Friday, 22nd November 2024

Muda Case: ನಾನು ತನಿಖೆಗೆ ಹೆದರಲ್ಲ, ಕಾನೂನು ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

CM Siddaramaiah

ಬೆಂಗಳೂರು: ಮುಡಾ ಹಗರಣದಲ್ಲಿ (Muda Case) ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿದ ಬಳಿಕ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನೆನ್ನೆ ಹೈಕೋರ್ಟ್‌ 17ಎ ಅನ್ವಯ ತನಿಖೆ ನಡೆಸಲು ಹೇಳಿತ್ತು. ಹೀಗಾಗಿ ನೆನ್ನೆಯೂ ಹೇಳಿದ್ದೇನೆ, ಇವತ್ತು ಹೇಳುತ್ತಿದ್ದೇನೆ. ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ, ತನಿಖೆಯನ್ನು ಎದುರಿಸಲು ತಯಾರಾಗಿದ್ದೇನೆ. ಕಾನೂನು ಹೋರಾಟ ಮುಂದುವರಿಸುತ್ತೇನೆ. ಜನಪ್ರತಿನಿಧಿಗಳ ಕೋರ್ಟ್‌ ಆದೇಶ ಪ್ರತಿ ಸಿಕ್ಕ ಮೇಲೆ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಮಾತನಾಡಿರುವ ಅವರು, ನೆನ್ನೆ ಹೈಕೋರ್ಟ್‌ ಆದೇಶ ನೀಡಿದಂತೆ 17 ಎ ಪ್ರಕಾರ ತನಿಖೆ ಮಾಡಲು ಜನ ಪ್ರತಿನಿಧಿಗಳ ನ್ಯಾಯಾಲಯ ಅನುಮತಿ ನೀಡಿದೆ. ಆದೇಶದ ಪ್ರತಿ ನನಗೆ ದೊರೆತಿಲ್ಲ. ಆದೇಶವನ್ನು ಪೂರ್ಣವಾಗಿ ಓದಿದ ನಂತರ ಪ್ರತಿಕ್ರಿಯೆ ನೀಡುವೆ ಎಂದರು.

ಮೈಸೂರಿಗೆ ಲೋಕಾಯುಕ್ತಕ್ಕೆ ಶಿಫಾರಸು

ನೆನ್ನೆಯೂ ಕೂಡ ಈ ಮಾತುಗಳನ್ನು ಹೇಳಿದ್ದು ಈಗಲೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ನನಗೆ ತಿಳಿದಂತೆ ಮೈಸೂರು ಲೋಕಾಯುಕ್ತಕ್ಕೆ ಪ್ರಕರಣವನ್ನು ಶಿಫಾರಸು ಮಾಡಲಾಗಿದೆ. ಮೈಸೂರಿನಲ್ಲಿಯೇ ದೂರು ನೀಡಲಾಗಿದ್ದು, ದೂರುದಾರರು ಮೈಸೂರಿನವರು, ಮುಡಾ ಕೂಡ ಅಲ್ಲಿಯೇ ಇರುವುದರಿಂದ ಮೈಸೂರಿಗೆ ಶಿಫಾರಸು ಮಾಡಿರಬೇಕು ಎಂದು ಭಾವಿಸಿದ್ದೇನೆ ಎಂದರು.

ಪಿ.ಎನ್.ದೇಸಾಯಿಯವರ ಆಯೋಗದ ತನಿಖೆ ಮುಂದುವರಿಯಲಿದೆ

ಇಂದಿನ ಪೂರ್ಣ ಆದೇಶ ಸಿಕ್ಕಿದ ಮೇಲೆ ವಕೀಲರೊಂದಿಗೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಹೇಳಿದರು. ಇನ್ನು ಮುಡಾ ಪ್ರಕರಣದ ತನಿಖೆಗೆ ಸರ್ಕಾರ ರಚಿಸಿದ್ದ ನಿವೃತ್ತ ನ್ಯಾ.ಪಿ.ಎನ್.ದೇಸಾಯಿಯವರ ಆಯೋಗ ಅದರ ತನಿಖೆ ಮುಂದುವರೆಯುತ್ತದೆಯೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನ್ಯಾಯಾಂಗ ತನಿಖೆ ಮುಂದುವರಿಯುತ್ತದೆ ಎಂದರು. ಸಂಪೂರ್ಣ ಪ್ರತಿಕ್ರಿಯೆ ನೀಡಲು ನಾನು ಪೂರ್ಣ ಆದೇಶ ಓದಿದ ಮೇಲೆ ನಾಳೆ ಬೆಳಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಬೆಂಗಳೂರು: ಮುಡಾ ಹಗರಣದಲ್ಲಿ (Muda Case) ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿದ ಅನುಮತಿಯನ್ನು ಹೈಕೋರ್ಟ್ ಎತ್ತಿ ಹಿಡಿದ ಬೆನ್ನಲ್ಲೇ ಸಿಎಂ ವಿರುದ್ಧ ಸಲ್ಲಿಕೆಯಾಗಿದ್ದ ಖಾಸಗಿ ದೂರಿನ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಬುಧವಾರ ಪ್ರಕಟವಾಗಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿ ಕೋರ್ಟ್‌ ತೀರ್ಪು ನೀಡಿದ್ದು, ತನಿಖೆಯ ಹೊಣೆಯನ್ನು ಮೈಸೂರು ಲೋಕಾಯುಕ್ತಕ್ಕೆ ವಹಿಸಲಾಗಿದೆ.

ಮೂರು ತಿಂಗಳಲ್ಲಿ (ಡಿ.24ರೊಳಗೆ) ತನಿಖೆ ನಡೆಸಿ ವರದಿ ನೀಡಲು ಮೈಸೂರು ಲೋಕಾಯುಕ್ತ ಎಸ್‌ಪಿಗೆ ಕೋರ್ಟ್‌ ನಿರ್ದೇಶನ ನೀಡಿದೆ. ಸಿಆರ್‌ಪಿಸಿ ಸೆ.156(3) ಅಡಿ ತನಿಖೆಗೆ ಆದೇಶ ನೀಡಲಾಗಿದೆ. ಹೀಗಾಗಿ ಇಂದು ಅಥವಾ ನಾಳೆ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾಗುವ ಸಾಧ್ಯತೆ ಇದೆ.

ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ 82ನೇ ಸಿಸಿಎಚ್‌ ಜನಪ್ರತಿನಿಧಿಗಳ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ನಡೆಸಿ ತೀರ್ಪು ನೀಡಿದ್ದಾರೆ.

ಈ ಹಿಂದೆ ರಾಜ್ಯಪಾಲರ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತನ್ನ ವಿಚಾರಣೆ ಮುಕ್ತಾಯವಾಗುವವರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಯ್ದಿರಿಸಿರುವ ತೀರ್ಪಿಗೆ ತಡೆ ನೀಡಿತ್ತು. ಇದೀಗ ತನಿಖೆಗೆ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿರುವುದರಿಂದ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ.

ಈ ಸುದ್ದಿಯನ್ನೂ ಓದಿ | Muda Case: ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಕೊಡುವುದೊಂದೇ ದಾರಿ: ಸಿ.ಟಿ.ರವಿ

ಈ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲ ವಸಂತ್‌ ಕುಮಾರ್‌ ಪ್ರತಿಕ್ರಿಯಿಸಿ, ಕೋರ್ಟ್‌ ಇಂದು ನೀಡಿರುವ ತೀರ್ಪನ್ನು ನಾವು ಗೌರವಿಸುತ್ತೇವೆ. ಪ್ರಕರಣದಲ್ಲಿ ಪ್ರಾಮಾಣಿಕ ತನಿಖೆ ಆಗಬೇಕು. ಮುಂದಿನ ದಿನಗಳಲ್ಲಿ ಸಿಬಿಐನಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಲು ನಾವು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ ಮೂಲಕ ತನಿಖೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.