Friday, 22nd November 2024

Hindu Temple Vandalized: ಗೋ ಬ್ಯಾಕ್‌ ಹಿಂದೂಸ್‌- ಅಮೆರಿಕದಲ್ಲಿ ಮತ್ತೆ ಹಿಂದೂ ದೇಗುಲ ವಿರೂಪ; 10 ದಿನಗಳಲ್ಲಿ ಇದು ಎರಡನೇ ಘಟನೆ

hindu temple Vandalized

ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಮತ್ತೆ ಹಿಂದೂ ದೇಗುಲಗಳ್ನು ಕಿಡಿಗೇಡಿಗಳು ವಿರೂಪಗೊಳಿಸಿರುವ ಘಟನೆ(Hindu Temple Vandalized) ವರದಿಯಾಗಿದೆ. ಕ್ಯಾಲಿಫೋರ್ನಿಯಾ(California)ದ ಸ್ಯಾಕ್ರಮೆಂಟೊ ಪ್ರದೇಶದಲ್ಲಿನ BAPS ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಬುಧವಾರ ರಾತ್ರಿ ಹಿಂದೂ ವಿರೋಧಿ ಸಂದೇಶಗಳೊಂದಿಗೆ ಅಪವಿತ್ರಗೊಳಿಸಲಾಗಿದೆ. 10 ದಿನಗಳೊಳಗೆ ನಡೆದ ಎರಡನೇ ದಾಳಿ ಇದಾಗಿದೆ. ಸೆಪ್ಟೆಂಬರ್ 17 ರಂದು ನ್ಯೂಯಾರ್ಕ್‌ನ ಬಿಎಪಿಎಸ್ ಮಂದಿರದಲ್ಲಿ ಇದೇ ರೀತಿಯ ವಿಧ್ವಂಸಕ ಕೃತ್ಯ ನಡೆದಿತ್ತು.

ಇನ್ನು ಈ ಬಗ್ಗೆ ದೇಗುಲದ ಆಡಳಿತ ಮಂಡಳಿ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ನ್ಯೂಯಾರ್ಕ್‌ನ BAPS ಮಂದಿರವನ್ನು ಅಪವಿತ್ರಗೊಳಿಸಿದ 10 ದಿನಗಳ ನಂತರ, ಸ್ಯಾಕ್ರಮೆಂಟೊ, CA ಪ್ರದೇಶದಲ್ಲಿನ ನಮ್ಮ ಮಂದಿರವನ್ನು ಕಳೆದ ರಾತ್ರಿ ಕಿಡಿಗೇಡಿಗಳು ಅಪವಿತ್ರಗೊಳಿಸಿದ್ದಾರೆ. ಹಿಂದೂಗಳೇ ದೇಶ ಬಿಟ್ಟು ತೊಲಗಿ ಎಂದು ಗ್ರಾಫಿಟಿಯಲ್ಲಿ ದೇಗುಲ ಗೋಡೆಗಳ ಮೇಲೆ ಬರೆಯಲಾಗಿದೆ. ನಾವು ಶಾಂತಿಗಾಗಿ ಪ್ರಾರ್ಥನೆ ಮಾಡುತ್ತಾ ದ್ವೇಷದ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಹೇಳಿದೆ.

ಈ ಬಗ್ಗೆ BAPS ಶ್ರೀ ಸ್ವಾಮಿನಾರಾಯಣ ಮಂದಿರಕ್ಕೆ ಶೆರಿಫ್ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದು, ಕಿಡಿಗೇಡಿಗಳು ದೇಗುಲದ ಗೋಡೆಗಳನ್ನು ವಿರೂಪಗೊಳಿಸಿದ್ದು ಮಾತ್ರವಲ್ಲದೇ ನೀರಿನ ಪೈಪ್‌ ಲೈನ್‌ ಅನ್ನು ಕೂಡ ಧ್ವಂಸಗೊಳಿಸಿದ್ದಾರೆ. ಇದು ನಿಜಕ್ಕೂ ಖಂಡನೀಯ ಎಂದು ಹೇಳಿದ್ದಾರೆ.

ಇನ್ನು ಈ ಕೃತ್ಯಕ್ಕೆ US ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸ್ಯಾಕ್ರಮೆಂಟೊ ಕೌಂಟಿಯನ್ನು ಪ್ರತಿನಿಧಿಸುವ ಆಮಿ ಬೆರಾ ಕೂಡ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಖಂಡನೆ ವ್ಯಕ್ತಪಡಿಸಿದ್ದಾರೆ. ಸ್ಯಾಕ್ರಮೆಂಟೊ ಕೌಂಟಿಯಲ್ಲಿ ಧಾರ್ಮಿಕ ಮತಾಂಧತೆ ಮತ್ತು ದ್ವೇಷಕ್ಕೆ ಯಾವುದೇ ಸ್ಥಳವಿಲ್ಲ. ಈ ವಿಧ್ವಂಸಕ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಎಲ್ಲರೂ ನಮ್ಮಲ್ಲಿ ಅಸಹಿಷ್ಣುತೆಯ ವಿರುದ್ಧ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಕಮಲಾ ಹ್ಯಾರಿಸ್​ ಕಚೇರಿ ಮೇಲೆ ಗುಂಡಿನ ದಾಳಿ