಾಯಕ ಜೋ ಬೈಡನ್ ಸಾಗಿ ಬಂದ ಹಾದಿ ಅತ್ಯಂತ ರೋಚಕ. ಅಮೆರಿಕದ ಡೆಲವರ್ ನಗರಸಭೆಯಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ ಬೈಡನ್ ಸ್ವಶ್ರಮ ಮತ್ತು ಜನ ಬೆಂಬಲದೊಂದಿಗೆ ಹಂತ ಹಂತವಾಗಿ ಮೇಲೆರುತ್ತಾ ಶ್ವೇತಭವನದ ಅಧ್ಯಕ್ಷ ಕುರ್ಚಿಗೇರಲು ಸಜ್ಜಾಗಿದ್ದಾರೆ.

ಜೋಸೆಫ್ ರಾಬಿನೆಟ್ಟೆ ಬೈಡನ್ ನವೆಂಬರ್ 20, 1942ರಲ್ಲಿ ಪೆನ್ಸಿಲೆನ್ವಿಯಾದ ಪುಟ್ಟ ಪಟ್ಟಣದಲ್ಲಿ ಜನರಿಸಿದರು. ನಂತರ ಅವರ ಕುಟುಂಬ ಡೆಲವೇರ್ ಪ್ರಾಂತ್ಯಕ್ಕೆ ಸ್ಥಳಾಂತರಗೊಂಡಿತು. ಅಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಪೂರ್ಣಗೊಳಿಸಿದ ಬೈಡನ್, ನಂತರ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದರು. ಕಾಲೇಜು ದಿನಗಳಿಂದಲೂ ಸಂಘಟನೆ ಮತ್ತು ಹೋರಾಟದ ಗುಣಗಳಿಂದಾಗಿ ನಾಯಕರಾಗಿ ಗುರುತಿಸಿಕೊಂಡಿದ್ದ ಬೈಡನ್, 1970ರಲ್ಲಿ ಡೆಲವೇರ್ ನಗರಸಭೆಯಿಂದ ಕೌನ್ಸಿಲರಾಗಿ ಆಯ್ಕೆ ಯಾದರು.

ಉತ್ತಮ ರೀತಿಯಲ್ಲಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿ ಜನ ಮೆಚ್ಚುಗೆಗೆ ಪಾತ್ರರಾಗಿರುವ ಇವರು 1973ರಲ್ಲಿ ಡೆಲವೇರ್‍ನಿಂದ ಸೆನೆಟ್ ಚುನಾವಣೆಗೆ ಸ್ಪರ್ಧಿಸಿದರು. ಭಾರೀ ಮತಗಳಿಂದ ವಿಜೇತರಾದ ಇವರು ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸೆನೆಟರ್ ಆದ ಆರು ನಾಯಕರ ಪೈಕಿ ಬೈಡನ್ ಒಬ್ಬರೆಂಬ ಮೆಚ್ಚುಗಾರಿಕೆಗೆ ಪಾತ್ರರಾದರು.

ಅಲ್ಲಿಂದ ಇವರ ರಾಜಕೀಯ ದಿಕ್ಕೆ ಬದಲಾಯ್ತು. 1973ರಿಂದ 2009ರವರೆಗೂ ಅವರು ಡೆಮೊಕ್ರೆಟಿಕ್ ಪಕ್ಷದಿಂದ ಅತ್ಯಂತ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡು ಅಪಾರ ಜನಮನ್ನಣೆಗೆ ಪಾತ್ರರಾದರು. ಬರಾಕ್ ಒಬಾಮಾ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಜನವರಿ 20,2009ರಿಂದ ಜನವರಿ 20, 2017ರವರೆಗೆ ಅಮೆರಿಕದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಬಿಡೆನ್ ಅವರು ಅಂತಾರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಸಮಿತಿ ಮತ್ತು ವಿದೇಶಾಂಗ ಸಂಬಂಧಗಳ ಸುಧಾರಣೆ ಸಮಿತಿ ಅಧ್ಯಕ್ಷರಾಗಿ ಅನೇಕ ಉತ್ತಮ ಕಾರ್ಯಗಳನ್ನು ಕೈಗೊಂಡರು. ಬೈಡನ್ ಉಪಾಧ್ಯಕ್ಷರಾಗಿದ್ದಾಗ ಭಾರತ ಸೇರಿದಂತೆ ವಿವಿಧ ದೇಶ ಗಳೊಂದಿಗಿನ ಸಂಬಂಧ ಸುಧಾರಣೆ ಹೊಸ ಮಜಲು ತಲುಪಿತು.

ಚಾಣಾಕ್ಷರು ಮತ್ತು ಶಾಂತ ಪ್ರಿಯರಾದ ಬೈಡನ್, ಇರಾಕ್ ಯುದ್ಧಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಯುಗೊ ಸ್ಲಾವಿಯಾ ಸಂಘರ್ಷ ಹಾಗೂ ವಿವಿಧ ದೇಶಗಳ ಅಂತರ್‍ಯುದ್ಧ ಬಗೆಹರಿಸಲು ಶ್ರಮಿಸಿದ್ದ ಇವರು, ಅಲ್ಲಿ ಹಿಂಸಾಚಾರ ನಿಯಂತ್ರಿ ಸಲು ನ್ಯಾಟೋ ಮತ್ತು ಶಾಂತಿಪಾಲನಾ ಪಡೆಗಳ ನಿಯೋಜನೆಗೆ ಕಾರಣರಾಗಿದ್ದರು.

ಯಾವುದೇ ದೇಶಗಳೊಂದಿಗೂ ವಿರೋಧ ಕಟ್ಟಿಕೊಳ್ಳಲು ಬಯಸದ ಬಿಡೆನ್ ರಾಜ ತಾಂತ್ರಿಕ ಮಾರ್ಗಗಳ ಮೂಲಕ ಕ್ಲಿಸ್ಟ ಸಮಸ್ಯೆ ಗಳನ್ನು ಬಗೆಹರಿಸುವಲ್ಲಿ ಕುಶಾಗ್ರಮತಿ. ಇವರಿಗೆ ಮೊದಲಿನಿಂದಲೂ ಭಾರತದ ಬಗ್ಗೆ ವಿಶೇಷ ಒಲವು. ತಾವು ಅಧ್ಯಕ್ಷರಾದರೆ ಭಾರತದ ಸಂಬಂಧ ಹಿಂದೆಂದೂ ಕಾಣದ ರೀತಿಯಲ್ಲೂ ಮತ್ತಷ್ಟು ಸದೃಢಗೊಳ್ಳಲಿದೆ ಎಂದು ಬಿಡೆನ್ ಚುನಾವಣಾ ಪ್ರಚಾರ ರ್ಯಾಲಿಗಳಲ್ಲಿ ಘೋಷಿಸಿದ್ದರು.

ಈಗ ಬೈಡನ್ ಅಮೆರಿಕ ಅಧ್ಯಕ್ಷರಾಗಲು ಸಿದ್ದತೆ ನಡೆಸಿದ್ದು, ಭಾರತ ಮತ್ತು ಅದರ ಮಿತ್ರ ರಾಷ್ಟ್ರಗಳಲ್ಲಿ ಅಪಾರ ಸಂತಸ ತಂದಿದೆ.