ಬೆಂಗಳೂರು: ಯುಪಿಎಸ್‌ಸಿ ಮಾದರಿಯಲ್ಲಿ ನಿಗದಿತ ವೇಳಾಪಟ್ಟಿಯಂತೆ ಕೆಪಿಎಸ್‌ಸಿ (KPSC Exam) ಕಾರ್ಯನಿರ್ವಹಣೆ ಮಾಡುವ ಕುರಿತು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ವಿವಿಧ ನೇಮಕಾತಿಗಳ ಪ್ರಗತಿ ಪರಿಶೀಲನೆ ನಡೆಸಿ ಸಿಎಂ ಮಾತನಾಡಿದರು. ನೇಮಕಾತಿ ಪ್ರಕ್ರಿಯೆಗಳ ವಿಳಂಬ, ಕಾನೂನು ತೊಡಕುಗಳು ಹಾಗೂ 371 ಜೆ ಅಡಿ ಮೀಸಲಾತಿಗೆ ಸಂಬಂಧಿಸಿದ ಸವಾಲುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಪ್ರತಿವರ್ಷ ಎಲ್ಲ ಇಲಾಖೆಗಳ ನೇಮಕಾತಿಗೆ ಏಕಕಾಲಕ್ಕೆ ಅಧಿಸೂಚನೆ ಹೊರಡಿಸಲು ಅನುವಾಗುವಂತೆ ಎಲ್ಲ ಇಲಾಖೆಗಳು ನಿಗದಿತ ಗಡುವಿನೊಳಗೆ ನೇಮಕಾತಿ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಲು ಸೂಚಿಸಿದರು. ಪರೀಕ್ಷಾ ವೇಳಾಪಟ್ಟಿಯಲ್ಲಿ ಫಲಿತಾಂಶ ಪ್ರಕಟಣೆಯ ದಿನಾಂಕ ನಿಗದಿಪಡಿಸಲು ಸೂಚಿಸಲಾಯಿತು.
ಸಿಬ್ಬಂದಿ ಕೊರತೆ, ವಿವಿಧ ನೇಮಕಾತಿ ಪ್ರಾಧಿಕಾರಗಳ ಪರೀಕ್ಷೆಗಳೊಂದಿಗೆ ದಿನಾಂಕ ಕ್ಲ್ಯಾಷ್ ಆಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ವಿವಿಧ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳ ನ್ಯೂನ್ಯತೆಯೂ ನೇಮಕಾತಿ ವಿಳಂಬಕ್ಕೆ ಒಂದು ಕಾರಣ ಎಂದು ಸಭೆಗೆ ವಿವರಿಸಲಾಯಿತು.
ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ಇರುವ ಗೊಂದಲಗಳ ಕುರಿತು ಸವಿಸ್ತಾರವಾಗಿ ಪರಿಶೀಲಿಸಿ, ಸಚಿವ ಸಂಪುಟ ಉಪಸಮಿತಿಯ ಆದೇಶಗಳ ಪಾಲನೆಯ ಕುರಿತು ಸಹ, ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಲು ಸೂಚಿಸಿದರು.
ಸಚಿವ ಸಂಪುಟ ಉಪ ಸಮಿತಿಯ ಸೂಚನೆಗಳನ್ನು ಇಲಾಖಾ ಮುಖ್ಯಸ್ಥರು ಪಾಲಿಸಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು, ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನು ಪ್ರತಿ ನೇಮಕಾತಿ ಪ್ರಕ್ರಿಯೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಲ್ಯಾಣ ಕರ್ನಾಟಕ ಕೋಶದ ಸಹಮತಿಯೊಂದಿಗೆ ಅಧಿಸೂಚನೆ ಹೊರಡಿಸಬೇಕೆಂದು ಸೂಚನೆ ನೀಡಲಾಯಿತು.
ಅಂತಿಮ ಆಯ್ಕೆ ಪಟ್ಟಿ ಪ್ರಕಟವಾದ ನಂತರ ಸಿಂಧುತ್ವ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುವುದರಿಂದ ನೇಮಕಾತಿ ಆದೇಶ ನೀಡುವಲ್ಲಿಯೂ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಬಗ್ಗೆ ಇಲಾಖಾ ಮುಖ್ಯಸ್ಥರು, ಪ್ರತಿ ವಾರ ಪರಿಶೀಲನೆ ಮಾಡಬೇಕು. ಸುತ್ತೋಲೆಗಳ ಕೈಪಿಡಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಬೇಕು. ಮುಂದಿನ ವಾರ ಮತ್ತೊಮ್ಮೆ ಸಭೆ ಕರೆದು ಸಂಪೂರ್ಣ ಮಾಹಿತಿ ಪಡೆದು ಚರ್ಚಿಸುವುದಾಗಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | Muda Case: ನಾನು ತನಿಖೆಗೆ ಹೆದರಲ್ಲ, ಕಾನೂನು ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಈಶ್ವರ್ ಖಂಡ್ರೆ, ಕೆ. ಸುಧಾಕರ್, ಡಾ. ಎಂ.ಸಿ. ಸುಧಾಕರ್, ಎನ್.ಎಸ್. ಬೋಸರಾಜು,, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.