ನವದೆಹಲಿ: ಮುಸ್ಲಿಂ ಪ್ರಾಬಲ್ಯ ಪ್ರದೇಶವನ್ನು ಪಾಕಿಸ್ತಾನ ಎಂದು ಕರೆದು ವಿವಾದಕ್ಕೀಡಾಗಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ(HC Judge Remarks) ಅವರ ವಿರುದ್ಧದ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್(Supreme court) ಮುಕ್ತಾಯಗೊಳಿಸಿದೆ. ಇಂದು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಇದ್ದ ಪಂಚ ಸದಸ್ಯಪೀಠ, ಭಾರತದ ಒಂದು ಪ್ರದೇಶವನ್ನು ಪಾಕಿಸ್ತಾನ ಎಂದು ಕರೆಯಲು ಹೇಗೆ ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದೆ.
ನ್ಯಾಯಾಲಯದ ಕಲಾಪ ವೇಳೆ ತಾವು ನೀಡಿದ ವಿವಾದಾತ್ಮಕ ಹೇಳಿಕೆಗಳಿಗಾಗಿ ನ್ಯಾ. ಶ್ರೀಶಾನಂದ ಅವರು ಸಾರ್ವಜನಿಕ ಕ್ಷಮೆಯಾಚಿಸಿದ ನಂತರ ಅವರ ವಿರುದ್ಧದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೊನೆಗೊಳಿಸಿದೆ. ಭಾರತದ ಯಾವುದೇ ಭಾಗವನ್ನು ಯಾರೂ ‘ಪಾಕಿಸ್ತಾನ’ ಎಂದು ಕರೆಯಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದು, “ಇದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ ಎಂದು ಖಡಕ್ ಆಗಿ ಹೇಳಿದೆ.
ಒಂದು ಸಮುದಾಯ ಮತ್ತಿ ಸ್ತ್ರೀಯರ ಬಗ್ಗೆ ಹೇಳಿಕೆ ನೀಡುವಾಗ ಅತ್ಯಂತ ಜಾಗರೂಕವಾಗಿರಬೇಕು. ಅಂತಹ ಹೇಳಿಕೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ. ಇನ್ನು ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್ ಖನ್ನಾ, ಬಿ ಆರ್ ಗವಾಯಿ, ಎಸ್ ಕಾಂತ್ ಮತ್ತು ಎಚ್ ರಾಯ್ ಅವರಿದ್ದರು.
ಏನಿದು ವಿವಾದ?
ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಮುಸ್ಲಿಂ ಧರ್ಮದ ಜನರು ಹೆಚ್ಚಾಗಿ ವಾಸಿಸುವ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆಯುವ ಮೂಲಕ ನ್ಯಾ. ಶ್ರೀಶಾನಂದ ಅವರು ವಿವಾದವನ್ನು ಹುಟ್ಟುಹಾಕಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ವಿಚಾರಣೆ ವೇಳೆ ನ್ಯಾಯಾಧೀಶರು, ಮೈಸೂರು ರಸ್ತೆಯ ಮೇಲ್ಸೇತುವೆಗೆ ಹೋಗಿ, ಪ್ರತಿ ಆಟೋ ರಿಕ್ಷಾದಲ್ಲಿ 10 ಜನರು ಇರುತ್ತಾರೆ. ಇದು ಅನ್ವಯಿಸುವುದಿಲ್ಲ. ಏಕೆಂದರೆ ಗೋರಿ ಪಾಳ್ಯದಿಂದ ಮಾರುಕಟ್ಟೆಯವರೆಗಿನ ಮೈಸೂರು ರಸ್ತೆಯ ಮೇಲ್ಸೇತುವೆ ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಇದು ವಾಸ್ತವ. ನೀವು ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ಇರಿಸಿದರೂ ಅಷ್ಟೇ…ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ‘ಸಂಜೆ 250 ಕೊಡು, ಇಲ್ಲಾಂದ್ರೆ ಶೆಡ್ಡಿಗ್ ಬಾ’ ಎಂದಿರುವುದು ಕೂಡ ವೈರಲ್ ಆಗಿತ್ತು. ಮಹಿಳಾ ವಕೀಲೆಯೊಬ್ಬರಿಗೆ, ಪ್ರತಿವಾದಿ ಯಾವ ಬಣ್ಣದ ಒಳ ಉಡುಪು ಧರಿಸಿದ್ದಾರೆ ಎಂಬುದನ್ನು ಹೇಳುವಷ್ಟರ ಮಟ್ಟಿಗೆ ಅವರ ಬಗ್ಗೆ ನೀವು ತಿಳಿದುಕೊಂಡಿದ್ದೀರಿ ಎಂದು ವ್ಯಂಗ್ಯವಾಡಿದ್ದರು ಎನ್ನಲಾಗಿತ್ತು. ನ್ಯಾಯಾಧೀಶರು ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅನೇಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶವನ್ನು ಪಾಕಿಸ್ತಾನವೆಂದು ಪ್ರಸ್ತಾಪಿಸಿ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ವಿವಾದದ ಸೃಷ್ಟಿಸಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದು ಸುಪ್ರೀಂಕೋರ್ಟ್ ಗಮನ ಸೆಳೆದಿತ್ತು. ಇದಾದ ಬಳಿಕ ನ್ಯಾ. ಶ್ರೀಶಾನಂದರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು.
ಈ ಸುದ್ದಿಯನ್ನೂ ಓದಿ: HC Judge Remarks: ʻಉದ್ದೇಶ ಅದಾಗಿರ್ಲಿಲ್ಲʼ- ʻಪಾಕಿಸ್ತಾನʼ ಹೇಳಿಕೆಗೆ ಹೈಕೋರ್ಟ್ ನ್ಯಾಯಮೂರ್ತಿ ವಿಷಾದ