ನವದೆಹಲಿ: ನನ್ನ ಮೇಲಿನ ಪ್ರಕರಣಗಳಿಗೂ ನಿಮ್ಮ ಹಗರಣಕ್ಕೂ ವ್ಯತ್ಯಾಸ ಇದೆ. ನನ್ನ ಮೇಲಿನ ಆರೋಪಗಳ ಮಾತು ಆಮೇಲೆ. ನಿಮ್ಮ ವಿರುದ್ಧ ಹೈಕೋರ್ಟ್ (High Court), ಜನಪ್ರತಿನಿಧಿಗಳ ನ್ಯಾಯಾಲಯಗಳಿಂದ ಆದೇಶಗಳು ಬಂದಿವೆ. ಅದಕ್ಕೇನು ಹೇಳುತ್ತೀರಿ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿ ರಾಜೀನಾಮೆ ಕೊಟ್ಟರಾ? ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ದೆಹಲಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿರುಗೇಟು ನೀಡಿರುವ ಅವರು, ಹೈಕೋರ್ಟ್‌ನಲ್ಲಿ ವಾದ ಮಾಡುವಾಗ ವಕೀಲರು ಮುಡಾ ಹಗರಣದ ಅಕ್ರಮಗಳನ್ನು ಎಳೆ ಎಳೆಯಾಗಿ ಇಂಚಿಂಚು ಮಾಹಿತಿ ಕೋರ್ಟ್ ಕಲಾಪದಲ್ಲಿ ಬಿಚ್ಚಿಡಲಾಗಿದೆ. ನ್ಯಾಯಾಲಯಗಳ ಆದೇಶವೂ ಬಂದಿದೆ. ಹೇಳಿಕೊಳ್ಳುವುದಕ್ಕೆ ನಿಮಗೆ ಏನಿದೆ? ಎಂದು ಕೇಂದ್ರ ಸಚಿವರು ಟಾಂಗ್ ನೀಡಿದ್ದಾರೆ.
ರಾಜ್ಯ ಬೊಕ್ಕಸಕ್ಕೆ ನಯಾಪೈಸೆ ನಷ್ಟ ಆಗಿಲ್ಲ
ಕುಮಾರಸ್ವಾಮಿ ಸರ್ಕಾರಿ ಭೂಮಿ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಬಗ್ಗೆಯೂ ಅವರು ಮಾತನಾಡುತ್ತಿದ್ದಾರೆ. ಈ ಬಗ್ಗೆ ನಾನು ಹಿಂದೆಯೆ ಹೇಳಿದೇನೆ. ಅರ್ಜಿ ಹಾಕದಿರುವ ಕಂಪನಿಗೆ ಗಣಿ ಗುತ್ತಿಗೆ ಕೊಡಲಾಗಿದೆ ಎನ್ನುತ್ತಿದ್ದಾರೆ. ಅವರು ಅರ್ಜಿ ಹಾಕಿದ್ದಾರೆ, ಆದರೆ ಅವರಿಗೆ ಗಣಿ ಗುತ್ತಿಗೆ ನೀಡಲಾಗಿಲ್ಲ. ಅವರಿಗೆ ಒಂದು ಇಂಚು ಭೂಮಿಯನ್ನು ಕೊಡಲಾಗಿಲ್ಲ, ರಾಜ್ಯ ಬೊಕ್ಕಸಕ್ಕೆ ನಯಾಪೈಸೆ ನಷ್ಟ ಆಗಿಲ್ಲ. ಹೀಗಿದ್ದ ಮೇಲೆ ಅದು ಹಗರಣ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಈ ಸುದ್ದಿಯನ್ನೂ ಓದಿ | Tirupati Laddu Row: ತಿರುಪತಿ ಲಡ್ಡು ವಿವಾದ; ತಮಿಳುನಾಡು ಡೈರಿ ಸಂಸ್ಥೆ ವಿರುದ್ಧ TTD ದೂರು
ರಾಜ್ಯ ಸರ್ಕಾರ 2009 ರಲ್ಲೇ ಭೂಮಿ ಯಾರಿಗೂ ಕೊಡಲಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಯಾರೋ ಒಬ್ಬ ಅಧಿಕಾರಿ ಮಾಡಿದ ತಪ್ಪಿಗೆ ಕುಮಾರಸ್ವಾಮಿ ಮೇಲೆ ಆರೋಪ ಮಾಡುತ್ತಿದ್ದಾರೆ ಇವರು. ಜಂತಕಲ್ ಮೈನಿಂಗ್ ವಿಚಾರದಲ್ಲಿ ಆಗಿನ ಸಿಎಂ ಆದೇಶ ಮಿಸ್ ಕಂಡಕ್ಟ್ ಆಗಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ನ್ಯಾ. ಸಂತೋಷ ಹೆಗಡೆ ಅವರು ಹಾಗೆಂದು ಉಲ್ಲೇಖ ಮಾಡಿದ್ದಾರೆ. ಅದರ ಹೊರತಾಗಿ ಹಣ ಪಡೆದುಕೊಂಡೊ ಅಥವಾ ಭೂಮಿಗಾಗಿ, ಲಾಭಕ್ಕಾಗಿ ಮಾಡಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಸಾಯಿ ವೆಂಕಟೇಶ್ವರ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ 2012 ರಿಂದ ಇದೆ ಎಂದು ಅವರು ಮಾಹಿತಿ ನೀಡಿದರು.
ಸಿಎಂ ಸಾಹೇಬರಿಗೆ ಕೋರ್ಟ್ ಆದೇಶದ ಪ್ರತಿಯೇ ಸಿಕ್ಕಿಲ್ಲವಂತೆ
ಮುಡಾ ಹಗರಣ ಬಗ್ಗೆ ಚರ್ಚೆ ನಡೆಯುತ್ತಿದೆ. ಹೈಕೋರ್ಟ್ ಪೀಠದಲ್ಲಿ ಸಿಎಂ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಕೋರ್ಟ್ ಆದೇಶದ ಪ್ರತಿ ಎಲ್ಲರಿಗೂ ಸಿಕ್ಕಿದೆ. ಹಲವಾರು ಕಾನೂನು ತಜ್ಞರು ತೀರ್ಪಿನ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಆದೇಶದ ಬಗ್ಗೆ ಮಾಧ್ಯಮಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಸುದ್ದಿ ಪ್ರಸಾರವಾಗಿದೆ. ಆದರೆ, ಸಿಎಂ ಸಾಹೇಬರಿಗೆ ಕೋರ್ಟ್ ಆದೇಶದ ಪ್ರತಿಯೇ ಸಿಕ್ಕಿಲ್ಲವಂತೆ. ನಿಮ್ಮ ವಿರುದ್ಧ ಬಂದಿರುವ ಆದೇಶದ ಬಗ್ಗೆ ಮಾತನಾಡಿ ಎಂದರೆ, ಜೆಡಿಎಸ್, ಬಿಜೆಪಿ ಒಳಸಂಚು ಮಾಡಿವೆ, ಕುಮಾರಸ್ವಾಮಿ ಯಾವಾಗ ರಾಜೀನಾಮೆ ಕೊಡುತ್ತಾರೆ ಎಂದು ಕೇಳುತ್ತಾರೆ ಸಿದ್ದರಾಮಯ್ಯ ಅವರು. ಇದು ನಮ್ಮ ಸಿಎಂ ವರಸೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ನನ್ನ ರಾಜಿನಾಮೆಯನ್ನು ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ರಾಜೀನಾಮೆ ಕೇಳಿದ್ದಾರೆ. ನನ್ನ ಮೇಲಿನ ಆರೋಪ ಮುಕ್ತವಾದ ಮೇಲೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದೇನೆ. ಮುಡಾ ವಿಚಾರದಲ್ಲಿ ನಿಮ್ಮ ಭಂಡತನ ಎಷ್ಟು ಎಂಬುದನ್ನು ಇವರೇ ತೋರಿಸುತ್ತಿದ್ದಾರೆ. ಜನ ಇವರ ನಾಟಕ ನೋಡುತ್ತಿದ್ದಾರೆ ಎಂದು ಅವರು ಹೇಳಿದರು.
ಹಿಂದೆ ಇದೇ ಸಿದ್ದರಾಮಯ್ಯ ಐದು ವರ್ಷಗಳ ಸರ್ಕಾರ ಮಾಡಿದ್ದಾಗ ದಿನವೂ ಇಂಥವೇ ಅಕ್ರಮಗಳನ್ನು ನಡೆಸಿದ್ದರು. ಅದನ್ನು ದಿನವೂ ನಾನು ಪ್ರಶ್ನೆ ಮಾಡುತ್ತಿದ್ದೆ. ಇವನೊಬ್ಬನಿಂದ ನನಗೆ ಮುಜುಗರ ಇಲ್ಲದೆ ಆಡಳಿತ ನಡೆಸೋಕೆ ಆಗುತ್ತಿಲ್ಲ, ಇವನನ್ನು ಮಟ್ಟ ಹಾಕಿದರೆ ನನಗೆ ಅಡ್ಡ ಯಾರೂ ಇರುವುದಿಲ್ಲ ಎಂದು ಅವತ್ತೇ ನನ್ನ ವಿರುದ್ಧ ಕುತಂತ್ರ ಮಾಡಿದರು. ಜನರ ಪರವಾಗಿ ಹೋರಾಟ ಮಾಡಿದ್ದಕ್ಕೆ ಪ್ರತಿಯಾಗಿ ನಾನು ಇವತ್ತು ಇದೆಲ್ಲಾ ಎದುರಿಸಬೇಕಿದೆ. ಧೈರ್ಯವಾಗಿ ಎದುರಿಸುತ್ತೇನೆ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.
ಯಾರಿಂದಲೂ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ
ಹೆದರಿಸಿ ಕುಮಾರಸ್ವಾಮಿ ಬಾಯಿ ಮುಚ್ಚಿಸಿಸಬಹುದು ಎಂದು ಕಾಂಗ್ರೆಸ್‌ನವರು ಭಾರೀ ಸಂಚು ಮಾಡಿದರು. ಆದರೂ ಇವರಿಗೆ ನನ್ನ ಬಾಯಿ ಮುಚ್ಚಿಸಲು ಸಾಧ್ಯವಾಯಿತಾ? ಯಾರಿಂದಲೂ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ | Donald Trump: ಇರಾನ್‌ನಿಂದ ನನ್ನ ಹತ್ಯೆಗೆ ಸಂಚು- ಡೆಡ್ಲಿ ಅಟ್ಯಾಕ್ ಬಗ್ಗೆ ಮೌನ ಮುರಿದ ಟ್ರಂಪ್
ಡಿನೋಟಿಫಿಕೇಶನ್ ವಿಚಾರಕ್ಕೆ ಬರುವುದಾರೆ, ರಾಜಶೇಖರಯ್ಯ ಅನಾಮಿಕ ಎಂದು ಸಚಿವರು ಹೇಳಿದ್ದಾರೆ. 2007 ರ ವಿಳಾಸವನ್ನು ಈಗ ಹುಡುಕಿಕೊಂಡು ಹೋದರೆ ಏನು ಪ್ರಯೋಜನ? ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಹುಡುಕಿಕೊಂಡು ಯಾಕೆ ಹೋಗಲಿಲ್ಲ? ಇವರು ನನ್ನ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನನ್ನ ನೈತಿಕತೆಯನ್ನು ಸಾಬೀತು ಮಾಡಿ ಉತ್ತರ ಕೊಡುತ್ತೇನೆ ಎಂದು ಅವರು ಸವಾಲು ಹಾಕಿದರು.
ಗಂಗೇನಹಳ್ಳಿ ಭೂಮಿ ಸರ್ಕಾರಿ ಭೂಮಿ ಎಂದು ಸುಳ್ಳು ಹೇಳಿದ್ದಾರೆ. ಸ್ವಾಧೀನ ಮಾಡಿಕೊಂಡ ಭೂಮಿಗೆ ಬಿಡಿಎ ಪರಿಹಾರ ನೀಡಿದ್ದಾರೆಯೇ? ಅಲ್ಲಿ ಬಡಾವಣೆ ಮಾಡಲಾಗಿದೆಯೇ? ಯಾರಿಗಾದರೂ ನಿವೇಶನ ಹಂಚಿಕೆ ಆಗಿದೆಯಾ? 1975-76 ರಲ್ಲಿ ಅದಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 2007 ವರೆಗೂ ಸ್ವಾಧೀನ ಮಾಡಿಕೊಂಡಿದ್ದ ಜಾಗದಲ್ಲಿ ನಿವೇಶನ ಮಾಡಿ ಹಂಚಿಲ್ಲ? ಯಾವುದೇ ಭೂಮಿಯನ್ನು ಸ್ವಾಧೀನ ಮಾಡಿಕೊಂಡರೆ ಐದು ವರ್ಷದಲ್ಲಿ ಉಪಯೋಗ ಮಾಡಿಕೊಳ್ಳದಿದ್ದರೆ ಆ ಭೂಮಿಯನ್ನು ಮರಳಿ ರೈತರಿಗೆ ಕೊಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇದು ಸರ್ಕಾರಕ್ಕೆ ಗೊತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದರು.
ನನ್ನ ಬಾವಮೈದ ಆ ಜಾಗವನ್ನು ಖರೀದಿ ಮಾಡಿದ್ದಾನೆ. ಡಿನೋಟಿಫಿಕೇಶನ್ ಆದ ಜಾಗವನ್ನು ಮಾರಾಟ ಮಾಡಬಾರದು ಎಂದು ಕಾನೂನಿನಲ್ಲಿ ಇದೆಯಾ? ಸಿದ್ದರಾಮಯ್ಯ ಅವರಿಗೂ ಅದೇ ಹೇಳಿದ್ದೇನೆ, ಕಾನೂನು ವ್ಯಾಪ್ತಿಯಲ್ಲಿ ಹದಿನೈದು ಅಲ್ಲದಿದ್ದರೆ ಐವತ್ತು ನಿವೇಶನ ತೆಗೆದುಕೊಳ್ಳಿ ಎಂದು ಹೇಳಿದ್ದೇನೆ ಎಂದು ಅವರು ಗುಡುಗಿದರು.
ನನ್ನ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ಕೊಡುತ್ತೇನೆ. ನಾನು ಪಲಾಯನ ಮಾಡುವ ಪೈಕಿ ಅಲ್ಲ. ನಾನು ಯಾವ ಪ್ರಭಾವ ಬಳಸಲ್ಲ. ಯಾರ ನೆರವೂ ಪಡೆಯಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ ಅವರು, ಕರ್ನಾಟಕದಲ್ಲಿ ಇರುವುದು ದರೋಡೆಕೋರರ ಸರ್ಕಾರ. ಅವರು ಹಿಂದೆಯೂ ದರೋಡೆ ಮಾಡುತ್ತಿದ್ದರು. ಈಗಲೂ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕೇರಳದ ಬಸ್‌ನಲ್ಲಿ ಚಿನ್ನದ ವ್ಯಾಪಾರಿಯಿಂದ ಚಿನ್ನ ಲೂಟಿ ಮಾಡಿದ ನಿಮ್ಮ ಹಣೆಬರಹ ಮರೆತಿದ್ದಾರ? ಎಂದು ದೂರಿದರು.
ಈ ಸುದ್ದಿಯನ್ನೂ ಓದಿ | Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಯಾರಿಗೆ ಚಪ್ಪಲಿ ಹಾರ ಹಾಕುತ್ತೀರಿ?
ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದಾಗ ರಾಜ್ಯಪಾಲರ ಚಿತ್ರಕ್ಕೆ ಕಾಂಗ್ರೆಸ್‌ನವರು ಚಪ್ಪಲಿ ಹಾರ ಹಾಕಿದರು. ಈಗ ಹೈಕೋರ್ಟ್ ಆದೇಶ ನೀಡಿದೆ, ಇವರು ಯಾರಿಗೆ ಚಪ್ಪಲಿ ಹಾರ ಹಾಕುತ್ತಾರೆ? ಎಂದ ಅವರು, ಸಿದ್ದರಾಮಯ್ಯಗೆ ಹಾಕಬೇಕೋ ಅಥವಾ ಯಾರಿಗೆ ಹಾಕಬೇಕು? ಯಾರ ಪ್ರತಿಕೃತಿ ದಹನ ಮಾಡುತ್ತೀರಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.