Friday, 22nd November 2024

Anura Kumara Dissanayake: ಶ್ರೀಲಂಕಾ ಸಂಸತ್ತು ವಿಸರ್ಜಿಸಿದ ನೂತನ ಅಧ್ಯಕ್ಷ ಅನುರಾ ಕುಮಾರಾ ದಿಸ್ಸಾನಾಯಕೆ; ನವೆಂಬರ್‌ನಲ್ಲಿ ಚುನಾವಣೆ

Anura Kumara Dissanayake

ಕೊಲಂಬೊ: ಎಡಪಂಥೀಯ ನಾಯಕ, ಶ್ರೀಲಂಕಾದ ನೂತನ ಅಧ್ಯಕ್ಷರಾಗಿ (Srilanka President) ಆಯ್ಕೆಯಾದ ಅನುರಾ ಕುಮಾರಾ ದಿಸ್ಸಾನಾಯಕೆ (Anura Kumara Dissanayake) ಅವರು ಮಂಗಳವಾರ (ಸೆಪ್ಟೆಂಬರ್‌ 24) ಸಂಸತ್ತನ್ನು ವಿಸರ್ಜಿಸಿದ್ದಾರೆ. ನವೆಂಬರ್ 14ರಂದು ಚುನಾವಣೆ ನಡೆಯಲಿದೆ.

ಮಾರ್ಕ್ಸ್‌ವಾದಿ ನಿಲುವು ಹೊಂದಿರುವ ಪೀಪಲ್ಸ್ ಲಿಬರೇಶನ್ಸ್‌ ಫ್ರಂಟ್‌ ಪಕ್ಷ (People’s Liberation Front-JVP)ದ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಸೆಪ್ಟೆಂಬರ್‌ 22ರಂದು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾದರು. ಸೆಪ್ಟೆಂಬರ್‌ 23ರಂದು ಪ್ರಮಾಣ ವಚನ ಸ್ವೀಕರಿಸಿದ ಅವರು ಇದೀಗ ಮಹತ್ವದ ಘೋಷಣೆ ಹೊರಡಿಸಿದ್ದಾರೆ.

ಮಂಗಳವಾರ ತಡರಾತ್ರಿ ಅವರು ವಿಶೇಷ ಗೆಜೆಟ್ ಅಧಿಸೂಚನೆಗೆ ಸಹಿ ಹಾಕಿದರು. ಆ ಮೂಲಕ 225 ಸದಸ್ಯರ ಶಾಸಕಾಂಗವನ್ನು ವಜಾಗೊಳಿಸಿದರು. ನಿಗದಿತ ಸಮಯಕ್ಕಿಂತ ಸುಮಾರು ಒಂದು ವರ್ಷ ಮುಂಚಿತವಾಗಿಯೇ ನವೆಂಬರ್ 14ರಂದು ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಆಗಸ್ಟ್‌ವರೆಗೆ ಅವಧಿ ಹೊಂದಿದ್ದ ಸಂಸತ್ತನ್ನು ವಿಸರ್ಜಿಸುವ ಆದೇಶವು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. 2020ರ ಆಗಸ್ಟ್‌ನಲ್ಲಿ ಶ್ರೀಲಂಕಾ ಸಂಸತ್ತಿಗೆ ಚುನಾವಣೆ ನಡೆದಿತ್ತು.

ಪ್ರಧಾನಿಯಾಗಿ ಹರಿಣಿ ಅಮರಸೂರ್ಯ

54 ವರ್ಷದ ಸಂಸದೆ ಹರಿಣಿ ಅಮರಸೂರ್ಯ ಅವರು ಮಂಗಳವಾರ ಶ್ರೀಲಂಕಾದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೆಚ್ಚುವರಿಯಾಗಿ ಇವರು ನ್ಯಾಯಾಂಗ, ಶಿಕ್ಷಣ, ಆರೋಗ್ಯ, ಮಹಿಳಾ ವ್ಯವಹಾರಗಳು ಮತ್ತು ಕಾರ್ಮಿಕ ಖಾತೆಗಳನ್ನು ನಿರ್ವಹಿಸಲಿದ್ದಾರೆ. ಅನುರಾ ಕುಮಾರ ದಿಸ್ಸಾನಾಯಕೆ ಅವರು ಹರಿಣಿ ಅಮರಸೂರ್ಯ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಸಮಾಜಶಾಸ್ತ್ರ ಉಪನ್ಯಾಸಕಿಯಾಗಿರುವ ಹರಿಣಿ ಅಮರಸೂರ್ಯ ಲಿಂಗ ಸಮಾನತೆ ಮತ್ತು ಅಲ್ಪಸಂಖ್ಯಾತ ಹಕ್ಕುಗಳಿಗೆ ಹೋರಾಡುವ ಮೂಲಕ ಜನಪ್ರಿಯರಾಗಿದ್ದಾರೆ.

ಇಬ್ಬರು ಸಚಿವರಿಂದ ಅಧಿಕಾರ ಸ್ವೀಕಾರ

ಇವರೊಂದಿಗೆ ಇಬ್ಬರು ಸಚಿವರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸದರಾದ ವಿಜಿತಾ ಹೆರಾತ್ ಮತ್ತು ಲಕ್ಷ್ಮಣ್ ನಿಪುಣರಾಚಿ ಅವರು ಸಂಪುಟ ಸಚಿವರಾಗಿ ನೇಮಕವಾಗಿದ್ದಾರೆ. ವಿಜಿತಾ ಹೆರಾತ್ ಅವರನ್ನು ಸಾರ್ವಜನಿಕ ಭದ್ರತೆಯ ಹೆಚ್ಚುವರಿ ಜವಾಬ್ದಾರಿಗಳೊಂದಿಗೆ ಹೊಸ ವಿದೇಶಾಂಗ ಸಚಿವರನ್ನಾಗಿ ಮಾಡಲಾಗಿದೆ. ಸಂಸತ್ತಿನ ಚುನಾವಣೆ ನಡೆಯುವವರೆಗೆ ಇಬ್ಬರೂ ಹಂಗಾಮಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅನುರಾ ಕುಮಾರಾ ದಿಸ್ಸಾನಾಯಕೆ ರಕ್ಷಣಾ, ಇಂಧನ ಮತ್ತು ಕೃಷಿ ಖಾತೆಗಳನ್ನು ಉಳಿಸಿಕೊಂಡಿದ್ದಾರೆ. “ಶ್ರೀಲಂಕಾದ ಇತಿಹಾಸದಲ್ಲೇ ಅತ್ಯಂತ ಚಿಕ್ಕ ಕ್ಯಾಬಿನೆಟ್ ಅನ್ನು ನಾವು ಹೊಂದಿದ್ದೇವೆ” ಎಂದು ಪಕ್ಷದ ಸದಸ್ಯ ನಮಲ್ ಕರುಣರತ್ನೆ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Anura Kumara Dissanayake: ಭಾರತದ ಬಗ್ಗೆ ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ನಿಲುವು ಏನಿರಬಹುದು?

ಭಾರಿ ಅಂತರದಿಂದ ಗೆಲುವು

ಪೀಪಲ್ಸ್ ಲಿಬರೇಶನ್ ಫ್ರಂಟ್‌ನ 55 ವರ್ಷದ ನಾಯಕ ಅನುರಾ ಕುಮಾರ ದಿಸ್ಸಾನಾಯಕ ಅವರು ಶೇಕಡಾ 42.31ರಷ್ಟು ಮತಗಳೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದರು. ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಶೇ. 32.76 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದರು. ರಾಷ್ಟ್ರದ ದುರ್ಬಲ ಆರ್ಥಿಕ ಚೇತರಿಕೆಯ ನೇತೃತ್ವ ವಹಿಸಿದ್ದ ವಿಕ್ರಮಸಿಂಘೆ ಶೇ. 17 ಮತಗಳೊಂದಿಗೆ ಮೂರನೇ ಸ್ಥಾನ ಪಡೆದರು.