ವಿಶೇಷ ವರದಿ : ಆನಂದ ಸ್ವಾಮಿ ಹಿರೇಮಠ
ರಾಯಚೂರು : ಬಜೆಟ್, ಆಡಳಿತಾತ್ಮಕ ಮಂಜೂರಿ, ನಕ್ಷೆ, ಕ್ರಿಯಾಯೋಜನೆ, ಟೆಂಡರ್, ಅಗತ್ಯ ಭೂಮಿ ಹಾಗೂ ಸರ್ಕಾರದ ಗಮನಕ್ಕೆ ಇಲ್ಲದೇ ಕೆಕೆಆರ್ಟಿಸಿಯ ೯ ವಿಭಾಗಗಳ ಸಿವಿಲ್ ಕಾಮಗಾರಿಗಳಲ್ಲಿ ಭಾರಿ ಗೋಲ್ಮಾಲ್ ನೊಂದಿಗೆ ಕೋಟ್ಯಂತರ ರೂಪಾಯಿ ಡೀಲ್ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಫೇಸ್ಲಿಸ್ಟ್, ಒಳಚರಂಡಿ ಕಾಮಗಾರಿ, ತಾತ್ಕಾಲಿಕ ಕೇಂದ್ರ ಕಚೇರಿಗೆ ಲಿಫ್ಟ್, 2ನೇ ಮಹಡಿಗೆ ಬಳಕೆಯಾದ ಹಳೆಯ ಪೈಪುಗಳು ಮತ್ತು ಸಲಕರಣೆಗಳನ್ನು ಉಪಯೋಗಿಸಿ ಕಾರ್ಯಾಲಯದ ಕಟ್ಟಡ ನಿರ್ಮಾಣ, ಗಂಗಾವತಿ ಸಾರಿಗೆ ಘಟಕ ವ್ಯವಸ್ಥಾಪಕರ ಕಾರ್ಯಾಲಯದ ಕಟ್ಟಡದ 1 ಮತ್ತು 2ನೇ ಮಹಡಿ ಕಳಪೆ ಕಾಮಗಾರಿ, ಅನಧಿಕೃತ ಗುತ್ತಿಗೆದಾರರಿಂದ ಕಾಮಗಾರಿಗಳನ್ನು ಜುಲೈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳಿಸಿ, ಸೆಪ್ಟೆಂಬರ್ ತಿಂಗಳಲ್ಲಿ ಕೆಟಿಪಿಪಿ ನಿಯಮಗಳಿಗೆ ಅನುಗುಣವಾಗಿ ದಾಖಲೆ ತಯಾರಿ ಗೊಳಿಸುವ ಮೂಲಕ ಅಂದಾಜು 4.50 ಕೋಟಿ ರೂಪಾಯಿಗೂ ಹೆಚ್ಚು ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳಿವೆ.
ಭೂಮಿ ಇಲ್ಲದೇ ಬಸ್ ನಿಲ್ದಾಣ ಮಂಜೂರು.. !
ಕೊಪ್ಪಳ ಜಿಲ್ಲೆಯ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ 13 ಗ್ರಾಮಗಳಲ್ಲಿ ಪ್ರತಿ ಗ್ರಾಮಕ್ಕೆ 3 ಕೋಟಿ ರೂಪಾಯಿಯಂತೆ 40 ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣಗಳ ಕಟ್ಟಡಗಳ ಕಾಮಗಾರಿಗೆ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಿ ಪಡೆದಿದ್ದು, ಆದರೆ 13 ಗ್ರಾಮಗಳಲ್ಲಿ ನಿಗಮದ ನಿವೇಶನ ಅಥವಾ ಜಮೀನು ಇರುವು ದಿಲ್ಲ. ಸರ್ಕಾರಕ್ಕೆ ಜಮೀನು ಹಾಗೂ ನಿವೇಶನ ಇರುವುದಾಗಿ ಸುಳ್ಳು ಮಾಹಿತಿ ನೀಡಿ, ಕೆಕೆಆರ್ಡಿಬಿ ಮತ್ತು ಸರ್ಕಾರ ದಿಂದ 4000 ಲಕ್ಷ ರೂ.ಗಳನ್ನು ದಿನಾಂಕ: 02-03-2024ರಂದು ಆಡಳಿತಾತ್ಮಕ ಮಂಜೂರಿ ಪಡೆದು ವಂಚಿಸಿ, ಟೆಂಡರ್ ಕರೆದಿದ್ದಾರೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಆರೋಪಿಸಿದ್ದಾರೆ.
ಈ ಕುರಿತು 17-07-2024ರಂದು ಟೆಂಡರ್ ರದ್ದುಪಡಿಸಿ, ಜುಲೈ 2023ನೇ ತಿಂಗಳಿನ ಕೊನೆ ವಾರದಲ್ಲಿ ಪುನಾಃ ಟೆಂಡರ್ ಕರೆದು, ಸೆಪ್ಟೆಂಬರ್ ತಿಂಗಳಿನ ಮೊದಲನೇ ವಾರದಲ್ಲಿ ರಾತ್ರಿ 8 ರಿಂದ 9 ಗಂಟೆಯ ಅವಧಿಯಲ್ಲಿ ಒಟ್ಟು 34 ಟೆಂಡರ್ಗಳನ್ನು ಟೆಂಡರ್ ಕಮಿಟಿಯಲ್ಲಿ ಅನುಮೋದಿಸಿ, ನಿವೇಶನಗಳು ಹಾಗೂ ಜಮೀನು ಇಲ್ಲದೆಯೇ ಟೆಂಡರ್ ಗಳ ಪ್ರಕ್ರಿಯೆ ಜರುಗಿಸಿರುವುದು, ಕಾನೂನುಬಾಹಿರವಾಗಿದೆ.
ಆಡಿಟ್ನಲ್ಲಿ ಭ್ರಷ್ಟಾಚಾರ ಬಯಲು: ಬಾಲ್ಕಿ, ಬೀದರ, ಯಾದಗಿರಿ, ವಿಜಯಪುರ, ಹೊಸಪೇಟೆ, ಕಲಬುರಗಿ, ರಾಯಚೂರು, ತೇಲ್ಕೂರು, ಕೊಪ್ಪಳ ವಿಭಾಗಗಳಲ್ಲಿ, ಸಾರಿಗೆ ಇಲಾಖೆಯ ಕಾರ್ಯಾಲಯದ ಕಟ್ಟಡಗಳು ಹಾಗೂ ವಾಹನಗಳ ತರಬೇತಿ ಟ್ರ್ಯಾಕ್ಗಳು, ಪೀಠೋಪಕರಣಗಳ ಕುರಿತಂತೆ ಸರ್ಕಾರದಿಂದ ಅಂದಾಜು 200 ಕೋಟಿ ರೂ. ಮೇಲ್ಪಟ್ಟು ಅನುದಾನ ಮಂಜೂರಿ ಪಡೆದು ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳದೇ, ಗುಣಮಟ್ಟವಿಲ್ಲದ ಪೀಠೋಪಕರಣಗಳನ್ನು ಸರಬರಾಜು ಮಾಡಿದ್ದಲ್ಲದೇ, ಕಾಮಗಾರಿಗಳಿಗೆ ಕ್ಯೂ & ಸಿ ಹಾಗೂ ಪೂರ್ಣಗೊಂಡ ಕುರಿತಂತೆ ಪ್ರಮಾಣಪತ್ರಗಳನ್ನು ಪಡೆಯದೇ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ. ಬೀದರ್, ತೇಲ್ಕೂರು, ಯಾದ ಗಿರಿ, ಕಲಬುರಗಿ, ವಿಜಯಪುರ, ಹೊಸಪೇಟೆಯ ಟೆಸ್ಟ್ಟ್ರಾö್ಯಕ್ ಕಾಮಗಾರಿಗಳ ಕುರಿತಂತೆ ಡಿಸೆಂಬರ್ ೨೦೨೩ರಲ್ಲಿ ಕೇಂದ್ರ ಕಚೇರಿಯ ಆಂತರಿಕ ತನಿಖಾ ತಂಡದಿಂದ ಆಡಿಟ್ ಮಾಡಿದ್ದು, ಹಣ ಪಾವತಿಸಿದ ಬಗ್ಗೆ ಲೋಪದೋಷ ಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕ್ಕೆ ಸೂಚಿಸಿದೆ.
ಇಲಾಖೆ ಜಾಗ ಅನ್ಯರ ಪಾಲು : ರಾಯಚೂರಿನ ಡಿಪೋ ನಂ.3ರ ನಿವೇಶನದಲ್ಲಿ 20 ಮೀಟರ್ ಸ್ಥಳವನ್ನು ಖಾಸಗಿ ವ್ಯಕ್ತಿಗಳಿಗೆ ಬಿಟ್ಟುಕೊಟ್ಟು ಕಾಂಪೌಂಡ್ ನಿರ್ಮಿಸಿರುವುದು, ಸಿರವಾರ ಬಸ್ ನಿಲ್ದಾಣದಲ್ಲಿ ಕಳಪೆ ಕಾಮಗಾರಿ ಮತ್ತು ದೇವದುರ್ಗ ಬಸ್ ನಿಲ್ದಾಣದ ಪಶ್ಚಿಮ ದಿಕ್ಕಿನ ಕಾಂಪೌಂಡ್ ಗೋಡೆ ಕಟ್ಟದೇ ಖಾಸಗಿ ವ್ಯಕ್ತಿಗಳಿಗೆ ವ್ಯಾಪಾರ ಮಾಡಿ ಕೊಳ್ಳಲು ನಿಲ್ದಾಣದ ಒಳಗಡೆ ಶೆಡ್ ನಿರ್ಮಿಸಲು ಅನುಕೂಲ ಮಾಡಿಕೊಟ್ಟು ಭ್ರಷ್ಟಾಚಾರ ಎಸಗಿರುವುದು, ಲಿಂಗಸುಗೂರಿನ ಹಳೆ ಬಸ್ ನಿಲ್ದಾಣದಲ್ಲಿನ ನಿಗಮದ ಹೆಸರಿನಲ್ಲಿರುವ ಜಮೀನನ್ನು ಖಾಸಗಿಯವರಿಗೆ ಬಿಟ್ಟು ಕೊಟ್ಟಿರುವುದು ಸೇರಿದಂತೆ ಹಲವು ಆರೋಪಗಳಿವೆ.
ಸರ್ಕಾರ, ಕೆಕೆಆರ್ಡಿಬಿಗೆ ತಪ್ಪು ವರದಿ
“ಕೆಕೆಆರ್ಟಿಸಿಯ ಕಾರ್ಯನಿರ್ವಾಹಕ ಅಭಿಯಂತರ ಸಿ.ಬೋರಯ್ಯ ಅವರು, ಕೆಕೆಆರ್ಡಿಬಿ ಕಾರ್ಯದರ್ಶಿಗಳಿಗೆ ಹಾಗೂ ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟು (ಪತ್ರದ ಸಂಖ್ಯೆ:ಕಕರಸಾ /ಕೆಕ/ಕಾಇ/1015/2023-24 ದಿನಾಂಕ: 01-02-2024ರ ಪ್ರಕಾರ) ಬಸ್ ನಿಲ್ದಾಣ ಕಟ್ಟಲು ಜಮೀನು ಮತ್ತು ನಿವೇಶನ ಇರುವುದಾಗಿ ತಪ್ಪು ವರದಿ ಸಲ್ಲಿಸಿದ್ದಾರೆ.
“ಕೆಕೆಆರ್ಟಿಸಿಯ ಸಿವಿಲ್ ಕಾಮಗಾರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿರುವ ಸಿ.ಬೋರಯ್ಯ ಅವರ ಭ್ರಷ್ಟಾ ಚಾರದ ಕುರಿತು 27-06-2024ರಿಂದ ಇಲ್ಲಿಯವರೆಗೆ ಲೋಕಾಯುಕ್ತರಿಂದಿಡಿದು ಮೇಲಧಿಕಾರಿಗಳಿಗೆ 14 ಬಾರಿ ದೂರು ಸಲ್ಲಿಸಿದರೂ, ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳಾಗಲಿ ಕ್ರಮ ಕೈಗೊಳ್ಳದೇ ಇರುವುದು ನೋಡಿದರೆ, ಅನುಮಾನ ಬರುತ್ತಿದೆ. ಸಾರ್ವಜನಿಕರ ತೆರಿಗೆಯ ಹಣ ಹಾಡಹಗಲೇ ಲೂಟಿ ಹೊಡೆಯ ಲಾಗುತ್ತಿದೆ. ಈ ಕುರಿತು ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿ ಸಾರ್ವಜನಿಕರ ತೆರಿಗೆಯ ಹಣ ಸೋರಿ ಕೆಯಾಗುವುದನ್ನು ಕೂಡಲೇ ತಡೆಯಬೇಕು”
- ಚಿಟ್ಟಿಬಾಬು ಬೂದಿವಾಳಕ್ಯಾಂಪ್, ಕರ್ನಾಟಕ ರೈತ ಸಂಘ ಜಿಲ್ಲಾ ಕಾರ್ಯದರ್ಶಿ