Monday, 25th November 2024

Pralhad Joshi: 2026ರ ವೇಳೆಗೆ 100 GW ಸೌರ ಶಕ್ತಿ ಉತ್ಪಾದನೆಗೆ ಯೋಜನೆ; ಪ್ರಲ್ಹಾದ್‌ ಜೋಶಿ

Pralhad Joshi

ನವದೆಹಲಿ: ಭಾರತ 2026ರ ವೇಳೆಗೆ 100 GW ಸೌರ ಶಕ್ತಿ ಉತ್ಪಾದನೆಗೆ ಯೋಜನೆ ಹಾಕಿಕೊಂಡಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಇಂದು ನಡೆದ ಎಕನಾಮಿಕ್ ಟೈಮ್ಸ್ ಎನರ್ಜಿ ಲೀಡರ್‌ಶಿಪ್ ಶೃಂಗಸಭೆ 2024 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯದಲ್ಲಿ ಕ್ಷಿಪ್ರ ಬೆಳವಣಿಗೆ ಕಂಡಿದೆ. ದೇಶೀಯ ಬೇಡಿಕೆ ಪೂರೈಸುವ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಕೈಗೊಂಡು ವಿದೇಶಿ ವಿನಿಮಯ ಗಳಿಸುವಲ್ಲಿ ತನ್ನದೇ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ದಶಕದಲ್ಲಿ ನಿರೀಕ್ಷೆ ಮೀರಿ ಸಾಧನೆ

2014 ರಲ್ಲಿ ಭಾರತದ ಸ್ಥಾಪಿತ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಕೇವಲ 2.3 GW ಇತ್ತು. ಅದೀಗ ಒಂದು ದಶಕದಲ್ಲಿ ಸರಿಸುಮಾರು 67 GW ಗೆ ಅತ್ಯಧಿಕ ಏರಿಕೆ ಕಂಡು “ಮೇಕ್ ಇನ್ ಇಂಡಿಯಾ” ಆಗುವತ್ತ ದಾಪುಗಾಲಿಟ್ಟಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru News: ಅರುಣ್ ಯೋಗಿರಾಜ್ ಸೇರಿ ನಾಲ್ವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ

2021ರಲ್ಲಿ ಇದ್ದ 8 GW ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯ ಕಳೆದ 3.5 ವರ್ಷಗಳಲ್ಲಿ ವರ್ಷಕ್ಕೆ 67 GW ಗೆ ಜಿಗಿದಿದೆ. 2026 ರ ವೇಳೆಗೆ ಪ್ರತಿ ವರ್ಷ 100 GW ಗೆ ಕೊಂಡೊಯ್ಯುವ ಯೋಜನೆ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

45000 ಜನರಿಗೆ ನೇರ ಉದ್ಯೋಗ

ಸೌರ ಪಿಎಲ್‌ಐ (PLI) ಯೋಜನೆ ಭಾರತಕ್ಕೆ ಅತ್ಯಾಧುನಿಕ ಸೌರ ಶಕ್ತಿ ಮಾಡ್ಯೂಲ್ ಉತ್ಪಾದನಾ ತಂತ್ರಜ್ಞಾನ ತರುತ್ತಿದ್ದು, 1.1 ಲಕ್ಷ ಕೋಟಿ ಆರ್ಥಿಕ ಉಳಿತಾಯದ ಜತೆಗೆ ಸುಮಾರು 45,000 ಜನರಿಗೆ ನೇರ ಉದ್ಯೋಗವನ್ನೂ ಸೃಷ್ಟಿಸುತ್ತದೆ. ಅಲ್ಲದೇ, ಆಮದು ಅವಲಂಬನೆ ಕಡಿಮೆ ಮಾಡುತ್ತದೆ ಎಂದು ಜೋಶಿ ತಿಳಿಸಿದರು.

ಹೂಡಿಕೆ ಆಕರ್ಷಣೆ

ಸೌರ ಪಿಎಲ್‌ಐ (PLI) ಯೋಜನೆಯಡಿ 48 GW ಸಂಪೂರ್ಣ ಅಥವಾ ಭಾಗಶಃ ಸಂಯೋಜಿತ ಸೌರ PV ಮಾದರಿ ಉತ್ಪಾದನಾ ಯೋಜನೆಗಳು ಪ್ರಸ್ತುತ ಅನುಷ್ಠಾನದಲ್ಲಿವೆ. ಈ ಯೋಜನೆಗಳು ಲಕ್ಷ ಲಕ್ಷ ಕೋಟಿ ರೂಪಾಯಿ ಹೂಡಿಕೆಯನ್ನು ಆಕರ್ಷಿಸುತ್ತವೆ ಎಂದು ಹೇಳಿದರು.

ಸೋಲಾರ್ ಶಕ್ತಿ ಉತ್ಪಾದನೆಗೆ ಉತ್ತೇಜನ

ಸೌರ ಶಕ್ತಿ ಉತ್ಪಾದನೆ ನಿಟ್ಟಿನಲ್ಲಿ ಸರ್ಕಾರ ಗಮನಾರ್ಹ ಪ್ರಯತ್ನ ನಡೆಸಿದೆ. ಸೌರ ಶಕ್ತಿ ತಯಾರಿಕೆಯಲ್ಲಿ ಭಾರತ ಆತ್ಮನಿರ್ಭರ್ ಆಗಲಿದೆ. ಇದಕ್ಕಾಗಿ 24000 ಕೋಟಿ ರೂ. ವೆಚ್ಚ ಮಾಡಿದೆ ಎಂದು ತಿಳಿಸಿದ ಅವರು, ಸೌರ ಶಕ್ತಿಯಲ್ಲಿ “ಮೇಕ್ ಇನ್ ಇಂಡಿಯಾ” ಆಗಿ ವಿಶ್ವ ದರ್ಜೆ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಭಾರತ ಪ್ರೇರಕ ಶಕ್ತಿಯಾಗಿದೆ. ನವೀಕರಿಸಬಹುದಾದ ಇಂಧನ ಉತ್ಪಾದನಾ ವಲಯವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Heavy Rain: ಮುಂಬೈ ಸೇರಿದಂತೆ ಮಹಾರಾಷ್ಟ್ರದೆಲ್ಲೆಡೆ ಭಾರೀ ಮಳೆ; ರೈಲು, ವಿಮಾನ ಸಂಚಾರ ರದ್ದು

ಸೌರ ಶಕ್ತಿ ಉತ್ಪಾದನೆ ಮೂಲಕ PLI ನಿಂದ VGF ವರೆಗೆ ದೇಶೀಯ ಕೈಗಾರಿಕೆಗಳಿಗೆ ಅಗತ್ಯ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ ಸಚಿವರು, ದೇಶೀಯ ನವೀಕರಿಸಬಹುದಾದ ಇಂಧನ ಉಪಕರಣಗಳ ತಯಾರಿಕೆ ಉತ್ತೇಜಿಸಲು ವಿವಿಧ ಕ್ರಮ ಅನುಸರಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.