Monday, 25th November 2024

Gururaj Gantihole Column: ಹೈನುಗಾರಿಕೆಯನ್ನು ಕ್ಷೀರೋದ್ಯಮವನ್ನಾಗಿ ವಿಶ್ವಕ್ಕೆ ತೋರಿದ ಭಾರತ !

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ಹೈನುಗಾರಿಕೆಗೆ ಯುವಪೀಳಿಗೆಯವರು ಬರುತ್ತಿದ್ದಾರೆ. ಅವರಿಗೆ ಉತ್ತೇಜನ ನೀಡುವುದರ ಜತೆಗೆ ನಿರಾಸೆ ಯಾಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಸರಕಾರ ಮತ್ತು ಸಾರ್ವಜನಿಕ ವ್ಯವಸ್ಥೆಯ ಮೇಲಿದೆ. ಹೈನುಗಾರಿಕೆಗೆ ಆಧುನಿಕತೆಯ ಸ್ಪರ್ಶ ಈಗಾಗಲೇ ಸಿಕ್ಕಿದೆ. ಈ ಮಧ್ಯೆ ದೇಸಿ ಹಸುಗಳ ಸಂರಕ್ಷಣೆ ಹಾಗೂ ಸಾಕಾಣಿಕೆಯೂ ಹೆಚ್ಚಬೇಕು. ಹೈನುಗಾರಿಕೆಯು ಉದ್ಯೋಗದ ಪ್ರಮುಖ ಮೂಲವಾಗಬೇಕು.

ಅಮುಲ್’ನ ಸಂಸ್ಥಾಪಕ ಅಧ್ಯಕ್ಷ ತ್ರಿಭುವನ್‌ದಾಸ್ ಪಟೇಲ್ ಮತ್ತು ಕ್ಷೀರಕ್ರಾಂತಿಯ ಪಿತಾಮಹ ಡಾ.ವರ್ಗೀಸ್ ಕುರಿಯನ್ ಅವರ ದೂರದೃಷ್ಟಿಯ ಫಲವಾಗಿ ಭಾರತವು ಇಂದು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಕೈರಾಜಿಯಲ್ಲಿ ಡೈರಿ ಸಹಕಾರ ಸಂಘಗಳ ಅಭಿವೃದ್ಧಿ ಮತ್ತು ಅದರ
ಯಶಸ್ಸಿನಿಂದ ಉತ್ತೇಜಿತರಾದ ಭಾರತದ ಆಗಿನ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿಯವರು 1948ರಲ್ಲಿ ಗುಜರಾತಿನ ಆನಂದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಆನಂದ್ ಮಾದರಿಯ ಡೈರಿ ಸಹಕಾರ ಸಂಘಗಳನ್ನು ಭಾರತದಾದ್ಯಂತ ಪುನರಾವರ್ತಿಸುವಂತೆ ಸೂಚಿಸಿದರು.

ಹೀಗೆ, ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ರಚಿಸಿ, ಅಮುಲ್ ಮಾದರಿಯ ಪುನರಾವರ್ತನೆಗೆ ‘ಆಪರೇಷನ್ ಫುಡ್’ ಆರಂಭಿಸಲಾಯಿತು. ಇದರಿಂದ ಪ್ರೇರಿತಗೊಂಡು, ಕರ್ನಾಟಕದಲ್ಲಿಯೂ ಅಮುಲ್ ಮಾದರಿ‌ ಯಲ್ಲಿ ಹಾಲು ತಯಾರಿಕಾ (ಡೈರಿ) ಸಹಕಾರಿ ಸಂಘಗಳನ್ನು ಸ್ಥಾಪಿಸಲು 1974-75ರಲ್ಲಿ ವಿಶ್ವಬ್ಯಾಂಕ್ ನೆರವಿ ನೊಂದಿಗೆ ಕ್ರಿಯಾಯೋಜನೆ ಪ್ರಾರಂಭಿಸಲಾಯಿತು. ಸಂಪೂರ್ಣವಾಗಿ ಅಮುಲ್ ಸಂಸ್ಥೆಯ ಮಾದರಿಯನ್ನು ಅನುಸರಿಸುತ್ತ ಮತ್ತು ಸ್ಥಳೀಯ ರೈತರ ಹಿತಕಾಯುವ ಉದ್ದೇಶಕ್ಕೆ ಹೆಚ್ಚು ಗಮನಕೊಡಲಾಯಿತು. ಇದಕ್ಕಾಗಿ ಜಿಮಟ್ಟದಲ್ಲಿ ಮಧ್ಯವರ್ತಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿ, ಒಕ್ಕೂಟವನ್ನು (ಕೆಎಂಎಫ್) ರಚಿಸಲಾಯಿತು.

ಪ್ರಸ್ತುತ, ಕರ್ನಾಟಕದಲ್ಲಿ ಪ್ರತಿದಿನ 98 ಲಕ್ಷ ಲೀಟರ್ ನಂದಿನಿ ಹಾಲು ಉತ್ಪಾದನೆ ಆಗುತ್ತಿದೆ. ಬೆಂಗಳೂರು ನಗರ ಪ್ರದೇಶವೊಂದೇ ದಿನಕ್ಕೆ 17 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಮೂಲಕ ರಾಜ್ಯದ ಅತಿ ಹೆಚ್ಚು ಹಾಲು ಉತ್ಪಾದಿ ಸುವ ಭಾಗವಾಗಿದೆ. ರಾಜ್ಯದಲ್ಲಿ ಸುಮಾರು 3 ಲಕ್ಷ ಕುಟುಂಬಗಳು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿವೆ (ಶೇ.60 ರಷ್ಟು ). ಅದರಲ್ಲಿ ಒಂದು ಲಕ್ಷ ಕುಟುಂಬಗಳು ಸ್ವಂತ ಹೈನುಗಾರಿಕೆ ಇಟ್ಟುಕೊಂಡಿವೆ. ಸುಮಾರು 24 ಸಾವಿರ ಹಳ್ಳಿ ಗಳಿಂದ ಕೆಎಂಎಫ್ ಹಾಲು ಸಂಗ್ರಹ ಮಾಡುತ್ತಿದ್ದು, ಪ್ರತಿನಿತ್ಯ 320 ಮೆಟ್ರಿಕ್ ಟನ್ ಹಾಲಿನಪುಡಿ ತಯಾರಿಸುವ ಹಂತಕ್ಕೆ ಬಂದು ನಿಂತಿದೆ.‌

ಹೀಗೆ ವ್ಯವಸ್ಥಿತ ಸಂಸ್ಥೆಯಾಗಿ ಬೆಳೆಯುತ್ತ ಬಂದ ಕರ್ನಾಟಕ ಹಾಲು ಮಹಾಮಂಡಳಿ, ಪ್ರವರ್ತಿತ ಒಕ್ಕೂಟವಾಗಿ 1984ರಲ್ಲಿ ತನ್ನ ವ್ಯಾಪ್ತಿಯನ್ನು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿತು. ಒಕ್ಕೂಟವು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕ್ರಮವಾಗಿ ಪ್ರತಿದಿನಕ್ಕೆ 2.5 ಲಕ್ಷ ಲೀಟರ್ ಸಂಸ್ಕರಣಾ ಸಾಮರ್ಥ್ಯದ ಸುಸಜ್ಜಿತವಾದ ಡೇರಿಗಳನ್ನು ಒಳಗೊಂಡಿದೆ.

ಪ್ರಸ್ತುತ 737 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 200 ಮಹಿಳಾ ಸಂಘಗಳು ಸೇರಿವೆ. ಒಕ್ಕೂಟದ ವ್ಯಾಪ್ತಿಯಲ್ಲಿ ಅತ್ಯಧಿಕ ದೇವಸ್ಥಾನಗಳು ಇದ್ದು, ಹೆಚ್ಚಿನ ದೇವಸ್ಥಾನಗಳಿಗೆ ಒಕ್ಕೂಟದಿಂದಲೇ ನಂದಿನಿ ತುಪ್ಪದ ಸರಬರಾಜನ್ನು ಕೈಗೊಳ್ಳುತ್ತಿರುವುದು ಗಮನಾರ್ಹ. ರಾಜ್ಯದ 15 ಜಿಲ್ಲೆ ಸಹಕಾರಿ ಹಾಲು ಒಕ್ಕೂಟಗಳಡಿಯಲ್ಲಿ, ಗ್ರಾಮೀಣ ಮಟ್ಟದಲ್ಲಿ 15779ಕ್ಕೂ ಹೆಚ್ಚಿನ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯು 26.89 ಲಕ್ಷ ಹಾಲು ಉತ್ಪಾದಕರನ್ನು ಹೊಂದಿದೆ. ಈ ಮೂಲಕ ‘ಗೋವಿ ನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆ’ ಎಂಬ ಧ್ಯೇಯವಾಕ್ಯ ಹೊಂದಿ ಹಾಲು ಮತ್ತು ಹಾಲಿನ ಉತ್ಪನ್ನ ಗಳನ್ನು ‘ನಂದಿನಿ’ ಬ್ರಾಂಡ್ ಹೆಸರಿನಲ್ಲಿ ಗ್ರಾಹಕರಿಗೆ ಒದಗಿಸುತ್ತಿದೆ.

ಇಷ್ಟೆ ಉತ್ಪಾದನೆ, ಗಳಿಕೆಯಿದ್ದರೂ, ರೈತರಿಗೆ, ಹಾಲು ಉತ್ಪಾದಕರಿಗೆ ಸೂಕ್ತ ಬೆಂಬಲ ಬೆಲೆ ನೀಡದಿರುವುದು, ಸ್ಥಳೀಯಮಟ್ಟದಲ್ಲಿ ಹಣಪಾವತಿಸುವ ವಿಚಾರದಲ್ಲಿ ತಾರತಮ್ಯ ಇತ್ಯಾದಿ ಸಮಸ್ಯೆಗಳು ಅಲ್ಲಲ್ಲಿ ಗಂಭೀರವಾಗಿಯೇ ಇವೆ. ಸಾಲ ಮಾಡಿ ಹಸು-ಎಮ್ಮೆಗಳನ್ನು ಖರೀದಿಸಿದ ಎಷ್ಟೋ ರೈತರು ಕಾಯಿಲೆಗಳಿಂದ ಜಾನುವಾರುಗಳನ್ನು ಕಳೆದುಕೊಂಡು ಇತ್ತ ಗಳಿಕೆಯೂ ಇಲ್ಲದೇ ಅತ್ತ ಸಾಲ ತೀರಿಸಲಾಗದ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಇಂಥವರ ಬಗ್ಗೆಯೂ ಸರಕಾರ ಮತ್ತು ಸಂಸ್ಥೆ ಗಮನಹರಿಸಬೇಕಿದೆ.

ಹಾಗೆ ನೋಡಿದರೆ, ಭಾರತವು ವಿಶ್ವದ ಅತಿದೊಡ್ಡ ಹೈನು ಉತ್ಪಾದಕ ರಾಷ್ಟ್ರವಾಗಿದ್ದು, ವಿಶ್ವದ ಒಟ್ಟು ಹಾಲು ಉತ್ಪಾದನೆಯಲ್ಲಿ ಶೇ.25ರಷ್ಟು ಕೊಡುಗೆ ನೀಡುತ್ತಿದೆ. ವಾರ್ಷಿಕವಾಗಿ, ಅಮೆರಿಕ 9.8 ಕೋಟಿ ಟನ್ ಹಾಲು ಉತ್ಪಾದಿ ಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ಭಾರತವು 18.7 ಕೋಟಿ ಟನ್‌ಗಳಷ್ಟು ಹಾಲು ಉತ್ಪಾದನೆಯೊಂದಿಗೆ ಅಗ್ರಸ್ಥಾನದಲ್ಲಿದೆ. ಈ ಮೂಲಕ, ಭಾರತವು ವಿಶ್ವದ ‘ಹಾಲು ಉತ್ಪಾದನೆಯ ರಾಜಧಾನಿ’ ಎಂದೇ ಖ್ಯಾತವಾಗಿದೆ.

ಭಾರತದಿಂದ ಯುಎಇ, ಅಮೆರಿಕ, ಸಿಂಗಾಪುರ ಮತ್ತು ಭೂತಾನ್ ಸೇರಿದಂತೆ ಹಲವು ದೇಶಗಳಿಗೆ 63,738.47 ಮೆಟ್ರಿಕ್ ಟನ್ ಮೌಲ್ಯದ ಡೈರಿ ಉತ್ಪನ್ನಗಳ ರಫ್ತು ಮಾಡಲಾಗುತ್ತಿದೆ.

2023-24ರ ಅವಧಿಯಲ್ಲಿ ಇದು ವಿಶ್ವದ ಒಟ್ಟು ಹಾಲು ಉತ್ಪಾದನೆಯಲ್ಲಿ 272.64 ಮಿಲಿಯನ್ ಡಾಲರ್ ಮೌಲ್ಯ ದ್ದಾಗಿದೆ ಎಂದರೆ, ಭಾರತದ ಹೈನುಗಾರಿಕೆ ಉದ್ಯಮದ ಅಗಾಧತೆಯನ್ನು ನಾವು ಅರ್ಥಮಾಡಿಕೊಳ್ಳ ಬಹುದು. ಭಾರತದ ಒಟ್ಟು ಜಿಡಿಪಿ ಉತ್ಪನ್ನದಲ್ಲಿ ಅತ್ಯಂತ ಪ್ರಮುಖ ಉತ್ಪನ್ನ ಪಾಲುದಾರರೆಂದರೆ, ಸೇವಾ ವಲಯ, ಕೈಗಾರಿಕೆ ಮತ್ತು ಕೃಷಿ ಸಂಬಂಧಿತ ಉತ್ಪನ್ನಗಾರಿಕೆ. ಇವುಗಳ ನಂತರ, ಅತಿಹೆಚ್ಚು ಸಂಘಟಿತ ವಲಯ ಹೊಂದಿದ್ದು, ಉತ್ಪಾದನೆಯಲ್ಲೂ ಹೆಸರು ಮಾಡುತ್ತಿರುವುದೆಂದರೆ ಅದು ಹೈನುಗಾರಿಕೆ ಉದ್ಯಮ.

Food and Agriculture Organization Corporate Statistical Database (FAOSTAT) ಪ್ರಕಾರ, 2018ರಲ್ಲಿ 180 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಹಾಲನ್ನು ಉತ್ಪಾದಿಸಿ, ವಿಶ್ವದ ಯಾವುದೇ ದೇಶ ಮಾಡದ ಅದೊಡ್ಡ ಹೈನು ಉತ್ಪನ್ನದ ದಾಖಲೆಯನ್ನು ಭಾರತ ಬರೆಯಿತು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ವಿಶ್ವದ ವಾರ್ಷಿಕ ಉತ್ಪಾದನೆಯ ಶೇ.22ರಷ್ಟು ಮತ್ತು ಐರೋಪ್ಯ ಒಕ್ಕೂಟದ ಎಲ್ಲಾ ಸದಸ್ಯ ರಾಷ್ಟ್ರಗಳಿಗಿಂತ ಹೆಚ್ಚು ಉತ್ಪಾದಿಸುವ ಮೂಲಕ ಭಾರತದ ಡೈರಿ ಉದ್ಯಮವು ಜಾಗತಿಕ ಮಟ್ಟದ ಪ್ರಮುಖ ಉತ್ಪಾದಕರ ನಾಯಕನಂತೆ ವೇಗದಲ್ಲಿ ಬೆಳೆಯುತ್ತಿದೆ.

ಭಾರತೀಯ ಡೈರಿ ಮಾರುಕಟ್ಟೆಯು ವಾಸ್ತವವಾಗಿ 128 ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದರೂ, ಐರೋಪ್ಯ ಒಕ್ಕೂಟ ಹಾಗೂ ಅಮೆರಿಕ ದೇಶಗಳು ತಮ್ಮ ಉತ್ಪನ್ನಗಳನ್ನು ರಫ್ತು ಮಾಡುತ್ತಿರುವಷ್ಟು ಭಾರತವು ಪ್ರಮುಖ ರಫ್ತುದಾರ ದೇಶವಲ್ಲ. ಇದಕ್ಕೆ ಕಾರಣ, ಸ್ಥಳೀಯ ಬಳಕೆಗೆ ಹೆಚ್ಚು ಬೇಡಿಕೆ ಮತ್ತು ಅವಶ್ಯವಿರುವುದರಿಂದ ಸಹಜ ವಾಗಿಯೇ ರಫ್ತಿಗೆ ಆದ್ಯತೆ ಕಡಿಮೆ ಎನ್ನಬಹುದು.

ಭಾರತದಲ್ಲಿನ ರೈತನೊಬ್ಬ ಸರಾಸರಿ ಹತ್ತು ಹಸುಗಳನ್ನು ಸಾಕಿಕೊಂಡಿದ್ದರೆ, ಅವುಗಳ ಮೂಲಕ ತಿಂಗಳಿಗೆ 1 ರಿಂದ 2 ಲಕ್ಷದವರೆಗೆ ದುಡಿಯುತ್ತಾನೆ. ಇದರಂತೆ, ದಿನನಿತ್ಯದ ಲಾಭಗಳಿಕೆಯು 800 ರು.ಗಳಿಷ್ಟಿದ್ದರೆ, ಮೇವು, ಸಾಕಣೆ ವೆಚ್ಚ ಇತ್ಯಾದಿ ಸೇರಿ 130 ರು.ಗಳಷ್ಟಾಗಬಹುದು ಎಂದು ಅಂದಾಜಿಸಲಾಗಿದೆ. ದೇಶದ ಪ್ರಮುಖ ಹಾಲು ಉತ್ಪಾದಿಸುವ ರಾಜ್ಯಗಳಾದ ರಾಜಸ್ಥಾನ (ಶೇ.15.05), ಉತ್ತರಪ್ರದೇಶ (ಶೇ.14.93), ಮಧ್ಯ ಪ್ರದೇಶ (ಶೇ.8.6), ಗುಜರಾತ್ (ಶೇ.7.56), ಆಂಧ್ರಪ್ರದೇಶ (ಶೇ.6.97) ಮತ್ತು ಕರ್ನಾಟಕ(ಶೇ.5.34)ಗಳೆಲ್ಲ ಸೇರಿಕೊಂಡು ದೇಶದ ಒಟ್ಟು ಹಾಲಿನ ಉತ್ಪಾದನೆಗೆ ಶೇ.59.10ರಷ್ಟು ಕೊಡುಗೆ ನೀಡುತ್ತಿವೆ. ಭಾರತದ ಹಾಲಿನ ಉತ್ಪಾದನೆಯು ಕಳೆದ 9 ವರ್ಷಗಳಲ್ಲಿ ಶೇ.58ರಷ್ಟು ಹೆಚ್ಚಳವನ್ನು ದಾಖಲಿಸಿದೆ ಮತ್ತು 2022-23ರಲ್ಲಿ 230.58 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ. ಕಳೆದ ದಶಕದಲ್ಲಿ ಹಾಲಿನ ಉತ್ಪಾದನೆಯು CAGR ಪ್ರಕಾರ ಶೇ.6ರಷ್ಟು ಹೆಚ್ಚಾಗಿದೆ. ಈ ಎಲ್ಲ ಸಾಧನೆ ಮತ್ತು ಬೃಹತ್ ಹೈನುಗಾರಿಕೆ ಉದ್ಯಮಕ್ಕೆ ಅಡಿಪಾಯವಾಗಿದ್ದು ಮಾತ್ರ ಅಮುಲ್ ಎಂಬ ಸಂಸ್ಥೆ. ಸಂಸ್ಕೃತದಲ್ಲಿ ‘ಬೆಲೆ ಕಟ್ಟಲಾಗದ್ದು’ ಎಂಬ ಅರ್ಥ ಹೊಂದಿರುವ ಈ ಸಂಸ್ಥೆ ಹುಟ್ಟಿಕೊಂಡ ರೀತಿ ಮಾತ್ರ ಆಶ್ಚರ್ಯಕರ.

ಸಹಕಾರಿ ತತ್ವದಡಿಯಲ್ಲಿ ಹುಟ್ಟಿ, ರಾಷ್ಟ್ರದಲ್ಲಿ ಸಹಕಾರ ಡೈರಿ ಅಭಿಯಾನಕ್ಕೆ ಉತ್ತೇಜನ ಒದಗಿಸುವ ಮೂಲಕ ಜನ್ಮತಳೆದ ಅಮುಲ್ ಪ್ರಾರಂಭದಲ್ಲಿ ಕೈರಾ ಜಿ ಸಹಕಾರ ಹಾಲು ಉತ್ಪಾದಕರ ಸಂಘವಾಗಿ 1946ರ ಡಿಸೆಂಬರ್ 14ರಂದು ನೋಂದಣಿಯಾಯಿತು; ಸ್ಥಳೀಯ ವ್ಯಾಪಾರಿಗಳಿಂದಾಗುತ್ತಿದ್ದ ಶೋಷಣೆಗೆ ಪ್ರತಿಕ್ರಿಯೆಯಾಗಿ ಇದನ್ನು ಆನಂದ್ (ಗುಜರಾತಿನ ಕೈರಾ ಜಿಲ್ಲೆ) ಎಂಬ ಸಣ್ಣ ಪಟ್ಟಣದಲ್ಲಿ ಸ್ಥಾಪಿಸಲಾಯಿತು. ಹಾಲು ಉತ್ಪಾದಕರು ಆನಂದ್‌ ನಲ್ಲಿದ್ದ ಏಕೈಕ ಡೈರಿಯಾಗಿದ್ದ ಪೋಲ್ಸೋನ್ ಡೈರಿಗೆ ಹಾಲನ್ನು ಪೂರೈಸಲು ಬಹುದೂರದವರೆಗೆ ಪ್ರಯಾಣಿಸ ಬೇಕಿತ್ತು. ಉತ್ಪಾದಕರು ಪಾತ್ರೆಗಳಲ್ಲಿ ಹಾಲನ್ನು ಒಯ್ಯುತ್ತಿದ್ದುದರಿಂದ ವಿಶೇಷವಾಗಿ ಬೇಸಿಗೆ ಋತುವಿನಲ್ಲಿ ಹಾಲು ಹುಳಿಯಾಗುತ್ತಿತ್ತು.

ಈ ಏಜೆಂಟರು ಉತ್ಪಾದನೆ ಮತ್ತು ಋತುವನ್ನು ಅವಲಂಬಿಸಿ ಸ್ವೇಚ್ಛಾಚಾರದಿಂದ ಹಾಲಿನ ದರಗಳನ್ನು ನಿರ್ಧರಿಸು ತ್ತಿದ್ದರು. ಈ ರೀತಿಯ ತಾರತಮ್ಯದ ಸಮಸ್ಯೆ ಅಂದಿನ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಗೊತ್ತಾ ಯಿತು. ರೈತರು ಸಹಕಾರ ಸಂಘವನ್ನು ಸ್ಥಾಪಿಸಿಕೊಂಡು ಪೋಲ್ಸೋನ್‌ಗೆ ಹಾಲು ಮಾರಾಟ ಮಾಡುವ ಬದಲಿಗೆ ‘ಮುಂಬಯಿ ಹಾಲು ಯೋಜನೆ’ಗೆ ನೇರವಾಗಿ ಹಾಲನ್ನು ಸರಬರಾಜು ಮಾಡುವಂತೆ ಸರ್ದಾರ್ ಪಟೇಲ್ ರೈತರಿಗೆ ಸಲಹೆ ನೀಡಿದರು.

ಇದು ಭಾರತದ ಹಾಲು ಉದ್ಯಮಕ್ಕೆ ಬಹುದೊಡ್ಡ ತಿರುವು ನೀಡಿತು. 1946ರಲ್ಲಿ ಕೈರಾ ಜಿಲ್ಲೆಯಲ್ಲಿ ಹಾಲನ್ನು ಸಂಗ್ರಹಿಸುವ, ಸಂಸ್ಕರಿಸುವ ಕೈರಾ ಜಿಲ್ಲಾ ಸಹಕಾರ ಸಂಘವು ಸ್ಥಾಪಿತವಾಯಿತು. ಬಹುತೇಕ ಉತ್ಪಾದಕರು ಅತಿ ಸಣ್ಣ ರೈತರಾಗಿದ್ದು, ಪ್ರತಿದಿನ 1-2 ಲೀಟರ್ ಹಾಲನ್ನು ಪೂರೈಸಲು ಮಾತ್ರವೇ ಶಕ್ತರಾಗಿದ್ದರು. ಅತಿ ಸಣ್ಣ ಹಾಲು ಉತ್ಪಾದಕರನ್ನು ಸಂಘಟಿಸಲು ಪ್ರತಿ ಗ್ರಾಮದಲ್ಲಿ ಗ್ರಾಮಮಟ್ಟದ ಸಹಕಾರ ಸಂಘಗಳನ್ನು ಸ್ಥಾಪಿಸಲಾಯಿತು.
ಮುಂದೆ ಡಾ.ವಿ.ಕುರಿಯನ್ ಎಂಬ ವ್ಯಕ್ತಿಯು ಪರಿಶ್ರಮವನ್ನು ಹಾಕಿದ್ದರ ಫಲವಾಗಿ ಇಂದು ವಿಶ್ವ ಹೈನುಗಾರಿಕೆ ಯಲ್ಲಿ ಭಾರತ ಮುಂಚೂಣಿಯಲ್ಲಿರಲು ಸಾಧ್ಯವಾಗಿದೆ, ಇದರಲ್ಲಿ ಅಮುಲ್ ಬಹುದೊಡ್ಡ ಪಾತ್ರ ವಹಿಸಿದೆ.

ಸಹಕಾರ ಸಂಘದಲ್ಲಿ ದೇಶೀಯ ತಂತ್ರಜ್ಞಾನದ ಮೂಲಕ ವಿಶ್ವದ ಮೊದಲ ಬಾರಿಗೆ ಎಮ್ಮೆಯ ಹಾಲಿನಿಂದ ಕೆನೆ ತೆಗೆದು ಹಾಲಿನ ಪುಡಿಯ ಯಶಸ್ವಿ ಉತ್ಪಾದನೆ ಮಾಡಲಾಯಿತು. ಈ ಮೂಲಕ, ಭಾರತದಲ್ಲಿ ಆಧುನಿಕ ಡೈರಿ ಉದ್ಯಮಕ್ಕೆ ಅಡಿಪಾಯ ಹಾಕಲಾಯಿತು. 1973 ರಲ್ಲಿ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟವು ಸ್ಥಾಪನೆ ಯಾಗುವ ಮೂಲಕ, ಭಾರತದಲ್ಲಿ ಕ್ಷೀರಕ್ರಾಂತಿಗೆ ಬುನಾದಿ ಹಾಕಿದ ಅಮುಲ್ ಸಂಸ್ಥೆಯಿಂದ ಇಂದು ನೂರಾರು ಸಂಸ್ಥೆಗಳು ಜನ್ಮ ತಳೆದಿವೆ. ಇಂಥ ಹಿನ್ನೆಲೆಯಿರುವ, ಕೃಷಿಗೆ ಪೂರಕವಾಗಿ ನಡೆಯುವ ಹೈನುಗಾರಿಕೆಯು ಭಾರತ ದಲ್ಲಿ ಅನಾದಿ ಕಾಲದಿಂದಲೂ ವ್ಯವಸ್ಥಿತ ‘ಇಕೋ ಸಿಸ್ಟಂ’ ಒಂದನ್ನು ರೂಪಿಸಿಕೊಂಡು ಬಂದಿದೆ.

ಹಿಂದೆಲ್ಲ ದೇಸಿ ಹಸುಗಳು ಇದ್ದವು, ಹೈಬ್ರಿಡ್ ಹಸುಗಳ ಸಾಕಾಣಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಇದೆಲ್ಲವೂ
ಭಾರತೀಯ ಅರ್ಥ ವ್ಯವಸ್ಥೆಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಜಗತ್ತಿನಲ್ಲಿ ಏನೇ ಆಗುಹೋಗುಗಳು ಸಂಭವಿಸು ತ್ತಿದ್ದರೂ ಹೈನುಗಾರರು ತಮ್ಮ ಕಾಯಕ್ಕೆ ವಿರಾಮ ನೀಡುವುದಿಲ್ಲ. ನಿತ್ಯ ಸೂರ್ಯೋದಯಕ್ಕೂ ಪೂರ್ವದಲ್ಲಿ ಅವರ ಕಾಯಕ ಆರಂಭವಾಗಿ ಬೆಳಗ್ಗೆ 8-9 ಗಂಟೆಯೊಳಗೆ ಡೈರಿಗೆ ಹಾಲು ಪೂರೈಕೆ ಮಾಡುವುದರೊಂದಿಗೆ ಒಂದು ಹಂತದ ಕಾರ್ಯ ಪೂರ್ಣವಾಗುತ್ತದೆ.

ಮಧ್ಯಾಹ್ನ 3 ಗಂಟೆಯ ನಂತರ ಮತ್ತೆ ಅದೇ ಕಾಯಕ ಶುರುಮಾಡಿ, ಸಂಜೆ 6-7 ಗಂಟೆಯೊಳಗೆ ಪೂರ್ಣಗೊಳಿಸು ತ್ತಾರೆ. ಇದರಲ್ಲಿ ಬಹುಮುಖ್ಯವಾಗಿ ಎರಡು ಅಂಶ ಅಡಗಿದೆ. ಒಂದು ಕೌಟುಂಬಿಕ ಆರ್ಥಿಕ ವೃದ್ಧಿ, ಇನ್ನೊಂದು ಉದ್ಯೋಗಾವಕಾಶ. ಹೈನುಗಾರಿಕೆ ಒಂದು ರೀತಿಯ ಮೌನಯಾನ ಇದ್ದಂತೆ. ಇದನ್ನೇ ಉಪ ಕಸುಬಾಗಿಸಿಕೊಂಡು ಮುಖ್ಯವೃತ್ತಿ ನಿರ್ವಹಿಸುವವರು ಅದೆಷ್ಟೋ ಜನರಿದ್ದಾರೆ.

ಮನೆಯ ತಾಯಂದಿರು ಹೈನುಗಾರಿಕೆಯಲ್ಲಿ ಮಕ್ಕಳನ್ನು ಓದಿಸಿ, ಉನ್ನತ ವಿದ್ಯಾಭ್ಯಾಸ ನೀಡಿ ಉತ್ತಮ ವೇತನದ
ಉದ್ಯೋಗ ಪಡೆಯುವಲ್ಲಿಯೂ ಸಹಕರಿಸಿದ್ದಾರೆ. ಹೀಗೆ ಭಾರತದಲ್ಲಿ ಹೈನುಗಾರಿಕೆಯು ‘ಇಕೋ ಸಿಸ್ಟಂ’, ಕೌಟುಂಬಿಕ
ಆದಾಯ, ಸ್ಥಳೀಯ ಆದಾಯ ವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಅದನ್ನೀಗ ಇನ್ನೊಂದು ಹಂತಕ್ಕೆ ಮೇಲೇರಿಸುವ ಕಾರ್ಯವಾಗಬೇಕು.

ಹೈನುಗಾರಿಕೆಗೆ ಯುವಪೀಳಿಗೆಯವರು ಬರುತ್ತಿದ್ದಾರೆ. ಅವರಿಗೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದರ ಜತೆಗೆ
ಉತ್ತೇಜನವನ್ನೂ ನೀಡಬೇಕು. ಹೈನುಗಾರಿಕೆ ಮಾಡಲು ಬರುವ ಯುವಜನತೆಗೆ ನಿರಾಸೆಯಾಗದಂತೆ ನೋಡಿ ಕೊಳ್ಳುವ ಮಹತ್ತರ ಜವಾಬ್ದಾರಿ ಸರಕಾರ ಮತ್ತು ಸಾರ್ವಜನಿಕ ವ್ಯವಸ್ಥೆಯ ಮೇಲೂ ಇದೆ. ಹೈನುಗಾರಿಕೆಗೆ ಆಧುನಿ ಕತೆಯ ಸ್ಪರ್ಶ ಈಗಾಗಲೇ ಸಿಕ್ಕಿದೆ. ಈ ಮಧ್ಯೆ ದೇಸಿ ಹಸುಗಳ ಸಂರಕ್ಷಣೆ ಹಾಗೂ ಸಾಕಾಣಿಕೆಯೂ ಹೆಚ್ಚಬೇಕು. ಹೈನುಗಾರಿಕೆಯು ಉದ್ಯೋಗದ ಪ್ರಮುಖ ಮೂಲ ವಾಗಿಸಬೇಕು. ಈ ವಿಚಾರವಾಗಿ ಪಶುಸಂಗೋಪನಾ ಇಲಾಖೆ, ಸರಕಾರ ಒಂದಿಷ್ಟು ಹೊಸ ಯೋಜನೆಗಳನ್ನು ರೂಪಿಸಬೇಕು.

ಹೈನುಗಾರಿಕೆಯ ಬಗ್ಗೆ ಕಾಲೇಜುಗಳಲ್ಲಿಯೂ ಅರಿವು ಮೂಡಿಸುವ ಕಾರ್ಯ ಆಗಬೇಕು. ಇದೇ ವಿಭಾಗದಲ್ಲಿ ಪದವಿ ಪಡೆದರೆ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡಬಹುದು, ಸರಕಾರ ಕೂಡ ಹಾಲಿಗೆ ನೀಡುವ ಪ್ರೋತ್ಸಾಹಧನ ಹೆಚ್ಚಳ ಮಾಡುವುದು, ಹಸು ಖರೀದಿಗೆ ಪ್ರೋತ್ಸಾಹಧನ ಅಥವಾ ಸಬ್ಸಿಡಿ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವುದು ಇತ್ಯಾದಿಗಳನ್ನು ಮಾಡಬೇಕು. ಸ್ಥಳೀಯವಾಗಿ ಡೈರಿಗಳ ಮೂಲಕವೂ ಅರಿವು ಕಾರ್ಯಕ್ರಮ ನಡೆಯಬೇಕು. ಆ ಮೂಲಕ ಭಾರತೀಯ ಹೈನುಗಾರಿಕೆ ‘ಇಕೋ ಸಿಸ್ಟಂ’ ಅನ್ನು ಇನ್ನಷ್ಟು ಗಟ್ಟಿಗೊಳಿಸುವ ಜತೆಗೆ ಆದಾಯಮೂಲದ ವೃದ್ಧಿ ಹಾಗೂ ಹೆಚ್ಚೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಾಧ್ಯವಿದೆ. ಹೈನುಗಾರಿಕೆ ಯಿಂದ ಕಡಿಮೆ ಖರ್ಚು, ಸಮೃದ್ಧ ಬದುಕು ಸುಲಭ ಸಾಧ್ಯ.

ಇದನ್ನೂ ಓದಿ: Milk Production: ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಣೆ