ತುಮಕೂರು: ತುಮಕೂರಿನ ದೈನಂದಿನ ಪ್ರಯಾಣಿಕರ ಅನುಕೂಲಕ್ಕಾಗಿ ಮೆಮು ರೈಲನ್ನು ಸಚಿವ ವಿ. ಸೋಮಣ್ಣ, ಸೆ. 27 ರಂದು ಲೋಕಾರ್ಪಣೆ ಮಾಡಲಿದ್ದಾರೆ. ತುಮಕೂರು-ಯಶವಂತಪುರಕ್ಕೆ ಪ್ರತಿನಿತ್ಯ ಎರಡು ಬಾರಿ ಸಂಚರಿಸುವ ಹೊಸ ಮೆಮು ರೈಲುಗಳ ಸಂಚಾರಕ್ಕೆ ನಗರದ (Tumkur News) ರೈಲ್ವೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಲಿದ್ದಾರೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿನಿತ್ಯ ತುಮಕೂರಿನಿಂದ ಬೆಂಗಳೂರಿಗೆ ನಾನಾ ಕೆಲಸ ಕಾರ್ಯಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದನ್ನು ಮನಗಂಡ ಸಚಿವ ವಿ. ಸೋಮಣ್ಣ ಅವರು, ಸಂಸದರಾಗಿ, ಮಂತ್ರಿಗಳಾದ ಕೇವಲ 3 ತಿಂಗಳಲ್ಲೇ ಈ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೆಮು ರೈಲು ಸೇವೆ ಆರಂಭಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru News: ಅರುಣ್ ಯೋಗಿರಾಜ್ ಸೇರಿ ನಾಲ್ವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ
ಈ ಹೊಸ ಮೆಮು ರೈಲು ಭಾನುವಾರ ಹೊರತುಪಡಿಸಿ ವಾರದ 6 ದಿನ ಸಂಚರಿಸಲಿದ್ದು, ತುಮಕೂರಿನಿಂದ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಮತ್ತೆ ಈ ರೈಲು ಸಂಜೆ 5.40 ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಟು 7.05ಕ್ಕೆ ತುಮಕೂರು ತಲುಪಲಿದೆ ಎಂದು ಅವರು ಮಾಹಿತಿ ನೀಡಿದರು.
ತುಮಕೂರು ರೈಲ್ವೆ ನಿಲ್ದಾಣದಲ್ಲಿ ವಂದೇಭಾರತ್ ರೈಲು ನಿಲುಗಡೆಯಾಗುತ್ತಿರಲಿಲ್ಲ. ಸೋಮಣ್ಣ ಅವರು ಮಂತ್ರಿಯಾದ ಬಳಿಕ ಪ್ರಧಾನಮಂತ್ರಿಗಳ ಬಳಿ ಚರ್ಚಿಸಿ ಒಪ್ಪಿಗೆ ಪಡೆದು ವಂದೇಭಾರತ್ ರೈಲು ನಿಲುಗಡೆಗೂ ಕ್ರಮ ಕೈಗೊಂಡಿದ್ದಾರೆ ಎಂದರು.
ಇದುವರೆಗೂ ತುಮಕೂರು ರೈಲು ನಿಲ್ದಾಣದ ಅಭಿವೃದ್ಧಿಗೆ ಕೇವಲ 18-20 ಕೋಟಿ ರೂ. ಮಂಜೂರಾಗುತ್ತಿತ್ತು. ಆದರೆ ಸೋಮಣ್ಣ ಅವರು ರೈಲ್ವೆ ಸಚಿವರಾದ ಬಳಿಕ 100 ಕೋಟಿಗೂ ಹೆಚ್ಚು ಅನುದಾನದಲ್ಲಿ ರೈಲ್ವೆ ನಿಲ್ದಾಣ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಂಡಿದ್ದಾರೆ. ಇದು ಕ್ಷೇತ್ರವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುವ ಧ್ಯೋತಕವಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | PM Kisan Yojana: ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಬರಬೇಕಾದರೆ ಈ ನಿಯಮ ಪಾಲಿಸಿ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಜೆಡಿಎಸ್ ಮುಖಂಡ ಟಿ.ಆರ್. ನಾಗರಾಜು, ಜಿ.ಪಂ. ಮಾಜಿ ಸದಸ್ಯ ವೈ.ಎಚ್. ಹುಚ್ಚಯ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.