Sunday, 24th November 2024

Koragajja Movie: ʼಕೊರಗಜ್ಜʼ ಸಿನಿಮಾ ನಿರ್ಮಾಪಕರಿಂದ ನಿರ್ದೇಶಕ ಸುಧೀರ್ ಅತ್ತಾವರ್‌ಗೆ ದುಬಾರಿ ಗಿಫ್ಟ್; ಕಿಯಾ ಕ್ಯಾರೆನ್ಸ್‌ ಕಾರು ಹಸ್ತಾಂತರ

Koragajja Movie

ಬೆಂಗಳೂರು: ತ್ರಿವಿಕ್ರಮ ಸಿನಿಮಾಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್‌ನಡಿ ತರಾರಾಗುತ್ತಿರುವ ಬಹುನಿರೀಕ್ಷಿತ, ಬಹುಕೋಟಿ ಬಜೆಟ್‌ನ ʼಕೊರಗಜ್ಜʼ ಸಿನಿಮಾ (Koragajja Movie) ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈಗಾಗಲೇ ರಿಲೀಸ್‌ ಆಗಿರು ಪೋಸ್ಟರ್‌ ಕುತೂಹಲ ಮೂಡಿಸಿದೆ. ಚಿತ್ರದ ಮೊದಲ ಪ್ರತಿ ಇನ್ನೇನು ಕೈ ಸೇರಲಿದ್ದು, ಸಿನಿಮಾ ನೋಡಿದ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು ಚಿತ್ರದ ಗುಣಮಟ್ಟ, ತಾಂತ್ರಿಕತೆ ಮತ್ತು ಮಾಸ್ ಅಪೀಲ್‌ಗೆ ಫಿದಾ ಆಗಿ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ.

ಹೌದು, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೂ ಆಗಿರುವ ಸುಧೀರ್ ಅತ್ತಾವರ್ ಕೆಲಸವನ್ನು ಮೆಚ್ಚಿ ತ್ರಿವಿಕ್ರಮ ಸಪಲ್ಯ ಅವರು ಟಾಪ್ ಎಂಡ್ ಕಿಯಾ ಕ್ಯಾರೆನ್ಸ್‌ ಕಾರನ್ನೇ ಗಿಫ್ಟ್‌ ಮಾಡಿದ್ದಾರೆ. ʼʼನಿರ್ದೇಶಕರ ಸೃಜನಶೀಲ ತಾಂತ್ರಿಕ ನೈಪುಣ್ಯತೆಯೊಂದಿಗೆ ಸುಮಾರು 15 ಕೋಟಿ ರೂ. ಬಜೆಟ್‌ನ ಈ ಸಿನೆಮಾ ಯಾವ ಮಟ್ಟದಲ್ಲಿ ಮೂಡಿ ಬಂದಿರಬಹುದು ಎನ್ನವುದಕ್ಕೆ ಇದು ಉದಾಹರಣೆ” ಎಂದು ಖ್ಯಾತ ಕಲಾವಿದೆ ಭವ್ಯಾ ಈ ಸಂದರ್ಭದಲ್ಲಿ ಹೇಳಿದರು. ತಾನು ಇಂತಹ ಸಿನಿಮಾದಲ್ಲಿಅಭಿನಯಿಸಿದ್ದು ಇನ್ನಿಲ್ಲದ ಹೆಮ್ಮೆ ಮತ್ತು ಪುನೀತಭಾವ ಮೂಡಿಸಿದೆ ಎಂದು ತಿಳಿಸಿದರು.

ನಿರ್ಮಾಪಕ ತ್ರಿವಿಕ್ರಮ ಮಾತನಾಡಿ, “ನನ್ನ ತ್ರಿವಿಕ್ರಮ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಈ ಮಟ್ಟದಲ್ಲಿ ಸಿನಿಮಾ ಒಂದು ಮೂಡಿ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. ʼಕೊರಗಜ್ಜʼ ಸಿನಿಮಾ ಎಲ್ಲ ಊಹೆಯನ್ನು ಮೀರಿ ಅದ್ಭುತ ರೀತಿಯಲ್ಲಿ ಮೂಡಿ ಬಂದಿದೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ವಿಶಿಷ್ಟ ಸಿನಿಮಾ ಆಗಿ ಮೂಡಿ ಬಂದಿದೆ. ನಿರ್ದೇಶಕರು ಸುಮಾರು ಒಂದೂವರೆ ವರ್ಷಗಳ ಕಾಲ ಸಂಶೋಧನೆ ಮಾಡಿ 800 ವರ್ಷದ ಹಿಂದೆ ಬದುಕಿದ್ದ 23-24 ವರ್ಷ ಪ್ರಾಯದ ತನಿಯ ಎನ್ನುವ ಆದಿವಾಸಿ ಹುಡುಗ ಮಹಾನ್ ಶಕ್ತಿ ಕೊರಗಜ್ಜ ಆಗಿ ಬೆಳಗುತ್ತಿರುವ ಬಗೆ ಹೇಗೆ ಎನ್ನುವುದನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ವಿಭಿನ್ನ ಜೋನರ್‌ನಲ್ಲಿ ಈ ಸಿನಿಮಾವನ್ನು ಮಾಡಿದ್ದಾರೆ. ಈ ಮಹಾನ್ ಶಕ್ತಿಯನ್ನು ಮರುಸೃಷ್ಟಿ ಮಾಡಿ ಸಸ್ಪೆನ್ಸ್, ಉತ್ಸುಕತೆ, ಥ್ರಿಲ್ಲರ್, ಊಹಿಸಲಾರದ ತಿರುವುಗಳ ಕಥಾ ಹಂದರ ಮತ್ತು ಬಿಗಿದಿಟ್ಟುಕೊಳ್ಳುವ ಆಕರ್ಷಣೀಯ ಚಿತ್ರಕಥೆ ಸಿನಿಮಾವನ್ನು ಬೇರೆಯೇ ಮಜಲಿಗೆ ಕೊಂಡೊಯ್ದಿದೆʼʼ ಎಂದು ಹೇಳಿದರು.

ʼʼಸಿನಿಮಾದಲ್ಲಿ ಕಬೀರ್ ಬೇಡಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನೂರಾರು ಕಲಾವಿದರನ್ನು ಬಳಸಿಕೊಂಡು ಮೈನವಿರೇಳಿಸುವಂತೆ ಚಿತ್ರೀಕರಿಸಿದ್ದ ಯುದ್ಧ ಭೂಮಿಯ ಪರಿಕಲ್ಪನೆಯಂತೂ ಗಮನ ಸೆಳೆಯುವಂತಿದೆ. ಜಗತ್ತಿನ ಯಾವುದೇ ವಾರ್ ಸಿನಿಮಾ ಸೃಷ್ಟಿಸಬಹುದಾದ ಸಂಚಲನವನ್ನು ʼಕೊರಗಜ್ಜʼ ಸಿನಿಮಾ ಸೃಷ್ಟಿಸಲಿದೆʼʼ ಎಂದರು. ಯುದ್ಧ ಸನ್ನಿವೇಶವನ್ನು ಚಿತ್ರೀಕರಿಸುವ ಸಮಯದಲ್ಲಿ ಕಬೀರ್ ಬೇಡಿ ಅವರು ಸುಧೀರ್ ಅತ್ತಾವರ್ ಅವರನ್ನುʼವಾಟರ್ ವರ್ಲ್ಡ್ʼ ಚಿತ್ರದ ಹಾಲಿವುಡ್ ನಿರ್ದೇಶಕ ಕೆವಿನ್ ಹಾಲ್ ರೆಯ್ನಾಲ್ಡ್ಸ್ ಜತೆ ಯಾಕೆ ಹೋಲಿಕೆ ಮಾಡಿದ್ದರು ಎನ್ನುವುದು ಈಗ ತಿಳಿಯುತ್ತಿದೆ ಎಂದು ತ್ರಿವಿಕ್ರಮ ನೆನಪಿಸಿಕೊಂಡರು.

ಸುಧೀರ್ ಅತ್ತಾವರ್ ಅವರು ನಿರ್ದೇಶನದ ಜತೆಗೆ ಕಲಾ ನಿರ್ದೇಶನ, ಕಾಸ್ಟ್ಯೂಮ್ ಹಾಗೂ ಮೇಕಪ್ ಡಿಸೈನ್ ಕೂಡ ಮಾಡಿದ್ದಾರೆ. ಸುಧೀರ್ ಅವರು ನೂರಾರು ನಾಟಕ ಪ್ರದರ್ಶನಗಳಲ್ಲಿ ಅಭಿನಯಿಸಿದ್ದಾರೆ. ಐವತ್ತರಷ್ಟು ನಾಟಕಗಳ ನಿರ್ದೇಶಿಸಿದ ಅನುಬವ ಹೊಂದಿದ್ದಾರೆ. ಹೀಗೆ ರಂಗಭೂಮಿಯಲ್ಲಿ ಸಾಕಷ್ಟು ಪಳಗಿದ ಅವರ ಅನುಭವವೇ ಸಿನಿಮಾವನ್ನು ಈ ಮಟ್ಟಕ್ಕೆ ಕೊಂಡೊಯ್ದಿದೆ ಎಂದು ತ್ರಿವಿಕ್ರಮ ಮೆಚ್ಚುಗೆ ಸೂಚಿಸಿದರು. ʼಕೊರಗಜ್ಜʼ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.

ಈ ಸುದ್ದಿಯನ್ನೂ ಓದಿ: Balya Movie: ಪೋಷಕರು, ಮಕ್ಕಳು ನೋಡಲೇ ಬೇಕಾದ ಚಿತ್ರ ʼಬಾಲ್ಯʼ; ಟೀಸರ್‌ ಔಟ್‌