Sunday, 24th November 2024

VK Saxena: ಸಂಚಾರಿ ನಿಯಮ ಬ್ರೇಕ್‌ ವಿರುದ್ಧ ಖಡಕ್‌ ರೂಲ್! ವಾಹನ ಇನ್ಶೂರೆನ್ಸ್‌ ಪ್ರೀಮಿಯಂ ಏರಿಕೆಗೆ ಕೇಂದ್ರಕ್ಕೆ ಮನವಿ

V k saxena

ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆಗಳನ್ನು ತಡೆಯಲು ಮತ್ತು ರಸ್ತೆ ಸುರಕ್ಷತೆಯನ್ನು ಸುಧಾರಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್(Delhi lieutenant governor) ವಿ.ಕೆ ಸಕ್ಸೇನಾ(VK Saxena) ಅವರು ಹೊಸ ಪ್ರಸ್ತಾವಣೆಯೊಂದನ್ನು ಕೇಂದ್ರದ ಮುಂದೆ ಇಟ್ಟಿದ್ದಾರೆ. ವಾಹನ ವಿಮಾ ಕಂತು(Vehicle insurance premiums)ಗಳನ್ನು ದಾಖಲಾದ ಸಂಚಾರಿ ಅಪರಾಧಗಳ ಸಂಖ್ಯೆಗೆ ಜೋಡಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರನ್ನು ಒತ್ತಾಯಿಸಿದ್ದಾರೆ. ಆ ಮೂಲಕ ಸಂಚಾರಿ ನಿಯಮವನ್ನು ಪದೇ ಪದೇ ಉಲ್ಲಂಘನೆ ಮಾಡುವ ವಾಹನಗಳ ವಿಮಾ ಪ್ರೀಮಿಯಂ ಅನ್ನು ಏರಿಕೆ ಮಾಡಲಾಗುತ್ತದೆ. ಇದೇ ರೀತಿಯ ಕ್ರಮಗಳನ್ನು ಅಮೆರಿಕ ಮತ್ತು ವಿವಿಧ ಯುರೋಪಿಯನ್ ರಾಷ್ಟ್ರಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ ಎಂದು ಸಕ್ಸೇನಾ ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿರುವ ವಿ.ಕೆ ಸಕ್ಸೇನಾ, ವಾಹನದ ವಿರುದ್ಧ ದಾಖಲಾದ ಟ್ರಾಫಿಕ್ ಉಲ್ಲಂಘನೆಗಳ ಕೇಸ್‌ ಸಂಖ್ಯೆಯೊಂದಿಗೆ ವಿಮಾ ಪ್ರೀಮಿಯಂ ಅನ್ನು ಲಿಂಕ್ ಮಾಡಬೇಕು ಎಂದು ನಾನು ನಿಮಗೆ ಮನವಿ ಮಾಡುತ್ತಿದ್ದೇನೆ. ಇದು ರಸ್ತೆ ಸುರಕ್ಷತೆ ಮತ್ತು ಸಂಚಾರ ಶಿಸ್ತಿನ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ ಎಂದು ಸಕ್ಸೇನಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಪ್ರಕಾರ, ಭಾರತವು 2022 ರಲ್ಲಿ 4.37 ಲಕ್ಷಕ್ಕೂ ಹೆಚ್ಚು ರಸ್ತೆ ಅಪಘಾತಗಳನ್ನು ಕಂಡಿದೆ, ಇದು ಸರಿಸುಮಾರು 1.55 ಲಕ್ಷ ಸಾವುಗಳಿಗೆ ಕಾರಣವಾಗಿತ್ತು. ಈ ಅಪಘಾತಗಳಲ್ಲಿ ಸುಮಾರು 70 ಪ್ರತಿಶತದಷ್ಟು ಅತಿವೇಗವು ಅಥವಾ ರಾಶ್‌ ಡ್ರೈವಿಂಗ್ ಕಾರಣವಾಗಿದೆ. ವಿಶ್ವಬ್ಯಾಂಕ್‌ನ ಅಪಘಾತದ ದತ್ತಾಂಶದ ವಿಶ್ಲೇಷಣೆಯು ಕ್ಲೀನ್ ಡ್ರೈವಿಂಗ್ ರೆಕಾರ್ಡ್ ಹೊಂದಿರುವ ವಾಹನಗಳಿಗೆ ಹೋಲಿಸಿದರೆ ಬಹು ಟ್ರಾಫಿಕ್ ಉಲ್ಲಂಘನೆ ಹೊಂದಿರುವ ವಾಹನಗಳು ಮಾರಣಾಂತಿಕ ಅಪಘಾತಗಳಲ್ಲಿ ಭಾಗಿಯಾಗುವ ಪ್ರಮಾಣ ಶೇಕಡಾ 40 ರಷ್ಟು ಹೆಚ್ಚು ಎಂದು ಸೂಚಿಸುತ್ತದೆ ಎಂದು ಸಕ್ಸೇನಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅವರು ದೆಹಲಿ ಟ್ರಾಫಿಕ್ ಪೋಲೀಸರ 2023 ರ ವರದಿಯನ್ನು ಉಲ್ಲೇಖಿಸಿದ್ದು, ಇದು 60 ಪ್ರತಿಶತದಷ್ಟು ರಸ್ತೆ ಅಪಘಾತಗಳು ಈ ಹಿಂದೆ ಟ್ರಾಫಿಕ್ ಉಲ್ಲಂಘನೆಗಾಗಿ ದಂಡ ವಿಧಿಸಲಾದ ವಾಹನಗಳಿಂದಲೇ ನಡೆದಿದೆ. ಮುಖ್ಯವಾಗಿ ಅತಿ ವೇಗ ಮತ್ತು ಸಿಗ್ನಲ್‌ ಜಂಪಿಂಗ್ ಇಂತಹ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿದ ಕೇಸ್‌ ಆ ವಾಹನಗಳ ಮೇಲಿತ್ತು ಎಂದು ಸಕ್ಸೇನಾ ತಿಳಿಸಿದ್ದಾರೆ.

MoRTH’S VAHAN ಡೇಟಾಬೇಸ್‌ನಲ್ಲಿ ದಾಖಲಾಗಿರುವ ಸಂಚಾರ ಉಲ್ಲಂಘನೆಗಳ ಕೇಸ್‌ ದಾಖಲೆಗಳ ಆಧಾರದ ಮೇಲೆ ಲೇಯರ್ಡ್ ಇನ್ಶೂರೆನ್ಸ್ ಪ್ರೀಮಿಯಂ ವ್ಯವಸ್ಥೆಯನ್ನು ಪರಿಚಯಿಸಬಹುದು ಎಂದು ನಾನು ಸಲಹೆ ನೀಡುತ್ತೇನೆ. ಅತಿವೇಗ, ಸಿಗ್ನಲ್‌ ಜಂಪಿಂಗ್ ಮತ್ತು ಅಪಾಯಕಾರಿ ವಾಹನ ಚಾಲನೆಯಂತಹ ಅಪರಾಧಗಳನ್ನು ಪದೇ ಪದೆ ಎಸಗುವ ವಾಹನವು ಹೆಚ್ಚಿನ ವಿಮಾ ಪ್ರೀಮಿಯಂ ಪಾವತಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಹೇಳಿದರು. ಒಂದು ವೇಳೆ ಈ ನಿಯಮ ಜಾರಿಯಾದರೆ ವಿಮಾ ಪ್ರೀಮಿಯಂಗಳು ಶೇಕಡಾ 20 ರಿಂದ 30 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: Delhi-Mumbai Expressway: ದೆಹಲಿ- ಮುಂಬಯಿ ಎಕ್ಸ್‌ಪ್ರೆಸ್‌ವೇನಲ್ಲಿ ಗುಂಡಿಗಳಾಗಲು ಇಲಿಗಳು ಕಾರಣ ಎಂದಿದ್ದ ನೌಕರ ವಜಾ!