Saturday, 23rd November 2024

ICC Test Rankings: ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಭಾರೀ ಕುಸಿತ ಕಂಡ ಕೊಹ್ಲಿ, ರೋಹಿತ್‌

ICC Test Rankings

ದುಬೈ: ಐಸಿಸಿ ನೂತನ ಟೆಸ್ಟ್‌ ಬ್ಯಾಟಿಂಗ್‌ ಶ್ರೇಯಾಂಕ ಪ್ರಕಟಗೊಂಡಿದ್ದು(ICC Test Rankings) ಭಾರತ ತಂಡದ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ(Virat Kohli) ಮತ್ತು ರೋಹಿತ್‌ ಶರ್ಮ(Rohit Sharma) 5 ಸ್ಥಾನಗಳ ಕುಸಿತ ಕಂಡಿದ್ದಾರೆ. ಕೊಹ್ಲಿ 12ನೇ ಸ್ಥಾನಕ್ಕೆ, ರೋಹಿತ್‌ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದೇ ವೇಳೆ ಬಾಂಗ್ಲಾ ವಿರುದ್ಧ ಶತಕ ಬಾರಿಸಿ ಮಿಂಚಿದ್ದ ರಿಷಭ್‌ ಪಂತ್‌(Rishabh Pant) ಮತ್ತು ಅರ್ಧಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ ತಮ್ಮ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೂ ಮುನ್ನ ರೋಹಿತ್‌ 5ನೇ ಸ್ಥಾನಕ್ಕೇರುವ ಮೂಲಕ  ಮೂರು ವರ್ಷಗಳ ಬಳಿಕ ಟಾಪ್‌ 5ರೊಳಗೆ ಕಾಣಿಸಿಕೊಂಡ ಸಾಧನೆ ಮಾಡಿದ್ದರು. ಆದರೆ, ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದ 2 ಇನಿಂಗ್ಸ್‌ನಲ್ಲಿಯೂ ಒಂದಂಕಿ ಮೊತ್ತಕ್ಕೆ ಸೀಮಿತರಾಗಿ ವೈಫಲ್ಯ ಕಂಡದ್ದು ಅವರ ಶ್ರೇಯಾಂಕ ಕುಸಿತಕ್ಕೆ ಕಾರಣ. ಮತ್ತೊಂದೆಡೆ ಕೊಹ್ಲಿ ಕೂಡ ಬಾಂಗ್ಲಾ ವಿರುದ್ಧ ಘೋರ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದರು. ಅವರು ಕೂಡ ಐದು ಅಂಕದ ಕುಸಿತದೊಂದಿಗೆ ಅಗ್ರ 10ರ ಹೊರಗಿನ ಸ್ಥಾನ ಪಡೆಯುವಂತಾಗಿದೆ.

ಕಾರು ಅಪಘಾತದಗೊಂಡು 20 ತಿಂಗಳ ಬಳಿಕ ಟೆಸ್ಟ್‌ಗೆ ಮರಳಿದ್ದ ಪಂತ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದ್ದರು. ಇದೀಗ ಅವರು ಬ್ಯಾಟಿಂಗ್‌ ಶ್ರೇಯಾಂಕದಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಜೈಸ್ವಾಲ್‌ ಒಂದು ಸ್ಥಾನಗಳ ಪ್ರಗತಿಯೊಂದಿಗೆ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಶತಕ ವೀರ ಶುಭಮನ್‌ ಗಿಲ್‌ ಬರೋಬ್ಬರಿ 5 ಸ್ಥಾನಗಳ ಜಿಗಿತದೊಂದಿಗೆ 14ನೇ ಸ್ಥಾನಿಯಾಗಿದ್ದಾರೆ.

ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರೀ ಮಳೆ ಎಚ್ಚರಿಕೆ; ಪಂದ್ಯ ನಡೆಯುವುದು ಅನುಮಾನ

ಇಂಗ್ಲೆಂಡ್‌ನ ಜೋ ರೂಟ್‌ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ನ್ಯೂಜಿಲ್ಯಾಂಡ್‌ ತಂಡದ ಕೇನ್‌ ವಿಲಿಯಮ್ಸನ್‌(852), ಡೇರಿಯಲ್‌ ಮಿಚೆಲ್(760)‌, ಆಸ್ಟ್ರೇಲಿಯಾದ ಸ್ವೀವನ್‌ ಸ್ಮಿತ್‌(757) ಕ್ರಮವಾಗಿ 2, 3 ಮತ್ತು 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬೌಲಿಂಗ್‌ ಶ್ರೇಯಾಂಕದಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಭಾರತದ ಹಿರಿಯ ಹಾಗೂ ಅನುಭವಿ ಸ್ಪಿನ್ನರ್‌ ಆರ್‌. ಅಶ್ವಿನ್‌ 871 ರೇಟಿಂಗ್‌ ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಜಸ್‌ಪ್ರೀತ್‌ ಬುಮ್ರಾ 2ನೇ, ರವೀಂದ್ರ ಜಡೇಜಾ ಒಂದು ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ(475) ಮತ್ತು ಆರ್‌.ಅಶ್ವಿನ್‌(370) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.

ಟಾಪ್‌ 5 ಬ್ಯಾಟರ್‌ಗಳು

1. ಜೋ ರೂಟ್‌(899)

2. ಕೇನ್‌ ವಿಲಿಯಮ್ಸನ್‌(852)

3. ಡೇರಿಯಲ್‌ ಮಿಚೆಲ್(760)‌

4. ಸ್ವೀವನ್‌ ಸ್ಮಿತ್‌(757)

5. ಯಶಸ್ವಿ ಜೈಸ್ವಾಲ್‌(751)

ಟಾಪ್‌ 5 ಬೌಲರ್‌ಗಳು

1.ಆರ್‌. ಅಶ್ವಿನ್‌(871)

2. ಜಸ್‌ಪ್ರೀತ್‌ ಬುಮ್ರಾ(854)

3. ಜೋಶ್‌ ಹ್ಯಾಜಲ್‌ವುಡ್‌(847)

4. ಪ್ಯಾಟ್‌ ಕಮಿನ್ಸ್‌(820)

5. ಕಗಿಸೊ ರಬಾಡ(820)