Wednesday, 25th September 2024

Bengaluru murder: ಮಹಾಲಕ್ಷ್ಮಿ ಕೊಲೆ ಪ್ರಕರಣ; ಪೊಲೀಸರಿಗೆ ಹೆದರಿ ಆರೋಪಿ ಆತ್ಮಹತ್ಯೆ!

Bengaluru murder

ಬೆಂಗಳೂರು: ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ನೇಪಾಳ ಮೂಲದ ಮಹಾಲಕ್ಷ್ಮಿ ಕೊಲೆ ಪ್ರಕರಣದ (Bengaluru murder) ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ನಾಪತ್ತೆಯಾಗಿರುವ ಆರೋಪಿ, ಪೊಲೀಸರಿಗೆ ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಮಹಾಲಕ್ಷ್ಮಿ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ನಡುವೆ ಕಠಿಣ ಶಿಕ್ಷೆ ಭಯದಿಂದ ಆರೋಪಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮಹಾಲಕ್ಷ್ಮಿಯನ್ನು ಕೊಂದು, ದೇಹವನ್ನು 50ಕ್ಕೂ ಹೆಚ್ಚು ತುಂಡು ತುಂಡು ಮಾಡಿ ಫ್ರಿಡ್ಜ್‌ನಲ್ಲಿಟ್ಟು ಆರೋಪಿ ಪರಾರಿಯಾಗಿದ್ದ. ಆತ ಪಶ್ಚಿಮ ಬಂಗಾಳದಲ್ಲಿ ಇದ್ದಾನೆ ಎಂದು ಪೊಲೀಸರು ತೆರಳಿದ್ದರು. ಆದರೆ, ಇದೀಗ ಆರೋಪಿ ಮುಕ್ತಿ ರಂಜನ್ ರಾಯ್ ಒಡಿಶಾದ ಸ್ವಗ್ರಾಮದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಈತ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವೈಯಾಲಿಕಾವಲ್ ಠಾಣೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ ಶೇಖರ್‌ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ | Muda Case: ಮುಡಾ ಹಗರಣ; ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಸಹೋದ್ಯೋಗಿಯೇ ಹಂತಕ

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿರಿಸಿದ್ದ ಹಂತಕ ಬೇರಾರೂ ಅಲ್ಲ, ಆಕೆಯ ಜತೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಎಂಬುವುದು ಬಯಲಾಗಿದೆ. ಮಹಾಲಕ್ಷ್ಮಿ ಜತೆ ಫ್ಯಾಷನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಟೀಮ್ ಹೆಡ್ ಮುಕ್ತಿ ರಂಜನ್ ರಾಯ್ ಎಂಬಾತನೇ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಹೆಬ್ಬಗೋಡಿಯಲ್ಲಿ ನೆಲೆಸಿದ್ದ. ಮಲ್ಲೇಶ್ವರಂನ ಫ್ಯಾಷನ್ ಫ್ಯಾಕ್ಟರಿಯಲ್ಲಿ ಟೀಂ ಹೆಡ್‌ ಆಗಿ ಈತ ಕೆಲಸ ಮಾಡುತ್ತಿದ್ದ. ಈ ವೇಳೆ ಅದೇ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿಯನ್ನು ರಂಜನ್ ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಅದೇನಾಯ್ತೋ ಏನೋ ಮಹಾಲಕ್ಷ್ಮಿಯನ್ನು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ ಎನ್ನಲಾಗಿದೆ.

ಮಹಾಲಕ್ಷ್ಮಿಯನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದ ಬಳಿಕ ಆರೋಪಿ, ತನ್ನ ಸೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ನಂತರ ಅಲ್ಲಿಂದ ಪರಾರಿಯಾಗಿದ್ದ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿತ್ತು. ತಾಂತ್ರಿಕ ಮಾಹಿತಿ ಆಧರಿಸಿ, ಬೆಂಗಳೂರಿನಲ್ಲೇ ಇರುವ ಆರೋಪಿಯ ಸೋದರನನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದರು.

ಮಹಾಲಕ್ಷ್ಮಿಗೆ ಹಾಗೂ ಆರೋಪಿ ನಡುವಿನ ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ. ಇತ್ತೀಚಿಗೆ ಈ ಜೋಡಿ ಮಧ್ಯೆ ಮನಸ್ತಾಪ ಮೂಡಿತ್ತು. ನಂತರ ಬೇರೊಬ್ಬನ ಜೊತೆ ಮಹಾಲಕ್ಷ್ಮಿ ಸಲುಗೆ ಬೆಳೆಸಿಕೊಂಡಿದ್ದಳು. ಈ ವಿಚಾರ ತಿಳಿದು ಕೋಪಗೊಂಡಿದ್ದ ಆರೋಪಿ, ಆತನ ಸಂಗ ಬಿಡುವಂತೆ ಮಹಾಲಕ್ಷ್ಮಿಗೆ ತಾಕೀತು ಮಾಡಿದ್ದ. ಇದೇ ವಿಷಯವಾಗಿ ಮಹಾಲಕ್ಷ್ಮಿ ಹಾಗೂ ಆರೋಪಿಗೆ ಜಗಳವಾಗಿ ಆತ ಕೊಲೆ ಮಾಡಿದ್ದ.

ಗೆಳತಿಯನ್ನು ಕೊಂದು ಬಚ್ಚಿಟ್ಟ ಬಳಿಕ ಒಡಿಶಾಕ್ಕೆ ಪರಾರಿಯಾಗಲು ಆರೋಪಿ ಯೋಜಿಸಿದ್ದ. ಅಂದು ರಾತ್ರಿ ತನ್ನ ಸೋದರನಿಗೆ ಕರೆ ಮಾಡಿದ ಆರೋಪಿ, ಮಹಾಲಕ್ಷ್ಮಿಯನ್ನು ಕೊಲೆ ಮಾಡಿದ್ದೇನೆ. ನನ್ನನ್ನು ಪೊಲೀಸರು ಬಂಧಿಸುತ್ತಾರೆ. ಹಾಗಾಗಿ ನಾನು ಬೆಂಗಳೂರು ತೊರೆದು ಹೋಗುತ್ತಿದ್ದೇನೆ. ನೀನೂ ಹೊರಟುಬಿಡು ಎಂದು ಹೇಳಿದ್ದೆ. ಆದರೆ ಸೋದರ ನಗರ ತೊರೆದಿರಲಿಲ್ಲ.

ಈ ಸುದ್ದಿಯನ್ನೂ ಓದಿ | Bengaluru Woman Murder: ಪ್ರೇಯಸಿಯನ್ನು ಕೊಚ್ಚಿ ಫ್ರಿಜ್‌ನಲ್ಲಿ ತುಂಬಿದ ಪಾತಕಿ ಪಶ್ಚಿಮ ಬಂಗಾಳದಲ್ಲಿ ಕಣ್ಮರೆ

ಮೃತಳ ಮೊಬೈಲ್‌ ಕರೆ (ಸಿಡಿಆರ್)ಗಳನ್ನು ಪರಿಶೀಲಿಸಿದಾಗ ಆರೋಪಿ ಸೇರಿ ಮೂವರ ಜತೆ ಆಕೆ ಹೆಚ್ಚಿನ ಸಂಭಾಷಣೆ ನಡೆಸಿರುವುದು ಗೊತ್ತಾಗಿತ್ತು. ಈ ಸಿಡಿಆರ್‌ ಆಧರಿಸಿ ಮಹಾಲಕ್ಷ್ಮಿ ಜತೆ ನಿಕಟ ಸಂಪರ್ಕದಲ್ಲಿದ್ದವರ ಪತ್ತೆ ಹಚ್ಚಲಾಗಿತ್ತು. ಆದರೆ ಮೂವರ ಪೈಕಿ ಇಬ್ಬರು ಮಾತ್ರ ಸಿಕ್ಕಿದ್ದರು. ಮತ್ತೊಬ್ಬ ಸಿಕ್ಕಿರಲಿಲ್ಲ. ಆತನ ಮೊಬೈಲ್ ಕರೆಗಳ ವಿವರ ಸಂಗ್ರಹಿಸಿದಾಗ ಪಶ್ಚಿಮ ಬಂಗಾಳದಲ್ಲಿ ಕೊನೆಯ ಬಾರಿ ಲೋಕೇಷನ್ ಸಿಕ್ಕಿತ್ತು. ನಂತರ ಆರೋಪಿ ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದ. ಹೀಗಾಗಿ ಆರೋಪಿ ಮತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.