Monday, 28th October 2024

Sitharam Yechury: ಸೀತಾರಾಮ್ ಯೆಚೂರಿ ವೈಚಾರಿಕತೆಯ ಮೇರು ಶಿಖರ; ಸಿಪಿಐಎಂ ಅಖಿಲ ಭಾರತ ಕಾರ್ಯದರ್ಶಿ ಉಮೇಶ್

ಚಿಕ್ಕಬಳ್ಳಾಪುರ: ದೇಶದಲ್ಲಿ ಮಾರ್ಕ್ಸ್ವಾದಿ ಪ್ರಣೀತ ಎಡಪಂಥೀಯ ಚಿಂತನೆ ಗಟ್ಟಿಯಾಗಿ ಬೇರೂರಲು 5 ದಶಕ ಗಳಿಗೂ ಹೆಚ್ಚುಕಾಲ ಶ್ರಮಿಸಿದ ಧೀಮಂತ ನಾಯಕ ಕಾಮ್ರೆಡ್ ಸೀತಾರಾಮ್ ಯೆಚೂರಿ ಅವರ ಅಗಲಿಕೆ ಕೆಂಪು ಹೋರಾಟಕ್ಕೆ ಬಲವಾದ ಪೆಟ್ಟು ನೀಡಿದೆ ಎಂದು ಸಿಪಿಐಎಂ ಅಖಿಲ ಭಾರತ ಕಾರ್ಯದರ್ಶಿ ಉಮೇಶ್ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಿಪಿಐಎಂ ಸಿಐಟಿಯು, ಎಐಎಡಬ್ಲ್ಯುಯು, ಎಸ್‌ಎಫ್‌ಐ, ಡಿವೈಎಫ್‌ಐ ಸಂಘಟನೆಗಳ ವತಿಯಿಂದ ಇತ್ತೀಚೆಗೆ ನಿಧನರಾದ ಕಾಮ್ರೆಡ್ ಸೀತಾರಾಮ್ ಯೆಚೂರಿ ಅವರಿಗೆ ಏರ್ಪಡಿಸಿದ್ದ ನುಡಿನಮನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತುರ್ತು ಪರಿಸ್ಥಿತಿಯ ಸಮಯದಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ ಹೋರಾಟ ನಡೆಸಿ, ಅವರ ಮನೆಯವರೆಗೆ ರ‍್ಯಾಲಿ ನಡೆಸಿ ಇಂದಿರಾ ಗಾಂಧಿ ಮುಂದೆಯೇ ಅವರ ವಿರುದ್ಧದ ಆರೋಪ ಪಟ್ಟಿ ಓದಿವರು ಸೀತಾರಾಂ ಯೆಚೂರಿ ಎಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್ ಸ್ಮರಿಸಿದರು.

ಆರೋಪ ಪಟ್ಟಿಯ ಬಗ್ಗೆ ಕೇಳಿದ ಇಂದಿರಾ ಗಾಂಧಿ ರಾಜೀನಾಮೆ ನೀಡಿದರು. ಅಂದಿನಿಂದ ಯೆಚೂರಿ ಅವರು ದೊಡ್ಡ ನಾಯಕರಾಗಿ ಬೆಳೆದರು. ಎಸ್‌ಎಫ್‌ಐ ಅಧ್ಯಕ್ಷರಾಗಿ, ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಪಕ್ಷವನ್ನು ಸೈದ್ಧಾಂತಿಕವಾಗಿ ಕಟ್ಟಿದರು ಎಂದರು.

ಕ್ರಾಂತಿಕಾರಿಗಳು ಜನಚಳವಳಿಗಳಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕು ಎನ್ನುವುದಕ್ಕೆ ಅವರು ಮಾದರಿಯಾಗಿ ದ್ದರು. ಇಂದು ಗ್ರಾಮಗಳಲ್ಲಿ ಎಡಪಕ್ಷದ ಸಂಘಟನೆಗಳು ಇದೆ ಎಂದರೆ ಅದಕ್ಕೆ ಕಾರಣ ಯೆಚೂರಿ. ಹಿಂದೂ ರಾಷ್ಟ್ರ ಎಂದರೆ ಯಾವುದು ಎನ್ನುವುದನ್ನು ಯೆಚೂರಿ ಬರವಣಿಗೆ ಮೂಲಕ ತಿಳಿಸಿದ್ದಾರೆ. ಬಡವರು, ಶ್ರಮಿಕರು, ಕೂಲಿ ಕಾರ್ಮಿಕರ ಪರವಾಗಿ ಸಂಘಟನೆ ಕಟ್ಟಿ ಹೋರಾಟ ನಡೆಸಿದ್ದ ನಾಯಕ ಎಂದು ಪ್ರಶಂಸಿಸಿದರು.

ಡಾ.ಅನಿಲ್ ಆವುಲಪ್ಪ ಮಾತನಾಡಿ ಆಧುನಿಕೋತ್ತರ ವಾದದ ಸಿಲುಕಿಗೆ ಸಿಕ್ಕಿ ವಿಶ್ವವಿದ್ಯಾಲಯಗಳು ನರಳುತ್ತಿದ್ದ ಕಾಲದಲ್ಲಿ ಸಂಘಟಿತರಾಗಿ ಎಲ್ಲರಿಗೂ ಶಿಕ್ಷಣ ಎಲ್ಲರಿಗೂ ಉದ್ಯೋಗ ಎಂದು ಹೋರಾಟ ನಡೆಸಿದವರು.ಎಸ್‌ಎಫ್‌ಐ ಸಂಘಟನೆಯನ್ನು ಬಲವಾಗಿ ಕಟ್ಟಿದವರು. 50 ವರ್ಷಗಳ ತಮ್ಮ ಸುಧೀರ್ಘ ಹೋರಾಟಗಳಲ್ಲಿ ಸಿಪಿಎಂ ತತ್ವ ಸಿದ್ದಾಂತವನ್ನು ಹಳ್ಳಿಹಳ್ಳಿಗೆ ಮುಟ್ಟುವಂತೆ ಮಾಡಿದವರು.ನವಉದಾರವಾದದ ಆರ್ಥಿಕ ನೀತಿಗಳು, ಉದಾರ ವಾದದ ಆರ್ಥಿಕ ನೀತಿಗಳ ಅಪಾಯಗಳ ಬಗ್ಗೆ ಸ್ಪಷ್ಟತೆಹೊಂದಿದ್ದ ಧೀಮಂತ ಚೇತನ ನಮ್ಮನ್ನು ಅಗಲಿರುವುದು ನೋವಿನ ಸಂಗತಿ ಎಂದರು.

ಸಿಪಿಎA ಹಿರಿಯ ಮುಖಂಡ ಕೆ.ಎಂ.ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಮುನಿವೆಂಕಟಪ್ಪ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ಮುಖಂಡ ರಾದ ಡಾ.ಅನಿಲ್‌ಕುಮಾರ್, ಸಿದ್ದಗಂಗಪ್ಪ, ಸರ್ದಾರ್ ಚಾಂದ್ ಪಾಷ ಮತಿತರ ಮುಖಂಡರು ಮಾತನಾಡಿದರು.

ಇದನ್ನೂ ಓದಿ: Chikkaballapur News: ಆರೋಗ್ಯಕರ ಜೀವನ ಸಾಗಿಸಲು ಕ್ರೀಡೆಗಳಲ್ಲಿ ಭಾಗವಹಿಸಿ-ತಾಲೂಕು ಆರೋಗ್ಯಾಧಿಕಾರಿ ಡಾ. ಮಂಜುಳ ಅಭಿಮತ