ಶೀಘ್ರದಲ್ಲೇ ಭಾರತ ತನ್ನ ಸ್ವಂತ ಬಾಹ್ಯಾಕಾಶ ನಿಲ್ದಾಣ (India Space Station) ಹೊಂದಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಯುಎಸ್ (US) ಮತ್ತು ಚೀನಾದ (China) ಬಳಿಕ ಸ್ವಂತ ಬಾಹ್ಯಾಕಾಶ ನಿಲ್ದಾಣ (Space Station) ಹೊಂದಿರುವ ಮೂರನೇ ದೇಶ ಭಾರತವಾಗಲಿದೆ. ಇದೊಂದು ಬಾಹ್ಯಾಕಾಶ ಸಂಶೋಧನೆಯಲ್ಲಿ (Space Exploration) ಐತಿಹಾಸಿಕ ಸಾಧನೆಯಾಗಲಿದೆ.
ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಭಾರತೀಯ ಅಂತರಿಕ್ಷ ನಿಲ್ದಾಣ (BAS-1) ಅಭಿವೃದ್ಧಿಗೆ ಅನುಮೋದನೆ ನೀಡಿದ್ದು, ಇದು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಹೊಸ ಯುಗ ಪ್ರಾರಂಭಕ್ಕೆ ಚಾಲನೆ ನೀಡಿದೆ.
ಈಗಾಗಲೇ ಯುಎಸ್ ಮತ್ತು ಚೀನಾ ಬಾಹ್ಯಾಕಾಶ ನಿಲ್ದಾಣ ಹೊಂದಿದೆ. 2024ರ ಸೆಪ್ಟೆಂಬರ್ 18ರಂದು ಭಾರತದ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಸ್ವಂತ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ಮೂರನೇ ದೇಶವಾಗಲು ಭಾರತ ತಯಾರಿ ನಡೆಸುತ್ತಿದೆ.
ಭಾರತದ ಮಹತ್ವಾಕಾಂಕ್ಷೆಯ ಗಗನ್‌ಯಾನ್‌ನ ವಿಸ್ತೃತ ಯೋಜನೆಯ ವ್ಯಾಪ್ತಿಯ ಅಡಿಯಲ್ಲಿ ಇದರ ರಚನೆಯನ್ನು 2028 ರ ವೇಳೆಗೆ ಪ್ರಾರಂಭಿಸಲು ನಿರ್ಧರಿಸಲಾಗಿದೆ.\
ಏನಿದು ಗಗನ್‌ಯಾನ್ ಯೋಜನೆ?
ಮಾನವ ಬಾಹ್ಯಾಕಾಶ ಹಾರಾಟದ ಯೋಜನೆಯಾದ ಗಗನ್‌ಯಾನ್ ಕಾರ್ಯಕ್ರಮ 2018 ರಲ್ಲಿ ಎಲ್ಲರ ಗಮನ ಸೆಳೆದಿತ್ತು. ಇದರ ಮುಖ್ಯ ಉದ್ದೇಶ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದಾಗಿದೆ. ಆದರೆ ಈ ಯೋಜನೆ ಈಗ ಪೂರ್ಣ ಪ್ರಮಾಣದ ಬಾಹ್ಯಾಕಾಶ ನಿಲ್ದಾಣದ ಅಭಿವೃದ್ಧಿ ಪಡಿಸಲು ಸಿದ್ಧತೆ ನಡೆಸುತ್ತಿದೆ. ಇದು 2028 ರ ವೇಳೆಗೆ ನಿಗದಿಪಡಿಸಲಾದ ಎಂಟು ಯೋಜನೆಗಳನ್ನು ಒಳಗೊಂಡಿದೆ. ಇದರಲ್ಲಿ ಭಾರತೀಯ ಅಂತರಿಕ್ಷ ನಿಲ್ದಾಣದ ಮೊದಲ ಮಾದರಿಯನ್ನು ಪ್ರಾರಂಭಿಸಲು ಯೋಜಿಸಲಾಗಿದೆ.
ಇದಕ್ಕಾಗಿ ಸರ್ಕಾರವು ಬಜೆಟ್ ಅನ್ನು 20,193 ಕೋಟಿ ರೂ. ಗೆ ಹೆಚ್ಚಿಸಿದೆ. ಬಿಎಎಸ್ -1ರ ನಿರ್ಮಾಣಕ್ಕೆ ಅಗತ್ಯವಾದ ಹೊಸ ಹಾರ್ಡ್‌ವೇರ್, ತಂತ್ರಜ್ಞಾನ, ಅನ್‌ಕ್ರೂಡ್ ಮಿಷನ್‌ಗಳಿಗೆ ಹೆಚ್ಚುವರಿ 11,170 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿದೆ. ಮೀಸಲಾಗಿದ್ದ ಬಜೆಟ್ ನಲ್ಲಿ ಹೆಚ್ಚಳವು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ನಾಯಕತ್ವದ ಪಾತ್ರವನ್ನು ಸ್ಥಾಪಿಸುವ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿದೆ.
ಯಾವಾಗ ಪೂರ್ಣಗೊಳ್ಳಬಹುದು?
ಭಾರತೀಯ ಅಂತರಿಕ್ಷ ನಿಲ್ದಾಣವು 2035ರ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಇದು ಬಾಹ್ಯಾಕಾಶದಲ್ಲಿ ದೀರ್ಘಾವಧಿಯ ಮಾನವ ಕಾರ್ಯಾಚರಣೆಗಳಿಗೆ ಮೈಲುಗಲ್ಲು ಆಗಲಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಭಾರತದ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ರಾಷ್ಟ್ರೀಯ ಕೈಗಾರಿಕೆಗಳು, ಅಕಾಡೆಮಿಗಳು ಮತ್ತು ಇತರ ಏಜೆನ್ಸಿಗಳೊಂದಿಗೆ ಕಾರ್ಯನಿರ್ವಹಿಸಲಿದೆ.
ಏನು ಪ್ರಯೋಜನ?
ಈ ಯೋಜನೆ ಪೂರ್ಣಗೊಂಡರೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಸಾಮರ್ಥ್ಯ ಗಣನೀಯವಾಗಿ ವೃದ್ಧಿಸಲಿದೆ. ಇದರಿಂದ ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನ ನೀಡಬಹುದಾದ ತಾಂತ್ರಿಕ ಆವಿಷ್ಕಾರಗಳನ್ನು ನಡೆಸಬಹುದು. ಈ ಯೋಜನೆಯು ಭಾರತವನ್ನು ಜಾಗತಿಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಮುಂಚೂಣಿಗೆ ತರಲಿದೆ. ಹೈಟೆಕ್ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್ ಮೊದಲಾದ ವಸ್ತುಗಳಿಗೆ ಸಂಬಂಧಿಸಿದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಲಿದೆ.
ಯಾವಾಗ ಯಾವ ಯೋಜನೆ?
2026ರ ವೇಳೆಗೆ ಗಗನ್‌ಯಾನ್ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಪ್ರಮುಖ ಕಾರ್ಯಾಚರಣೆಗಳು ಪೂರ್ಣಗೊಳ್ಳಲಿವೆ. ಇವು ಮಾನವ ಬಾಹ್ಯಾಕಾಶ ಹಾರಾಟ ಮತ್ತು ನಿಲ್ದಾಣ ಸಂಬಂಧಿತ ತಂತ್ರಜ್ಞಾನಗಳಿಗೆ ನಿರ್ಣಾಯಕ ಪರೀಕ್ಷೆಗಳಾಗಿವೆ.
2027ರಲ್ಲಿ ಭಾರತದ ಬಿಎಎಸ್-1 ರ ಉಡಾವಣೆ ಸಿದ್ಧತೆಯಲ್ಲಿರುವಾಗಲೇ ರಷ್ಯಾ ತನ್ನ ಹೊಸ ಬಾಹ್ಯಾಕಾಶ ನಿಲ್ದಾಣದ ಮೊದಲ ಮಾದರಿಯಾದ ರಷ್ಯಾದ ಆರ್ಬಿಟಲ್ ಸ್ಟೇಷನ್ (ROS) ಅನ್ನು ಪ್ರಾರಂಭಿಸಲು ನಿರ್ಧರಿಸಿದೆ.
ಡಿಸೆಂಬರ್ 2028 ರ ವೇಳೆಗೆ ಬಿಎಎಸ್-1 ರ ಮೊದಲ ಮಾದರಿ ಉಡಾವಣೆ ಮಾಡುವ ನಿರೀಕ್ಷೆ ಇದೆ. ಇದು ಭಾರತದ ವಿಶೇಷ ಬಾಹ್ಯಾಕಾಶ ನಿಲ್ದಾಣ ಪ್ರವೇಶದ ಮೊದಲ ಹಂತವಾಗಲಿದೆ.
2035 ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣವು ಬಾಹ್ಯಾಕಾಶದಲ್ಲಿ ದೀರ್ಘಾವಧಿಯ ವೈಜ್ಞಾನಿಕ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸಂಪೂರ್ಣ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆ ಇದೆ.
2040ರ ವೇಳೆಗೆ ಭಾರತದ ಬಾಹ್ಯಾಕಾಶ ಯೋಜನೆ ಚಟುವಟಿಕೆಗಳು ಭೂಮಿಯ ಹೊರಗಿನ ಕಕ್ಷೆಯಲ್ಲಿ ಪ್ರಾರಂಭವಾಗಲಿದೆ. ಇದರಲ್ಲಿ ಚಂದ್ರನ ಮೇಲಿನ ಕಾರ್ಯಾಚರಣೆಯ ನಡೆಸುವ ಯೋಜನೆಯನ್ನು ಹೊಂದಿದೆ.
ಬಾಹ್ಯಾಕಾಶಯಾನದಲ್ಲಿ ಭಾರತದ ಸ್ಥಾನ
ಬಾಹ್ಯಾಕಾಶಯಾನದಲ್ಲಿ ಪ್ರಸ್ತುತ ಕೇವಲ ಎರಡು ಬಾಹ್ಯಾಕಾಶ ಕೇಂದ್ರಗಳು ಅಸ್ತಿತ್ವದಲ್ಲಿವೆ. ಇದರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಮತ್ತು ಚೀನಾದ ಟಿಯಾಂಗಾಂಗ್. ಐಎಸ್ ಎಸ್ , ನಾಸಾ, ರೊಸ್ಕೋಸ್ಮೋಸ್, ಇಎಸ್ ಎ, ಜಾಕ್ಷಾ ಮತ್ತು ಸಿಎಸ್ ಎ ಪರಸ್ಪರ ಸಹಯೋಗದೊಂದಿಗೆ 2000ರಿಂದ ಬಾಹ್ಯಾಕಾಶದಲ್ಲಿ ಸಂಶೋಧನೆಯಲ್ಲಿ ನಿರತವಾಗಿದೆ. ಈ ನಡುವೆ ಚೀನಾದ ಟಿಯಾಂಗಾಂಗ್ ನಿಲ್ದಾಣವು 2022ರಿಂದ ಕಾರ್ಯನಿರ್ವಹಿಸುತ್ತಿದೆ.
ಇದೀಗ ಭಾರತದ ಬಿಎಎಸ್-1 ಕೂಡ ಇದರಲ್ಲಿ ಸೇರಲು ಸಿದ್ಧತೆ ನಡೆಸುತ್ತಿದೆ. ಈ ಮೂಲಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಜಾಗತಿಕ ಸಹಯೋಗವನ್ನು ಹೆಚ್ಚಿಸಲು ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಗಳಿಗೆ ಹೊಸ ದಾರಿ ನಿರ್ಮಿಸುವ ನಿರೀಕ್ಷೆ ಇದೆ.
ಬಿಎಎಸ್ -1 ಕೇವಲ ನಕ್ಷತ್ರಗಳ ಮೇಲಿನ ಸಂಶೋಧನೆಯನ್ನಷ್ಟೇ ಗುರಿಯಾಗಿಸಿಕೊಂಡಿಲ್ಲ. ಇದು ಅವುಗಳ ಮೇಲೆ ಇಳಿಯಲು ತಯಾರಿ ನಡೆಸುತ್ತಿದೆ. ಬಿಎಎಸ್ – 1 ಬಾಹ್ಯಾಕಾಶ ನಿಲ್ದಾಣವು ಸಾಕಷ್ಟು ಕಾರ್ಯಾಚರಣೆಗಳಿಗೆ ವೇದಿಕೆಯನ್ನು ನಿರ್ಮಿಸುವ ನಿರೀಕ್ಷೆ ಇದೆ.