ನವದೆಹಲಿ: ರೈತ ಸಂಘಟನೆಗಳ ದೀರ್ಘಕಾಲದ ಪ್ರತಿಭಟನೆಯ ನಂತರ ರದ್ದುಪಡಿಸಲಾದ 3 ವಿವಾದಾತ್ಮಕ ಕೃಷಿ ಕಾನೂನು (3 Farm laws)ಗಳನ್ನು ಸರ್ಕಾರ ಮರಳಿ ತರಬೇಕು ಎನ್ನುವ ಬಾಲಿವುಡ್ ನಟಿ, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಅವರ ವಿವಾದಾತ್ಮಕ ಹೇಳಿಕೆಯಿಂದ ಪಕ್ಷ ಅಂತರ ಕಾಯ್ದುಕೊಂಡಿದೆ. ಕಂಗನಾ ರಣಾವತ್ ಅವರ ಹೇಳಿಕೆಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಬಿಜೆಪಿ, ಪಕ್ಷದ ಪರವಾಗಿ ಇಂತಹ ಹೇಳಿಕೆ ನೀಡಲು ಕಂಗನಾ ಅವರಿಗೆ ಅಧಿಕಾರವಿಲ್ಲ. ಈ ಹೇಳಿಕೆ ಅವರ ವೈಯಕ್ತಿಕ ನಿಲುವು ಎಂದು ಸ್ಪಷ್ಟಪಡಿಸಿದೆ.
ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ವಿಡಿಯೊ ಸಂದೇಶದ ಮೂಲಕ ಈ ಸ್ಪಷ್ಟನೆ ನೀಡಿದ್ದಾರೆ. ಕಂಗನಾ ಅವರ ಹೇಳಿಕೆ ಕೃಷಿ ಮಸೂದೆಗಳ ಬಗೆಗಿನ ಪಕ್ಷದ ದೃಷ್ಟಿಕೋನವಲ್ಲ ಎಂದು ಹೇಳಿದ್ದಾರೆ. “ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಕೃಷಿ ಮಸೂದೆಗಳ ಬಗ್ಗೆ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದು ಅವರ ವೈಯಕ್ತಿಕ ಹೇಳಿಕೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಬಿಜೆಪಿ ಪರವಾಗಿ ಅಂತಹ ಹೇಳಿಕೆ ನೀಡಲು ಕಂಗನಾ ರಣಾವತ್ ಅವರಿಗೆ ಯಾವುದೇ ಅಧಿಕಾರವಿಲ್ಲ. ಇದು ಕೃಷಿ ಮಸೂದೆಗಳ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಚಿತ್ರಿಸುವುದಿಲ್ಲ. ಈ ಹೇಳಿಕೆಯನ್ನು ನಾವು ಒಪ್ಪುವುದಿಲ್ಲʼʼ ಎಂದು ಗೌರವ್ ಭಾಟಿಯಾ ತಿಳಿಸಿದ್ದಾರೆ.
Absolutely, my views on Farmers Laws are personal and they don’t represent party’s stand on those Bills. Thanks. https://t.co/U4byptLYuc
— Kangana Ranaut (@KanganaTeam) September 24, 2024
ಬಿಜೆಪಿ ವಕ್ತಾರರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಂಗನಾ ರಣಾವತ್ ಇದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ಒಪ್ಪಿಕೊಂಡಿದ್ದಾರೆ. “ಕೃಷಿ ಮಸೂದೆ ಬಗ್ಗೆ ನಾನು ಪ್ರಸ್ತಾವಿಸಿದ ಅಭಿಪ್ರಾಯಗಳು ವೈಯಕ್ತಿಕವಾದುದು. ಅದು ಆ ಮಸೂದೆಗಳ ಬಗ್ಗೆ ಪಕ್ಷದ ನಿಲುವನ್ನು ಪ್ರತಿನಿಧಿಸುವುದಿಲ್ಲ” ಎಂದು ಕಂಗನಾ ರಣಾವತ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಕಂಗನಾ ಹೇಳಿದ್ದೇನು?
“ಈ ಹೇಳಿಕೆ ವಿವಾದಾತ್ಮಕವಾಗಬಹುದು ಎಂದು ನನಗೆ ತಿಳಿದಿದೆ. ಆದರೆ 3 ಕೃಷಿ ಕಾನೂನುಗಳನ್ನು ಮರಳಿ ತರಬೇಕು. ಅದಕ್ಕಾಗಿ ರೈತರೇ ಇದನ್ನು ಒತ್ತಾಯಿಸಬೇಕು. 3 ಕಾನೂನುಗಳು ರೈತರಿಗೆ ಪ್ರಯೋಜನಕಾರಿಯಾಗಿವೆ. ಕೆಲವು ರಾಜ್ಯಗಳಲ್ಲಿ ರೈತ ಗುಂಪುಗಳ ಪ್ರತಿಭಟನೆಯಿಂದಾಗಿ ಸರ್ಕಾರವು ಅವುಗಳನ್ನು ರದ್ದುಪಡಿಸಿದೆ” ಎಂದು ಕಂಗನಾ ರಣಾವತ್ ಹೇಳಿದ್ದರು.
ಕಂಗನಾ ರಣಾವತ್ ಅವರ ಹೇಳಿಕೆಗೆ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ನಮ್ಮ ಪಕ್ಷವು ಅದನ್ನು ಎಂದಿಗೂ ಅನುಮತಿಸುವುದಿಲ್ಲ ಎಂದು ಹೇಳಿತ್ತು. 3 ಕರಾಳ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸುವಾಗ 750ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ಆ ಕಾನೂನುಗಳನ್ನು ಮತ್ತೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಸ್ಪಷ್ಟಪಡಿಸಿದ್ದರು.
“ಕೆಲವರು ವಿವಾದವನ್ನು ಸೃಷ್ಟಿಸಲು ಒಗ್ಗಿಕೊಂಡಿದ್ದಾರೆ ಮತ್ತು ಅವರ ಹೇಳಿಕೆಗಳಿಂದ ಬಿಜೆಪಿಗೆ ಲಾಭವಾಗುತ್ತದೆ. ಕಂಗನಾ ರೈತರು, ಪಂಜಾಬ್, ತುರ್ತು ಪರಿಸ್ಥಿತಿ ಮತ್ತು ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಲೇ ಇರುತ್ತಾರೆʼʼ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ಟೀಕಿಸಿದ್ದರು. ಮಾತ್ರವಲ್ಲ ಕಂಗನಾ ವಿರುದ್ಧ ಅನೇಕರು ಕಿಡಿ ಕಾರಿದ್ದರು.
ಈ ಸುದ್ದಿಯನ್ನೂ ಓದಿ: Kangana Ranaut : ಕೃಷಿ ಕಾನೂನುಗಳನ್ನು ವಾಪಸ್ ತಂದೇ ತರುತ್ತೇವೆ ಎಂದ ಕಂಗನಾ ರಣಾವತ್