ಇಸ್ಲಾಮಾಬಾದ್: ಇಳಿವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಮಧ್ಯ ವಯಸ್ಕ ಶಿಕ್ಷಕನನ್ನೇ ಪ್ರೀತಿಸಿ ಮದುವೆಯಾಗುವಂತಹ ಪ್ರಸಂಗಗಳನ್ನು ನಾವು ಸಿನಿಮಾ, ಧಾರಾವಾಹಿಗಳಲ್ಲಿ ನೋಡಿರುತ್ತೇವೆ. ಆದರೆ ಅದು ರೀಲ್ ಆಗಿರುತ್ತದೆ. ನಿಜ ಜೀವನದಲ್ಲಿ ಈ ರೀತಿ ಆಗಲು ಸಾಧ್ಯವಿಲ್ಲ ಎಂದು ನಾವು ಊಹಿಸುತ್ತೇವೆ. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಯುವತಿಯರು ಹೆಚ್ಚು ಸ್ಟೈಲಿಶ್ ಆಗಿರುವಂತಹ ಯುವಕರ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಅಂತಹದರಲ್ಲಿ ಮಧ್ಯವಯಸ್ಕರನ್ನು ಹೇಗೆ ಮದುವೆಯಾಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಇದೇ ರೀತಿಯ ಘಟನೆಗಳು ನಿಜ ಜೀವನದಲ್ಲಿಯೂ ಕೆಲವೊಮ್ಮೆ ನಡೆಯುತ್ತದೆ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಇದೇ ರೀತಿಯ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ವೈರಲ್ (Viral News) ಆಗುತ್ತಿದೆ.
ಪಾಕಿಸ್ತಾನದಲ್ಲಿ 20 ವರ್ಷದ ಯುವತಿಯೊಬ್ಬಳು ತನಗಿಂತ 32 ವರ್ಷ ದೊಡ್ಡವನಾದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಈ ವ್ಯಕ್ತಿ ಅವಳ ಕಾಲೇಜು ಪ್ರೊಫೆಸರಾಗಿದ್ದ. ಯುವತಿ ಧೈರ್ಯ ಮಾಡಿ ಪ್ರೊಫೆಸರ್ಗೆ ಪ್ರಪೋಸ್ ಮಾಡಿದ್ದಾಳೆ. ಆದರೆ ಅವನು ಆರಂಭದಲ್ಲಿ ಅವಳ ಪ್ರಸ್ತಾಪವನ್ನು ತಿರಸ್ಕರಿಸಿದ್ದಾನೆ. ಆದರೆ ಕೊನೆಗೂ ಪ್ರೊಫೆಸರ್ ಕೂಡ ಆಕೆಯನ್ನು ಪ್ರೀತಿಸಲು ಶುರುಮಾಡಿದ್ದಾನೆ. ನಂತರ ಅವರಿಬ್ಬರೂ ಮದುವೆಯಾಗಿದ್ದಾರೆ. ಈಗ, ಅವರು ಒಟ್ಟಿಗೆ ಸೇರಿ ಲಕ್ಷಾಂತರ ರೂ. ಸಂಪಾದಿಸುತ್ತಿದ್ದಾರೆ.
20 ವರ್ಷದ ಯುವತಿಯ ಹೆಸರು ಜೋಯಾ ನೂರ್ ಮತ್ತು ಆಕೆಯ ಪ್ರೊಫೆಸರ್ ಹೆಸರು ಸಾಜಿದ್ ಅಲಿ. ಈ ಕಥೆಗೆ ಸಂಬಂಧಿಸಿದ ಪೋಸ್ಟ್ ಸಾಮಾಜಿಕ ಮಾಧ್ಯಮವಾದ ಇನ್ಸ್ಟಾಗ್ರಾಮ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪಾಕಿಸ್ತಾನದಲ್ಲಿ ನಡೆದ ಈ ಘಟನೆ 2022ಕ್ಕಿಂತ ಹಿಂದಿನದು. 2022ರಲ್ಲಿ ಈ ದಂಪತಿ ಪಾಕಿಸ್ತಾನದ ಯೂಟ್ಯೂಬರ್ ಸೈಯದ್ ಬಾಸಿತ್ ಅಲಿ ಅವರೊಂದಿಗೆ ತಮ್ಮ ಪ್ರೀತಿಯ ಕಥೆಯನ್ನು ಹಂಚಿಕೊಂಡಿದ್ದಾರೆ. ಸದ್ಯ ಇದು ವೈರಲ್ ಆಗಿದೆ.
ಇದನ್ನೂ ಓದಿ: ಇಲ್ಲಿ ಮದುವೆಯಾದ ವಧು ಒಂದು ವಾರದವರೆಗೆ ನಗ್ನವಾಗಿರಬೇಕು!
“ನನಗಿಂತ 32 ವರ್ಷ ದೊಡ್ಡವರಾದ ನನ್ನ ಪ್ರೊಫೆಸರ್ ಸಾಜಿದ್ ಅಲಿ ಅವರನ್ನು ನಾನು ಪ್ರೀತಿಸುತ್ತಿದ್ದೆ. ಅದರ ನಂತರ ನಾನು ತಡಮಾಡದೆ ಅವರಿಗೆ ಪ್ರಪೋಸ್ ಮಾಡಿದೆ. ಆದರೆ ವಯಸ್ಸಿನ ವ್ಯತ್ಯಾಸವನ್ನು ಉಲ್ಲೇಖಿಸಿ ಆರಂಭದಲ್ಲಿ ಸಾಜಿದ್ ನನ್ನ ಪ್ರಸ್ತಾಪವನ್ನು ನಿರಾಕರಿಸಿದ್ದರು. ‘ನಾನು ನಿನಗಿಂತ 32 ವರ್ಷ ದೊಡ್ಡವನು, ಆದ್ದರಿಂದ ನಾವು ಮದುವೆಯಾಗಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು. ಆದರೆ ನಾನು ನನ್ನ ಪ್ರಯತ್ನಗಳನ್ನು ಮುಂದುವರಿಸಿದೆ ಮತ್ತು ಪದೇ ಪದೆ ಮದುವೆ ಪ್ರಸ್ತಾವ ಮುಂದಿಟ್ಟೆ. ಅಂತಿಮವಾಗಿ ಅವರು ಅದರ ಬಗ್ಗೆ ಯೋಚಿಸಲು ಒಂದು ವಾರ ಕೇಳಿದರು. ಒಂದು ವಾರದ ನಂತರ, ಸಾಜಿದ್ ನನ್ನನ್ನು ಮದುವೆಯಾಗಲು ನಿರ್ಧರಿಸಿದರುʼʼ ಎಂದು ಜೋಯಾ ನೂರ್ ತಿಳಿಸಿದ್ದಾಳೆ. ಕೆಲವರು ಇವರ ನಿರ್ಧಾರವನ್ನು ಸ್ವಾಗತಿಸಿದರೆ ಕೆಲವರು ಟೀಕಿಸಿದ್ದಾರೆ. ಒಟ್ಟಿನಲ್ಲಿ ಜೋಯಾ ನೂರ್ – ಸಾಜಿದ್ ಅಲಿ ಅವರ ಲವ್ ಸ್ಟೋರಿ ನೆಟ್ಟಿಗರ ಗಮನ ಸೆಳೆದಿದೆ.