Friday, 22nd November 2024

Nandini Ghee: ತಿರುಪತಿ ಲಡ್ಡು ವಿವಾದ ಬಳಿಕ ಮತ್ತಷ್ಟು ಹೆಚ್ಚಿದೆ ʼನಂದಿನಿʼ ಬ್ರಾಂಡ್‌ ಇಮೇಜ್‌!

Nandini Ghee

ತಿರುಪತಿ ದೇವಸ್ಥಾನದಲ್ಲಿ (Tirupati temple) ಬಳಸಲಾಗುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಅಂಶ ಪತ್ತೆಯಾಗಿ ವಿವಾದ ಉಂಟಾದ ಬಳಿಕ ಆಂಧ್ರ ಪ್ರದೇಶ ಸರ್ಕಾರ (Andhra Pradesh government) ಲಡ್ಡುಗಳಿಗೆ ಬಳಸುವ ತುಪ್ಪವನ್ನು ಪೂರೈಸುವ ಕಂಪನಿಯನ್ನು ಬದಲಾಯಿಸಿದೆ. ತಿರುಮಲ ತಿರುಪತಿ ದೇವಸ್ಥಾನಂ (TTD) ಲಡ್ಡುಗಳಿಗೆ ‘ನಂದಿನಿ’ ತುಪ್ಪವನ್ನು (Nandini Ghee) ಬಳಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಗೆ ಪೂರೈಕೆ ಆದೇಶವನ್ನೂ ನೀಡಲಾಗಿದೆ.

ಉತ್ತರ ಭಾರತದಲ್ಲಿ ಅಮುಲ್, ಮದರ್ ಡೈರಿ ಹಾಲಿನ ಉತ್ಪನ್ನಗಳ ಜನಪ್ರಿಯತೆಯಂತೆಯೇ ‘ನಂದಿನಿ’ ದಕ್ಷಿಣ ಭಾರತದಲ್ಲಿ ಮನೆಮಾತಾಗಿದೆ. ‘ನಂದಿನಿ’ ಕರ್ನಾಟಕದ ಅತಿ ದೊಡ್ಡ ಹಾಲಿನ ಬ್ರ್ಯಾಂಡ್ ಆಗಿದ್ದು, ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಮತ್ತು ಗೋವಾದಲ್ಲಿಯೂ ಪ್ರಸಿದ್ಧವಾಗಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (KMF) ಒಡೆತನದಲ್ಲಿದೆ ‘ನಂದಿನಿ’ ಬ್ರ್ಯಾಂಡ್ . ಕೆಎಂಎಫ್ ಗುಜರಾತ್‌ನ ಅಮುಲ್ ಅನಂತರ ದೇಶದ ಎರಡನೇ ಅತಿದೊಡ್ಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವಾಗಿದೆ.

ಕೆಎಂಎಫ್ ಹೇಗೆ ಪ್ರಾರಂಭವಾಯಿತು?

1955ರಲ್ಲಿ ಕೊಡಗು ಜಿಲ್ಲೆಯಲ್ಲಿ ಮೊದಲ ಹಾಲಿನ ಡೇರಿ ಪ್ರಾರಂಭವಾಯಿತು. ಆ ದಿನಗಳಲ್ಲಿ ಹಾಲನ್ನು ಪ್ಯಾಕೇಟ್ ಗಳಲ್ಲಿ ತುಂಬಿ ಮಾರಾಟ ಮಾಡಲಾಗುತ್ತಿರಲಿಲ್ಲ. ರೈತರು ತಾವೇ ಪ್ರತಿ ಮನೆಗೆ ಹಾಲು ತಲುಪಿಸುತ್ತಿದ್ದರು. ಹಾಲಿನ ಕೊರತೆಯೂ ಇತ್ತು. 1970ರಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಒತ್ತು ನೀಡಲಾಯಿತು. 1970ರ ಜನವರಿಯಲ್ಲಿ ಕ್ಷೀರ ಕ್ರಾಂತಿ ಪ್ರಾರಂಭವಾಯಿತು. ಇದನ್ನು ‘ಶ್ವೇತ ಕ್ರಾಂತಿ’ ಎಂದೂ ಕರೆಯಲಾಯಿತು. ವಿಶ್ವಬ್ಯಾಂಕ್ ಕೂಡ ಡೈರಿ ಯೋಜನೆಗಳಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ತಂದಿತು.

1974ರಲ್ಲಿ ಕರ್ನಾಟಕ ಸರ್ಕಾರವು ವಿಶ್ವಬ್ಯಾಂಕ್‌ನ ಡೇರಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯದಲ್ಲಿ ಕರ್ನಾಟಕ ಡೇರಿ ಅಭಿವೃದ್ಧಿ ನಿಗಮವನ್ನು (ಕೆಡಿಸಿಸಿ) ರಚಿಸಿತು. ಹತ್ತು ವರ್ಷಗಳ ಅನಂತರ 1984ರಲ್ಲಿ ಡೇರಿ ಅಭಿವೃದ್ಧಿ ನಿಗಮದ ಹೆಸರನ್ನು ಕರ್ನಾಟಕ ಹಾಲು ಒಕ್ಕೂಟ ಎಂದು ಬದಲಾಯಿಸಲಾಯಿತು. ಈ ಸಮಯದಲ್ಲಿ ಕಂಪನಿಯು ‘ನಂದಿನಿ’ ಬ್ರ್ಯಾಂಡ್ ಹೆಸರಿನಲ್ಲಿ ಪ್ಯಾಕೇಟ್ ಮಾಡಿ ಹಾಲು ಮತ್ತು ಇತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಕಾಲಾನಂತರದಲ್ಲಿ ‘ನಂದಿನಿ’ ಕರ್ನಾಟಕದ ಅತ್ಯಂತ ಜನಪ್ರಿಯ ಬ್ರಾಂಡ್ ಆಗಿ ಬೆಳೆಯಿತು.

Nandini Ghee

ಕೆಎಂಎಫ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಕರ್ನಾಟಕ ಹಾಲು ಒಕ್ಕೂಟವು ರಾಜ್ಯದಲ್ಲಿ 15 ಡೇರಿ ಒಕ್ಕೂಟಗಳನ್ನು ನಡೆಸುತ್ತಿದೆ. ಇವುಗಳಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ, ಕೋಲಾರ ಸಹಕಾರ ಹಾಲು ಒಕ್ಕೂಟ, ಮೈಸೂರು ಸಹಕಾರ ಹಾಲು ಒಕ್ಕೂಟ ಕೂಡ ಸೇರಿದೆ. ಈ ಹಾಲು ಒಕ್ಕೂಟಗಳು ಜಿಲ್ಲಾ ಮಟ್ಟದ ಡೇರಿ ಸಹಕಾರ ಸಂಘಗಳ (ಡಿಸಿಎಸ್) ಮೂಲಕ ಪ್ರತಿ ಗ್ರಾಮದಿಂದ ಹಾಲನ್ನು ಖರೀದಿಸಿ ಅನಂತರ ಕೆಎಂಎಫ್‌ಗೆ ತಲುಪಿಸುತ್ತವೆ.

ಕರ್ನಾಟಕ ಹಾಲು ಒಕ್ಕೂಟದ ವೆಬ್‌ಸೈಟ್‌ ಮಾಹಿತಿ ಪ್ರಕಾರ ಡೇರಿ ಸಹಕಾರ ಸಂಘವು 24,000 ಹಳ್ಳಿಗಳ 26 ಲಕ್ಷ ರೈತರಿಂದ ಪ್ರತಿದಿನ 86 ಲಕ್ಷ ಲೀಟರ್‌ಗಿಂತ ಹೆಚ್ಚು ಹಾಲನ್ನು ಖರೀದಿ ಮಾಡುತ್ತದೆ. ಕರ್ನಾಟಕ ಹಾಲು ಒಕ್ಕೂಟದ ವಿಶೇಷತೆ ಎಂದರೆ ಅದು ತನ್ನ ಹೆಚ್ಚಿನ ಹಾಲು ಪೂರೈಕೆದಾರರಿಗೆ ನಿತ್ಯ ಪಾವತಿಯನ್ನು ಮಾಡುತ್ತದೆ. ಕರ್ನಾಟಕ ಹಾಲು ಒಕ್ಕೂಟ 15 ಘಟಕಗಳಲ್ಲಿ ಹಾಲನ್ನು ಸಂಸ್ಕರಿಸಿ ಪ್ಯಾಕೇಟ್ ಮಾಡಲಾಗುತ್ತದೆ.

Nandini Ghee

ನಂದಿನಿ ಬ್ರ್ಯಾಂಡ್‌ನಲ್ಲಿ ಏನೇನಿದೆ?

ಕರ್ನಾಟಕ ಹಾಲು ಒಕ್ಕೂಟವು ಹಾಲು, ಮೊಸರು, ಬೆಣ್ಣೆ, ಪನೀರ್, ಚೀಸ್, ಜ್ಯೂಸ್, ಚಾಕೊಲೇಟ್, ರಸ್ಕ್, ಕುಕೀಸ್, ಬ್ರೆಡ್, ಐಸ್ ಕ್ರೀಮ್ ಸೇರಿದಂತೆ 148ಕ್ಕೂ ಹೆಚ್ಚು ಉತ್ಪನ್ನಗಳನ್ನು ‘ನಂದಿನಿ’ ಬ್ರಾಂಡ್ ಅಡಿಯಲ್ಲಿ ತಯಾರಿಸುತ್ತದೆ.
2022- 23ರಲ್ಲಿ ಕೆಎಂಎಫ್‌ನ ಒಟ್ಟು ವಹಿವಾಟು 19,784 ಕೋಟಿ ರೂ. ಆಗಿದ್ದರೆ, ಗುಜರಾತ್‌ನ ಅಮುಲ್ ಮಾಲೀಕತ್ವದ ಸಹಕಾರಿ ಹಾಲು ಮಾರಾಟ ಒಕ್ಕೂಟದ ವಹಿವಾಟು ಸುಮಾರು 61,000 ಕೋಟಿ ರೂಪಾಯಿ. ಪ್ರಸ್ತುತ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿ ಎಂ.ಕೆ. ಜಗದೀಶ್ ಅವರು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿದ್ದಾರೆ.

ಅಮುಲ್ ಜೊತೆಗಿನ ವಿವಾದ ಏನು?

ಮಾರುಕಟ್ಟೆಯಲ್ಲಿ ಸ್ಪರ್ಧಿಗಳಾಗಿರುವ ಅಮುಲ್ ಮತ್ತು ನಂದಿನಿ ನಡುವೆ ವಿವಾದ ಹೊಸದೇನಲ್ಲ. ಕಳೆದ ವರ್ಷ ಅಮುಲ್ ಕರ್ನಾಟಕದ ಚಿಲ್ಲರೆ ಮಾರುಕಟ್ಟೆಯನ್ನು ಪ್ರವೇಶಿಸಲು ನಿರ್ಧರಿಸಿತ್ತು. ಆದರೆ ಇದಕ್ಕೆ ʼನಂದಿನಿʼ ವಿರೋಧವನ್ನು ವ್ಯಕ್ತಪಡಿಸಿತ್ತು. ಇದು ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಯಿತು. ತಮ್ಮ ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಪರಸ್ಪರ ಮಾರುಕಟ್ಟೆ ಪ್ರವೇಶಿಸುವುದಿಲ್ಲ ಎಂಬ ಅಲಿಖಿತ ಒಪ್ಪಂದವು ಈ ಎರಡೂ ಸಹಕಾರ ಸಂಘಗಳ ನಡುವೆ ಮೊದಲಿನಿಂದಲೂ ಇದೆ.

Tirupati Laddu Row: ವಿವಾದದ ನಡುವೆಯೇ ಬರೋಬ್ಬರಿ 14 ಲಕ್ಷ ತಿರುಪತಿ ಲಡ್ಡು ಮಾರಾಟ

ಕರ್ನಾಟಕದ ಅನೇಕ ನಗರಗಳಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಹಾಲಿನ ಬೇಡಿಕೆ ಹೆಚ್ಚಾಗಿದೆ. ಅದನ್ನು ಪೂರೈಸುವುದು ಕೆಎಂಎಫ್‌ಗೂ ಸವಾಲಾಗಿದೆ. ಹೀಗಾಗಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಾಲನ್ನು ಮಾರಾಟ ಮಾಡಲು ನಿರ್ಧರಿಸಿರುವುದಾಗಿ ಅಮುಲ್ ಹೇಳಿಕೊಂಡಿತ್ತು.