ಮನೆಯಲ್ಲಿ ಮಗುವಿದ್ದರೆ ಅದರಿಂದಾಗುವ ಖುಷಿ ಮತ್ತೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಮಗು ಅತ್ತರೂ, ನಕ್ಕರು, ಬಿದ್ದರೂ, ನಡೆದರೂ ಆ ಮನೆಯವರಿಗೆಲ್ಲಾ ಸಂತೋಷವಾಗುತ್ತದೆ. ಆದರೆ ಮಗು ಜೋರಾಗಿ ಅತ್ತರೆ ಓಡಿ ಹೋಗಿ ಮಗುವನ್ನು ಎತ್ತಿಕೊಳ್ಳುತ್ತಾರೆ. ನಂತರ ಅದನ್ನು ಕೈಯಲ್ಲಿ ಹಿಡಿದುಕೊಂಡು ಮುದ್ದಾಡುತ್ತಾರೆ. ಆದರೆ ಚಿಕ್ಕಮಗುವನ್ನು ಹೇಗೆ ಎತ್ತಿಕೊಳ್ಳಬೇಕು ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಕೆಲವರು ಚಿಕ್ಕ ಮಗುವನ್ನು ದೊಡ್ಡ ಮಕ್ಕಳಂತೆ ಎತ್ತಿಕೊಳ್ಳುತ್ತಾರೆ. ಆದರೆ ಪೋಷಕರು (Parenting Tips) ಮಾಡುವಂತಹ ಈ ತಪ್ಪುಗಳು ಮುಂದೆ ಮಗುವಿನ ಬೆನ್ನುಹುರಿಯನ್ನು ಹಾನಿಗೊಳಿಸಬಹುದು.
ಮಕ್ಕಳ ತಜ್ಞರು ತಿಳಿಸಿದ ಪ್ರಕಾರ, ಮಗು ಹುಟ್ಟಿದ ಕೆಲವು ತಿಂಗಳುಗಳವರೆಗೆ ಮಗುವಿನ ಬೆನ್ನುಮೂಳೆ ತುಂಬಾ ದುರ್ಬಲವಾಗಿರುತ್ತದೆ. ಆದ್ದರಿಂದ, ಈ ಸಮಯದಲ್ಲಿ, ಮಗುವನ್ನು ಎತ್ತಿಕೊಳ್ಳುವಾಗ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಬೆನ್ನುಮೂಳೆಯ ಮೇಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಹಾಗಾಗಿ ಮಗುವನ್ನು ಎತ್ತಿಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ.
ಮಗುವನ್ನು ಇಳಿಜಾರಿನ ಭಂಗಿಯಲ್ಲಿ ಹಿಡಿದುಕೊಳ್ಳುವುದು:
ತಜ್ಞರು ತಿಳಿಸಿದ ಪ್ರಕಾರ, ಮಗು ಜನಿಸಿದ ಸುಮಾರು 2 ತಿಂಗಳ ನಂತರ ಕುತ್ತಿಗೆಯನ್ನು ಬ್ಯಾಲೆನ್ಸ್ ಮಾಡಲು ಪ್ರಯತ್ನಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ಮಗುವನ್ನು ಎತ್ತಿಕೊಳ್ಳುವಾಗ ಮಗುವಿನ ಬೆನ್ನು ನೇರವಾಗಿದೆಯೇ ಮತ್ತು ಹಿಂದಿನಿಂದ ನೀವು ಸರಿಯಾಗಿ ಹಿಡಿದುಕೊಂಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಯಾಕೆಂದರೆ ನವಜಾತ ಶಿಶುವನ್ನು ಬಾಗಿದ ಭಂಗಿಯಲ್ಲಿ ಹಿಡಿದುಕೊಳ್ಳುವುದರಿಂದ ಬೆನ್ನುಮೂಳೆಯ ಮೇಲೆ ಒತ್ತಡವನ್ನುಂಟು ಮಾಡಿ ಬೆನ್ನುಮೂಳೆ ಹಾನಿಗೊಳಗಾಗುತ್ತದೆ.
ತಲೆಯನ್ನು ಸರಿಯಾಗಿ ಬೆಂಬಲಿಸದಿರುವುದು:
ಮಗು ಹುಟ್ಟಿದ ನಂತರ ಮಗುವನ್ನು ಎತ್ತಿಕೊಳ್ಳುವಾಗ ಮಗುವಿನ ಕುತ್ತಿಗೆಗೆ ನಿಮ್ಮ ಕೈಗಳನ್ನು ಬೆಂಬಲವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಅದು ಬೆನ್ನುಮೂಳೆಯ ದೌರ್ಬಲ್ಯಕ್ಕೂ ಕಾರಣವಾಗಬಹುದು. ಯಾಕೆಂದರೆ ನಿಮ್ಮ ಮಗುವಿನ ಕುತ್ತಿಗೆಯ ಸ್ನಾಯುಗಳು ಮತ್ತು ಮೂಳೆಗಳು ಇನ್ನೂ ಬೆಳವಣಿಗೆಯ ಹಂತದಲ್ಲಿರುತ್ತದೆ. ಹಾಗಾಗಿ ಮಗುವನ್ನು ಎತ್ತುವಾಗ ಯಾವಾಗಲೂ ತಲೆ ಮತ್ತು ಕುತ್ತಿಗೆಗೆ ಸರಿಯಾದ ಬೆಂಬಲವನ್ನು ನೀಡಿ.
ಬಟ್ಟೆಯಲ್ಲಿ ಸುತ್ತುವುದು:
ಅನೇಕ ಬಾರಿ ಮಗುವಿನ ಕಾಲುಗಳನ್ನು ನೇರಗೊಳಿಸಲು ಬಟ್ಟೆಗಳಲ್ಲಿ ಬಿಗಿಯಾಗಿ ಸುತ್ತಲಾಗುತ್ತದೆ. ಆದರೆ ಮಗುವಿನ ಕಾಲುಗಳನ್ನು ತುಂಬಾ ಸಮಯ ಬಿಗಿಯಾಗಿ ಇಡುವುದು ಬೆನ್ನುಮೂಳೆಯನ್ನು ದುರ್ಬಲಗೊಳಿಸುತ್ತದೆ. ಹುಟ್ಟಿದ ನಂತರ, ನೈಸರ್ಗಿಕವಾಗಿ ಇರಲು ಮಗುವಿಗೆ ಬಿಡಬೇಕು ಎಂದು ತಜ್ಞರು ತಿಳಿಸಿದ್ದಾರೆ.
ಮಗುವಿನ ಸೊಂಟವನ್ನು ಹಿಡಿದು ಮೇಲೆ ಎತ್ತುವುದು:
ಕೆಲವರು ಮಗುವನ್ನು ಎತ್ತುವಾಗ ಮಗುವಿನ ಸೊಂಟವನ್ನು ಹಿಡಿದು ಮೇಲೆ ಎತ್ತುತ್ತಾರೆ. ಆದರೆ ಅದು ನಿಮ್ಮ ಮಗುವಿನ ಬೆನ್ನುಮೂಳೆಯ ಮೇಲೆ ಹಾನಿ ಮಾಡಬಹುದು. ಆದ್ದರಿಂದ, ಯಾವಾಗಲೂ ಎರಡೂ ಸೊಂಟದ ಬೆಂಬಲದೊಂದಿಗೆ ಮಗುವನ್ನು ಎತ್ತಲು ಪ್ರಯತ್ನಿಸಿ.
ಈ ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಮಗುವನ್ನು ಎತ್ತುವಾಗ ನೀವು ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬಹುದು. ಮತ್ತು ಇದರಿಂದ ಮಗುವಿನ ಬೆನ್ನುಮೂಳೆಯಲ್ಲಿ ಯಾವುದೇ ಸಮಸ್ಯೆಯಾಗದೆ ಮಗು ಆರೋಗ್ಯವಾಗಿ ಬೆಳೆಯುತ್ತದೆ.