ಮುಂಬಯಿ: ಐಪಿಎಲ್(IPL 2025) ಆಟಗಾರ ಮೆಗಾ ಹರಾಜು(ipl 2025 mega auction) ಪ್ರಕ್ರಿಯೆ ನವೆಂಬರ್‌ನಲ್ಲಿ ನಡೆಯಲಿದೆ ಎಂದು ವರದಿಯಾದ ಬೆನ್ನಲ್ಲೇ ಕೆಲ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ತೆರೆ ಮರೆಯಲ್ಲಿ ಭಾರೀ ಕಸರತ್ತು ಆರಂಭಿಸಿದೆ. ಇದೀಗ ಪ್ರತಿ ತಂಡಗಳು ರಿಟೇನ್(Retain) ಮಾಡಿಕೊಳ್ಳಬಹುದಾದ ಆಟಗಾರರ ಸಂಖ್ಯೆಯನ್ನು ಬಿಸಿಸಿಐ ಬಹುತೇಕ ಅಂತಿಮಗೊಳಿಸಿದೆ ಎಂದು ತಿಳಿದುಬಂದಿದೆ. ಸಿದ್ಧಪಡಿಸಲಾದ ನಿಯಮಾವಳಿ ಪ್ರಕಾರ, ಪ್ರತಿ ತಂಡ ಗರಿಷ್ಠ ಐವರು ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಲಿದೆ ಎನ್ನಲಾಗಿದೆ.
ಬಿಸಿಸಿಐ ಈ ಮುನ್ನ ಗರಿಷ್ಠ 4 ಆಟಗಾರರ ರಿಟೇನ್ಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿತ್ತು. ಅಲ್ಲದೆ 2022ರಲ್ಲಿಯೂ 4 ಆಟಗಾರರ ರಿಟೇನ್ ಅವಕಾಶ ನೀಡಿತ್ತು. ಈ ಪೈಕಿ ಗರಿಷ್ಠ 3 ಭಾರತೀಯರು ಮತ್ತು ಗರಿಷ್ಠ ಇಬ್ಬರು ವಿದೇಶಿಯರು ಆಗಿರಬೇಕೆಂದು ಸೂಚಿಸಿತ್ತು. ಆದರೆ ಈ ಬಾರಿ ಕೆಲ ಪ್ರಾಂಚೈಸಿಗಳು ಕನಿಷ್ಠ 6 ಆಟಗಾರರ ರಿಟೈನ್ಗೆ ಅವಕಾಶ ನೀಡಬೇಕು ಎಂದು ಆಗಸ್ಟ್‌ನಲ್ಲಿ ಮುಂಬೈಯಲ್ಲಿ ನಡೆದಿದ್ದ ಸಭೆಯಲ್ಲಿ ಬೇಡಿಕೆ ಇರಿಸಿತ್ತು. ಇದೀಗ ಬಿಸಿಸಿಐ 5 ಆಟಗಾರರ ರಿಟೈನ್ಗೆ ಅವಕಾಶ ನೀಡಲಿದೆ ಎನ್ನಲಾಗಿದೆ. ಆದರೆ, ಪ್ರತಿ ತಂಡ ಗರಿಷ್ಠ ಎಷ್ಟು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
ಆರ್ಟಿಎಂ ಇಲ್ಲ?
ಈ ಬಾರಿಯ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸುವ ಅವಕಾಶ ನೀಡಲಾಗುವುದು ಎಂದು ಆರಂಭದಲ್ಲಿ ಹೇಳಲಾಗಿತ್ತು. ಹೀಗಾಗಿ ಎಲ್ಲ 10 ಫ್ರಾಂಚೈಸಿಗಳು ಭಾರೀ ನಿರೀಕ್ಷೆಯಲ್ಲಿದ್ದವು. ಆದರೆ ಬಿಸಿಸಿಐ ಈ ಸಲವೂ ಆರ್ಟಿಎಂ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. 2018ರಿಂದ ಬಿಸಿಸಿಐ ಹರಾಜಿನಲ್ಲಿ ಈ ನಿಯಮದ ಬಳಕೆಗೆ ಅವಕಾಶ ಕಲ್ಪಿಸಿಲ್ಲ. ಈ ನಿಯಮ ಚಾಲ್ತಿಯಾಗುತ್ತಿದ್ದರೆ ಹರಾಜಿನಲ್ಲಿ ತಂಡಗಳು ತನ್ನ ಮೂಲ ಆಟಗಾರರನ್ನು ಮಾರಾಟವಾಗುವ ಗರಿಷ್ಠ ಮೊತ್ತಕ್ಕೆ ತನ್ನಲ್ಲೇ ಉಳಿಸಿಕೊಳ್ಳಲು ಅವಕಾಶ ಸಿಗುತ್ತಿತ್ತು.
ಇದನ್ನೂ ಓದಿ IPL 2025 : ಆರ್‌ಸಿಬಿಯಿಂದ ಗ್ಲೆನ್ ಮ್ಯಾಕ್ಸ್‌ವೆಲ್, ಡುಪ್ಲೆಸಿಸ್ ಹೊರಕ್ಕೆ
ಯಾವ ತಂಡಕ್ಕೆ ಹೆಚ್ಚಿನ ಲಾಭ
ಪ್ರತಿ ತಂಡ ಗರಿಷ್ಠ 5 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡುವುದರಿಂದ ಹಾಲಿ ಚಾಂಪಿಯನ್ ಕೆಕೆಆರ್, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ. ಕೆಕೆಆರ್ ಪರ ಸುನೀಲ್ ನರೈನ್, ರಸೆಲ್, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರನ್ನು ರಿಟೇನ್ ಮಾಡಲು ನೆರವಾಗಲಿದೆ. ಅತ್ತ ಮುಂಬೈ ಪರ ರೋಹಿತ್ ಶರ್ಮ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯರನ್ನು ರಿಟೇನ್ ಮಾಡಬಹುದು. ನೆರವಾಗಲಿದೆ ಎನ್ನಲಾಗಿದೆ. ಮೂವರು ಭಾರತೀಯ ಆಟಗಾರರನ್ನಷ್ಟೇ ಉಳಿಸಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದರೆ ಆಗ ಈ ತಂಡಗಳು ಇಕ್ಕಟ್ಟಿಗೆ ಸಿಲುಕಬಹುದು.