Friday, 22nd November 2024

Job Fair: ಉದ್ಯೋಗ ಆಯ್ಕೆಯ ಕುರಿತು ಸ್ಪಷ್ಟ ಚಿತ್ರಣವಿರಬೇಕು: ನಾಹಿದಾ ಜಮ್ ಜಮ್ ಸಲಹೆ

Job Fair

ತುಮಕೂರು: ವಿದ್ಯಾರ್ಥಿಗಳಿಗೆ ಉದ್ಯೋಗ ಆಯ್ಕೆಯ ಕುರಿತು ಸ್ಪಷ್ಟ ಚಿತ್ರಣವಿರಬೇಕು. ಉದ್ಯೋಗ ಸಂಸ್ಥೆಗಳು (Job Fair) ಬಯಸುವಂತಹ ಕೌಶಲಗಳಲ್ಲಿ ನೈಪುಣ್ಯತೆ ಹೊಂದಿರಬೇಕು ಎಂದು ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಹೇಳಿದರು.

ತುಮಕೂರು ವಿವಿಯು ಸಮರ್ಥನಂ ಅಂಗವಿಕಲರ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂದರ್ಶನಕ್ಕೆ ತೆರಳುವ ಮುನ್ನ ಸಂಸ್ಥೆಯ ಕುರಿತು ಸಾಮಾನ್ಯ ಜ್ಞಾನವಿರಬೇಕು. ಸಂಸ್ಥೆಗಳಿಗೆ ಅನುಗುಣವಾಗಿ ಬಯೋಡೇಟಾ ಸಿದ್ಧಪಡಿಸಿಕೊಳ್ಳಬೇಕು. ಎಲ್ಲರಿಗೂ ಒಂದೇ ತೆರನಾದ ಬಯೋಡೇಟಾ ಕೊಡಬಾರದು. ಉದ್ಯೋಗಾನುಭವ ಪಡೆಯುವ ಮನಸ್ಸಿನಿಂದ ಸಂದರ್ಶನಗಳಿಗೆ ಹಾಜರಾಗಿ ಉದ್ಯೋಗ ಪಡೆದುಕೊಳ್ಳಿ ಎಂದರು.

ಸಮರ್ಥನಂ ಅಂಗವಿಕಲರ ಸಂಸ್ಥೆ ಮುಖ್ಯ ಉದ್ಯೋಗ ನಿಯೋಜಕ ಸತೀಶ್ ಕೆ. ಮಾತನಾಡಿ, ದೇಶದ ಅಭಿವೃದ್ಧಿಗೆ ಗುಣಮಟ್ಟದ ಪದವೀಧರರ ಅಗತ್ಯವಿದೆ. ಮಹಿಳಾ ಶಿಕ್ಷಣಕ್ಕೆ ಒತ್ತು ಕೊಟ್ಟು, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಆರಂಭವಾದ ಸಂಸ್ಥೆ ಇದು ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ 17 ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಿದ್ದವು. 500ಕ್ಕೂ ಹೆಚ್ಚು ಪದವೀಧರರು ನೋಂದಾಯಿಸಿಕೊಂಡಿದ್ದರು. ಮೊದಲನೇ ಹಂತದ ಸಂದರ್ಶನಕ್ಕೆ 400 ಮಂದಿ ಹಾಜರಿದ್ದರು. ಇದರಲ್ಲಿ, 250 ಅಭ್ಯರ್ಥಿಗಳು ಎರಡನೇ ಹಂತದ ಸಂದರ್ಶನಕ್ಕೆ ಆಯ್ಕೆಯಾದರು. ಎರಡು ಹಾಗೂ ಮೂರನೆಯ ಹಂತದ ಸಂದರ್ಶನ ನೇರವಾಗಿ ಕಂಪನಿಗಳಲ್ಲೇ ನಡೆಯಲಿದೆ.

ಈ ಸುದ್ದಿಯನ್ನೂ ಓದಿ | Bengaluru News: ಗಮನಿಸಿ, ವಿವಿಧ ಯೋಜನೆಯಡಿ ಸಹಾಯಧನ, ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನಕುಮಾರ್ ಕೆ., ಉದ್ಯೋಗ ಕೋಶದ ನಿರ್ದೇಶಕ ಪ್ರೊ. ಪರಶುರಾಮ ಕೆ. ಜಿ., ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಂಗಳೂರು ಶಾಖೆಯ ಮುಖ್ಯಸ್ಥ ಸುಭಾಷ್ ಚಂದ್ರ ಎಸ್., ಉಪನ್ಯಾಸಕ ವಿನಾಯಕ್ ಪಿ. ಎಲ್. ಉಪಸ್ಥಿತರಿದ್ದರು.