Friday, 22nd November 2024

Muda Case: ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

CM Siddaramaiah

ಬೆಂಗಳೂರು: ಮುಡಾ ಹಗರಣದಲ್ಲಿ (Muda Case) ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ಸಿಎಂ ವಿರುದ್ಧ ಸಲ್ಲಿಕೆಯಾಗಿದ್ದ ಖಾಸಗಿ ದೂರಿನ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಬುಧವಾರ ಪ್ರಕಟವಾಗಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿ ಕೋರ್ಟ್‌ ತೀರ್ಪು ನೀಡಿದ್ದು, ತನಿಖೆಯ ಹೊಣೆಯನ್ನು ಮೈಸೂರು ಲೋಕಾಯುಕ್ತಕ್ಕೆ ವಹಿಸಲಾಗಿದೆ.

ಮೂರು ತಿಂಗಳಲ್ಲಿ (ಡಿ.24ರೊಳಗೆ) ತನಿಖೆ ನಡೆಸಿ ವರದಿ ನೀಡಲು ಮೈಸೂರು ಲೋಕಾಯುಕ್ತ ಎಸ್‌ಪಿಗೆ ಕೋರ್ಟ್‌ ನಿರ್ದೇಶನ ನೀಡಿದೆ. ಸಿಆರ್‌ಪಿಸಿ ಸೆ.156(3) ಅಡಿ ತನಿಖೆಗೆ ಆದೇಶ ನೀಡಲಾಗಿದೆ. ಹೀಗಾಗಿ ಇಂದು ಅಥವಾ ನಾಳೆ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾಗುವ ಸಾಧ್ಯತೆ ಇದೆ.

ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ 82ನೇ ಸಿಸಿಎಚ್‌ ಜನಪ್ರತಿನಿಧಿಗಳ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ನಡೆಸಿ ತೀರ್ಪು ನೀಡಿದ್ದಾರೆ.

ಈ ಹಿಂದೆ ರಾಜ್ಯಪಾಲರ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತನ್ನ ವಿಚಾರಣೆ ಮುಕ್ತಾಯವಾಗುವವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿರುವ ತೀರ್ಪಿಗೆ ತಡೆ ನೀಡಿತ್ತು. ಇದೀಗ ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿರುವುದರಿಂದ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ.

ಈ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ್‌ ಕುಮಾರ್‌ ಪ್ರತಿಕ್ರಿಯಿಸಿ, ಕೋರ್ಟ್‌ ಇಂದು ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಪ್ರಕರಣದಲ್ಲಿ ಪ್ರಾಮಾಣಿಕ ತನಿಖೆ ಆಗಬೇಕು. ಮುಂದಿನ ದಿನಗಳಲ್ಲಿ ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಲು ನಾವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಮೂಲಕ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಏನಿದು ಮುಡಾ ಹಗರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ನಿವೇಶನ ಹಂಚಿಕೆಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂಬ ಅರೋಪ ಕೇಳಿಬಂದಿತ್ತು. ಬಡಾವಣೆ ಅಭಿವೃದ್ಧಿಗಾಗಿ ಭೂಮಿ ನೀಡಿದವರಿಗೆ ಶೇ.50 ನಿವೇಶನ ಅಥವಾ ಪರ್ಯಾಯ ನಿವೇಶನ ನೀಡಲು ಮುಡಾ ಯೋಜನೆ ರೂಪಿಸಿತ್ತು. ಆದರೆ ಪರಿಹಾರ ನೀಡುವ ವೇಳೆ ಅರ್ಹತೆಗಿಂತ ಹೆಚ್ಚು ಮೌಲ್ಯದ ನಿವೇಶನ ನೀಡಲಾಗಿದೆ. ಈ ರೀತಿ ಸುಮಾರು 5 ಸಾವಿರ ನಿವೇಶನಗಳು ಅಕ್ರಮವಾಗಿ ಮುಂಜೂರಾಗಿದೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಹಂಚಿಕೆಯಾಗಿರುವ ನಿವೇಶನಗಳ ಮೌಲ್ಯವು, ಅವರಿಂದ ಸ್ವಾಧೀನ ಮಾಡಿಕೊಂಡ ಭೂಮಿಗಿಂತ ಹೆಚ್ಚಾಗಿದೆ ಎಂಬುವುದು ಪ್ರಮುಖ ಆರೋಪವಾಗಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಪರಿಹಾರ ಪಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಬಿಜೆಪಿ ಕಾಲದಲ್ಲಿಯೇ ತಮ್ಮ ಕುಟುಂಬಕ್ಕೆ ನಿವೇಶನ ಹಂಚಿಕೆಯಾಗಿದೆ, ಕಾನೂನು ಪ್ರಕಾರವೇ ತಮಗೆ ನಿವೇಶನಗಳನ್ನು ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಮೈಸೂರು ತಾಲೂಕಿನ ಕೆಸರೆ ಗ್ರಾಮದಲ್ಲಿ ಸಿಎಂ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ 3.16 ಎಕರೆ ಭೂಮಿಯನ್ನು ದೇವನೂರು ಬಡಾವಣೆ ಅಭಿವೃದ್ಧಿಗೆ ಮುಡಾ ಸ್ವಾಧೀನಪಡಿಸಿಕೊಂಡಿತ್ತು. ನಂತರ ಅದಕ್ಕೆ ಪರಿಹಾರವಾಗಿ 50:50 ಅನುಪಾತದಲ್ಲಿ ನಿವೇಶನ ಮಂಜೂರು ಮಾಡಿತ್ತು. ಸಿಎಂ ಪತ್ನಿಗೆ ಪರಿಹಾರವಾಗಿ ಪ್ರತಿಷ್ಠಿತ ವಿಜಯ ನಗರ ಬಡಾವಣೆಯಲ್ಲಿ 38,284 ಚದರ ಅಡಿ ಅಳತೆಯ ನಿವೇಶನವನ್ನು ಮುಡಾ ನೀಡಿತ್ತು. ಎರಡು ನಿವೇಶನಗಳು ಪರಿಹಾರ ಪಡೆಯುವ ಬದಲು ಸಿಎಂ ಸಿದ್ದರಾಮಯ್ಯ ಕುಟುಂಬ 14 ನಿವೇಶನಗಳನ್ನು ಪಡೆದಿದೆ ಎಂಬ ಆರೋಪವಿದೆ.

ಈ ಸುದಿಯನ್ನೂ | MUDA Case Timeline: ಮುಡಾ ಹಗರಣದಲ್ಲಿ ಇದುವರೆಗೂ ಏನೇನಾಯ್ತು? ಸಂಪೂರ್ಣ ವಿವರ ಇಲ್ಲಿದೆ

ಇನ್ನು ಸಿಎಂ ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಅಲ್ಲದೇ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೂ ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ಕೂಡ ಸಲ್ಲಿಸಿದ್ದರು.