ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳ ನಡುವಿನ ಪ್ರತಿಯೊಂದು ಬಂಧವು ಪ್ರೀತಿಯಿಂದಲೇ ಬೇರೂರಿದೆ. ಪ್ರೀತಿ ಸಂಬಂಧದ (Relationship Tips) ಭದ್ರ ಬುನಾದಿ ಎಂದೇ ಹೇಳಬಹುದು. ಸಂಬಂಧದಲ್ಲಿ ಪ್ರೀತಿ ಇದ್ದರೆ ಮಾತ್ರ ಆ ಸಂಬಂಧ ಆರೋಗ್ಯಕರವಾಗಿ ಮತ್ತು ರೊಮ್ಯಾಂಟಿಕ್ ಆಗಿ ಇರುತ್ತದೆ ಎಂದೇ ಹೇಳಲಾಗುತ್ತದೆ. ಆದರೆ ಸಂಬಂಧದಲ್ಲಿ ಬರೀ ಪ್ರೀತಿ ಒಂದೇ ಇದ್ದರೆ ಸಾಕಾಗುವುದಿಲ್ಲ, ಅದರ ಜೊತೆಗೆ ಸಂಗಾತಿಯ ನಡುವೆ ಕೆಲವೊಂದು ವಿಷಯಗಳು ಇರಬೇಕಾಗುತ್ತದೆ. ಆಗ ಮಾತ್ರ ಸಂಬಂಧ ಗಟ್ಟಿಯಾಗಿ ಇರಲು ಸಾಧ್ಯವಾಗುತ್ತದೆ. ಹಾಗಾದ್ರೆ ಆ ಪ್ರಮುಖ ವಿಷಯಗಳು ಯಾವುದೆಂಬುದನ್ನು ತಿಳಿಯಿರಿ.
ನಿಷ್ಠೆ
ಉತ್ತಮ ಸಂಬಂಧದಲ್ಲಿ ಸಂಗಾತಿಗಳಿಬ್ಬರು ಪರಸ್ಪರ ನಿಷ್ಠಾವಂತರಾಗಿರಬೇಕು. ಇದು ಸಂಗಾತಿಯಲ್ಲಿ ನಿಮ್ಮ ಬಗ್ಗೆ ನಂಬಿಕೆಯನ್ನು ಬೆಳೆಸಲು ಸಹಾಯ ಮಾಡುತ್ತದೆ. ಆದರೆ ನಿಷ್ಠೆಯ ವಿಚಾರದಲ್ಲಿ ಸಂಗಾತಿಯನ್ನು ಮನೆಯೊಳಗೆ ಬಂಧಿಸಬಾರದು.
ವಿಶ್ವಾಸ
ಸಂಬಂಧದ ಪ್ರಮುಖ ಭಾಗವೆಂದರೆ ಸಂಗಾತಿಗಳು ಒಬ್ಬರ ಮೇಲೊಬ್ಬರು ವಿಶ್ವಾಸವನ್ನು ಇಡುವುದು. ಸಂಗಾತಿ ಮತ್ತೊಬ್ಬ ಸಂಗಾತಿಯನ್ನು ನಂಬಬೇಕು ಆಗ ಮಾತ್ರ ಅವರು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಸರಿಯಾದ ಸಂವಹನ
ನೀವು ಸಮಾಜದ ಜನರೊಂದಿಗೆ ಹೇಗೆಯೇ ಇರಿ. ಆದರೆ ನೀವು ಪ್ರತಿದಿನ ನಿಮ್ಮ ಸಂಗಾತಿಯೊಂದಿಗೆ ಸರಿಯಾಗಿ ಸಂವಹನ ನಡೆಸಬೇಕು. ನಿಮ್ಮ ಜೀವನದ ಕಷ್ಟಸುಖಗಳನ್ನು ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮತ್ತು ಬಹಿರಂಗವಾಗಿ ಹಂಚಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ದಂಪತಿಯ ನಡುವೆ ಸಂವಹನವು ನಡೆಯದಿದ್ದರೆ ಆ ಸಂಬಂಧದಲ್ಲಿ ತಪ್ಪು ತಿಳುವಳಿಕೆ ಮತ್ತು ಅಸಮಾಧಾನಕ್ಕೆ ಕಾರಣವಾಗುತ್ತದೆ.
ಗೌರವ
ಗೌರವವು ಸಂಬಂಧದ ಮೂಲಭೂತ ಆಧಾರಸ್ತಂಭವಾಗಿದೆ. ಇಬ್ಬರೂ ಪಾಲುದಾರರು ಪರಸ್ಪರರ ಆಯ್ಕೆಗಳು, ಅಭಿಪ್ರಾಯಗಳು ಮತ್ತು ಪ್ರಯತ್ನಗಳನ್ನು ಗೌರವಿಸಬೇಕು. ನಿಮ್ಮ ಪ್ರೀತಿಪಾತ್ರರ ನಿರ್ಧಾರಗಳನ್ನು ಗೌರವಿಸುವುದು ಸಹ ಬಹಳ ಮುಖ್ಯವಾಗಿದೆ. ಆದರೆ ಸಂಗಾತಿಯನ್ನು ಅಪಹಾಸ್ಯ ಮಾಡುವುದು ಅಥವಾ ಗೇಲಿ ಮಾಡುವುದು ಸಂಬಂಧವನ್ನು ದುರ್ಬಲಗೊಳಿಸಬಹುದು.
ದೈಹಿಕ ಅನ್ಯೋನ್ಯತೆ
ಸಂಬಂಧದ ಯಶಸ್ಸಿಗೆ ಒಂದು ಕೀಲಿಕೈ ದೈಹಿಕ ಅನ್ಯೋನ್ಯತೆ. ಇದರರ್ಥ ಯಾವಾಗಲೂ ಸಂಗಾತಿಗೆ ಅಂಟಿಕೊಂಡಿರಬೇಕು ಎಂದಲ್ಲ. ಕೈಗಳನ್ನು ಹಿಡಿದುಕೊಳ್ಳುವ ಮೂಲಕ, ಹಗ್ ಅಥವಾ ಕಿಸ್ ಮಾಡಿಕೊಳ್ಳುವ ಮೂಲಕ ಅಥವಾ ಪರಸ್ಪರರು ಗಂಟೆಗಟ್ಟಲೆ ಚಾಟ್ ಮಾಡುವ ಮೂಲಕ, ನಿಮ್ಮ ಸಂಬಂಧದ ಸಂತೋಷದ ಕ್ಷಣಗಳನ್ನು ಚರ್ಚಿಸುವ ಮೂಲಕ ನೀವು ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯವಾಗಿ ಇರಬೇಕು.
ಸಮಸ್ಯೆ ಪರಿಹರಿಸುವ ಕೌಶಲ್ಯಗಳು
ದಂಪತಿಯ ನಡುವೆ ವಾದ, ವಿವಾದ, ಜಗಳ, ಕೋಪ ನಡೆದೇ ನಡೆಯುತ್ತದೆ. ಆದರೆ ಈ ಜಗಳಗಳನ್ನು ದೊಡ್ಡದು ಮಾಡದೆ ಅದನ್ನು ಪರಿಹರಿಸಿಕೊಳ್ಳುವುದು ಉತ್ತಮ. ಜಗಳಗಳನ್ನು ಶಾಂತವಾಗಿ ಪರಿಹರಿಸಲು ನೀವಿಬ್ಬರೂ ಬಯಸಿದರೆ, ತಾಳ್ಮೆಯಿಂದ ಒಬ್ಬರ ಮಾತನ್ನು ಇನ್ನೊಬ್ಬರು ಕೇಳುವ ಮೂಲಕ ನೀವು ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ಇದು ಸಂಬಂಧ ಮುರಿಯುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಈ ರೀತಿಯಲ್ಲಿ ಸಂಬಂಧದಲ್ಲಿ ಪ್ರೀತಿಯ ಜೊತೆಗೆ ಈ ವಿಚಾರಗಳನ್ನು ಸೇರಿಸುವ ಮೂಲಕ ಉತ್ತಮವಾದ, ರೋಮ್ಯಾಂಟಿಕ್ ಆದ ಜೀವನವನ್ನು ನಡೆಸಿ. ಆಗ ನಿಮ್ಮ ಸಂಬಂಧ ಹೆಚ್ಚುಕಾಲದವರೆಗೆ ಗಟ್ಟಿಯಾಗಿರುತ್ತದೆ.