Saturday, 23rd November 2024

Kangana Ranaut: ಕೃಷಿ ಕಾಯ್ದೆ ಕುರಿತಾದ ಹೇಳಿಕೆ ಹಿಂಪಡೆದ ಕಂಗನಾ

Kangana Ranaut

ಮುಂಬೈ: ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್‌ (Kangana Ranaut) ಮತ್ತೊಮ್ಮೆ ಅಂತಹದ್ದೇ ಎಡವಟ್ಟು ಮಾಡಿಕೊಂಡು ಇದೀಗ ಕ್ಷಮೆ ಯಾಚಿಸಿದ್ದಾರೆ. ರದ್ದುಗೊಂಡಿರುವ ವಿವಾದಿತ 3 ಕೃಷಿ ಕಾಯ್ದೆಗಳನ್ನು ಸರ್ಕಾರ ವಾಪಸ್‌ ತರಬೇಕೆಂದು ಕಂಗನಾ ರಣಾವತ್‌ ಮಂಗಳವಾರ ಆಗ್ರಹಿಸಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ಬಿಜೆಪಿ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು. ಪಕ್ಷಕ್ಕೂ ಅವರ ಅಭಿಪ್ರಾಯಕ್ಕೂ ಸಂಬಂಧವಿಲ್ಲ ಎಂದು ತಿಳಿಸಿತ್ತು. ಇದೀಗ ಕಂಗನಾ ತಮ್ಮ ಹೇಳಿಕೆಯನ್ನು ಪಂಪಡೆದುಕೊಂಡಿದ್ದಾರೆ.

2020ರಲ್ಲಿ ರೈತರ ಪ್ರತಿಭಟನೆಯ ಕೇಂದ್ರಬಿಂದುವಾಗಿದ್ದ 3 ಕೃಷಿ ಕಾನೂನುಗಳನ್ನು ಮರಳಿ ತರಬೇಕು ಎಂಬ ತಮ್ಮ ಹೇಳಿಕೆಗೆ ವಿಷಾದಿಸುತ್ತೇನೆ ಎಂದು ಕಂಗನಾ ಹೇಳಿದ್ದಾರೆ.

ಕ್ಷಮೆ ಕೋರಿದ ಕಂಗನಾ

‘ʼಕೆಲ ದಿನಗಳ ಹಿಂದೆ ಮಾಧ್ಯಮದವರು ಕೃಷಿ ಕಾಯ್ದೆಯ ವಿಚಾರವಾಗಿ ನನ್ನನ್ನು ಕೆಲ ಪ್ರಶ್ನೆ ಕೇಳಿದರು. ಆಗ ನಾನು ಕೃಷಿ ಕಾಯ್ದೆಗಳನ್ನು ಮರಳಿ ತರಬೇಕೆಂದು ರೈತರು ಪ್ರಧಾನಿ ಬಳಿ ಮನವಿ ಮಾಡಬೇಕು ಎಂದಿದ್ದೆ. ನನ್ನ ಈ ಅಭಿಪ್ರಾಯದಿಂದ ಹಲವರು ಬೇಸರ ಮತ್ತು ನಿರಾಶೆಗೆ ಒಳಗಾಗಿದ್ದಾರೆ. ಕೃಷಿ ಕಾಯ್ದೆಯ ಪ್ರಸ್ತಾವನೆ ಬಂದಿದ್ದಾಗ ನಾವೆಲ್ಲರೂ ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೆವು. ಆದರೆ ಸಂವೇದನಾಶೀಲತೆ ಮತ್ತು ಸಹಾನುಭೂತಿಯಿಂದ ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರು. ಮೋದಿ ಅವರ ನಿರ್ಣಯವನ್ನು ಗೌರವಿಸುವುದು ಎಲ್ಲ ಕಾರ್ಯಕರ್ತರ ಕರ್ತವ್ಯ. ನಾನು ಈಗ ಕೇವಲ ನಟಿಯಲ್ಲ ಬಿಜೆಪಿಯ ಕಾರ್ಯಕರ್ತೆಯೂ ಹೌದು. ಹಾಗಾಗಿ ನನ್ನ ಮಾತಿನಿಂದ, ಅಭಿಪ್ರಾಯದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಮತ್ತು ಹೇಳಿಕೆಯನ್ನು ಹಿಂಪಡೆಯತ್ತೇನೆʼʼ ಎಂದಿ ವಿಡಿಯೊ ಮೂಲಕ ಕಂಗನಾ ತಿಳಿಸಿದ್ದಾರೆ.

ಅಂತರ ಕಾಯ್ದುಕೊಂಡಿದ್ದ ಬಿಜೆಪಿ

“ಈ ಹೇಳಿಕೆ ವಿವಾದಾತ್ಮಕವಾಗಬಹುದು ಎಂದು ನನಗೆ ತಿಳಿದಿದೆ. ಆದರೆ 3 ಕೃಷಿ ಕಾನೂನುಗಳನ್ನು ಮರಳಿ ತರಬೇಕು. ಅದಕ್ಕಾಗಿ ರೈತರೇ ಇದನ್ನು ಒತ್ತಾಯಿಸಬೇಕು. 3 ಕಾನೂನುಗಳು ರೈತರಿಗೆ ಪ್ರಯೋಜನಕಾರಿಯಾಗಿವೆ. ಕೆಲವು ರಾಜ್ಯಗಳಲ್ಲಿ ರೈತ ಗುಂಪುಗಳ ಪ್ರತಿಭಟನೆಯಿಂದಾಗಿ ಸರ್ಕಾರವು ಅವುಗಳನ್ನು ರದ್ದುಪಡಿಸಿದೆ” ಎಂದು ಕಂಗನಾ ರಣಾವತ್‌ ಹೇಳಿದ್ದರು. ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಕಿಡಿ ಕಾರಿದ್ದವು. ಬಳಿಕ ಬಿಜೆಪಿ ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು.

ಈ ಸುದ್ದಿಯನ್ನೂ ಓದಿ: Kangana Ranaut : ಕೃಷಿ ಕಾನೂನುಗಳನ್ನು ವಾಪಸ್‌ ತಂದೇ ತರುತ್ತೇವೆ ಎಂದ ಕಂಗನಾ ರಣಾವತ್‌

“ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಕೃಷಿ ಮಸೂದೆಗಳ ಬಗ್ಗೆ ಬಿಜೆಪಿ ಸಂಸದೆ ಕಂಗನಾ ರಣಾವತ್‌ ಅವರ ಹೇಳಿಕೆ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇದು ಅವರ ವೈಯಕ್ತಿಕ ಹೇಳಿಕೆ ಎಂದು ನಾನು ಸ್ಪಷ್ಟಪಡಿಸುತ್ತೇನೆ. ಬಿಜೆಪಿ ಪರವಾಗಿ ಅಂತಹ ಹೇಳಿಕೆ ನೀಡಲು ಕಂಗನಾ ರಣಾವತ್‌ ಅವರಿಗೆ ಯಾವುದೇ ಅಧಿಕಾರವಿಲ್ಲ. ಇದು ಕೃಷಿ ಮಸೂದೆಗಳ ಬಗ್ಗೆ ಬಿಜೆಪಿಯ ದೃಷ್ಟಿಕೋನವನ್ನು ಚಿತ್ರಿಸುವುದಿಲ್ಲ. ಈ ಹೇಳಿಕೆಯನ್ನು ನಾವು ಒಪ್ಪುವುದಿಲ್ಲʼʼ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಸ್ಪಷ್ಟನೆ ನೀಡಿದ್ದರು. ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡದಂತೆ ಬಿಜೆಪಿ ಕಂಗನಾಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.