Monday, 25th November 2024

Bengaluru Woman Murder: ಮಹಾಲಕ್ಷ್ಮಿ ಕೊಲೆಪಾತಕಿಯ ಡೆತ್‌ನೋಟ್‌ ಪತ್ತೆ; ಬರ್ಬರ ಕೃತ್ಯದ ಉಲ್ಲೇಖ

Bengaluru murder

ಬೆಂಗಳೂರು: ವೈಯಾಲಿಕಾವಲ್‌ನಲ್ಲಿ ಪ್ರೇಯಸಿಯನ್ನು ಬರ್ಬರವಾಗಿ ಕೊಂದು (Benagluru Woman Murder case) ತುಣುಕುಗಳಾಗಿ ಕತ್ತರಿಸಿ ಫ್ರಿಜ್‌ನಲ್ಲಿಟ್ಟು ಒಡಿಶಾಗೆ ಪರಾರಿಯಾಗಿದ್ದ ಕೊಲೆಗಾರ (murderer) ಆತ್ಮಹತ್ಯೆ (Self harming) ಮಾಡಿಕೊಂಡಿದ್ದು, ಆತನ ಡೆತ್‌ನೋಟ್‌ (Death note) ಪತ್ತೆಯಾಗಿದೆ. ಅದರಲ್ಲಿ ಆತ, ಮಹಾಲಕ್ಷ್ಮಿಯ ದೇಹವನ್ನು ತಾನು 59 ತುಂಡು ಮಾಡಿರುವುದಾಗಿ ಬರೆದುಕೊಂಡಿದ್ದಾನೆ.

ಇದೇ ತಿಂಗಳ 21ರಂದು ವೈಯಾಲಿಕಾವಲ್‌ನ ಪೈಪ್ ಲೈನ್ ರಸ್ತೆಯ ಮನೆಯೊಂದರ ಫ್ರಿಜ್‌ನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿ ಎಂಬಾಕೆಯ ದೇಹ ಪತ್ತೆಯಾಗಿತ್ತು. ದೇಹವನ್ನು ತುಂಡು ತುಂಡು ಮಾಡಿ ಇಡಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ವೈಯಾಲಿಕಾವಲ್ ಪೊಲೀಸರು ಹಲವು ಆಯಾಮದಲ್ಲಿ ತನಿಖೆ ನಡೆಸಿದ್ದರು. ಆರೋಪಿಯ ಪತ್ತೆ ಮಾಡಲು ಹೊರ ರಾಜ್ಯಕ್ಕೆ ಹೋದ ಪೊಲೀಸರಿಗೆ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ. ಜೊತೆಗೆ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್​ನಲ್ಲಿ (Death Note) ತಾನೇ ಕೊಲೆ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ಮಹಿಳೆ ಕೊಲೆ ಪ್ರಕರಣದಲ್ಲಿ ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಎಂಬಾತನ ಮೇಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಆತನಿಗಾಗಿ ಹಲವು ಕಡೆ ಹುಡುಕಾಡಿದ್ದ ಪೊಲೀಸರಿಗೆ ಆತ ಒಡಿಶಾಗೆ ತೆರಳಿರುವ ಮಾಹಿತಿ ಸಿಕ್ಕಿತ್ತು. ಸಿಕ್ಕ ಮಾಹಿತಿ ಆಧರಿಸಿ ಒಡಿಶಾಗೆ ತೆರಳಿದ್ದ ಪೊಲೀಸರಿಗೆ ಮುಕ್ತಿ ರಂಜನ್ ರಾಯ್ ಶವ ದೊರೆತಿದೆ. ಆತ ಪೊಲೀಸರಿಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಂಜನ್ ಡೆತ್ ನೋಟ್ ಬರೆದಿಟ್ಟು ಸ್ಮಶಾನದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೆಪ್ಟಂಬರ್ 3ರಂದು ಪ್ರೇಯಸಿ ಮಹಾಲಕ್ಷ್ಮೀಯನ್ನು ಹತ್ಯೆ ಮಾಡಿದ್ದೇನೆ. ಸೆಪ್ಟಂಬರ್‌ 3 ರಂದು ಆಕೆಯ ಮನೆಗೆ ಹೋದಾಗ ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ಆಕೆ ಹಲ್ಲೆ ನಡೆಸಿದಳು. ಇದರಿಂದ ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ ಮಾಡಿ ಫ್ರಿಜ್‌ನಲ್ಲಿ ಇರಿಸಿದ್ದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್ ನೋಟ್​ನಲ್ಲಿ ರಂಜನ್ ಬರೆದಿದ್ದಾನೆ.

ಒಡಿಸಾ ಫಂಡಿ ಗ್ರಾಮದ ನಿವಾಸಿಯಾದ ರಂಜನ್ ಮೊನ್ನೆ ಬೆಳಿಗ್ಗೆಯಷ್ಟೇ ಮನೆಗೆ ಬಂದಿದ್ದನಂತೆ. ಕೆಲ ಕಾಲ ಮನೆಯಲ್ಲೇ ಇದ್ದ ಈತ ರಾತ್ರಿ ಸ್ಕೂಟಿ ಹತ್ತಿ ಹೊರಗಡೆ ತೆರಳಿದ್ದ. ಈ ವೇಳೆ ತನ್ನ ಲ್ಯಾಪ್ ಟಾಪ್ ಸಮೇತ ಹೋದ ಆತ ಬಳಿಕ ಎಲ್ಲಿ ಹೋದ ಎಂಬುದು ಯಾರಿಗೂ ತಿಳಿದಿರಲಿಲ್ಲ. ನಿನ್ನೆ ಕುಳೆಪಾದ ಎಂಬ ಸ್ಮಶಾನದಲ್ಲಿ ಆತನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮುಕ್ತಿರಂಜನ್ ರಾಯ್ ಆತ್ಮಹತ್ಯೆ ಸಂಬಂಧ ದುಶಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಕ್ತಿ ರಂಜನ್ ರಾಯ್ ಮನೆಯಿಂದ ಆತನ ಆರೋಪಿಯ ಬೆರಳಚ್ಚು ಹಾಗೂ ಡೆತ್ ನೋಟುಗಳನ್ನು ಬೆಂಗಳೂರು ಪೊಲೀಸರು ಸ್ಥಳೀಯ ಪೊಲೀಸರ ಸಹಾಯದಿಂದ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Bengaluru murder: ಮಹಾಲಕ್ಷ್ಮಿ ಕೊಲೆ ಪ್ರಕರಣ; ಪೊಲೀಸರಿಗೆ ಹೆದರಿ ಆರೋಪಿ ಆತ್ಮಹತ್ಯೆ!