Sunday, 24th November 2024

Badlapur Assault Case: ಬದ್ಲಾಪುರ ಎನ್‌ಕೌಂಟರ್‌; ಪೊಲೀಸರ ವಾದ ನಂಬೋಕೆ ಸಾಧ್ಯವೇ ಇಲ್ಲ- ಹೈಕೋರ್ಟ್‌ ಫುಲ್‌ ಗರಂ

Police Firing

ಮುಂಬೈ: ಮಹಾರಾಷ್ಟ್ರದ ಬದ್ಲಾಪುರ(Badlapur Assault Case) ಪ್ರದೇಶದ ಶಾಲೆಯೊಂದರಲ್ಲಿ ಇಬ್ಬರು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಸೇರಿದ್ದ ಅಕ್ಷಯ್ ಶಿಂಧೆ(Akshay sindhe) ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌(Bombay high court) ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. ಅಕ್ಷಯ್‌ ಶಿಂಧೆ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಪೊಲೀಸರು ಹೇಳಿರುವ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್‌ ಖಡಕ್‌ ಆಗಿ ಹೇಳಿದೆ.

ತಮ್ಮ ಮಗನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಶಿಂಧೆ ಪೋಷಕರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿ ನ್ಯಾ. ರೇವತಿ ಮೊಹಿತೆ ದೇರೆ ಮತ್ತು ಪೃತ್ವಿರಾಜ್‌ ಚವಾಣ್‌ ಇದ್ದ ನ್ಯಾಯಪೀಠ, ಶಿಂಧೆ ಮೇಲೆ ಗುಂಡು ಹಾರಿಸುವಂತಹ ಪ್ರಮೇಯ ಏನು ಎದುರಾಗಿತ್ತು ಎಂದು ಪ್ರಶ್ನಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ಯಾರನ್ನು ಅಪರಾಧಿ ಎಂದು ಪೊಲೀಸರು ನಿರ್ಧರಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಜಾರಿಯಾಗಬೇಕು. ಇದೊಂದು ಅತ್ಯಂತ ಕೆಟ್ಟ ಉದಾಹರಣೆಯಾಗಿದೆ ಎಂದು ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಶಿಂದೆ ಪೊಲೀಸರಿಂದ ಬಂದೂಕು ಕಸಿದು ಗುಂಡು ಹಾರಿಸಿದ್ದು, ಪೊಲೀಸರೊಬ್ಬರು ತೊಡೆಗೆ ಗಂಭೀರ ಗಾಯಗಳಾಗಿವೆ ಎಂದು ಸರ್ಕಾರಿ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ. ಇದು ನಂಬಲು ಬಹಳ ಕಷ್ಟವಾದ ವಿಚಾರ. ಸಾಮಾನ್ಯ ವ್ಯಕ್ತಿ ತರಬೇತಿ ಪಡೆಯದ ಹೊರತು ಪಿಸ್ತೂಲ್ ಅನ್ನು ಹಾರಿಸಲು ಸಾಧ್ಯವಿಲ್ಲ. ನಿಮ್ಮ ಪ್ರಕಾರ, ಅವನು ಮೂರು ಗುಂಡುಗಳನ್ನು ಹಾರಿಸಿದನು. ಒಬ್ಬನೇ ಪೊಲೀಸ್ ಅಧಿಕಾರಿಗೆ ಗಾಯಗಳಾಗಿವೆ. ಹಾಗಿದ್ದರೆ ಉಳಿದವರೆಲ್ಲ ಹೇಗೆ ಸುರಕ್ಷಿತವಾಗಿದ್ದಾರೆ ಎಂದು ಕೋರ್ಟ್‌ ಖಾರವಾಗಿ ಪ್ರಶ್ನಿಸಿದೆ.

ಏನಿದು ಘಟನೆ?

ಮಹಾರಾಷ್ಟ್ರದ ಬದ್ಲಾಪುರ ಪ್ರದೇಶದ ಶಾಲೆಯೊಂದರಲ್ಲಿ ಇಬ್ಬರು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಲು ಸೇರಿದ್ದ ಅಕ್ಷಯ್ ಶಿಂಧೆ ಎಂಬ ವ್ಯಕ್ತಿಯನ್ನು ಪೊಲೀಸರು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿಆತನನ್ನು ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಶಿಂಧೆ ಸಂಜೆ 5.30 ರ ಸುಮಾರಿಗೆ ಜೈಲಿನಿಂದ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಪೊಲೀಸರ ಆಯುಧವನ್ನು ಕಸಿದುಕೊಂಡು ಗುಂಡು ಗುಂಡು ಹಾರಿಸಿದ್ದ. ಈ ವೇಳೆ ಹಲವಾರು ಸುತ್ತು ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಹಲವಾರು ಪೊಲೀಸ್‌ ಅಧಿಕಾರಿಗಳು ಸಹ ಗಾಯಗೊಂಡಿದ್ದಾರೆ.

ತನಿಖೆಗಾಗಿ ತಲೋಜಾ ಜೈಲಿನಿಂದ ಬದ್ಲಾಪುರಕ್ಕೆ ಕರೆದೊಯ್ಯುತ್ತಿದ್ದ ಶಿಂಧೆ ಮೇಲೆ ಪೊಲೀಸರು ರಕ್ಷಣೆಗಾಗಿ ಗುಂಡು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.

ಶಾಲಾ ಶೌಚಾಲಯದಲ್ಲಿ ನಾಲ್ಕು ಮತ್ತು ಐದು ವರ್ಷದ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಂಧೆಯನ್ನು ಆಗಸ್ಟ್ 17 ರಂದು ಬಂಧಿಸಲಾಗಿತ್ತು. ಈ ಪ್ರದೇಶದಲ್ಲಿ ನಡೆದ ಪ್ರತಿಭಟನೆಗಳ ನಡುವೆ ಈ ಘಟನೆಯು ಭಾರಿ ಆಕ್ರೋಶ ಹುಟ್ಟುಹಾಕಿತು. ಶಿಂಧೆ ಶಾಲೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಸ್ಥಳೀಯ ಪೊಲೀಸರು ಆರಂಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿದ್ದರು, ಆದರೆ ಪೊಲೀಸ್ ತನಿಖೆಯಲ್ಲಿ ಗಂಭೀರ ಲೋಪಗಳ ಬಗ್ಗೆ ಸಾರ್ವಜನಿಕ ಆಕ್ರೋಶದ ನಂತರ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿತು.

ಈ ಸುದ್ದಿಯನ್ನೂ ಓದಿ: Badlapur Assault Case: ಬದ್ಲಾಪುರ ಪ್ರಕರಣದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದೇಕೆ? ವಕೀಲರು ನೀಡಿದ ಸ್ಪಷ್ಟನೆ ಇಲ್ಲಿದೆ