Friday, 27th September 2024

Devara First Review: ಬಿಡುಗಡೆ ಮುನ್ನವೇ ಹೊರಬಿತ್ತು ‘ದೇವರʼ ವಿಮರ್ಶೆ; ಜೂನಿಯರ್‌ ಎನ್‌ಟಿಆರ್‌ ಚಿತ್ರ ಹೇಗಿದೆ?

Devara movie Review

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ, ಟಾಲಿವುಡ್‌ ಸ್ಟಾರ್‌ ಜೂನಿಯರ್‌ ಎನ್‌ಟಿಆರ್‌ (Jr NTR) ಅಭಿನಯದ ‘ದೇವರ: ಪಾರ್ಟ್ 1’ (Devara: Part 1) ಚಿತ್ರದ ಮೊದಲ ವಿಮರ್ಶೆ ಹೊರ ಬಿದ್ದಿದೆ. ಮಾಸ್‌ ನಿರ್ದೇಶಕ ಕೊರಟಾಲ ಶಿವ ಅವರೊಂದಿಗೆ ಜೂನಿಯರ್‌ ಎನ್‌ಟಿಆರ್ ಎರಡನೇ ಬಾರಿಗೆ ಕೈಜೋಡಿಸಿದ್ದು ಒಂದೆಡೆಯಾದರೆ, ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಆರ್‌.ಆರ್‌.ಆರ್‌.ʼ ಸಿನಿಮಾದ ಬಳಿಕ ಜೂನಿಯರ್‌ ಎನ್‌ಟಿಆರ್ ಕಾಣಿಸಿಕೊಳ್ಳುತ್ತಿರುವುದು ಇನ್ನೊಂದೆಡೆ. ಜತೆಗೆ ಬಾಲಿವುಡ್‌ ಬೆಡಗಿ ಜಾನ್ವಿ ಕಪೂರ್‌ ನಟಿಸುತ್ತಿರುವ ಮೊದಲ ತೆಲುಗು ಚಿತ್ರ ಇದು ಎನ್ನುವ ಕಾರಣಕ್ಕೆ ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಚಿತ್ರ ಸೆಪ್ಟೆಂಬರ್‌ 27ರಂದು ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲೇ ವಿಮರ್ಶೆ ಹೊರ ಬಿದ್ದಿದೆ.

ಇದೀಗ ವಿದೇಶದಲ್ಲಿ ಚಿತ್ರ ನೋಡಿದ ವಿತರಕರು ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಚಿತ್ರ ನೋಡಿದ ಬಹುತೇಕರು ಅದ್ಭುತ ಎಂದಿದ್ದಾರೆ. ಜೂನಿಯರ್‌ ಎನ್‌ಟಿಆರ್‌ ನಟನೆಗೆ, ಆ್ಯಕ್ಷನ್‌ಗೆ ಫಿದಾ ಆಗಿದ್ದಾರೆ. ಟಾಲಿವುಡ್‌ ಪಾಲಿಗೆ ಮತ್ತೊಂದು ಬ್ಲಾಕ್‌ ಬಸ್ಟರ್‌ ಚಿತ್ರ ಇದಾಗಲಿದೆ ಎಂದಿದ್ದಾರೆ.

ರಿವರ್ಸ್ ಸ್ಕ್ರೀನ್ ಪ್ಲೇನೊಂದಿಗೆ ಸಾಗುವ ಚಿತ್ರ ಕರಾವಳಿ ತೀರದ ಕಥೆಯನ್ನು ಒಳಗೊಂಡಿದೆ. ತಮ್ಮ ಜನರನ್ನು, ತಮ್ಮವರನ್ನು ದುಷ್ಟರ ಕೈಯಿಂದ ನಾಯಕ ದೇವರ ಹೇಗೆ ಕಾಪಾಡುತ್ತಾನೆ ಎನ್ನುವುದನ್ನು ಈ ಸಿನಿಮಾ ಅತ್ಯಂತ ರೋಚಕವಾಗಿ ಕಟ್ಟಿಕೊಟ್ಟಿದೆ. ತೆಲುಗು ಜತೆಗೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿಯೂ ಈ ಚಿತ್ರ ತೆರೆ ಕಾಣುತ್ತಿದೆ. ಬಾಲಿವುಡ್‌ ನಟ ಸೈಫ್‌ ಆಲಿಖಾನ್‌ ʼಆದಿ ಪುರುಷ್‌ʼ ಚಿತ್ರದ ಬಳಿಕ ತೆಲುಗು ಚಿತ್ರದಲ್ಲಿ ಮತ್ತೊಮ್ಮೆ ವಿಲನ್‌ ಆಗಿ ಅಬ್ಬರಿಸಿದ್ದಾರೆ. ಜತೆಗೆ ಚೈತ್ರಾ ರೈ, ಶೈನ್‌ ಟಾಮ್‌ ಚಾಕೋ, ಮುರಳಿ ಶರ್ಮಾ, ಕಲೈಅರಸನ್‌ ಮತ್ತಿತರರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿಮರ್ಶಕರು ಏನು ಹೇಳುತ್ತಾರೆ?

ಜೂನಿಯರ್‌ ಎನ್‌ಟಿಆರ್‌ ಅಭಿನಯಕ್ಕೆ ವಿಮರ್ಶಕರು ಪೂರ್ಣ ಅಂಕ ನೀಡಿದ್ದಾರೆ. ಅದರಲ್ಲಿಯೂ ಆ್ಯಕ್ಷನ್‌ ದೃಶ್ಯಕ್ಕೆ ಮನಸೋತಿದ್ದಾರೆ. ʼʼಚಿತ್ರಕ್ಕೆ ಅಗತ್ಯವಾದ ಎನರ್ಜಿಯನ್ನು ಅವರು ತೋರಿದ್ದಾರೆ. ಸೈಫ್‌ ಆಲಿ ಖಾನ್‌ ನಟನೆಯೂ ಉತ್ತಮವಾಗಿದೆ. ಜಾನ್ವಿ ಕಪೂರ್‌ ಮಾತ್ರ ನಿರಾಸೆ ಮೂಡಿಸುತ್ತಾರೆ. ಅವರ ಅಭಿನಯ ಕಿರಿ ಕಿರಿ ಎನಿಸುತ್ತದೆʼʼ ಎಂದು ನೆಟ್ಟಿಗರೊಬ್ಬರು ಎಕ್ಸ್‌ ಮೂಲಕ ತಿಳಿಸಿದ್ದಾರೆ.

ಇನ್ನೊಬ್ಬರು, ʼʼಈಗಷ್ಟೇ ದೇವರ ಸಿನಿಮಾ ನೋಡಿದೆ. ಅದ್ಭುತವಾಗಿದೆ. ಮೈನವಿರೇಳಿಸುವ ಸಾಹಸ ದೃಶ್ಯಗಳಿವೆ. ಜತೆಗೆ ಎಲ್ಲರ ಅಭಿನಯವೂ ಉತ್ತಮವಾಗಿದೆ. ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಕಥೆ ಇದೆ. ಚಿತ್ರಪ್ರೇಮಿಗಳು ನೋಡಲೇಬೇಕುʼʼ ಎಂದು ಇನ್ನೊಬ್ಬರು ಹೇಳಿದ್ದಾರೆ.

ʼʼಆ್ಯಕ್ಷನ್‌ ಆ್ಯಕ್ಷನ್‌ ಆ್ಯಕ್ಷನ್‌. ʼದೇವರʼ ಸಿನಿಮಾ ಸಾಹಸಭರಿತ ಚಿತ್ರ. ಕೊರಟಾಲ ಶಿವ ಒಂದೊಳ್ಳೆ ಕಥೆ ಹೇಳಿದ್ದಾರೆ. ಮೊದಲಾರ್ಧದಲ್ಲಿ ಅನಿರುದ್ಧ ರವಿಚಂದರ್‌ ಅವರ ಬಿಜಿಎಂ ಕಾಡುತ್ತದೆ. ನಿಧಾನಕ್ಕೆ ಆರಂಭವಾಗುವ ಸಿನಿಮಾ ಬಳಿಕ ವೇಗ ಪಡೆದುಕೊಳ್ಳುತ್ತದೆ. ದೇವರ ಪಾತ್ರದಲ್ಲಿ ಜೂನಿಯರ್‌ ಎನ್‌ಟಿಆರ್‌ ಮೋಡಿ ಮಾಡುತ್ತಾರೆ. ಆ್ಯಕ್ಷನ್‌, ಡ್ಯಾನ್ಸ್‌, ಅಭಿನಯದಲ್ಲಿ ಗಮನ ಸೆಳೆಯುತ್ತಾರೆ. ಚಿತ್ರ ಕ್ಲಾಸ್‌ ಮತ್ತು ಮಾಸ್‌ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ವರ ಆಗಿ ಸೈಫ್‌ ಆಲಿ ಖಾನ್‌ ಅಬ್ಬರಿಸಿದ್ದಾರೆ. ಕ್ಲೈಮ್ಯಾಕ್ಸ್‌ ಅದ್ಭುತವಾಗಿದ್ದು, ಪಾರ್ಟ್‌ 2ಗೆ ಕಾಯುವಂತೆ ಮಾಡುತ್ತದೆ. ಜಾನ್ವಿ ಕಪೂರ್‌ಗೆ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಸಿಕ್ಕಿಲ್ಲʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ.

ಇನ್ನು ಬಹುತೇಕರು ಚಿತ್ರ ಕ್ಲೈಮಾಕ್ಸ್‌ ಬಗ್ಗೆಯೇ ಹೇಳಿದ್ದಾರೆ. ಜತೆಗೆ ʼಬಾಹುಬಲಿ 1ʼರ ಕ್ಲೈಮ್ಯಾಕ್ಸ್‌ಗೆ ಹೋಲಿಸಿದ್ದಾರೆ. ಅದರಂತೆ ಇದು ಕೂಡ ಕುತೂಹಲ ಮೂಡಿಸುತ್ತದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Jr NTR: ನಿಮಗಿಂತ ಹೆಚ್ಚು ನೋವು ನನಗಾಗಿದೆ; ಫ್ಯಾನ್ಸ್‌ ಬಳಿ ಜೂನಿಯರ್ ಎನ್‌ಟಿಆರ್ ಹೀಗೆ ಹೇಳಿದ್ದೇಕೆ?