Friday, 22nd November 2024

MUDA Case: ಇಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಎಂ ವಿರುದ್ಧ ದೂರಿಗೆ ಜೀವ

CM Siddaramaiah

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ (MUDA Case, MUDA Scam) ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್‌ (high court) ನಿನ್ನೆ ಎತ್ತಿಹಿಡಿದಿದ್ದು, ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ದೂರುದಾರರು ಸಲ್ಲಿಸಿದ ಅರ್ಜಿಗಳಿಗೆ ಜೀವ ಬರಲಿದೆ. ಸಿಎಂ ವಿರುದ್ಧದ ತನಿಖೆಯನ್ನು ಯಾರಿಗೆ ವಹಿಸಬೇಕು ಎಂಬ ಬಗ್ಗೆ ಇಂದು ವಾದವಿವಾದಗಳು ಶುರುವಾಗಲಿದೆ.

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಈಗ ಎಫ್‌ಐಆರ್ ಸಲ್ಲಿಸಲು ದೂರುದಾರರು ಸ್ವತಂತ್ರರಾಗಿರುವುದರಿಂದ, ಅವರು ಹಾಗೆ ಮಾಡಬಹುದಾಗಿದೆ. ದೂರುದಾರರಾದ ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ಸಲ್ಲಿಸಿದ್ದ ಖಾಸಗಿ ದೂರುಗಳಿಗೆ ಮತ್ತೆ ಜೀವ ಬಂದಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ಎರಡು ಖಾಸಗಿ ದೂರುಗಳ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶದ ಪ್ರತಿ ಸಲ್ಲಿಸಲಿರುವ ದೂರುದಾರರು ಪ್ರಕರಣವನ್ನು ತನಿಖೆಗೆ ವಹಿಸುವಂತೆ ವಾದಿಸಲಿದ್ದಾರೆ.

ಸಿಎಂ ವಿರುದ್ಧ ತನಿಖೆ ಬಗ್ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ ಗಜಾನನ ಭಟ್ ತೀರ್ಮಾನಿಸಲಿದ್ದಾರೆ. ಯಾವ ಸಂಸ್ಥೆ ತನಿಖೆ ನಡೆಸಬೇಕೆಂದು ಕೋರ್ಟ್ ನಿರ್ಧರಿಸಲಿದೆ. ಕೋರ್ಟ್ ತನಿಖೆಗೆ ಆದೇಶ ನೀಡಿದರೆ ಸಿಎಂಗೆ ಸಂಕಷ್ಟ ಶುರುವಾಗಲಿದೆ. ಸಿಎಂ ವಿರುದ್ಧ ಎಫ್‌ಐಆರ್ ದಾಖಲಾಗಬಹುದು.

ಎಫ್​ಐಆರ್ ಭೀತಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸಹ, ಮುಂದಿನ ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಪರ ವಕೀಲರ ತಂಡ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಒಂದು ವೇಳೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ತಡೆಯಾಜ್ಞೆ ಸಿಗದಿದ್ದರೆ, ಸುಪ್ರೀಂಕೋರ್ಟ್ ಮೆಟ್ಟಿಲೇರಲೂ ಸಿದ್ದರಾಮಯ್ಯ ಪರ ವಕೀಲರ ತಂಡ ಸಿದ್ಧತೆ ನಡೆಸಿದೆ. ಎಫ್​ಐಆರ್ ದಾಖಲಾದರೂ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸಿಎಂ ಸಿದ್ದರಾಗಿದ್ದಾರೆ.

ಇದನ್ನೂ ಓದಿ: Muda Case: ಸರ್ಕಾರ ಅಭದ್ರಗೊಳಿಸುವ ಬಿಜೆಪಿ-ಜೆಡಿಎಸ್ ಪ್ರಯತ್ನಕ್ಕೆ ಸೋಲು ಖಚಿತ: ಸಿದ್ದರಾಮಯ್ಯ